ADVERTISEMENT

ಓದಿನ ನಡುವೆಯೇ ಹೊರಟವರ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ಓದಿನ ನಡುವೆಯೇ ಹೊರಟವರ ಪಡಿಪಾಟಲು
ಓದಿನ ನಡುವೆಯೇ ಹೊರಟವರ ಪಡಿಪಾಟಲು   

ಅಲ್ಲಿ ಹೊತ್ತಿ ಉರಿಯುತ್ತಿರುವ ಅಸ್ಸಾಂನ ಹೊಗೆ ಸಿಲಿಕಾನ್ ಸಿಟಿಯ ಈಶಾನ್ಯ ರಾಜ್ಯದ ನಿವಾಸಿಗಳ ನಿದ್ದೆಗೆಡಿಸಿದೆ. ಈ ಕ್ಷಣ ಜಾಗ ಖಾಲಿ ಮಾಡದಿದ್ದರೆ ಬೆಂಗಳೂರು ನಮ್ಮನ್ನು ಜೀವಸಹಿತ ಇರಗೊಡುವುದಿಲ್ಲ ಎಂಬಂಥ ಅಂಜಿಕೆ ಈ ಮಂದಿಯನ್ನು ತಮ್ಮ ತವರು ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳಲು ಬೆಂಗಳೂರಿಗೆ ಬಂದಿಳಿದವರು ಈಗ ಅತಂತ್ರರಾಗಿರುವುದಂತೂ ನಿಜ.

ಇಷ್ಟಕ್ಕೂ ಇಲ್ಲಿ ಈಶಾನ್ಯ ರಾಜ್ಯದವರಿಗೆ ಅಪಾಯವಿರುವುದು ನಿಜವೇ ಎಂದು ಕೇಳಿದರೆ ಸ್ಪಷ್ಟ ಉತ್ತರ ಯಾರಲ್ಲೂ ಇಲ್ಲ. ಬರೀ ಪುಕಾರು, ವದಂತಿ, ಗುಲ್ಲು... ಕೆಲಸ ಅರಸಿ ಬಂದವರು ಹಿಂತಿರುಗಿದರೆ ಇನ್ನೆಲ್ಲೋ ಕೂಲಿ ಸಂಪಾದಿಸಬಹುದು. ವಿದ್ಯಾರ್ಥಿಗಳು ವಾಪಸ್ ಹೋದರೆ ಶೈಕ್ಷಣಿಕವಾಗಿ ಒಂದು ವರ್ಷ ಹಿಂದೆ ಬಿದ್ದಂತೆಯೇ.

`ನಿಮಗೇನೂ ಅಪಾಯವಿಲ್ಲ, ಇಲ್ಲೇ ಇರಿ~ ಎಂದು ಕಾನೂನು ಸುವ್ಯವಸ್ಥೆಯ ರಕ್ಷಕರು ಹೇಳಿದರೂ ಕಿವಿಗೊಡುವ ವ್ಯವಧಾನ ವಿದ್ಯಾರ್ಥಿಗಳಲ್ಲೂ ಇಲ್ಲದಂತಾಗಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೂ ಇದರಿಂದ ಕಳವಳವಾಗಿದೆ. ನಿಮ್ಮ ರಕ್ಷಣೆಗೆ ನಾವಿದ್ದೇವೆ, ಕಾರಣವಿಲ್ಲದೆ ಗೊಂದಲದ ವಾತಾವರಣ ಸೃಷ್ಟಿಸಬೇಡಿ ಎಂದು ಪೊಲೀಸ್ ಉನ್ನತಾಧಿಕಾರಿಗಳು ಕೊಟ್ಟ ಭರವಸೆಗೂ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಕ್ಯಾರೇ ಅಂದಿಲ್ಲ.  ಉದಾಸೀನ ಇಲ್ಲವೇ ವಿವೇಕದಿಂದ ಪರಿಸ್ಥಿತಿಯನ್ನು ಗೆಲ್ಲಬಹುದು. ಅಷ್ಟೆ.
ಅಡ್ವಾಂಟೇಜ್ ತಗೋತಿದ್ದಾರೆ ಆರ್.ವಿ. ದಂತ ವೈದ್ಯಕೀಯ ಕಾಲೇಜಿನಲ್ಲಿರುವ 300 ವಿದ್ಯಾರ್ಥಿಗಳಲ್ಲಿ 15ರಿಂದ 20 ವಿದ್ಯಾರ್ಥಿಗಳು ಈಶಾನ್ಯ ರಾಜ್ಯದವರು. ಇವರೆಲ್ಲರೂ ತರಗತಿಗಳಿಗೆ ಹಾಜರಾಗಿದ್ದಾರೆ. ಎಲ್ಲಾ ತರಗತಿಗಳೂ ಎಂದಿನಂತೆ ನಡೆದಿವೆ. ಇಲ್ಲಿರಲು ಮನಸ್ಸಿಲ್ಲದ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡು ಬೆಂಗಳೂರು ಬಿಟ್ಟಿದ್ದಾರೆ ಅಂತ ಅನಿಸುತ್ತದೆ.
-ಡಾ. ದಿನೇಶ್, ಪ್ರಾಂಶುಪಾಲರು,
ಆರ್.ವಿ. ದಂತ ವೈದ್ಯಕೀಯ ಕಾಲೇಜು

