*ನಾನು ಬಿ.ಇ ಕೋರ್ಸ್ ಸೇರಿದ್ದೇನೆ. ನನಗೆ ಓದಿದ್ದು ನೆನಪೇ ಇರುವುದಿಲ್ಲ. ಬೇಗ ಮರೆತುಹೋಗುತ್ತದೆ. ಏನು ಮಾಡುವುದು?
-ಸಾತ್ವಿಕ್, ಬೆಂಗಳೂರು
ಪರೀಕ್ಷೆ ಹತ್ತಿರ ಇದೆ ಎಂದಾಗ ಓದಲು ಶುರು ಮಾಡುವುದು ಎಲ್ಲ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪು. ಪರೀಕ್ಷೆ ಬರೆದು ಪಾಸಾಗುವುದು ಮಾತ್ರವೇ ಓದಿನ ಉದ್ದೇಶವಾಗಿರಬಾರದು. ವಿಷಯದ ಬಗ್ಗೆ ಆಳವಾದ ಅಧ್ಯಯನ ನಡೆಸುವುದು, ಒಂದು ವಿಷಯದ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುವುದು ಓದಿನ ಉದ್ದೇಶವಾಗಬೇಕು.
ಪ್ರತಿದಿನವೂ ತರಗತಿಗೆ ಹಾಜರಾಗಬೇಕು. ಅಲ್ಲಿ ಗಮನವಿಟ್ಟು ಪಾಠ ಕೇಳಬೇಕು. ಅದನ್ನು ಅದೇ ದಿನ ಪುನಃ ಓದಿ ಅರ್ಥ ಮಾಡಿಕೊಳ್ಳಬೇಕು. ಪ್ರತಿದಿನವೂ ಇದೇ ಅಭ್ಯಾಸ ಮುಂದುವರಿಸಿದರೆ ಓದಿದ ಪಾಠ ಮರೆಯುವುದಿಲ್ಲ. ಇದನ್ನು ಬಿಟ್ಟು ಕಲಿಕೆಗೆ ಸುಲಭ ಮಾರ್ಗ ಹುಡುಕುವುದು ಸರಿಯಲ್ಲ.
*ಎಲ್ಲರೂ ನನ್ನನ್ನು ದಡ್ಡ, ಬೇಗ ಏನೂ ಕಲಿಯಲ್ಲ ಅಂತಾರೆ. ನನಗೆ ಹಾಡು ಹೇಳೋಕೆ ಬರುತ್ತೆ. ಚಿತ್ರ ಬರೆಯೋಕೆ ಬರುತ್ತೆ. ಅಕ್ಷರಗಳನ್ನು ಓದಿ ಕಲಿಯೋದ್ರಲ್ಲಿ ಮಜಾ ಇಲ್ಲ ಅನ್ಸುತ್ತೆ. ನಾನು ನಿಜವಾಗ್ಲೂ ದಡ್ಡನಾ?
-ಕೋದಂಡರಾಮ, 5ನೇ ತರಗತಿ, ಹೆಬ್ಬಾಳ
ನೋಡು ಪುಟ್ಟಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿನಗೆ ಸಂಗೀತ ಮತ್ತು ಚಿತ್ರಕಲೆಯಲ್ಲಿ ಇಷ್ಟೆಲ್ಲಾ ಆಸಕ್ತಿ ಇರುವುದು ತುಂಬಾ ಒಳ್ಳೆಯದು. ಇದು ನಿನಗೆ ಹುಟ್ಟುತ್ತಲೇ ಬಂದಿರುವ ಕಲೆ. ಇದರಲ್ಲಿಯೇ ನೀನು ಮುಂದುವರಿಯಬೇಕು ಎಂದರೂ ಅದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು ಅಲ್ವಾ?
ಅದೆಲ್ಲಾ ತಿಳಿದುಕೊಳ್ಳಬೇಕು ಎಂದರೆ ನೀನು ಓದಬೇಕು. ದಿನವೂ ಶಾಲೆಗೆ ಹೋಗಬೇಕು. ಸಂಗೀತ, ಚಿತ್ರಕಲೆಯಂತೆಯೇ ನಿನ್ನ ಶಾಲೆಯ ಪುಸ್ತಕ ಕೂಡ ಎಂದು ತಿಳಿದು ಅದರಲ್ಲೂ ಆಸಕ್ತಿ ತೋರಿಸು.
