ADVERTISEMENT

ಊಟದ ಡಬ್ಬವೇ ಪ್ರೇಮ ಸೇತು !

ಇ.ಎಸ್.ಸುಧೀಂದ್ರ ಪ್ರಸಾದ್
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಊಟದ ಡಬ್ಬದಲ್ಲಿ ಸಿಕ್ಕಿದ ಪ್ರೇಮಪತ್ರವೊಂದರಿಂದ ಇಬ್ಬರ ನಡುವೆ ಹುಟ್ಟುವ ಪ್ರೇಮ ಕಥಾಹಂದರವಿರುವ ಚಿತ್ರ ‘ಲಂಚ್‌ ಬಾಕ್ಸ್’ ಇತ್ತೀಚೆಗೆ ನಗರದಲ್ಲಿ ಬಿಡುಗಡೆಯಾಯಿತು. ಚಿತ್ರದ ನಾಯಕ ಇರ್ಫಾನ್‌ ಮತ್ತು ನಾಯಕಿ ನಿಮ್ರತ್‌ ಚಿತ್ರದ ಬಗ್ಗೆ ‘ಮೆಟ್ರೋ’ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ಅದಲು ಬದಲಾದ ಊಟದ ಡಬ್ಬಗಳು ಹೃದಯಗಳೆರಡನ್ನು ಬೆಸೆಯುವ ಅಪರೂಪದ ಕಥೆಯುಳ್ಳ ಹಿಂಗ್ಲಿಷ್‌ ಚಿತ್ರ ‘ಲಂಚ್‌ ಬಾಕ್ಸ್‌’ ಮೊನ್ನೆಯಷ್ಟೆ ಬಿಡುಗಡೆಯಾಯಿತು. ರಿತೇಶ್‌ ಬಾತ್ರಾ ನಿರ್ದೇಶನದ ಈ ಚಿತ್ರ ನಗರದಲ್ಲೂ ತೆರೆಕಂಡಿತು. ಚಿತ್ರದ ಮುಖ್ಯ ಪಾತ್ರಧಾರಿಗಳು ಇರ್ಫಾನ್‌ ಖಾನ್‌ ಹಾಗೂ ನಿಮ್ರತ್‌ ಕೌರ್‌ ನಗರದಲ್ಲಿ ಚಿತ್ರ ವೀಕ್ಷಿಸಿದ್ದು ವಿಶೇಷ.

ಎಲ್ಲವನ್ನೂ ಒಂದೇ ಉಸಿರಿಗೆ ಹೇಳುವಷ್ಟು ಉತ್ಸಾಹ ವ್ಯಕ್ತಪಡಿಸಿದ ಶಾಂತ ಸ್ವಭಾವದ ಇರ್ಫಾನ್‌ ಒಂದು ಕಡೆ. ಮೊದಲ ಸಿನಿಮಾದಲ್ಲೇ ಖ್ಯಾತ ನಟನ ಜೊತೆ ಅಭಿನಯಿಸಿದ ಧನ್ಯತಾ ಭಾವದ ನಟಿ ನಿಮ್ರತ್‌ ಕೌರ್‌ ಇನ್ನೊಂದು ಕಡೆ.

