ಇಂದು ಆಂಗ್ಲಭಾಷೆ ಜಾಗತಿಕ ಭಾಷೆಯಾಗಿದೆ. ಉದ್ಯೋಗದ ಹುಡುಕಾಟದಲ್ಲಿರುವ ಯುವ ಜನಾಂಗ ಮೊದಲು ಎದುರಿಸುವ ಪ್ರಶ್ನೆ ಇಂಗ್ಲಿಷ್ ಬರುತ್ತಾ ಎಂದು. ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ ಪಡೆಯುವ ಕನಸು ಕಂಡವರು ಭಾಷೆಯ ತೊಡಕಿನಿಂದ ಮುಜುಗರ ಎದುರಿಸುತ್ತಾರೆ.
ಹೀಗಾಗಿ ಯುವಪೀಳಿಗೆಗೆ ಉದ್ಯೋಗಾವಕಾಶವನ್ನು ಪಡೆಯುವುದಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ನಗರದಲ್ಲಿರುವ ಇಂಗ್ಲೆಂಡ್ ಉಪ ರಾಯಭಾರಿಗಳ ಕಚೇರಿ ವತಿಯಿಂದ ‘ಇಂಗ್ಲಿಷ್ ಇಸ್ ಗ್ರೇಟ್’ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಇಂಗ್ಲೆಂಡ್‌ನ ಉಪ ರಾಯಭಾರಿ ಇಯಾನ್ ಫೆಲ್ಟನ್ ಇಂಗ್ಲಿಷ್ ಭಾಷೆಯ ಮಹತ್ವದ ಕುರಿತು ‘ಮೆಟ್ರೊ’ದೊಂದಿಗೆ ಮಾತು ಹಂಚಿಕೊಂಡರು.
*ಇಂಗ್ಲಿಷ್ ಈಸ್ ಗ್ರೇಟ್’ ಅಭಿಯಾನದ ಉದ್ದೇಶವೇನು?
ಇಂಗ್ಲಿಷ್ ಭಾಷೆಯ ಮಹತ್ವ ಮತ್ತು ಅದರ ಉಪಯೋಗದ ಕುರಿತು ಈ ಅಭಿಯಾನದಲ್ಲಿ ತಿಳಿಸಿಕೊಡಲಾಗುತ್ತದೆ.
*ಭಾರತದಲ್ಲಿ ಈ ಅಭಿಯಾನ ಮಾಡುವ ಉದ್ದೇಶ, ಅದರಲ್ಲೂ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದೇಕೆ?
ಭಾರತದಲ್ಲಿ ಇಂಗ್ಲಿಷ್ ಎರಡನೇ ಭಾಷೆಯಾಗಿದೆ. 120 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 10 ಕೋಟಿ ಜನ ಮಾತ್ರ ಇಂಗ್ಲಿಷ್ ಮಾತನಾಡುತ್ತಾರೆ. ತುಂಬಾ ಜನ ಇಂಗ್ಲಿಷ್ ಭಾಷೆ ಮಾತನಾಡಲಿ ಎಂಬುದು ನಮ್ಮ ಆಸೆ. ಇದರಿಂದ ಅವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ನಾವು ಬೇರೆ ಬೇರೆ ದೇಶದಲ್ಲಿ ಈ ಅಭಿಯಾನ ಮಾಡಿದ್ದೇವೆ. ಬೆಂಗಳೂರು ಸುಂದರ ನಗರಿ. ಇಲ್ಲಿಯ ಜನ ಹೊಸದನ್ನು ಬೇಗ ಸ್ವೀಕರಿಸುತ್ತಾರೆ. ಐಟಿ–ಬಿಟಿ ನಗರವಾಗಿರುವುದರಿಂದ ಇಂಗ್ಲಿಷ್ ಅಗತ್ಯ ಇಲ್ಲಿ ಹೆಚ್ಚಿರುತ್ತದೆ.
*ನಿಮ್ಮ ಟಾರ್ಗೆಟ್ ಗ್ರೂಪ್ ಯಾವುದು?
ಇಂಗ್ಲಿಷ್‌ನಲ್ಲಿ ಆಸಕ್ತಿ ಇರುವವರು. ಶಾಲಾ ಕಾಲೇಜುಗಳ ಶಿಕ್ಷಕರು ಅಭಿಯಾನಕ್ಕೆ ಬಂದಿದ್ದಾರೆ. ಇರುವ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಮತ್ತಷ್ಟೂ ಹೆಚ್ಚಿಸಿಕೊಳ್ಳುವುದಕ್ಕೆ ಈ ಅಭಿಯಾನ ನೆರವಾಗುತ್ತದೆ ಎಂಬುದು ನಮ್ಮ ಅಭಿಪ್ರಾಯ. ಭಾಷೆ ಕಲಿಯಲು ಮೊದಲು ಆಸಕ್ತಿ ಬೇಕು. ಹೊಸ ಹೊಸ ವಿಷಯಗಳನ್ನು ಕಲಿಯುವುದರಿಂದ ಅವಕಾಶ ಹೆಚ್ಚುತ್ತದೆ.
