ADVERTISEMENT

ಇದೋ... ಜಲಪರ ಪರಿಹಾರ

ರೋಹಿಣಿ ಮುಂಡಾಜೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಸರ್ವ ಋತುಗಳಲ್ಲಿಯೂ ಬಾಯಾರಿ ಸೊರಗುತ್ತಿರುವ ಬೆಂಗಳೂರಿನಲ್ಲಿ ಜಲ ದಿನವಾದ ಇಂದು (ಮಾ.22) ಅಲ್ಲಿ ಇಲ್ಲಿ ನೀರಿನ ಮಾತು ಕೇಳಿಬರುತ್ತಿದೆ. ನಗರದ ಗಂಟಲಿನ ಪಸೆ ಆರಿ ಗುಟುಕು ನೀರಿಗಾಗಿ ಹಪಹಪಿ ಒಂದೆಡೆ ಕಂಡುಬಂದರೆ ಮತ್ತೊಂದೆಡೆ ನಾಲ್ಕಾರು ಮನೆಗಳು ಆರಾಮವಾಗಿ ಬಳಸಬಹುದಾದ ನೀರನ್ನು ತಮ್ಮ ಮನೆಯ ಸುತ್ತಮುತ್ತ ಮತ್ತು ವಾಹನ ತೊಳೆಯಲು ಬಳಸುವ ‘ಧಾರಾಳಿ’ಗಳು ನೀರಿಲ್ಲದವರ ಕಣ್ಣಲ್ಲಿ ನೀರು ಬರಿಸುತ್ತಾರೆ.

ಎಲ್ಲಾ ಋತುಗಳಲ್ಲಿಯೂ ಬೆಂಗಳೂರೆಂಬ ಕಾಂಕ್ರೀಟ್ ನಗರ ಬಾಯಾರಿಕೊಂಡೇ ಇರುವ ಸ್ಥಿತಿ. ಇದಕ್ಕೆ ಹೊಣೆ ಯಾರು ಎಂದು ಕೇಳಿದರೆ ಜನರು ಜಲ ಮಂಡಳಿ, ಮಹಾನಗರಪಾಲಿಕೆ ಮತ್ತು ಸರ್ಕಾರದತ್ತ ಬೆರಳು ತೋರಿಸಿದರೆ, ಸ್ಥಳೀಯ ಆಡಳಿತ ಸಂಸ್ಥೆಗಳು ಜನರತ್ತಲೇ ಬೆಟ್ಟು ಮಾಡುತ್ತವೆ.

ಮುಗಿಯದ ಗೋಳು
‘ಸ್ವಂತ ಬೋರ್‌ವೆಲ್‌ ಇದೆ ಎಂಬ ಕಾರಣಕ್ಕೆ ಅಂತರ್ಜಲವನ್ನು ದುರ್ಬಳಕೆ ಮಾಡುವವರ ವಿರುದ್ಧ ಜಲಮಂಡಳಿ ಮತ್ತು ಪಾಲಿಕೆ ಬಿಗುಕ್ರಮಗಳನ್ನು ಕೈಗೊಳ್ಳುವವರೆಗೂ ಬೋರ್‌ವೆಲ್‌ ಮಾಲೀಕರಿಗೆ ಬುದ್ಧಿ ಬರುವುದಿಲ್ಲ. ಪಕ್ಕದ ಬೀದಿಯಲ್ಲಿ ಒಬ್ಬರು ಪ್ರತಿದಿನ ಬೆಳಿಗ್ಗೆ 7ರಿಂದ 7.45ರವರೆಗೂ ತಮ್ಮ ವರಾಂಡ, ಕೈತೋಟ ಮತ್ತು ಗೇಟ್‌ನಾಚೆ ರಸ್ತೆಯನ್ನು ತೊಳೆಯಲು ಒಂದಿಂಚು ದಪ್ಪದ ಪೈಪ್‌ನಲ್ಲಿ ಬೋರ್‌ವೆಲ್‌ ನೀರನ್ನು ಬಳಸುತ್ತಾರೆ. ನೀವು ಹೀಗೆ ಮಾಡೋದು ಸರಿಯೇ ಎಂದು ಪ್ರಶ್ನಿಸಿದರೆ ನೀವ್ಯಾರು ಕೇಳಲು ಎಂದು ದಬಾಯಿಸುತ್ತಾರೆ’ ಎಂದು ದೂರುತ್ತಾರೆ ಜೆ.ಪಿ.ನಗರ ಸುಧಾಮನಗರದ ನಿವಾಸಿ ರಾಮ್‌ಕುಮಾರ್‌.