ಔಪಚಾರಿಕ ಮಾತು ಪ್ರಾರಂಭಿಸುವ ಮೊದಲು ‘ಸಿನಿಮಾ ಹೇಗೆನ್ನಿಸಿತು’ ಎಂಬ ಪ್ರಶ್ನೆಯೊಂದಿಗೆ ಇಬ್ಬರೂ ಮಾತಿಗಳಿದರು. ಇರ್ಫಾನ್‌, ನಿಮ್ರತ್‌ ಇಬ್ಬರಿಗೂ ಇದೊಂದು ವಿಶೇಷ ಚಿತ್ರವಂತೆ. ಇಬ್ಬರೂ ನಿರ್ದೇಶಕ ರಿತೇಶ್ ಬಾತ್ರಾ ಅವರಿಗೆ ಧನ್ಯವಾದ ಸಲ್ಲಿಸಿದರು. ‘ಚಿತ್ರಕಥೆಯನ್ನು ಓದಿದ ನನಗೆ ಒಪ್ಪಿಗೆ ಸೂಚಿಸುವುದರ ಹೊರತಾಗಿ ಬೇರೆ ಯಾವ ಕಾರಣವೂ ಇರಲಿಲ್ಲ. ಹಾಳೆಯ ಮೇಲಿದ್ದ ಅಂಥದ್ದೊಂದು ಒಳ್ಳೆಯ ಕಥೆಯಲ್ಲಿ ನಾನೊಂದು ಪಾತ್ರವಾದೆ. ಅದಕ್ಕೊಂದಿಷ್ಟು ಭಾವ ತುಂಬಿದೆ. ಆ ತೃಪ್ತಿ ನನಗಿದೆ’ ಎಂದಾಗ ಇರ್ಫಾನ್‌ರ ಗುಳಿ ಕೆನ್ನೆಯ ತುಂಬ ನಗು.

‘ಹತ್ತು ಹದಿನೈದು ಚಿತ್ರಗಳ ಅನುಭವ ಬೆನ್ನಿಗೆ ಕಟ್ಟಿಕೊಂಡ ನಟಿಯೊಬ್ಬಳಿಗೆ ಸಿಗಬಹುದಾದ ಸಿನಿಮಾವೊಂದು ನನಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಅದರಲ್ಲೂ ಇರ್ಫಾನ್‌ ಅವರೊಂದಿಗೆ ನಟಿಸುವ ಅವಕಾಶ ಎಂದಾಕ್ಷಣ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ರಂಗಭೂಮಿ ಹಾಗೂ ಜಾಹೀರಾತು ಕ್ಷೇತ್ರದಲ್ಲಿದ್ದ ನನಗೆ ಲಂಚ್‌ಬಾಕ್ಸ್ ಒಂದು ಭರ್ಜರಿ ಓಪನಿಂಗ್‌ ನೀಡಿದೆ’ ಎಂದು ನಗು ಬೀರಿದರು ನಿಮ್ರತ್‌.

ಚಿತ್ರದ ಯಾವುದೇ ದೃಶ್ಯದಲ್ಲಿ ಒಟ್ಟಿಗೆ ನಟಿಸದ ಈ ಜೋಡಿ ಕೊನೆಯಲ್ಲಿ ಒಂದಾಗುವುದೇ ಎಂಬುದನ್ನು ಚಿತ್ರವನ್ನು ನೋಡಿಯೇ ತಿಳಿಯಬೇಕು. ‘ಚಿತ್ರದ ಪ್ರತಿ ಹಂತದಲ್ಲೂ ರಿತೇಶ್‌ ಬಾತ್ರಾ ಅವರೊಂದಿಗೆ ಇದ್ದ ನಾನು ಅಂತಿಮ ದೃಶ್ಯದ ಕುರಿತು ಸಾಕಷ್ಟು ಚರ್ಚೆ ಮಾಡಿದ್ದೇನೆ. ಇಂತಹದ್ದೊಂದು ಚಿತ್ರದ ಕೊನೆ ಹೇಗಿರಬೇಕು ಎಂಬುದೇ ದೊಡ್ಡ ಸವಾಲಾಗಿತ್ತು. ಆದರೆ ಎಲ್ಲರಿಗೂ ಮೆಚ್ಚುಗೆಯಾಗಬಲ್ಲ ಕ್ಲೈಮ್ಯಾಕ್ಸ್‌ ಕೊಟ್ಟಿದ್ದೇವೆ. ಟೊರಾಂಟೊ, ಅಮೆರಿಕದ ಪ್ರೇಕ್ಷಕರು ಚಿತ್ರ ನೋಡಿ ಮೆಚ್ಚಿದರು. ಟೊರಾಂಟೊ ಚಿತ್ರಮಂದಿರದಿಂದ ಹೊರಬಂದ ಬಹಳಷ್ಟು ಮಂದಿ ನನ್ನನ್ನು ಬಿಗಿದಪ್ಪಿ ತಮ್ಮ ಸಂತಸ ಹಂಚಿಕೊಂಡರು. ಆ ಕ್ಷಣ ನಿಜಕ್ಕೂ ಸಾರ್ಥಕವೆನಿಸಿತು’ ಎಂದರು ನಿಮ್ರತ್‌.

