ADVERTISEMENT

ಎನ್‌ಎಸ್‌ಡಿ: ಕನಸು ಈಡೇರುವ ಹೊತ್ತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಸಿಲಿಕಾನ್ ನಗರಿ, ಉದ್ಯಾನ ನಗರಿ ಎಂಬ ಹೆಸರು ಹೊತ್ತ ಬೆಂಗಳೂರು ಕಲೆಯ ತವರು ಕೂಡ ಹೌದು.

ದೇಶ ವಿದೇಶದ ವಿವಿಧ ಬಗೆಯ ಕಲೆಗಳನ್ನು ಇಲ್ಲಿನ ಕಲಾ ರಸಿಕರು ನೋಡಿ ಆನಂದಿಸುವುದರೊಂದಿಗೆ ಅದನ್ನು ಕಲಿಯಲು ಕೂಡ ಇಷ್ಟ ಪಡುತ್ತಾರೆ. ಅದಕ್ಕೆ ಹೊಸ ಸೇರ್ಪಡೆ- ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ನಗರದಲ್ಲಿ ಪ್ರಾರಂಭವಾಗುತ್ತಿರುವುದು.

ರಂಗಭೂಮಿಗೂ ಎನ್‌ಎಸ್‌ಡಿಗೂ ಮೊದಲಿನಿಂದಲೂ ನಂಟು. ನಾಟಕಗಳಲ್ಲಿ ತೊಡಗಿಸಿಕೊಳ್ಳುವ ಅನೇಕರು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬರಬೇಕೆಂದು ಹಂಬಲಿಸುವುದುಂಟು.

ನಾಸಿರುದ್ದೀನ್ ಷಾ, ಶಬಾನ ಆಜ್ಮಿ, ಅರುಂಧತಿ ನಾಗ್ ಸೇರಿದಂತೆ ಹಲವು ರಂಗಕರ್ಮಿಗಳು ಇಲ್ಲಿಂದಲೇ ಕಲಿತು ಬಂದವರು. ರಾಷ್ಟ್ರೀಯ ನಾಟಕ ಶಾಲೆ ನಗರದಲ್ಲಿ ಪ್ರಾರಂಭಿಸಬೇಕೆಂಬ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಕೊನೆಗೂ ಅಸ್ತು ಎಂದಿದೆ.

`ದಕ್ಷಿಣದ ಬೇರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಮಂದಿ (54) ಕರ್ನಾಟಕ ಮೂಲದವರೇ ಎನ್‌ಎಸ್‌ಡಿಯಲ್ಲಿ ಕಲಿತಿದ್ದಾರೆಂಬುದು ಹೆಮ್ಮೆಯ ವಿಷಯ. ಅಲ್ಲಿ  ಕಲಿತು ಬಂದವರು ವಿನೂತನ ರಂಗ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದರಿಂದ ಇಲ್ಲಿ ನಾಟಕ ಶಾಲೆ ಪ್ರಾರಂಭಿಸುವುದು ಸೂಕ್ತ~ ಎಂದು ಎನ್‌ಎಸ್‌ಡಿ ಪ್ರಾದೇಶಿಕ ನಿರ್ದೇಶಕ ಸುರೇಶ್ ಆನಗಳ್ಳಿ ಅಭಿಪ್ರಾಯ ಪಡುತ್ತಾರೆ.

ಕಲಾಗ್ರಾಮದ ಹತ್ತಿರ ಮೂರು ಎಕರೆ ಭೂಮಿ ಮಂಜೂರು ಮಾಡುವಂತೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ವರ್ಷಾಂತ್ಯದಲ್ಲಿ ಕಟ್ಟಡ ನಿರ್ಮಾಣ ಕೆಲಸ ಶುರುವಾಗಲಿದ್ದು, ಇನ್ನು ಮೂರು ವರ್ಷದಲ್ಲಿ ಸಂಪೂರ್ಣ ಕಾಮಗಾರಿ ಕೆಲಸ ಪೂರ್ಣಗೊಳ್ಳುವ ವಿಶ್ವಾಸ ಅವರದ್ದು.

ಈ ಬಗ್ಗೆ ಪ್ರತಿಕ್ರಿಯಿಸಿದ ರಂಗಕರ್ಮಿ ಅರುಂಧತಿ ನಾಗ್, `ದೇಶದಲ್ಲಿ ಅನುಭವಿ ರಂಗಕರ್ಮಿಗಳ ಕೊರತೆ ಕಾಣುತ್ತಿದೆ. ಹೀಗಾಗಿ ಇಲ್ಲಿ ಎನ್‌ಎಸ್‌ಡಿ ಪ್ರಾರಂಭವಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ~ ಎಂದರು.

ಒಟ್ಟು ನಾಲ್ಕು ರಾಜ್ಯಗಳ ನಾಟಕ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಇಂಗ್ಲಿಷ್ ಭಾಷೆಯ ಪಠ್ಯಕ್ರಮ ಇರುವುದರಿಂದ ಇದು ಎಲ್ಲರಿಗೂ ಅರ್ಥವಾಗಲಿದೆ ಎನ್ನುತ್ತಾರೆ ಸುರೇಶ್ ಆನಗಳ್ಳಿ.

ಸ್ಥಳೀಯ ಭಾಷೆಗಳಲ್ಲಿ ಪಠ್ಯಕ್ರಮ ರೂಪಿಸುವ ಅಗತ್ಯವಿದೆ. ಪ್ರತಿಯೊಬ್ಬರಿಗೂ ಅವರವರ ಭಾಷೆಯಲ್ಲಿ ಹೇಳಿಕೊಡುವುದರಿಂದ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಉದಾಹರಣೆಗೆ ಹಿಂದಿ ಮಾಧ್ಯಮದಲ್ಲಿ ಹೇಳಿಕೊಟ್ಟರೆ ಅದು ಹಿಂದಿ ಭಾಷೆ ಬರುವವರಿಗೆ ಮಾತ್ರ ಸೀಮಿತವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡದ ಪಠ್ಯಕ್ರಮಗಳನ್ನು ಕೂಡ ಅಳವಡಿಸುವ ಅಗತ್ಯವಿದೆ ಎಂಬುದು ರಂಗಕರ್ಮಿ ಪ್ರಸನ್ನ ಕಿವಿಮಾತು.

`ಸ್ಥಳೀಯರಿಗೆ ಆತ್ಮೀಯರಾಗುವುದು ಕನ್ನಡ ಭಾಷೆಯಲ್ಲಿ. ಎನ್‌ಎಸ್‌ಡಿ ನಾಟಕಗಳು ಜನರಿಗೆ ತಲುಪಬೇಕಾದರೆ ಕಥಾವಸ್ತು ಕನ್ನಡದಲ್ಲಿ ಇದ್ದರೆ ಹೆಚ್ಚು ಜನರಿಗೆ ತಲುಪಬಹುದು~ ಎಂಬುದನ್ನು ಅರುಂಧತಿ ಕೂಡ ಸಮರ್ಥಿಸುತ್ತಾರೆ. 

 `ಬೋಧನೆಯು ಬಹುಭಾಷೆಯಲ್ಲಿರುವುದೇ ಸೂಕ್ತ. ಇದರಿಂದ ಅನೇಕರಿಗೆ ಉಪಯೋಗವಾಗಲಿದೆ. ಇಲ್ಲವಾದಲ್ಲಿ ಭಾಷೆಯ ಕಾರಣಕ್ಕೇ ತಗಾದೆ ಸೃಷ್ಟಿಯಾದೀತು~ ಎಂಬ ಆತಂಕ ~ಜಾಗೃತಿ ಥಿಯೇಟರ್~ನ ಆರ್ಟಿಸ್ಟಿಕ್ ನಿರ್ದೇಶಕಿ ಅರುಂಧತಿ ರಾಜಾ ಅವರದ್ದು.

`ರಂಗಭೂಮಿಯ ಅಭಿವೃದ್ಧಿಗೆ ಪೂರಕವಾದ ಯಾವುದೇ ನಿರ್ಧಾರ ಒಳ್ಳೆಯದೇ. ದೆಹಲಿಯಲ್ಲಿರುವ ಎನ್‌ಎಸ್‌ಡಿ ಈಗಾಗಲೇ ರಾಷ್ಟ್ರದಾದ್ಯಂತ ರಂಗಭೂಮಿಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆಗಬೇಕಿರುವುದೂ ಇದೇ. ಭಾಷೆಯೊಂದೇ ತಲೆಕೆಡಿಸಿಕೊಳ್ಳುವ ವಿಷಯ ಆಗಬಾರದು~ ಅಂತಾರೆ ರಂಗಭೂಮಿ ನಟ, ನಿರ್ದೇಶಕ ವಿವೇಕ್ ಮದನ್.

1994ರಲ್ಲಿ ನಗರದಲ್ಲಿ ಎನ್‌ಎಸ್‌ಡಿ `ರಿಸೋರ್ಸ್ ಸೆಂಟರ್~ ಪ್ರಾರಂಭವಾಯಿತು. 2008ರಲ್ಲಿ ಎನ್‌ಎಸ್‌ಡಿಗಾಗಿಯೇ ಕ್ಯಾಂಪಸ್ ಸೃಷ್ಟಿಸುವ ಘೋಷಣೆ ಹೊರಬಿದ್ದಿತ್ತು. ಅಂತೂಇಂತೂ ಈಗ ದೀರ್ಘ ಕಾಲದ ಕನಸೊಂದು ನನಸಾಗುವಂತೆ ಕಾಣುತ್ತಿದೆ.
 -

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.