ಪೋಷಕರ ಕರೆಯಿಂದ ಆತಂಕ
ನಮ್ಮಲ್ಲಿ ಸುಮಾರು 100 ವಿದ್ಯಾರ್ಥಿಗಳು ಈಶಾನ್ಯ ಭಾರತದವರು. ಈ ಪೈಕಿ ಹತ್ತು ಹದಿನೈದು ವಿದ್ಯಾರ್ಥಿಗಳ ಪೋಷಕರು ನೇಪಾಳ, ಅಸ್ಸಾಂ ಮುಂತಾದೆಡೆಯಿಂದ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ವಿದ್ಯಾರ್ಥಿಗಳು ವದಂತಿಗಳಿಂದ ಸ್ವಲ್ಪ ಕಳವಳಗೊಂಡಿರಬಹುದು. `ಇಲ್ಲಿ ಯಾವುದೇ ಅಹಿತಕರ ಸನ್ನಿವೇಶಗಳು ನಿರ್ಮಾಣವಾಗಿಲ್ಲ. ಆತಂಕಗೊಳ್ಳಬೇಡಿ. ನಿಮಗೆ ವಸತಿ, ಊಟದ ಜೊತೆಗೆ ಹೊರಗಿರುವ ಸಹಪಾಠಿಗಳಿಗೂ ಬೇಕಿದ್ದರೆ ನಮ್ಮ ವಸತಿ ನಿಲಯಗಳಲ್ಲಿ ರಕ್ಷಣೆ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಕೈಬಿಟ್ಟು ಹೋಗಬೇಡಿ~ ಎಂದು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಸ್ಪಷ್ಟವಾಗಿ ಹೇಳಿದ್ದೇವೆ.

ಪರೀಕ್ಷೆಗಳು ಯಥಾವತ್ ನಡೆದಿವೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ, ಇಲ್ಲವೇ ಹಳೆಯ ಬಾಕಿ ವಿಷಯಗಳನ್ನು ಪಾಸ್ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ಈಗ ನಮ್ಮ ಕ್ಯಾಂಪಸ್‌ನಲ್ಲಿ `ಸಮ್ಮರ್ ಸೆಮಿಸ್ಟರ್~ ನಡೀತಿದೆ. ಒಂದು ವೇಳೆ ಪರೀಕ್ಷೆ ಬರೆಯದೆ ಹೋಗುವ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಪರೀಕ್ಷೆ ಬರೆಯುವ ಅವಕಾಶವಿದ್ದೇ ಇದೆ.
-ಪ್ರೊ. ಬಿ.ಎಸ್. ಸತ್ಯನಾರಾಯಣ್,
ಪ್ರಾಂಶುಪಾಲರು, ಆರ್. ವಿ. ಇಂಜಿನಿಯರಿಂಗ್ ಕಾಲೇಜು