‘ಕಥೆಯ ಅಂತ್ಯ ಹೀಗೆಯೇ ಇರಬೇಕು ಎಂಬ ಕಲ್ಪನೆ ಆರಂಭದಲ್ಲಿ ಇರಲಿಲ್ಲ. ಚಿತ್ರದ ಬಹುಪಾಲು ಇಂಗ್ಲಿಷ್‌ನಲ್ಲೇ ಇದ್ದುದರಿಂದ ಪಾಶ್ಚಾತ್ಯರಿಗೆ ಇಷ್ಟವಾಗುವಂತೆ ಮಾಡುವ ಇಂಗಿತವನ್ನು ಕೆಲವರು ವ್ಯಕ್ತಪಡಿಸಿದರು. ಆದರೆ ಚಿತ್ರ ಮಾಡುತ್ತಿರುವುದೇ ಭಾರತೀಯರಿಗಾಗಿ. ಹೀಗಾಗಿ ಅವರಿಗೆ ಇಷ್ಟವಾಗುವಂತೆ ಚಿತ್ರದ ಅಂತ್ಯ ಸಿದ್ಧಪಡಿಸಲು ತೀರ್ಮಾನಿಸಲಾಯಿತು’ ಎಂದ ಇರ್ಫಾನ್‌, ವಿದೇಶೀಯರು ಚಿತ್ರಮಂದಿರದಿಂದ ಮನೆಗೆ ಮರಳುವ ಮುನ್ನ ಯಾವುದೇ ರೀತಿಯ ಗೊಂದಲಗಳನ್ನು ಕೊಂಡೊಯ್ಯಲು ಬಯಸುವುದಿಲ್ಲವಂತೆ. ಚಿತ್ರದಲ್ಲಿ ಇದ್ದಿರಬಹುದಾದ ಎಲ್ಲಾ ಗೊಂದಲಗಳನ್ನೂ ನಿವಾರಿಸಲು ಸಾಕಷ್ಟು ಶ್ರಮಪಟ್ಟಿರುವುದಾಗಿ ತಿಳಿಸಿದರು.
‘ಪ್ರೇಮಕಥೆಗಳುಳ್ಳ ಸಿನಿಮಾಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಬಂದು ಹೋಗಿವೆ.ಇದು ಅವುಗಳಲ್ಲಿಯೇ ಭಿನ್ನ ಪ್ರೇಮಕಥೆ. ಚಿತ್ರದ ಜೋಡಿಯ ತಾಕಲಾಟ ನೋಡುತ್ತಾ ಪ್ರೇಕ್ಷಕರಿಗೇ ಅವರನ್ನು ಒಂದುಗೂಡಿಸಬೇಕು ಎಂಬ ಬಯಕೆ ಮೂಡುತ್ತದೆ. ಈ ಪ್ರಕ್ರಿಯೆ ಅವರನ್ನೂ ಚಿತ್ರದ ಒಂದು ಪಾತ್ರವಾಗಿಸಿಬಿಡುತ್ತದೆ’ ಎನ್ನುವುದು ನಿಮ್ರತ್‌ ಅನಿಸಿಕೆ.

