ADVERTISEMENT

ಎಂಟಿವಿಯಲ್ಲಿ ಕೋಕ್ ಸಂಗೀತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಹಾಡು, ಸಂಗೀತ ಎಂದರೆ ಎಲ್ಲರಿಗೂ ಇಷ್ಟ. ಇದಕ್ಕೆ ಭಾರತೀಯ ಶಾಸ್ತ್ರೀಯ ಗಾಯನದ ಟಚ್ ಇದ್ದರಂತೂ ಬೇಡಾ ಅನ್ನೋರೇ ಇಲ್ಲ. ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಪರಂಪರೆಯಂತೂ ಸಮುದ್ರದಲೆಗಳಂತೆಯೇ ಪ್ರಾಚೀನ, ಚೇತೋಹಾರಿ, ನಿತ್ಯನೂತನ.
ಇದನ್ನು ಮನಗಂಡಿರುವ ಕೋಕಾಕೋಲಾ ಪಾನೀಯ ಕಂಪನಿ ಎಂಟಿವಿ ಜತೆ ಸೇರಿ ~ಕೋಕ್ ಸ್ಟುಡಿಯೊ ಅಟ್‌ಎಂಟಿವಿ ~ ಎಂಬ ಸಂಗೀತ ರಸದೌತಣ ಬಡಿಸುತ್ತಿದೆ.

ಜೂನ್ ತಿಂಗಳಲ್ಲಿ ಎಂಟಿವಿಯಲ್ಲಿ ಕೋಕ್ ಸ್ಟುಡಿಯೊ ಸಂಗೀತ ನೇರ ಪ್ರಸಾರ ಆರಂಭವಾಗಿದ್ದು, ಈಗ ಪ್ರತಿ ಶುಕ್ರವಾರ ಸಂಜೆ 7 ಗಂಟೆಗೆ ಪ್ರೇಕ್ಷಕರು, ಸಂಗೀತ ರಸಿಕರ ಮನಕ್ಕೆ ಲಗ್ಗೆ ಇಟ್ಟಿದೆ.

ಭಾರತದ ಮಟ್ಟಿಗೆ ಒಂದು ವಿಭಿನ್ನ ಕಾರ್ಯಕ್ರಮವಾಗಿರುವ ಕೋಕ್ ಸ್ಟುಡಿಯೋ ಎಂಟಿವಿ, ನಾನಾ ಭಾಗಗಳ ಕಲಾವಿದರನ್ನು ಒಂದೇ ವೇದಿಕೆ ಮೇಲೆ ತರಲಿದ್ದು, ಸಂಗೀತ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆ. ಯಾವುದೇ ಆಡಿಷನ್ ಇಲ್ಲದ, ತೀರ್ಪುಗಾರರು, ಅಂಕಗಳು ಇಲ್ಲದ ವೋಟ್ ಮಾಡುವ ಗೋಜೂ ಇಲ್ಲದ ಕೇವಲ ಮತ್ತು ಕೇವಲ ಸಂಗೀತಕ್ಕಷ್ಟೇ ಮೀಸಲಾಗಿರುವ ಮೂಲಕ ಕೋಕ್ ಸ್ಟುಡಿಯೊ ಎಂಟಿವಿ ಒಂದು ಹೊಸ ಅಲೆಯನ್ನು ಹುಟ್ಟುಹಾಕಿದೆ.