ನಗರದಲ್ಲಿ ಬೋರ್‌ವೆಲ್‌ಗಳ ಅಂಕಿಅಂಶ ಕಲೆಹಾಕುವ ನಿಟ್ಟಿನಲ್ಲಿ ಕಳೆದ ವರ್ಷ ಬೋರ್‌ವೆಲ್‌ಗಳ ನೋಂದಣಿಗೆ ಮುಂದಾದ ಜಲ ಮಂಡಳಿ ಅದರಲ್ಲಿ ಯಶಸ್ಸು ಕಾಣಲಿಲ್ಲ. ಮತ್ತೊಂದೆಡೆ, 30/40 ವಿಸ್ತೀರ್ಣದ ಸಿಂಗಲ್‌ ಸೈಟ್‌ಗಳಿಗೆ ಮಳೆ ನೀರು ಸಂಗ್ರಹ ಕಡ್ಡಾಯವಲ್ಲ ಎಂದು ಪಾಲಿಕೆ ಹೇಳುತ್ತದೆ. ಆದರೆ ಎತ್ತರಕ್ಕೆ (ವರ್ಟಿಕಲ್‌) ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಿಂಗಲ್‌ ಸೈಟ್‌ನಲ್ಲಷ್ಟೇ ಅಲ್ಲ, ಅರ್ಧ ಸೈಟ್‌ನಲ್ಲಿಯೂ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತುತ್ತಿವೆ. ಹೀಗಿರುವಾಗ ಸಿಂಗಲ್‌ ಸೈಟ್‌ಗೆ ಮಳೆ ನೀರು ಕಡ್ಡಾಯ ಬೇಡವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ಸ್ವಂತ ಮನೆಯಿರುವ ಪ್ರತಿಯೊಬ್ಬರೂ ನೀರಿನ ಮರುಬಳಕೆಗೆ ಮುಂದಾಗಬೇಕು ಎಂಬ ಸಲಹೆಯೊಂದು ಕೇಳಿಬರುತ್ತಿದೆ. ಸಾಮಾಜಿಕ ಕಾಳಜಿ, ಜಲಪರವಾದ ಮನಸ್ಸು ನಮ್ಮಲ್ಲಿರಬೇಕು. ಮಡಿ, ಮೈಲಿಗೆಯೆಂಬ ಚೌಕಟ್ಟಿನಿಂದ ಹೊರಬರಬೇಕು. ಇದು ಸಾಧ್ಯವೇ? 

ಮಷಿನ್‌ ನೀರಿನಿಂದ ಮತ್ತೆ ವಾಷಿಂಗ್

‘ವಾಷಿಂಗ್‌ ಮಷಿನ್‌ ಹೊರಹಾಕುವ ಎರಡನೇ ಸುತ್ತಿನ ನೀರನ್ನು ಒಂದು ಟ್ಯಾಂಕ್‌ಗೆ ಕನೆಕ್ಟ್‌ ಮಾಡಿಕೊಂಡು ಹಾಗಿಂದ ಹಾಗೇ ಶೌಚಾಲಯಕ್ಕೆ ಬಳಸುತ್ತೇವೆ. ಶೌಚಾಲಯದ ಗೋಡೆಯ ಟೈಲ್ಸ್‌, ಬಕೆಟ್‌, ಟಬ್‌ಗಳನ್ನು ಅದೇ ನೀರಿನಿಂದ ತೊಳೆಯುತ್ತೇನೆ. ಡೋರ್‌ಮ್ಯಾಟ್‌ಗಳನ್ನು ಮೊದಲ ಸುತ್ತು ವಾಶ್‌ ಮಾಡೋದೂ ಇದೇ ನೀರಿನಿಂದ. ಆಮೇಲೆ ನಳ್ಳಿನೀರಿನಿಂದ ತೊಳೆಯುತ್ತೇನೆ’ ಎನ್ನುತ್ತಾರೆ ಅತ್ತಿಗುಪ್ಪೆಯ ಗೃಹಿಣಿ ತನುಜಾ.

ಒಳಮನೆ ನೀರಿನ ಮರುಬಳಕೆ

‘ಪಾತ್ರೆ ತೊಳೆದ ನೀರು, ಬಚ್ಚಲಿನ ನೀರು ಮತ್ತು ಬಟ್ಟೆ (ಕೈ ಅಥವಾ ಮೆಷಿನ್‌ನಲ್ಲಿ) ತೊಳೆದ ನೀರು  ಈ ನೀರನ್ನು ಪ್ರತಿ

ADVERTISEMENT

ಮನೆಯಲ್ಲೂ ಮರುಬಳಕೆ ಮಾಡುವುದರಿಂದ ನಮ್ಮ ನಗರದ ನೀರಿನ ಸಮಸ್ಯೆಯನ್ನು ಅರ್ಧಪಾಲು ಕಡಿಮೆ ಮಾಡುತ್ತದೆ’ ಎನ್ನುತ್ತಾರೆ ನಗರದ ‘ಗ್ರೀನ್‌ ಬಜಾರ್‌’ ಸರ್ಕಾರೇತರ ಸಂಸ್ಥೆಯ ಆರತಿ ಮೋಹನ್‌.

ಮನೆಯಲ್ಲಿ ಬಳಕೆಯಾದ ನೀರನ್ನು (ಗ್ರೇ ವಾಟರ್) ಯಥಾಸ್ಥಿತಿಯಲ್ಲಿ ಹೂಕುಂಡ, ಕೈತೋಟಗಳಿಗೆ ಬಳಸಬಹುದು. ರಾಸಾಯನಿಕಗಳ ಹಂಗಿಲ್ಲದೆ ಗಿಡಗಳನ್ನು ಬೆಳೆಸುವವರು ಸಾವಯವ ಅಥವಾ ಹರ್ಬಲ್‌ ಸಾಬೂನು/ಶ್ಯಾಂಪೂಗಳನ್ನೇ ಬಳಸಿ. ಈ ಗ್ರೇ ವಾಟರ್ ಸಂಸ್ಕರಣೆ ಮಾಡಿದರೆ ಕೈತೋಟ, ವರಾಂಡ ಮತ್ತು ವಾಹನಗಳನ್ನು ತೊಳೆಯಲೂ ಯೋಗ್ಯವಾಗುತ್ತದೆ. ಕುಡಿಯುವ ನೀರಿಗೆ ಒಂದು ಸಿಂಟೆಕ್ಸ್‌ ಟ್ಯಾಂಕ್‌ ಪ್ರತಿ ಮನೆಯಲ್ಲೂ ಇದ್ದೇ ಇರುತ್ತದೆ. ಜೊತೆಗೆ ಗ್ರೇ ವಾಟರ್‌ ಸಂಗ್ರಹಕ್ಕೂ ಒಂದು ಟ್ಯಾಂಕ್‌ ಇರಿಸಿ ನಿಯಮಿತವಾಗಿ ಸಂಸ್ಕರಣೆ ಮಾಡಿದರಾಯಿತು ಎಂಬುದು ಅವರ ಸಲಹೆ.

ನೀರು ದುಬಾರಿಯಾಗಲಿ!

ನೀರು ಮಿತವ್ಯಯ ಮಾಡಲು ಯಾರಿಗೂ ಮನಸ್ಸಿಲ್ಲ. ಕಡಿಮೆ ದರದಲ್ಲಿ ನಮಗೆ ನೀರು ದಕ್ಕುತ್ತಿರುವುದೇ ಇದಕ್ಕೆ ಕಾರಣ.

ಒಂದು ಲೀಟರ್‌ ನೀರಿಗೆ 12 ರೂಪಾಯಿ ಕೊಡುವ ನಾವು ಮನೆಗೆ ಪೂರೈಕೆಯಾಗುವ ನಲ್ಲಿ ನೀರಿಗೆ ಲೀಟರ್‌ಗೆ ಕೆಲವೇ ಪೈಸೆ ಕೊಡುತ್ತೇವೆ.

ನೀರು ದುಬಾರಿಯಾದರೆ ಸ್ವಂತ ಮನೆಗಳಿರುವ ಮಂದಿಯಾದರೂ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಸಹಜವಾಗಿ ಮುಂದಾಗುತ್ತಾರೆ!
ಬೋರ್‌ವೆಲ್‌ಗಳ ನೋಂದಣಿ ಕ್ರಮ ಶ್ಲಾಘನೀಯ. ನಮ್ಮ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇಂತಹ ಒಳ್ಳೆಯ ವಿಚಾರಗಳಿಗೆ ಕೊರತೆಯಿಲ್ಲ. ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಸೋಲುತ್ತದೆ.

– ಸತ್ಯಪ್ರಕಾಶ್‌ ವಾರಾಣಸಿ, ಆರ್ಕಿಟೆಕ್ಟ್‌, ನೀರಿನ ನಿರ್ವಹಣೆ ತಜ್ಞರು

ಸಿಂಗಲ್‌ ಸೈಟ್‌ನಲ್ಲೂ ಮಳೆ ನೀರು ಸಂಗ್ರಹವಾಗಲಿ

ಮಳೆ ನೀರು ಸಂಗ್ರಹ ಮತ್ತು ಮರುಬಳಕೆ ಎಲ್ಲಾ ಬಗೆಯ ವಿಸ್ತೀರ್ಣದ ಪ್ರತಿ ಮನೆಗೂ ಕಡ್ಡಾಯವಾಗಬೇಕು. ಅದೇ ರೀತಿ

ಮನೆಯ ತ್ಯಾಜ್ಯ ನೀರಿನ ಮರುಬಳಕೆಯೂ ಕಡ್ಡಾಯವಾಗಲಿ. ಸಾರ್ವಜನಿಕ ಉದ್ಯಾನಗಳಿಗೆ ಸಂಸ್ಕರಿತ ತ್ಯಾಜ್ಯ ನೀರನ್ನೇ ಬಳಸಬೇಕು.

ಬೋರ್‌ವೆಲ್‌ಗಳ ನೋಂದಣಿಯನ್ನು ಜಲ ಮಂಡಳಿ ಮತ್ತೆ ಶುರು ಮಾಡಬೇಕು. ಮತ್ತು ಮುಂದೆಯೂ ಹೊಸ ಬೋರ್‌ವೆಲ್‌ಗಳಿಗೆ ಕಡಿವಾಣ ಹಾಕಬೇಕು
– ಎಸ್.ವಿಶ್ವನಾಥ್‌, ನಗರದ ಜಲ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.