ADVERTISEMENT

ಕಂಪ್ಯೂಟರ್ ಕೀಲಿಗೆ ಬಂತು ಅಂಗಡಿ

ರಮೇಶ ಕೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST
ಕಂಪ್ಯೂಟರ್ ಕೀಲಿಗೆ ಬಂತು ಅಂಗಡಿ
ಕಂಪ್ಯೂಟರ್ ಕೀಲಿಗೆ ಬಂತು ಅಂಗಡಿ   

ಬಿಡುವಿಲ್ಲದ ಬೆಂಗಳೂರಿಗರು ಹೆಚ್ಚಾಗಿದ್ದಾರೆ. ಕಚೇರಿ ಜಂಜಡದಲ್ಲಿ ಕಳೆದುಹೋಗುವವರಿಗೆ ಮನೆಯಿಂದ ಅಂಗಡಿಗಳಿಗೋ ಮಾಲ್‌ಗೋ ಹೋಗಿ ದಿನಸಿ ಕೊಂಡು ತರುವುದು ಕೂಡ ತ್ರಾಸದ ವಿಷಯ.

ಕೆಲವರು ತಿಂಗಳಿಗೊಮ್ಮೆ ಕಿರಾಣಿ ಅಂಗಡಿಗೆ ಹೋಗಿ, ಉದ್ದದ ಚೀಟಿ ಕೊಟ್ಟು ಬರುತ್ತಾರೆ. ದಿನಸಿಯನ್ನು ಅಂಗಡಿಯವರೇ ಮನೆಗೆ ತಲುಪಿಸಿ, ಹಣ ಪಡೆಯುತ್ತಾರೆ. ನಿತ್ಯ ತಮಗೆ ಬೇಕಾದ ವಸ್ತುವನ್ನು ಮನೆಗೆಲಸದವರಿಂದ ತರಿಸುವವರೂ ಇದ್ದಾರೆ.

ಈಗ ದಿನಸಿ ಖರೀದಿಯ ಈ ರೀತಿಯೂ ಹಳತಾಗಿದೆ. ಬಸ್, ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಂತೆ ನಿಮಗೆ ಬೇಕಾದ ದಿನಸಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಸಾಕು; ನಿಮ್ಮ ಮನೆ ಬಾಗಿಲನ್ನು ಅವು ತಲುಪುತ್ತವೆ!

ಎಲೆಕ್ಟ್ರಾನಿಕ್ ಉತ್ಪನ್ನಗಳು, ಮೊಬೈಲ್- ಐಪಾಡ್‌ಗಳು, ಬಟ್ಟೆ, ಬ್ಯಾಗ್ ಮೊದಲಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸುವ ಕೊಳ್ಳುಬಾಕ ಸಂಸ್ಕೃತಿ ನಗರದಲ್ಲಿ ನಿಧ ನಿಧಾನ ವ್ಯಾಪಕವಾಗುತ್ತಿದೆ. ಆದರೆ, ದಿನಸಿ ಪದಾರ್ಥಗಳ ವಿಷಯದಲ್ಲಿ ಹೀಗಾಗುತ್ತಿಲ್ಲ.

ಹೆಂಡತಿ, ಮಕ್ಕಳ ಜೊತೆ ಕಾಲಕಳೆಯಲೆಂದು ಹೊರಗೆ ಹೋಗಲು ಮಾಲ್‌ಗಳಲ್ಲಿ ಮಾಡುವ ದಿನಸಿ ಖರೀದಿಯೂ ಕೆಲವರಿಗೆ ಒಂದು ನೆಪ. ಗಂಡ ಹಾಗೂ ಹೆಂಡತಿ ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದ್ದಲ್ಲಿ ಇಂಥ ಸುಖವೂ ಕಷ್ಟ. ದಿನಸಿ ಪದಾರ್ಥಗಳನ್ನು ಅಂಗಡಿಯವರು ಮನೆಗೆ ಸಾಗಿಸುವಾಗಲೂ ಕೆಲವು ತೊಂದರೆಗಳಾಗಿರುವುದುಂಟು.

ಕೆಲಸಕ್ಕಿರುವಾತ ಯಾರದ್ದೋ ಮನೆಗೆ ತಲುಪಿಸುವ ಸಾಮಾನನ್ನು ಇನ್ಯಾರಿಗೋ ಕೊಟ್ಟ ಉದಾಹರಣೆಗಳಿವೆ. ಇಂಥ ಸಣ್ಣಪುಟ್ಟ ಸಮಸ್ಯೆಗಳನ್ನು ಮೀರುವ ಆನ್‌ಲೈನ್ ದಿನಸಿ ಖರೀದಿ ವ್ಯವಸ್ಥೆ ನಗರದಲ್ಲಿ ಕೆಲವೇ ದಿನಗಳಿಂದ ಉಸಿರಾಡತೊಡಗಿದೆ.

ಈ ಆನ್‌ಲೈನ್ ಸೌಲಭ್ಯ ಆರಂಭಿಸಿರುವುದು ಕಿರಾಣಾವಾಲಾ.ಕಾಮ್  kiranawalla.com . ಹೆಚ್ಚುತ್ತಿರುವ ಬೆಲೆ ಏರಿಕೆ, ಬಹುರಾಷ್ಟ್ರೀಯ ಕಂಪೆನಿಗಳ ಹಾವಳಿ ಹಾಗೂ ಬಹು ಬ್ರಾಂಡ್‌ಗಳ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಲು ನಿರ್ಧಾರ ಕೈಗೊಂಡಿರುವುದರಿಂದ ಸ್ಥಳೀಯ, ಹಳೆಯ ಕಿರಾಣಿ ಅಂಗಡಿಗಳಿಗೆ ವ್ಯಾಪಾರದಲ್ಲಿ ಸಹಜವಾಗಿಯೇ ಪೆಟ್ಟುಬಿದ್ದಿದೆ. 

ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡೇ ಕಿರಾಣಿ ಅಂಗಡಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅವಿನಾಶ್ ನಿಶಾಂತ್ ಈ ಆನ್‌ಲೈನ್ ಸೇವೆ ಆರಂಭಿಸಿದ್ದಾರೆ.

ಇದು 24 ಗಂಟೆಯ ಸೇವೆ. ಕಿರಾಣಾವಾಲಾ.ಕಾಮ್‌ಗೆ ಹೆಸರನ್ನು ನೋಂದಾಯಿಸಿಕೊಂಡು ಗ್ರಾಹಕರು ಬೇಕಾದ ವಸ್ತುಗಳಿಗೆ ಆರ್ಡರ್ ಮಾಡಬಹುದು. ಇಲ್ಲಿ ಹೊಸ ಆಫರ್‌ಗಳು ಯಾವುವು ಎಂಬುದರ ಮಾಹಿತಿಯೂ ಲಭ್ಯ. ಬುಕ್ ಮಾಡಲು ಯಾವುದೇ ಹಣ ಸಂದಾಯ ಮಾಡುವಂತಿಲ್ಲ, ನೋಂದಣಿಯೂ ಉಚಿತ.

ಸ್ಥಳೀಯ ಕಿರಾಣಿ ಅಂಗಡಿಗಳು ಕಿರಾಣಾವಾಲಾ.ಕಾಮ್‌ನೊಂದಿಗೆ ನೋಂದಣಿ ಮಾಡಿಕೊಂಡಿರುತ್ತವೆ. ಗ್ರಾಹಕರು ಬುಕ್ ಮಾಡಿದ ಉತ್ಪನ್ನಗಳನ್ನು ಅಂಗಡಿಯವರೇ ಮನೆಗೆ ಮುಟ್ಟಿಸುತ್ತಾರೆ.

ಆರ್ಡರ್ ಮಾಡಿದ ವಸ್ತುಗಳನ್ನು ಪಡೆದ ನಂತರ ಹಣ ಸಂದಾಯ ಮಾಡಬಹುದು. ಇಲ್ಲಿ ವಂಚನೆಗೆ ಅವಕಾಶವಿಲ್ಲ ಎನ್ನುವ ಅವಿನಾಶ್ ನಿಶಾಂತ್, ಮುಂದಿನ ದಿನಗಳಲ್ಲಿ ಕ್ರೆಡಿಟ್‌ಕಾರ್ಡ್‌ಗಳಿಂದ ಹಣ ಸಂದಾಯ ಮಾಡಿಸಿಕೊಳ್ಳುವ ವ್ಯವಸ್ಥೆಗೂ ತೆರೆದುಕೊಳ್ಳಲಿದ್ದಾರೆ. ಕಿರಾಣಿ ಅಂಗಡಿಯವರೇ ಮನೆಗೆ ಕಾರ್ಡ್‌ಮಷಿನ್ ತಂದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಕಟ್ಟಿಸಿಕೊಳ್ಳುವ ವ್ಯವಸ್ಥೆ ಪ್ರಾರಂಭಿಸುವುದು ಅವರ ಯೋಚನೆ.

ಈಗಾಗಲೇ ಜೆ.ಪಿ.ನಗರ 7ನೇ ಹಂತದಲ್ಲಿ ಈ ಸೇವೆ ಆರಂಭವಾಗಿದ್ದು, `ನಾಮಧಾರಿ~, `ಯುವರ್ ಹೋಮ್ ನೀಡ್ಸ್~ ಸೇರಿದಂತೆ ಮೂರು ಅಂಗಡಿಗಳು ನೋಂದಣಿ ಮಾಡಿಕೊಂಡಿವೆ. ಕೋರಮಂಗಲ, ವಿಲ್ಸನ್ ಗಾರ್ಡನ್, ಕಮ್ಮನಹಳ್ಳಿ, ವೈಟ್‌ಫೀಲ್ಡ್‌ಗಳಲ್ಲಿ ಕೂಡ ಸೇವೆ ಆರಂಭಿಸಿದ್ದು, 20 ಸ್ಥಳಗಳಲ್ಲಿ ನಾಮಧಾರಿ ಸ್ಟೋರ್ಸ್‌ ನೋಂದಣಿ ಮಾಡಿಸಿಕೊಂಡಿವೆ.

`ದಿನವೂ ಐದರಿಂದ ಆರು ಆರ್ಡರ್ ಬರುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಈ ಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದ್ದು, ದೂರವಾಣಿ ಮೂಲಕವೂ 24 ಗಂಟೆಗಳ ಸಹಾಯವಾಣಿ ಸೇವೆ ಆರಂಭವಾಗಲಿದೆ.

ಕಿರಾಣಾವಾಲಾ.ಕಾಮ್‌ನ ಈ ಸೇವೆಯಿಂದ ಕಿರಾಣಿ ಅಂಗಡಿಗಳಿಗೆ ಅನುಕೂಲವಾಗಲಿದ್ದು, ಗ್ರಾಹಕರಿಗೂ ಶ್ರಮ ಕಡಿಮೆಯಾಗಲಿದೆ. ಬದಲಾದ ಜೀವನ ಶೈಲಿಯಲ್ಲಿ ಇದೊಂದು ವಿನೂತನ ಸೇವೆಯಂತೂ ಹೌದು. ಗ್ರಾಹಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂಬುದೇ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.