ADVERTISEMENT

ಎಂವಿಜೆಯಲ್ಲಿ ಸ್ಥಾಪಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ಎಂವಿಜೆಯಲ್ಲಿ ಸ್ಥಾಪಕರ ದಿನಾಚರಣೆ
ಎಂವಿಜೆಯಲ್ಲಿ ಸ್ಥಾಪಕರ ದಿನಾಚರಣೆ   

ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪಕರೂ ವಿದ್ವಾಂಸರೂ ಆದ ಡಾ. ಎಂ.ವಿ. ಜಯರಾಮನ್ (1928-1993)ರವರ ಜನ್ಮ ದಿನದ ಅಂಗವಾಗಿ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪನಾ ದಿನವನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಬದ್ರಿನಾರಾಯಣ್ ಮಾತನಾಡಿ, ಶಿಕ್ಷಣ ತಜ್ಞರೂ ಆಧುನಿಕ ಜಗತ್ತಿನ ಬಗ್ಗೆ ದೂರದೃಷ್ಟಿಯನ್ನೂ ಹೊಂದಿದ್ದ ಡಾ. ಎಂ.ವಿ. ಜಯರಾಮನ್ ಅವರು ಈಗಿನ ಜನಾಂಗಕ್ಕೆ ಉತ್ಕೃಷ್ಟ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಕಲಿಸುವುದು ಅವರ ಕನಸಾಗಿತ್ತು. ಅದನ್ನು ಈಡೇರಿಸುವುದು ಕರ್ತವ್ಯ ಎಂದು ಹೇಳಿದರು.

ಎಚ್‌ಎಎಲ್ ಮ್ಯೋನೇಜ್‌ಮೆಂಟ್ ಅಕಾಡೆಮಿಯ ಕಾರ್ಯನಿರ್ವಾಹಕ ನಿರ್ದೇಶಕ ಅನಂತ ಅಗಸ್ತ್ಯ ಮುಖ್ಯ ಅತಿಥಿಗಳಾಗಿದ್ದರು. ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಎಂ.ಜೆ. ಬಾಲಚಂದರ್ ಶುಭ ಹಾರೈಸಿದರು. ಸ್ಥಾಪಕರ ದಿನಾಚರಣೆಯ ಅಂಗವಾಗಿ ಹೆಸರಾಂತ ಕರ್ನಾಟಕ ಸಂಗೀತ ವಿದ್ವಾಂಸ ಸುಚೇತನ್ ರಂಗಸ್ವಾಮಿ ಅವರಿಂದ ಸಂಗೀತ ಕಛೇರಿ ನಡೆಯಿತು. ಇದೇ ಸಂದರ್ಭದಲ್ಲಿ 400 ಮಂದಿ ಸಿಬ್ಬಂದಿಯನ್ನು ಗೌರವಿಸಲಾಯಿತು.
 

ಶೈಕ್ಷಣಿಕ ಸಾಧನೆ ಮತ್ತು ಇತರ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
 

ವಿಟಿಯು ನಡೆಸಿದ ಬಿ.ಇ. ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಐವರು ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ, ಎಂ.ಟೆಕ್.ನಲ್ಲಿ ರ‌್ಯಾಂಕ್ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ತಲಾ ರೂ. 50,000 ನಗದು ಬಹುಮಾನವನ್ನು ಡಾ. ಎಂ.ವಿ. ಜಯರಾಮನ್ ಫೌಂಡೇಷನ್ ವತಿಯಿಂದ ನೀಡಲಾಯಿತು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.