ಆಗ ನೋಡು, ನಿನ್ನನ್ನು ದಡ್ಡ ಎನ್ನುವವರೇ ಶಹಭಾಸ್‌ಗಿರಿ ಕೊಡುತ್ತಾರೆ. ನೀನಿನ್ನು ತುಂಬಾ ಚಿಕ್ಕವ. ಓದಿನ ಜೊತೆ ಸಂಗೀತ ಮತ್ತು ಚಿತ್ರಕಲೆಯನ್ನೂ ಮುಂದುವರಿಸಿದರೆ ನಿನಗೆ ಒಳ್ಳೆಯ ಭವಿಷ್ಯ ಇದೆ.
*ನನಗೆ ಹುಡುಗರನ್ನು ಕಂಡರೆ ವಿಪರೀತ ಭಯ. ಯಾವುದಾದರೂ ಹುಡುಗ ಬಂದು ಮಾತಾಡಿಸಿದರೆ ನಡುಗಲಾರಂಭಿಸುತ್ತೇನೆ. ಬಾಯಿ ಒಣಗಿ ಮಾತೇ ಹೊರಡುವುದಿಲ್ಲ. ಹುಡುಗರ ಗುಂಪು ರಸ್ತೆ ಪಕ್ಕ ನಿಂತಿದ್ದರೆ ಅವರನ್ನು ದಾಟಿಕೊಂಡು ಹೋಗುವುದೂ ಸಾಧ್ಯವಾಗದೇ ಒದ್ದಾಡುತ್ತೇನೆ. ಇದರಿಂದ ಹೊರಬರುವುದು ಹೇಗೆ...?
-ಶಾಲಿನಿ
ವಯಸ್ಸನ್ನು ನೀವು ತಿಳಿಸಿಲ್ಲ. ಆದರೆ ನಿಮ್ಮ ಪ್ರಶ್ನೆ ನೋಡಿದರೆ ನೀವಿನ್ನೂ ಚಿಕ್ಕವರು ಎಂದುಕೊಳ್ಳುತ್ತೇನೆ. ಇದು ಹರಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳೂ ಅನುಭವಿಸುವಂಥದ್ದು.
ಇದಕ್ಕೇನೂ ಹೆದರಬೇಕಿಲ್ಲ. ನೀವು ಬೆಳೆದ ವಾತಾವರಣ, ನಿಮ್ಮ ಮನೆಯಲ್ಲಿ ಸಹೋದರರು, ಅಪ್ಪ... ಹೀಗೆ ಎಲ್ಲರ ಜೊತೆ ನಡೆದುಕೊಂಡ ರೀತಿ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾದರೂ ಅವಘಡ ಆಗಿಬಿಟ್ಟರೆ ಎಂಬ ಭಯ ಮನಸ್ಸಿನಲ್ಲಿ ಕಾಡತೊಡಗಿದಾಗ ಈ ರೀತಿಯ ಅಭದ್ರತೆ ಕಾಡುವುದು ಸಹಜ.
ಮೊದಲು ಹೊರಗೆ ಹೋಗುವಾಗ ಜೊತೆಯಲ್ಲಿ ನಿಮ್ಮ ಸ್ನೇಹಿತರು, ಕುಟುಂಬ ವರ್ಗದವರು ಯಾರನ್ನಾದರೂ ಕರೆದುಕೊಂಡು ಹೋಗಿ. ಹೀಗೆ ಮಾಡುತ್ತಿದ್ದರೆ ನಿಮ್ಮಲ್ಲಿರುವ ಭಯ ಹೋಗುತ್ತದೆ.
ಕ್ರಮೇಣ ನೀವು ಒಬ್ಬರೇ ಹೋಗಬಹುದು ಎಂಬ ವಿಶ್ವಾಸ ಮೂಡುತ್ತದೆ. ತುಂಬಾ ಒಳ್ಳೆಯರು ಎಂದುಕೊಂಡ ಹುಡುಗರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಇದರಲ್ಲಿ ಏನೂ ತಪ್ಪು ಇಲ್ಲ. ಆಗ ನಿಧಾನಕ್ಕೆ ನಿಮ್ಮಲ್ಲಿರುವ ಭಯ ಹೋಗಲು ಶುರುವಾಗುತ್ತದೆ.
ಹೀಗೆಲ್ಲಾ ಮಾಡಿದ ಮೇಲೂ ಭಯ ಹೋಗಿಲ್ಲ ಎಂದರೆ ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ. ಅವರು ನಿಮ್ಮಲ್ಲಿರುವ ಭಯವನ್ನು ದೂರ ಮಾಡಲು ಸಹಾಯ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.