ಇಲ್ಲಿ ಪ್ರತಿ ಎಪಿಸೋಡ್‌ನಲ್ಲಿ ಸಂಗೀತ ಕ್ಷೇತ್ರದ ಒಬ್ಬ ದಿಗ್ಗಜ, ಒಬ್ಬ ಉದಯೋನ್ಮುಖ ಸಂಗೀತ ಕಲಾವಿದ ಮತ್ತು ಮತ್ತೊಬ್ಬ ಜಾನಪದ ಕಲಾವಿದ ಭಾಗವಹಿಸಲಿದ್ದು, ಪ್ರೇಕ್ಷಕರೊಂದಿಗೆ ಬಹುಕಾಲ ಉಳಿಯುವ ನೆನಪುಗಳನ್ನು ನೀಡಲಿದ್ದಾರೆ. ಸಂಗೀತ ಕ್ಷೇತ್ರದ ಮಹಾನ್ ತಾರೆಗಳಾದ ಶಾನ್, ಶೌಕತ್ ಆಮಂತ್ ಆಲಿ, ಶಂಕರ್ ಮಹದೇವನ್, ಸುನಿಧಿ ಚೌಹಾಣ್, ಕೆ.ಕೆ, ಹರಿಹರನ್, ಕೈಲಾಶ್ ಖೇರ್, ಕರ್ನಲ್ ಕೌಸಿನ್ಸ್, ರಿಚಾ ಶರ್ಮಾ, ಬಾಂಬೆ ಜಯಶ್ರಿ ಅವರೊಂದಿಗೆ ಜಾನಪದ ಮಾಂತ್ರಿಕರಾದ ಯೋಗೇನ್ ದಾ, ವಾದಾಲಿ ಸೋದರರು, ರಶೀದ್ ಖಾನ್, ಸಬ್ರಿ ಸೋದರರು ಮತ್ತು ಉದಯೋನ್ಮುಖ ಪ್ರತಿಭೆಗಳಾದ ಅದ್ವೈತ್, ಶ್ರುತಿ ಪಾಠಕ್, ಚಿನ್ನ ಪೊನ್ನ, ಹರ್ಷದೀಪ್ ಮತ್ತು ಇನ್ನೂ ಹೆಚ್ಚಿನ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
 
ಖ್ಯಾತ ಸಂಗೀತಗಾರ ಮತ್ತು ಗಾಯಕ ಲೆಸ್ಲಿ ಲೂಯಿಸ್ ಅವರು ಕೋಕ್ ಸ್ಟುಡಿಯೊ ಎಂಟಿವಿಯ ತಾಂತ್ರಿಕ ನಿರ್ದೇಶಕ. ರೆಡ್ ಚಿಲ್ಲಿ ಎಂಟರ್‌ಟೇನ್‌ಮೆಂಟ್ ಸಹಭಾಗಿತ್ವದಲ್ಲಿ ಎಂಟಿವಿ ಇಂಡಿಯಾ ನಿರ್ಮಿಸಿರುವ ಕೋಕ್ ಸ್ಟೂಡಿಯೊ ಎಂಟಿವಿ ಕಾರ್ಯಕ್ರಮ ಬಾಲಿವುಡ್‌ನ ಜನಪ್ರಿಯ ಟ್ರ್ಯಾಕ್‌ಗಳು, ಟ್ಯೂನ್‌ಗಳು, ಆಧುನಿಕ, ಪಾಶ್ಚಾತ್ಯ, ಜಾನಪದ ಹಾಗೂ ಇನ್ನೂ ಹತ್ತು ಹಲವು ಪ್ರಕಾರಗಳನ್ನು ಒಳಗೊಂಡ ಏಕೈಕ ವೇದಿಕೆಯಾಗಿದೆ.

ಇದರಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡ 36 ವರ್ಷದ ಮಾತಂಗಿ ಹುಟ್ಟಿದ್ದು ಕೋಲ್ಕತ್ತ, ಬೆಳೆದದ್ದು ಬೆಂಗಳೂರು, ಖ್ಯಾತಿ ಗಳಿಸಿದ್ದ ತಮಿಳುನಾಡಿನಲ್ಲಿ. ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಕರ್ನಾಟಕ ಸಂಗೀತದ ಕೃತಿಗಳನ್ನು ಪಾಶ್ಚಾತ್ಯ ಶೈಲಿಯಲ್ಲಿ ಹಾಡುವುದು ಇವರ ಸ್ಪೆಷಾಲಿಟಿ.

ಬಿಹಾರದಲ್ಲಿ ಜನಿಸಿ ನೇಪಾಳದಲ್ಲಿ ಬೆಳೆದು ದೆಹಲಿ, ಮುಂಬೈ ನಿವಾಸಿಯಾದ ತೋಚಿ ರೈನಾ ಸೂಫಿ  ಸಂತರ ಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಕುವೇಟ್‌ನಲ್ಲಿ ಜನಿಸಿ ಅಲ್ಲಿಯೇ ಬೆಳೆದ ಟಿ. ಸಂಜೀವ್ ಅವರು ಎ.ಆರ್. ರಹಮಾನ್ ತಂಡದ ಪ್ರಮುಖ ಗಿಟಾರ್ ವಾದಕ.

ಇವರೆಲ್ಲ ಈಚೆಗೆ ಕೋಕ್ ಸ್ಟುಡಿಯೊ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಹಾರ್ಡ್‌ರಾಕ್ ಕೆಫೆಯಲ್ಲಿ ಸಂಗೀತದ ಝಲಕ್ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.