ನಿರಾತಂಕವಾಗಿದೆ
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಸಾಂ, ನೇಪಾಳ, ಸಿಕ್ಕಿಂ ಭಾಗದ ವಿದ್ಯಾರ್ಥಿಗಳಿದ್ದರೂ ಅವರ ಮೇಲೆ ಈ ಗಾಳಿಸುದ್ದಿ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲರೂ ಎಂದಿನಂತೆ ಕಾಲೇಜುಗಳಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಏನಾದರೂ ಅಹಿತಕರ ಘಟನೆ ಸಂಭವಿಸಿದ್ದರೆ ತಾನೇ ಗೊಂದಲದ ಪ್ರಶ್ನೆ? ನಮ್ಮ ಕಾಲೇಜು ಎಂದಿನಂತೆ ನಿರಾತಂಕವಾಗಿ ನಡೆದಿದೆ.
-ಸುನಿಲ್ ಕೋಡ್ಕಣಿ, ಉಪನ್ಯಾಸಕರು, ಎಂ.ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು

ನೈತಿಕ ಸ್ಥೈರ್ಯ ತುಂಬುತ್ತಿದ್ದೇವೆ
ಈಶಾನ್ಯ ಭಾರತದ ವಿದ್ಯಾರ್ಥಿಗಳಲ್ಲಿ ನೈತಿಕ ಸ್ಥೈರ್ಯ ತುಂಬುವ ಎಲ್ಲಾ ಕೆಲಸಗಳನ್ನು ಗುರುವಾರವಿಡೀ ಕೈಗೊಂಡಿದ್ದೇವೆ. ಮೌಂಟ್ ಕಾರ್ಮೆಲ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿರುವ ಈ ಭಾಗದ ವಿದ್ಯಾರ್ಥಿಗಳ ಸಂಖ್ಯೆ 4000ಕ್ಕೂ ಹೆಚ್ಚು. ಈ ಪೈಕಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಗುರುವಾರ ನಿರಂತರ ಸಂಪರ್ಕದಲ್ಲಿದ್ದೆವು. ಅಷ್ಟಾಗಿಯೂ ನೇಪಾಳ, ಸಿಕ್ಕಿಂ, ಅಸ್ಸಾಂ ರಾಜ್ಯಗಳ 100 ಮಂದಿ ಪೋಷಕರ ಒತ್ತಡ ಹಾಗೂ ಗುಲ್ಲುಗಳಿಗೆ ಹೆದರಿ ತವರಿಗೆ ಮರಳಿರುವುದು ಶುಕ್ರವಾರ ನಮ್ಮ ಗಮನಕ್ಕೆ ಬಂದಿದೆ.

ಮೌಂಟ್ ಕಾರ್ಮೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಈ ರಾಜ್ಯಗಳ ಕೇವಲ ಮೂವರು ವಿದ್ಯಾರ್ಥಿಗಳಿದ್ದಾರೆ. ಅವರು ತರಗತಿಗೆ ಹಾಜರಾಗಿದ್ದಾರೆ. ನೇಪಾಳ, ಸಿಕ್ಕಿಂ ಮತ್ತು ಅಸ್ಸಾಂನಿಂದ ಕರೆ ಮಾಡಿರುವ ಪೋಷಕರಿಗೂ ಧೈರ್ಯ ತುಂಬಿದ್ದೇವೆ; `ನಮ್ಮ ಕ್ಯಾಂಪಸ್‌ನಿಂದ ಹೊರಗೆ ಪಿಜಿ, ಮನೆ ಮಾಡಿಕೊಂಡಿರುವ ಹೆಣ್ಣುಮಕ್ಕಳಿಗೂ ನಮ್ಮ ಹಾಸ್ಟೆಲ್‌ಗಳಲ್ಲಿ ವಸತಿ, ಊಟೋಪಚಾರ ಒದಗಿಸುತ್ತೇವೆ~ ಎಂದು. ಪೊಲೀಸ್ ಅಧಿಕಾರಿಗಳೂ ನಿರಂತರವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದನ್ನು ಮೀರಿ ಮಕ್ಕಳು ಹೊರಟರೆ ನಾವೇನೂ ಮಾಡಲು ಸಾಧ್ಯವಿಲ್ಲ.
-ಸಿಸ್ಟರ್ ಜುವನಿಟ, ಪ್ರಾಂಶುಪಾಲರು,
ಮೌಂಟ್ ಕಾರ್ಮೆಲ್ ಕಾಲೇಜು


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT