ADVERTISEMENT

ಇತಿಹಾಸಕ್ಕೆ ಬೆಳಕಿಂಡಿ

ಜೆ.ಪಿ.ಕೋಲಾರ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಹನುಮಂತರಾಜು,  ಚಿತ್ರ: ಡಿ.ಸಿ. ನಾಗೇಶ್‌
ಹನುಮಂತರಾಜು, ಚಿತ್ರ: ಡಿ.ಸಿ. ನಾಗೇಶ್‌   

ಚಿಕ್ಕರಾಜ ಒಡೆಯರ್‌ ಕಾಲದಲ್ಲಿ ಟಂಕಿಸಿದ ನಾಣ್ಯಗಳೆಷ್ಟು? ನಮ್ಮ ದೇಶದ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಸ್ಮರಣೀಯ ನಾಣ್ಯಗಳಾವುವು?

ಇಂತಹ ಹತ್ತಾರು ಆಸಕ್ತಿಕರ ಪ್ರಶ್ನೆಗಳನ್ನು ಎತ್ತಿಕೊಂಡು ಸೂಕ್ತ ಉತ್ತರ ಕೊಡುತ್ತ ನೋಡುಗರು ಕೇಳುಗರ ಕುತೂಹಲ ತಣಿಸುತ್ತಾರೆ ಕೆ.ಟಿ. ಹನುಮಂತರಾಜು.

ಶಾಗನೂರು ಕೃಷಿ ಕುಟುಂಬದಿಂದ ಬಂದ ಹನುಮಂತರಾಜು ಈಗ ಬೆಂಗಳೂರಿನಲ್ಲಿ ಕೈಗೊಂಡಿರುವುದು ಚಾಲಕ ವೃತ್ತಿ. ಪ್ರವೃತ್ತಿಯಲ್ಲಿ ಬಹುವಿಧ ಸಂಗ್ರಹಣಾ ಚತುರ. ನಾಣ್ಯ, ನೋಟು, ಹಳೇ ಕೃತಿಗಳು, ಛಾಯಾಚಿತ್ರ. ಹೀಗೆ ಆ ಪಟ್ಟಿ ಬಹಳ ಉದ್ದ.

ADVERTISEMENT

ಹೆಚ್ಚು ಓದದ ಹನುಮಂತರಾಜು ಒಮ್ಮೆ ನಾಣ್ಯ ಮತ್ತು ನೋಟು ಪ್ರರ್ದಶನವೊಂದನ್ನು ನೋಡಿ ತಾನೂ ಇಂಥ ಸಂಗ್ರಹ ಮಾಡಬಾರದೇಕೆ ಅಂದುಕೊಂಡರು. ಅಂದಿನಿಂದ ಬಿಡುವು ಸಿಕ್ಕ ಸಂದರ್ಭದಲ್ಲಿ ಕೊಂಚ ದುಬಾರಿ ಎನ್ನಿಸಿದರೂ ದೇಶ ವಿದೇಶಗಳ ನೋಟು–ನಾಣ್ಯ ಸಂಗ್ರಹಕ್ಕೆ ಇಳಿದರು. ಸಿಕ್ಕಸಿಕ್ಕ ಹಣವನ್ನು ಸಂಗ್ರಹ ಮಾಡಿದರೂ ಅದಕ್ಕೊಂದು ಹೊಸ ರೂಪ ಕೊಡಲು ಶುರುವಿಟ್ಟರು. ಈಗ ಅದು ವೈವಿಧ್ಯಮಯ ಪ್ರದರ್ಶನಗಳಾಗಿ ಸಿದ್ಧವಾಗಿದೆ.

ಕರ್ನಾಟಕದ ಎಲ್ಲಾ ಮುಖ್ಯಮಂತ್ರಿಗಳ ಜನ್ಮದಿನಾಂಕ ಹೆಚ್ಚಿನ ಮಂದಿಗೆ ಗೊತ್ತಿಲ್ಲದಿರಬಹುದು. ರಾಜು ಅವರೆಲ್ಲರ (ಕೆ. ಚೆಂಗಲರಾಯ ರೆಡ್ಡಿ ಅವರಿಂದ ಹಿಡಿದು ಸಿದ್ಧರಾಮಯ್ಯನವರವರೆಗೆ) ಜನ್ಮ ದಿನಾಂಕಗಳನ್ನು ಒಂದೆಡೆ ಇಟ್ಟಿದ್ದಾರೆ. ಅದೂ ಭಾರತೀಯ ಕರೆನ್ಸಿ ನೋಟುಗಳಲ್ಲಿ. ನೋಟುಗಳಲ್ಲಿ ಕ್ರಮ ಸಂಖ್ಯೆಗಳಿರುವುದು ಮಾಮೂಲಿ, ಆ ಸಂಖ್ಯೆಗಳಲ್ಲಿ ಕರ್ನಾಟಕ ಮುಖ್ಯಮಂತ್ರಿಗಳ ಹುಟ್ಟಿದ ದಿನಾಂಕಗಳನ್ನು ಸಾಕಷ್ಟು ಸಮಯ ತೆಗೆದುಕೊಂಡು ಸಂಗ್ರಹ ಮಾಡಿ, ಅದರೊಂದಿಗೆ ಎಲ್ಲರ ಸಚಿತ್ರ ಮಾಹಿತಿಯನ್ನು ಪ್ರದರ್ಶಿಕೆಗಳಾಗಿ ಸಿದ್ಧಪಡಿಸಿದ್ದಾರೆ ರಾಜು.

ಕರ್ನಾಟಕದ ಬಹುತೇಕ ಎಲ್ಲಾ ರಾಜಮನೆತನಗಳು ಉಪಯೋಗಿಸುತ್ತಿದ್ದ ನಾಣ್ಯಗಳನ್ನು ಸಂಗ್ರಹಿಸಿರುವ ಹನುಮಂತರಾಜು ಬ್ರಿಟಿಷ್‌ ಆಡಳಿತದಲ್ಲಿ ಬಳಸುತ್ತಿದ್ದ ನೋಟು–ನಾಣ್ಯಗಳನ್ನು ಇಟ್ಟುಕೊಂಡಿದ್ದಾರೆ. 65ಕ್ಕೂ ಹೆಚ್ಚು ವಿದೇಶಿ ನೋಟುಗಳನ್ನು ಹೊಂದಿಸಿಟ್ಟಿರುವ ಇವರು ವಿಜಯನಗರ ಮತ್ತು ಕದಂಬರ ಕಾಲದ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.

ದೇಶ–ವಿದೇಶಗಳ ನೋಟು–ನಾಣ್ಯಗಳನ್ನು ಅಧ್ಯಯನ ಮಾಡಿರುವ ರಾಜು ಶಾಲೆಯಲ್ಲಿ ಹೆಚ್ಚಿಗೆ ಕಲಿಯದಿದ್ದರೂ ಸಂಗ್ರಹಣೆಯ ಹವ್ಯಾಸದಿಂದ ಇತಿಹಾಸದ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಈಸ್ಟ್‌ ಇಂಡಿಯಾ ಕಂಪನಿ, ಬ್ರಿಟಿಷ್‌ ಸರ್ಕಾರ ಚಲಾವಣೆಗೆ ಬಿಟ್ಟ ಎಲ್ಲಾ ನೋಟು–ನಾಣ್ಯಗಳನ್ನು ಸಂಗ್ರಹಿಸಿರುವ ಇವರಿಗೆ ಇತಿಹಾಸಕಾರ ಡಾ.ಎಸ್‌. ವೆಂಕಟೇಶ್‌ ಮತ್ತು ಶಿಲ್ಪಾ ಹನುಮಂತರಾಜು ಬೆಂಬಲವಾಗಿ ನಿಂತಿದ್ದಾರೆ.

ಹನುಮಂತರಾಜು ಈಗಾಗಲೇ ಅನೇಕ ಸಾಹಿತ್ಯ ಸಮ್ಮೇಳನ– ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ನೋಟು–ನಾಣ್ಯದ ಇತಿಹಾಸ ಜ್ಞಾನ ಹರಡಲು ಮುಂದಾಗಿದ್ದಾರೆ.

ಈಗ ಚಲಾವಣೆಯಲ್ಲಿ ಇಲ್ಲದ 50 ಪೈಸೆ ಹಾಗೂ 25 ಪೈಸೆ ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ, ದಾಖಲೆ ಮಾಡುವ ಗುರಿ ಹೊಂದಿದ್ದಾರೆ. ಅಂಚೆ ಇಲಾಖೆಯು ಸ್ವಾತಂತ್ರ್ಯಾನಂತರ ಬಿಡುಗಡೆ ಮಾಡಿರುವ ಎಲ್ಲ ಮಿನಿಯೇಚರ್‌ ಶೀಟ್‌ಗಳನ್ನು ಒಟ್ಟು ಮಾಡಿ ಪ್ರದರ್ಶಿಸುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.