ADVERTISEMENT

ಒಲಿಂಪಿಕ್‌ ತಯಾರಿಯಲ್ಲಿ ಮಕ್ಕಳ ಕಸರತ್ತು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಒಲಿಂಪಿಕ್‌ ತಯಾರಿಯಲ್ಲಿ  ಮಕ್ಕಳ ಕಸರತ್ತು
ಒಲಿಂಪಿಕ್‌ ತಯಾರಿಯಲ್ಲಿ ಮಕ್ಕಳ ಕಸರತ್ತು   

ಸದ್ಯ ಜಗದ ತುಂಬ ಒಲಿಂಪಿಕ್‌ ಮೇನಿಯಾ.ನೆಗೆದು ಹಾರುತ್ತಾ ವಿವಿಧ ಕಸರತ್ತು ತೋರುವ ಜಿಮ್ನಾಸ್ಟಿಕ್‌, ಬಾಕ್ಸಿಂಗ್‌, ಶೂಟಿಂಗ್‌, ಸ್ವಿಮಿಂಗ್‌ ಪ್ರತಿಭೆಗಳನ್ನು ನೋಡಿ ಹುಬ್ಬೇರಿಸುವ ಕಾಲವಿದು. ವರ್ಷಗಳ ಪ್ರಯತ್ನ ಸಾಧನೆಯಾಗುವ ಕ್ಷಣಗಳನ್ನು ತುಂಬಿಕೊಳ್ಳುವ ಸೊಗಸಾದ ಕ್ಷಣಗಳಿದು. ಹೀಗಾಗಿ ಮಕ್ಕಳು ಮರಿಗಳೆನ್ನದೆ ಎಲ್ಲರೂ ಒಲಿಂಪಿಕ್‌ ಮೋಡಿಯಲ್ಲಿದ್ದಾರೆ.

ಆದರೆ ಇಲ್ಲೊಂದು ತಂಡ 2032ನೇ ಒಲಿಂಪಿಕ್‌ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿದೆ. ಇದಕ್ಕೆ ಸಂಬಂಧಪಟ್ಟ ತಮಾಷೆಯ ವಿಡಿಯೊ ಒಂದು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿ ಹರಿಯುತ್ತಿದೆ.

ಭವಿಷ್ಯದ ಚಾಂಪಿಯನ್‌ಗಳ ಈ ಸಾಹಸವನ್ನು 43 ದಶಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನಕ್ಕು ಸುಸ್ತಾಗುವುದಲ್ಲದೆ ಅಭ್ಯಾಸನಿರತ ಪುಟಾಣಿಗಳಿಗೆ ಲೈಕ್‌ಗಳ ಸುರಿಮಳೆಯನ್ನೂ ಸುರಿಸಿದ್ದಾರೆ.

ಮನೆಯ ಎತ್ತರದ ಜಾಗದಿಂದ ನೆಗೆದು ಗಿರಿಗಿಟ್ಲೆ ಹೊಡೆಯುತ್ತಾ ನೆಲದ ಮೇಲೆ ನಿಲ್ಲುವ ಪುಟಾಣಿ  ಅರತ್‌ ಹುಸೇನಿ ಪುರುಷರ ಜಿಮ್ನಾಸ್ಟಿಕ್‌ ಸ್ಪರ್ಧೆಗೆ ಪ್ರಬಲ ಪೈಪೋಟಿ ನೀಡಲಿದ್ದಾನಂತೆ. ಬಾಕ್ಸಿಂಗ್‌ ಸ್ಪರ್ಧೆಗಾಗಿ ಎನ್‌ಜೀ ಅಪ್ಪನೊಂದಿಗೆ ಮಾಡುವ ಕಸರತ್ತು ನೋಡಿ ಖಂಡಿತಾ ಬೆರಗಾಗುತ್ತೀರಿ.

100ಮೀಟರ್‌ ಫ್ರೀಸ್ಟೈಲ್‌ ಈಜುಸ್ಪರ್ಧೆ ಎಲಿಜಬೆತ್‌ ಕ್ರಿಸ್ಟಿನ್‌ಸೆನ್‌ಳದ್ದೇ ದರ್ಬಾರು. ಫುಟ್‌ಬಾಲ್‌, ಬೇಸ್‌ಬಾಲ್‌ಗಳಲ್ಲಿಯೂ ನಿರಂತರ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಅಪ್ಪನೊಂದಿಗೆ ಟೆನಿಸ್‌ ಆಡುವ ಬಾಲಕನೂ ಸಾಥ್‌ ನೀಡುತ್ತಾನೆ. ಇನ್ನು ಗಾಲ್ಫ್‌ ಬಿಡಲಾದೀತೆ. ಆಡಲು ಸ್ಥಳವೇ ಇಲ್ಲದೆ ಇಂದಿನ ಸನ್ನಿವೇಶದಲ್ಲಿ ಮನೆಯಲ್ಲಿಯೇ ಗಾಲ್ಫ್‌ ಆಡಿ ಸಂಭ್ರಮಿಸುವ ಪೋರನೂ ಇದ್ದಾನೆ.

2032ರ ಒಲಿಂಪಿಕ್‌ ಸ್ಪರ್ಧೆಯ ಅಭ್ಯಾಸಕ್ಕೆ  ಇನ್ನು 834 ವಾರಾಂತ್ಯ ಮಾತ್ರ ಉಳಿದಿವೆ ಎನ್ನುವ ಒಕ್ಕಣಿಕೆಯನ್ನೂ ವಿಡಿಯೊದಲ್ಲಿ ಹಾಕಲಾಗಿದೆ. ಅಪ್ಪಂದಿರು ವಾರಾಂತ್ಯಗಳಲ್ಲಿ ಮಕ್ಕಳ ಜೊತೆ ಆಟ ಆಡಿ ಎಂಬ ಸಂದೇಶವೂ ಇದೆ. ಮುದ್ದು ಮಕ್ಕಳ ಸಾಹಸ ನೋಡಿ ನಗುವ ಮನಸ್ಸು ನಿಮಗೂ ಇದ್ದರೆ ಲಾಗಿನ್‌ ಮಾಡಿ– goo.gl/KlFT02 ಲಿಂಕ್ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.