ಇಂದಿಗೂ ಒಂದು ಸಣ್ಣ ಲೋಪವೂ ಆಗದಂತೆ ಊಟದ ಡಬ್ಬಗಳನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಡಬ್ಬಾವಾಲಾಗಳನ್ನೇ ಪ್ರೇಮವಾಹಕವಾಗಿಸಿಕೊಂಡ ಕಥೆಯುಳ್ಳ ‘ಲಂಚ್‌ಬಾಕ್ಸ್‌’ಗೆ ದೇಶವಿದೇಶಗಳಲ್ಲಿ ಸಾಕಷ್ಟು ಪ್ರಶಂಸೆ  ಸಿಕ್ಕಿದೆಯಂತೆ. ಅಂತರ್ಜಾಲ ವ್ಯಾಪಕವಾಗಿರುವ ಈ ಕಾಲದಲ್ಲೂ ಪತ್ರಗಳ ಮೂಲಕ ಪ್ರೇಮಾಂಕುರವಾಗುವ ಕಥೆಯೊಂದು ಗತಿಸಿಹೋದ ಕಾಲವನ್ನು ಮತ್ತೊಮ್ಮೆ ನೆನಪಿಸುತ್ತದೆ ಎನ್ನುವ ಅಭಿಪ್ರಾಯದೊಟ್ಟಿಗೆ ಇಬ್ಬರೂ ಮಾತು ಮುಗಿಸಿದರು.

ಆಹಾ ಪ್ರೇಮ!
ನಾಯಕಿಯ ಕಂಠ ಕೇಳಿ ಪ್ರೇಮಿಸುವ ನಾಯಕನ ಕಥೆ ಇದ್ದ ಸುನಿಲ್‌ಕುಮಾರ್‌ ದೇಸಾಯಿ ನಿರ್ದೇಶನದ ‘ಬೆಳದಿಂಗಳ ಬಾಲೆ’ ಚಿತ್ರ ಕನ್ನಡದಲ್ಲಿ ಗೆದ್ದಿತ್ತು. ಅದಾದ ಮೇಲೆ ಹಲವು ಭಾಷೆಗಳಲ್ಲಿ ನಾಯಕ, ನಾಯಕಿಯ ನಡುವೆ ಪತ್ರ, ಫೋನ್‌ ಮೂಲಕ ಮೊಳೆಯುವ ಪ್ರೇಮ ಕಥಾನಕಗಳ ಚಿತ್ರಗಳು ಬಂದವು. ‘ಕಾದಲ್‌ ಕೋಟೈ’ ತಮಿಳು ಚಿತ್ರ ಕನ್ನಡದಲ್ಲಿ ‘ಯಾರೆ ನೀನು ಚೆಲುವೆ’ಯಾಗಿ ಮೂಡಿಬಂದು ಗೆದ್ದಿತ್ತು.
ಆದರೆ, ಎಂಬಿಎ ಓದುವ ವಿದ್ಯಾರ್ಥಿಗಳಿಗೆ ಅಧ್ಯಯನ ವಸ್ತುವಾದ ಮುಂಬೈ ಡಬ್ಬಾವಾಲಾಗಳ ಜಗತ್ತನ್ನು ಗಮನದಲ್ಲಿಟ್ಟುಕೊಂಡು ಒಂದು ಪ್ರೇಮಕಥಾನಕವನ್ನು ರಿತೇಶ್‌ ಬಾತ್ರಾ ಹೆಣೆದಿದ್ದಾರೆ. ಊಟದ ಬಾಕ್ಸ್‌ಗಳ ಮೂಲಕ ಪತ್ರ ರವಾನಿಸಿಕೊಳ್ಳುವುದರಿಂದ ಇಬ್ಬರ ನಡುವೆ ಮೂಡುವ ಅಪರೂಪದ ಪ್ರೇಮದಲ್ಲಿ ತಿರುವುಗಳೂ ಇವೆಯಂತೆ. ಅಂದಹಾಗೆ, ಈ ಚಿತ್ರಕ್ಕೆ ಅನುರಾಗ್‌ ಕಶ್ಯಪ್‌, ಗುಣೀತ್‌ ಮೋಂಗಾ, ಅರುಣ್‌ ರಂಗಾಚಾರಿ ಹಣ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.