ADVERTISEMENT

ಒರಾಯನ್‌ಗೆ ಅದ್ದೂರಿ ಚಾಲನೆ

ಪ್ರಜಾವಾಣಿ ವಿಶೇಷ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಸೂರ್ಯ ಬಾನಂಗಳದಲ್ಲಿ ಮರೆಯಾಗುವ ಹೊತ್ತು, ಕೃತಕ ಕೆರೆ ಮೇಲಿನ ತಂಗಾಳಿ ಮೈಗೆ ತಂಪೆರೆಯುತ್ತಿತ್ತು. ಕಿವಿಗೆ ಪಾಶ್ಚಾತ್ಯ ಸಂಗೀತದ ಇಂಪು. ಸ್ವಲ್ಪ ಹೊತ್ತಿನಲ್ಲೇ ಮುಂಗಾರಿನ ಮಿಂಚಿನಂತೆ ಬಂದು ನೃತ್ಯ ಮಾಡಿ ಕಲಾವಿದರು ಮರೆಯಾದರು. ಆಕಾಶದಿಂದ ಧರೆಗಿಳಿಯುವಂತೆ ಭಾಸವಾದ ಗಾಳಿ ಬಲೂನಿನ ಮೂಲಕ ಇಳಿದುಬಂದ ಬಾಲೆಯೊಬ್ಬಳು ಬೃಹತ್ ವ್ಯಾಪಾರಿ ಮಾಲನ್ನು ಉದ್ಘಾಟಿಸಿದ ಕ್ಷಣಗಳನ್ನು ಕ್ಯಾಮೆರಾ ಕಣ್ಣುಗಳು ಮೊಗೆದುಕೊಂಡವು.

ಶನಿವಾರ (ಏ.21) ಮಾಲ್ ಉದ್ಘಾಟನೆ ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ಬಂದಿದ್ದರು. ಐಟಿ ಸಿಟಿಯಲ್ಲಿ ಶಾಪಿಂಗ್ ಪ್ರಿಯರಿಗಾಗಿ ಬ್ರಿಗೇಡ್ ಗೇಟ್ ವೇ ನೂತನ ಒರಾಯನ್ ಮಾಲ್ ಆರಂಭಿಸಿದೆ. ಈಗಾಗಲೇ ನಗರದಲ್ಲಿ ಅನೇಕ ಐಷಾರಾಮಿ ಮಾಲ್‌ಗಳಿದ್ದರೂ, ಜನರಿಗೆ ಹೊಸತನದ ವಿಶೇಷ ನೀಡುವ ಉದ್ದೇಶದಿಂದ ಬೃಹತ್ ಮಾಲ್‌ಗೆ ಚಾಲನೆ ನೀಡಿದೆ.

ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ 8.2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಒರಾಯನ್ ಮಾಲ್‌ನಲ್ಲಿ 150ಕ್ಕೂ ಅಧಿಕ ಬ್ರಾಂಡ್‌ಗಳ ಮಳಿಗೆಗಳಿವೆ. ಹೊರಾಂಗಣ ವಿನ್ಯಾಸವನ್ನು ನ್ಯೂಯಾರ್ಕ್‌ನ ಪ್ರತಿಷ್ಠಿತ `ಹಾಕ್~ ಸಂಸ್ಥೆ ವಿನ್ಯಾಸ ಮಾಡಿದ್ದು, ಅಂತರರಾಷ್ಟ್ರೀಯ ಮಟ್ಟದ ಮಾಲ್ ಇದಾಗಿದೆ.

ಈಗಾಗಲೇ ಬ್ರಿಗೇಡ್‌ನ ಹೈಪರ್ ಮಾರ್ಕೆಟ್ ಘಟಕಗಳಾದ ಸ್ಟಾರ್ ಬಜಾರ್, ಹೋಮ್ ಸ್ಟಾಪ್, ಸೆಂಟ್ರಲ್ ಮಾಲ್‌ಗಳು ಆರಂಭವಾಗಿವೆ. ವಿವಿಧ ಪ್ರದೇಶಗಳ ಆಹಾರಪ್ರಿಯರಿಗೆ ಫುಡ್‌ಕೋರ್ಟ್ ವಿಭಾಗದಲ್ಲಿ ರಾಜಧಾನಿ ರೆಸ್ಟೋರೆಂಟ್, ಬೀಜಿಂಗ್ ಬೈಟ್ಸ್, ಎಂಪೈರ್, ಮ್ಯಾಕ್‌ಡೊನಾಲ್ಡ್ಸ್, ಪೆಪ್ಸಿ, `ಚಾಕೊಲೇಟ್ ರೂಂ~ `ಸಬ್ ವೇ~ ಯು.ಪಿ.ಸೌತ್ ಮುಖ್ಯವಾಗಿವೆ.

