ADVERTISEMENT

ಓಲೆಯ ಹಾಡು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

`ಈ ಬಗೆಯ ಸಿನಿಮಾಗಳ ಸೃಷ್ಟಿಯೂ ಒಂದು ಸಮಾಜಸೇವೆ~ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು ನ್ಯಾಯಮೂರ್ತಿ ವಿ.ಎಸ್. ಮಳಿಮಠ್.

ಮರ್ಯಾದಾ ಹತ್ಯೆಯಂಥ ಗಂಭೀರ ವಸ್ತುವನ್ನಿಟ್ಟುಕೊಂಡು ಸಿನಿಮಾ ಹೆಣೆದಿದ್ದಾರೆ ಟೇಶಿ ವೆಂಕಟೇಶ್. ಅವರ `ಒಲವಿನ ಓಲೆ~ಗೆ ಮಠಾಧೀಶರು, ಬುದ್ಧಿಜೀವಿಗಳು ಸೇರಿದಂತೆ ಸಮಾಜದ ವಿವಿಧ ವಲಯಗಳ ಮುಖಂಡರ ಬೆಂಬಲವೂ ಸಿಕ್ಕಿದೆ. ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭದಲ್ಲಿ ಹಾಜರಾಗಿದ್ದ ಅವರ ಮಾತುಗಳಲ್ಲಿ ಈ ಬೆಂಬಲ ವ್ಯಕ್ತವಾಯಿತು.

`ಸಮಾಜವನ್ನು ಕಾಡುತ್ತಿರುವುದು ಜಾತಿ ವ್ಯವಸ್ಥೆ. ಹೀಗಿರುವಾಗ ಇಂಥ ಸಿನಿಮಾ ಮಾಡುವುದೇ ಸಾಹಸದ ಕೆಲಸ. ಈ ಬಗೆಯ ಸಿನಿಮಾಗಳಿಗೆ ಹಾಕಿದ ಹಣ ವಾಪಸು ಬರುವುದೂ ಕಷ್ಟ. ಸಮಾಜವನ್ನು ಎಚ್ಚರಗೊಳಿಸುವ ಸಿನಿಮಾಗಳು ಮತ್ತಷ್ಟು ಬರಬೇಕು. ಅದಕ್ಕೆ ಸರ್ಕಾರ ಮತ್ತು ಜನರ ಬೆಂಬಲವೂ ಸಿಗಬೇಕು~ ಎಂದು ಮಳಿಮಠ್ ಆಶಿಸಿದರು.

ಇದೊಂದು ಸಾಂದರ್ಭಿಕ ಮತ್ತು ಮನೋಜ್ಞ ಸಿನಿಮಾ ಎಂದು ಬಣ್ಣಿಸಿದರು ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ. ಸಾಮಾಜಿಕ ಪರಿವರ್ತನೆಯ ಇಂಥ ಪ್ರಯತ್ನಗಳು ಹೆಚ್ಚು ನಡೆಯಬೇಕೆಂಬುದು ಅವರ ಅಭಿಪ್ರಾಯ. ಹಾಡುಗಳ ಸೀಡಿಯನ್ನು ಅವರು ಬಿಡುಗಡೆ ಮಾಡಿದರು.

ಸಿನಿಮಾ ಅತಿ ವೆಚ್ಚದಾಯಕ ಕ್ಷೇತ್ರ. ಸಾಮಾಜಿಕ ಸಂಗತಿಯುಳ್ಳ ಚಿತ್ರಗಳಿಗೆ ಇಂದು ಮಾರುಕಟ್ಟೆಯೇ ಇಲ್ಲ. ಇದರ ಅರಿವಿದ್ದೂ, ಪ್ರೀತಿ ಪ್ರೇಮದ ಕಥೆಯಿಂದಾಚೆಗಿನ ವಾಸ್ತವವನ್ನು ತೆರೆದಿಡುವ ಅಪರೂಪದ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ ಎಂದು ಶ್ಲಾಘಿಸಿದರು ಡಾ. ಎಲ್. ಹನುಮಂತಯ್ಯ.

ಸಿನಿಮಾದ ಮಾಮೂಲಿ ಫಾರ್ಮುಲಾಗಳನ್ನು ಬಿಟ್ಟು ಹೊಸ ಹಾದಿಯಲ್ಲಿ ತೆರೆದುಕೊಳ್ಳುವುದು ತಮ್ಮ ಗುರಿ ಎಂದು ಟೇಶಿ ವೆಂಕಟೇಶ್ ಹೇಳಿಕೊಂಡರು. ಜಾತಿ ವ್ಯವಸ್ಥೆಗೆ ಬಡತನ ಕಾರಣವಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಮರ್ಯಾದಾ ಹತ್ಯೆಯ ಘಟನೆಗಳನ್ನು ಸಿನಿಮಾ ವಸ್ತುವನ್ನಾಗಿ ಬಳಸಿಕೊಂಡಿರುವುದನ್ನು ಹೇಳಿದರು.
ಶಾಸಕ ಮಹಿಮಾ ಪಟೇಲ್, ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ ಮುಂತಾದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.