ADVERTISEMENT

ಈ ಗುಲಾಬಿಯು ನಿನಗಾಗಿ...

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಈ ದಿನ ಅದೇನೋ ಸಂಚಲನ. ಕಾಯ್ದಿಟ್ಟ ಮನದಾಳದ ಭಾವನೆಯನ್ನು  ಸಂಗಾತಿಗೆ  ತಿಳಿಸುವ ಕಾತರ. ಭಾವೋತ್ಕರ್ಷ, ಹೃದಯ ಮಿಡಿತ ಬಡಿತವಾಗಿ ಬದಲಾಗುವ ಆ ಕ್ಷಣವನ್ನು ಒಂದು ಗುಲಾಬಿ ಹಗುರಾಗಿಸುತ್ತದೆ. ಹಾಗಾಗಿ ಈ  ಪ್ರೇಮದ ಪುಷ್ಪಕ್ಕೆ ಬೇಡಿಕೆ ಹೆಚ್ಚಿದೆ. ಕುದಿ ಹೃದಯಗಳ ಬೇಡಿಕೆ ಈಡೇರಿಸಲು ಬೆಂಗಳೂರು ಸಜ್ಜಾಗಿದೆ. ಇಲ್ಲಿನ  ಗುಲಾಬಿ ನಗರಕ್ಕಷ್ಟೇ ಅಲ್ಲ, ವಿಶ್ವ ಮಾರುಕಟ್ಟೆ ತಲುಪಿ ಯುವ ಹೃದಯಗಳಿಗೆ ಲಗ್ಗೆ ಇಟ್ಟಿದೆ.

ಒಲವಿನ ಜೋಡಿಗಳು ಪ್ರೇಮಿಗಳ ದಿನದ ಒಂದೊಂದು ಕ್ಷಣವನ್ನೂ ವ್ಯರ್ಥ ಮಾಡಲಾರರು.ಇವೆಲ್ಲದಕ್ಕೂ ಈ ನವಿರು ಕಂಪಿನ ಹೂವು ಸಾಕ್ಷಿಯಾಗುತ್ತದೆ. ಒಂದು ಮಾತಂತೂ ಸತ್ಯ ಪ್ರೇಮಿಗಳ ದಿನದಂದು ಇಂತಹ ಭಾವತೀವ್ರ ಪ್ರೀತಿ ರಾರಾಜಿಸದೆ ಇರುವುದಿಲ್ಲ. ಹೃದಯದಿಂದ ಹೃದಯಕ್ಕೆ ಭಾವನೆಗಳ ನದಿ ಹರಿಯದೇ ಇರುವುದಿಲ್ಲ.

ಬೆಂಗಳೂರಿನಲ್ಲಿ ಬೆಳೆಯುವ ಗುಲಾಬಿಗೆ ವಿದೇಶದಲ್ಲೂ ಭಾರಿ ಬೇಡಿಕೆ ಇದೆ. ಹಾಗಾಗಿ ಇಲ್ಲಿಂದ ರಫ್ತುಆಗುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಇಲ್ಲಿನ ಅಂತರರಾಷ್ಟ್ರಿಯ ಹೂ ಹರಾಜು ಮಂಡಳಿ ಜಂಟಿ ಪ್ರಯತ್ನದಿಂದ ಇಲ್ಲಿನ ಗುಲಾಬಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ.

ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ವಿದೇಶಗಳಿಗೆ ರಫ್ತಾಗುವ ಹೂವಿನ ಮೌಲ್ಯ 50 ಕೋಟಿ ರೂಪಾಯಿಗೂ ಅಧಿಕ. ಐರೋಪ್ಯ ದೇಶಗಳು, ಆಫ್ರಿಕಾ ಖಂಡದ ರಾಷ್ಟ್ರಗಳಿಂದ ಬೇಡಿಕೆ ಇದೆ.ಹಾಗಾಗಿ ಗುಲಾಬಿಗೆ ಬೆಲೆ ಇದ್ದೇ ಇದೆ.ವಿಶ್ವ ಮಾರುಕಟ್ಟೆಯಲ್ಲಿ ಬೆಂಗಳೂರಿನ ಗುಲಾಬಿಗೆ ಉತ್ತಮ ಬೇಡಿಕೆ ಇದೆ ಎಂದು ಹೇಳುತ್ತಾರೆ ಐಎಫ್‌ಎಬಿ  ವ್ಯವಸ್ಥಾಪಕ ನಿರ್ದೇಶಕ ಡಾ.ವಸಂತ್ ಕುಮಾರ್.

ದೇಶಿಯ ಮಾರುಕಟ್ಟೆಯಲ್ಲೂ ಕೆಂಪು ಗುಲಾಬಿ ತನ್ನ ಅಧಿಪತ್ಯ ಸಾಧಿಸಿದೆ. ಮುಂಬೈ, ಕೋಲ್ಕತ್ತ ಮುಂತಾದ ಮಹಾನಗರಗಳಿಗೆ ಕೆಂಪು ಗುಲಾಬಿ ಸೇರಿದಂತೆ ವಿವಿಧ ಬಣ್ಣದ ಹೂವುಗಳು ಸರಬರಾಜು ಆಗುತ್ತಿದೆ.

ಆದರೆ ಈ ಬಾರಿ ಮಾರುಕಟ್ಟೆಗೆ  ಹೃದಯ ಆಕಾರದ ಹಲವು ಬಗೆಯ ವಿಶಿಷ್ಟ ಗುಲಾಬಿಗಳಿಂದ ಮಾಡಿದ ಹೂಗುಚ್ಛಗಳು ಬಂದಿವೆ. ಸುಮಾರು ಸಾವಿರ ಗುಲಾಬಿಗಳಿಂದ ಮಾಡಿದ ಹೃದಯ ಆಕಾರದ ಹೂಗುಚ್ಛಗಳಿವು.  ಇಂತಹ 400 ಹೂಗುಚ್ಛಗಳನ್ನು ಈಗಾಗಲೇ ಖರೀದಿದಾರರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ . ಕನಿಷ್ಠ 20 ರೂಪಾಯಿಂದ ಗರಿಷ್ಠ 5,000 ರೂಪಾಯಿ ಮೌಲ್ಯದ ಗುಲಾಬಿ ಹೂಗುಚ್ಛಗಳು ಅಂಗಡಿಗಳಲ್ಲಿ ದೊರೆಯಲಿದೆ ಎಂದು ಹೇಳುತ್ತಾರೆ ಬ್ರಿಗೇಡ್ ರಸ್ತೆಯ ಹೂವಿನ ವ್ಯಾಪಾರಿ ಅರುಣ್.

ಕಳೆದ ವರ್ಷಕ್ಕೆ ಹೋಲಿಸಿದರೆ ಗುಲಾಬಿ ಹೂವಿನ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸೋಮವಾರ ಪ್ರೇಮಿಗಳ ದಿನವಿದ್ದು ಇಲ್ಲಿಯವರೆಗೆ ಮಾರಾಟ ಕೂಡ ಸರಿಯಾಗಿ ನಡೆದಿಲ್ಲ, ಹಿಂದಿನ ವರ್ಷ ನಾವು ಹೂಡಿದ್ದ ಬಂಡವಾಳ ಬೇಗ ವಾಪಸ್ಸು ಬಂದಿತ್ತು. ಆದರೆ ಈ ಬಾರಿ ಅದು ಕಷ್ಟ ಎನಿಸುತ್ತದೆ’ ಎಂಬುದು ಬ್ರಿಗೇಡ್ ರಸ್ತೆಯ ಹೂವಿನ ವ್ಯಾಪಾರಿ ಸಂತೋಷ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.