ಫ್ಯಾಷನ್ ಮತ್ತು ಉಡುಪು ವಿಭಾಗದಲ್ಲಿ ಸೋಚ್, ಚಿಕ್ಕೊ, ಮದರ್‌ಕೇರ್, ಪೀಟರ್ ಇಂಗ್ಲೆಂಡ್, ನೈಕಿ, ಟೈಟಾನ್, ಕ್ಯಾನನ್, ಲೀ, ಅಡಿಡಾಸ್, ಸ್ಯಾಮ್‌ಸಂಗ್ ಹಾಗೂ ಆ್ಯಪಲ್ ಕಂಪೆನಿಗಳು ತಮ್ಮ ಮಳಿಗೆಗಳನ್ನು ತೆರೆದಿವೆ.

ಶಾಪಿಂಗ್ ಜತೆಗೆ ಮನರಂಜನೆಗಾಗಿ ಪಿವಿಆರ್ ಇದೆ. ಮಲ್ಟಿಪ್ಲೆಕ್ಸ್‌ನ 11ಪರದೆಗಳ ಸಿನಿಮಾ ಮಂದಿರಗಳಿವೆ. ಆದರೆ ಈ ಸಿನಿಮಾ ಮಂದಿರವಿನ್ನೂ ಆರಂಭವಾಗಿಲ್ಲ.
`ಇದೊಂದು ಕನಸಿನ ಪ್ರಾಜೆಕ್ಟ್ ಆಗಿತ್ತು. ಅದು ಇಂದು ನೆರವೇರಿದೆ.

ಬಹು ಆಯ್ಕೆಗೆ ಅವಕಾಶ ನೀಡುವ ಮೂಲಕ ಒಂದೇ ಸೂರಿನಡಿ ಜನರಿಗೆ ಅತ್ಯುನ್ನತ ಶಾಪಿಂಗ್ ಅನುಭವ ನೀಡುವ ಉದ್ದೇಶದಿಂದ ಈ ಮಾಲ್ ಆರಂಭಿಸಲಾಗಿದೆ~ ಎನ್ನುತ್ತಾರೆ ಬ್ರಿಗೇಡ್ ಗ್ರೂಪ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್.

`ಮೂವತ್ತು ವರ್ಷಗಳ ಹಿಂದೆ ಬೆಂಗಳೂರು ಉದ್ಯಾನ ನಗರಿಯಾಗಿತ್ತು. ಆದರೆ ನಗರ ವೇಗವಾಗಿ ಬೆಳೆದಿದೆ. ಈಗ ಐಟಿ ಸಿಟಿಯಾಗಿದೆ. ಬ್ರಿಗೇಡ್ ಸಮೂಹದವರು ನಗರದ ಶಾಪಿಂಗ್ ಪ್ರಿಯರಿಗಾಗಿ ಸುಂದರವಾದ ಮಾಲ್ ಆರಂಭಿಸಿರುವುದು ಸಂತೋಷ ತಂದಿದೆ~ ಎನ್ನುತ್ತಾರೆ ಅಲಹಾಬಾದ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಜೆ.ಪಿ.ದುವಾ.

ಅದ್ದೂರಿಯಾಗಿ ಉದ್ಘಾಟನೆಗೊಂಡ ಒರಾಯನ್ ಮಾಲ್‌ನ್ಲ್ಲಲೀಗ ಅನೇಕ ಬ್ರಾಂಡ್‌ಗಳ ಮಳಿಗೆಗಳು ಆರಂಭವಾಗಿವೆ. ಮೊದಲ ದಿನವೇ ಗ್ರಾಹಕರಿಂದ ತುಂಬಿ ತುಳುಕಿತ್ತು. ಆದರೆ ಇನ್ನೂ ಅನೇಕ ಬ್ರಾಂಡ್‌ಗಳ ಮಳಿಗೆಗಳು ಆರಂಭವಾಗಬೇಕಿವೆ. ಈ ಐಷಾರಾಮಿ ಮಾಲ್ ಉದ್ಘಾಟನೆಯಾಗುತ್ತಿದ್ದಂತೆ ಬಾನಂಗಳಕ್ಕೆ ಸಿಡಿದ ಪಟಾಕಿ ಸಿಡಿಮದ್ದುಗಳು ಎಲ್ಲರನ್ನೂ ಆಕರ್ಷಿಸಿದವು.  -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.