*ಕನ್ನಡ ಮಾಧ್ಯಮದ ವಿದ್ಯಾರ್ಥಿಯೊಬ್ಬ ಹೇಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಬಹುದು?
ಒಂದು ಭಾಷೆ ಕಷ್ಟ ಎಂದುಕೊಂಡರೆ ಕಲಿಯಲು ಆಗುವುದಿಲ್ಲ. ಭಾಷೆಯನ್ನು ನಾವು ಪ್ರೀತಿಸಬೇಕು. ಆಗ ಕಲಿಯಬೇಕು ಎಂಬ ಆಸಕ್ತಿ ಮೂಡುತ್ತದೆ. ಇಂಗ್ಲಿಷ್ ಲೇಖನಗಳನ್ನು ಓದಬೇಕು. ದಿನಪತ್ರಿಕೆ ಓದುತ್ತಿದ್ದರೆ ಇಂಗ್ಲಿಷ್ ಶಬ್ದಗಳ ಬಗ್ಗೆ ತಿಳಿಯುತ್ತದೆ. ಇವೆಲ್ಲಕ್ಕಿತ ಒಂದೊಳ್ಳೆ ಶಬ್ದಕೋಶ ಜ್ಞಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ದಿನಕ್ಕೊಂದು ಹೊಸ ಪದ ಕಲಿಯಿರಿ ಅದರಿಂದ ವಾಕ್ಯ ರಚನೆ ಮಾಡಿ. ಇಂಗ್ಲಿಷ್ ನಿಯತಕಾಲಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ.
*ನಿಮಗೆ ಎಷ್ಟು ಭಾಷೆ ತಿಳಿದಿದೆ? ಇಂಗ್ಲಿಷ್ ಈಸ್ ಗ್ರೇಟ್ ಎಂದು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ನಾನು ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆ ಮಾತನಾಡಬಲ್ಲೆ. ಇಂಗ್ಲಿಷ್ ಈಸ್ ಗ್ರೇಟ್ ಎಂದು ನಾವು ಹೇಳುತ್ತಿಲ್ಲ. ಜನರೇ ಅದನ್ನು ಆಯ್ಕೆ ಮಾಡಿದ್ದಾರೆ. ಇಂದು ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾಗಿದೆ. ಎಲ್ಲಾ ಭಾಷೆಯ ಬಗ್ಗೆ ಅರಿವಿದ್ದರೆ ಸುಲಭವಾಗಿ ಯಶಸ್ಸಿನ ಮೆಟ್ಟಿಲು ತಲುಪಬಹುದು.
*ವಿದೇಶಿಯರ ಇಂಗ್ಲಿಷ್ ಉಚ್ಚಾರಕ್ಕಿಂತ ಭಾರತೀಯರ ಇಂಗ್ಲಿಷ್ ಉಚ್ಚಾರ ಚೆನ್ನಾಗಿದೆ ಎಂಬ ಮಾತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
(ನಗು) ಭಾರತೀಯರ ವ್ಯವಹಾರ ಜ್ಞಾನ ಚೆನ್ನಾಗಿದೆ. ಜತೆಗೆ ಬೇಗ ಕಲಿಯುವ ಗುಣವೂ ಇದೆ. ಇನ್ನು ಉಚ್ಚಾರದ ವಿಷಯಕ್ಕೆ ಬಂದರೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಉಚ್ಚಾರ ಕ್ರಮವಿದೆ. ಇಂದಿನ ಯುವಪೀಳಿಗೆಯವರು ವೇಗವಾಗಿ ಮಾತನಾಡುತ್ತಾರೆ. ಬೇರೆ ದೇಶಕ್ಕೆ ಹೋಲಿಸಿದರೆ ಇಲ್ಲಿನವರು ವ್ಯಾಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಹಾಗಾಗಿ ಶಬ್ದಗಳ ಬಳಕೆ ಚೆನ್ನಾಗಿರುತ್ತದೆ. ಇದನ್ನು ನಾವು ಪ್ರೋತ್ಸಾಹಿಸುತ್ತೇವೆ.
ಸಂದರ್ಶನ: ಪವಿತ್ರಾ ಶೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.