ADVERTISEMENT

ಒಂದು ಸೇರು ಕಡಲೆಕಾಯಿಗೆ ರೂ. 5

ಚೆನ್ನವೀರಯ್ಯನಪಾಳ್ಯ ಪರಿಷೆ ವಿಶೇಷ

ಚಿಕ್ಕ ರಾಮು
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST

ಬಸವನಗುಡಿ ಕಡಲೆಕಾಯಿ ಪರಿಷೆ ಮಾದರಿಯಲ್ಲಿಯೇ ನಡೆಯುವ ಚೆನ್ನವೀರಯ್ಯನಪಾಳ್ಯದ ಕಡಲೇಕಾಯಿ ಪರಿಷೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಜನವರಿ 15 (ಬುಧವಾರ)ರ ಸಂಕ್ರಾಂತಿ ಹಬ್ಬದಂದು ನಡೆಯಲಿರುವ ಪರಿಷೆಗೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ.

ನೈಸ್‌ ಕಾರಿಡಾರ್‌ ಸರ್ಕಲ್‌ ಬಳಿಯ ಸೋಮಪುರ ಸಮೀಪದ ಚೆನ್ನವೀರಯ್ಯನಪಾಳ್ಯದಲ್ಲಿ ಪುರಾಣ ಪ್ರಸಿದ್ದ ಚೋಳರಕಾಲದ ನಂದಿಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಈ ಪರಿಷೆ ನಡೆಯುತ್ತದೆ. ಗ್ರಾಮದೇವತೆಗಳ ಉತ್ಸವ ಹಾಗೂ ಜಾತ್ರೆ ರಂಗು ಸೇರಿಕೊಳ್ಳುವುದರಿಂದ ಪರಿಷೆ ಹೆಚ್ಚು ಕಳೆಗಟ್ಟುತ್ತದೆ.

ಮೊದಲ ವರ್ಷ ಒಬ್ಬರಿಗೆ ಎರಡು ಸೇರು ಕಡಲೆಕಾಯಿ ಜೊತೆಗೆ ಒಂದು ಜೊಲ್ಲೆ ಕಬ್ಬನ್ನು ಉಚಿತವಾಗಿ ನೀಡುವುದರೊಂದಿಗೆ ಇಲ್ಲಿನ ಕಡಲೇಕಾಯಿ ಪರಿಷೆ ಪ್ರಾರಂಭವಾಯಿತು. ಈ ವರ್ಷದಿಂದ ಒಂದು ಸೇರು ಕಡಲೇಕಾಯಿಯನ್ನು ಐದು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ ಕೊಂಡುಕೊಂಡವರಿಗೆ ಉಚಿತವಾಗಿ ಒಂದು ಜೊಲ್ಲೆ ಕಬ್ಬು, ಎಳ್ಳು-ಬೆಲ್ಲ, ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಗಿಣ್ಣು, ಗೆಣಸು, ಪೊಂಗಲ್‌ನ್ನು  ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ಸಂಕ್ರಾಂತಿ ಹಬ್ಬದಂದು ಹತ್ತಾರು ಹಳ್ಳಿಗಳ ಗ್ರಾಮಸ್ಥರು ಒಂದೆಡೆ ಸೇರಿ ನಂದಬಸವಣ್ಣ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಡೊಳ್ಳು ಕುಣಿತ, ವೀರಭದ್ರನ ಕುಣಿತ, ಗೊರವನ ಕುಣಿತ, ಕಂಸಾಳೆ, ಪಟ್ಟದ ಕುಣಿತ, ಪೂಜಾ ಕುಣಿತದೊಂದಿಗೆ ಹಳ್ಳಿಗಳ ಜನರು ತಮ್ಮೂರಿನ ಗ್ರಾಮದೇವತೆಗಳ  ಮೆರವಣಿಗೆಯೊಂದಿಗೆ ಹೆಣ್ಣು ಮಕ್ಕಳು ಆರತಿಯೊಂದಿಗೆ ಬರುತ್ತಾರೆ. ಬಸವನಗಡಿ ಕಡಲೇಕಾಯಿ ಪರೀಷೆಯಲ್ಲಿ ಹಣ ಕೊಟ್ಟು ಕಡಲೇಕಾಯಿ ಕೊಳ್ಳಬೇಕು. ಆದರೆ, ಈ ಜಾತ್ರೆಗೆ ಬರುವ ಸಾವಿರಾರು ಭಕ್ತಾದಿಗಳಿಗೆ ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಗೆಣಸು, ಎಳ್ಳು-ಬೆಲ್ಲ, ಮಜ್ಜಿಗೆಯನ್ನು ಉಚಿತವಾಗಿ ಕೊಡುವುದು ವಿಶೇಷ.

‘ದೇವಾಲಯದ ಭಕ್ತರು ಮತ್ತು ಸ್ನೇಹಿತರು ಸೇರಿಕೊಂಡು ಹಲವು ವರ್ಷಗಳಿಂದ ಕಡಲೆಕಾಯಿ ಪರೀಷೆ ನಡೆಸಿಕೊಂಡು ಬರುತ್ತಿದ್ದೇವೆ. ಮೊದಲ ವರ್ಷ ಒಂದು ಸಾವಿರ ಮೂಟೆ ಕಡಲೆಕಾಯಿ ಯನ್ನು ಉಚಿತವಾಗಿ ಹಂಚಲಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಮಾಗಡಿ, ದಾವಣಗೆರೆಯಿಂದ ಕಡಲೆಕಾಯಿ ತರಿಸಲಾಗುತ್ತಿದೆ. ಸಂಕ್ರಾಂತಿ ಆಚರಣೆಯ ಸಂಭ್ರಮ, ನಾಡಿನ ಸಂಸ್ಕೃತಿ, ಜಾನಪದ ಕಲೆ ಹಾಗೂ ಗ್ರಾಮ್ಯ ಸೊಗಡಿನ ಘಮಲನ್ನು ಪರಿಷೆಯ ಮೂಲಕ ದಾಟಿಸುವುದು ನಮ್ಮ ಉದ್ದೇಶ. ಪರಿಷೆ ದಿನದಂದು ಸಂಜೆ ಆರು ಗಂಟೆಗೆ ಸಂಕ್ರಾಂತಿ ಗುಡಿ ನಿರ್ಮಿಸಿ ರೈತರು ತಾವು ಸಾಕಿರುವ ಎತ್ತು, ಹಸು, ಕರುಗಳಿಗೆ ವಿಶೇಷ ಅಲಂಕಾರ ಮಾಡುತ್ತಾರೆ. ಮೆರವಣಿಗೆ ನಡೆಸಿ, ಕಿಚ್ಚಾಯಿಸಲಿದ್ದಾರೆ. ಅಂದಹಾಗೆ, ಪರೀಷೆಗೆ ಬರುವ ಒಂದು ಲಕ್ಷ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ  ಬಸವೇಶ್ವರ ಭಕ್ತಮಂಡಳಿ ಅಧ್ಯಕ್ಷ ಎಂ.ರುದ್ರೇಶ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.