ADVERTISEMENT

ಕಟ್ಟುಮಸ್ತು ಕೃಷ್ಣ

ಸುಮನಾ ಕೆ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ಕಟ್ಟುಮಸ್ತು  ಕೃಷ್ಣ
ಕಟ್ಟುಮಸ್ತು ಕೃಷ್ಣ   

ಮಾಡೆಲಿಂಗ್‌ ಕನಸು ಹೊತ್ತು ನಗರಕ್ಕೆ ಕಾಲಿಟ್ಟವರು ಕೇರಳದ ಕೃಷ್ಣದೇವ ಮೂತೆಡತ್‌. ಒಂದರ ಮೇಲೊಂದರಂತೆ ಸಾಲುಸಾಲು ಅವಕಾಶಗಳು ನಿರಾಯಾಸವಾಗಿ ಒದಗಿಬಂದವು. ಈ ಯುವಕ ಸದ್ಯ ಮಾಡೆಲಿಂಗ್‌ ಜಗತ್ತಿನಲ್ಲಿ ಸಕ್ರಿಯ.

ಫ್ರೀಲಾನ್ಸ್‌ ಮಾಡೆಲ್‌ ಆಗಿರುವ ಕೃಷ್ಣದೇವ್‌ ಕಳೆದ ನಾಲ್ಕು ವರ್ಷಗಳಿಂದ ಮಾಡೆಲಿಂಗ್‌ನಲ್ಲಿ ತೊಡಗಿದ್ದಾರೆ. ನಗರದಲ್ಲಿ ಈಚೆಗೆ ನಡೆದ ರಾಷ್ಟ್ರ ಮಟ್ಟದ ಫ್ಯಾಷನ್‌ ಸ್ಪರ್ಧೆಯಲ್ಲಿ ‘ಮಿಸ್ಟರ್‌ ಗ್ರ್ಯಾಂಡ್‌ ಸೀ ಇಂಡಿಯಾ 2017’ ಕಿರೀಟವನ್ನು ತಮ್ಮದಾಗಿಸಿಕೊಂಡರು. ಜುಲೈ 19ರಿಂದ 24ರವರೆಗೆ ಜರ್ಮನಿಯ ಬಲ್ಗೇರಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಫ್ಯಾಷನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ತಮ್ಮೂರು, ಕೇರಳದ ತ್ರಿಶೂರ್‌ನಲ್ಲಿ ಹೆಚ್ಚು ಅವಕಾಶಗಳು ಸಿಗದ ಕಾರಣ ಬೆಂಗಳೂರಿಗೆ ಬಂದವರು ಕೃಷ್ಣದೇವ್‌. ಈಗ ಅನೇಕ ಶೋಗಳಲ್ಲಿ ಕೇಂದ್ರಬಿಂದುವಾಗಿ, ಹೆಸರಾಂತ ಕಂಪೆನಿಗಳ ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಚೆನ್ನೈ, ಕೊಯಮತ್ತೂರು, ಮುಂಬೈನಲ್ಲಿ ನಡೆದ ಅನೇಕ ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿದ್ದಾರೆ.

ADVERTISEMENT

‘ನನ್ನ ಮೆಚ್ಚಿನ ವಿನ್ಯಾಸಕಾರ ಮನೋ ವಿರಾಜ್‌ ಖೋಸ್ಲಾ’ ಎಂದು ಹೇಳುವ ಕೃಷ್ಣದೇವ್‌, ದೇಶದ ಮುಂಚೂಣಿ ವಸ್ತ್ರ ವಿನ್ಯಾಸಕರ ಷೋಗಳಲ್ಲಿ ಭಾಗವಹಿಸಿದ್ದಾರೆ.

ಕೃಷ್ಣದೇವ್‌ಗೆ ನಟನೆಯ ಬಗ್ಗೆಯೂ ಒಲವಿದೆ. ಈಗಾಗಲೇ ಮೋಹನ್‌ಲಾಲ್‌ ಹಾಗೂ ದಿಲೀಪ್‌ ಅಭಿನಯದ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಾಡೆಲಿಂಗ್‌ ಅಂದ್ರೆ ಪ್ಯಾಷನ್‌’ ಎಂದು ಹೇಳುವ ಅವರಿಗೆ ಯುವಕರಿಗೆ ಮಾಡೆಲಿಂಗ್‌ ಜಗತ್ತಿನಲ್ಲಿ ಅವಕಾಶಗಳು ಕಡಿಮೆ ಎಂಬ ಅರಿವೂ ಇದೆ. ಹೀಗಾಗಿ ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

‘ಯುವತಿಯರಿಗೆ ಇಲ್ಲಿ ಅವಕಾಶಗಳು ಹೆಚ್ಚು. ಉಡುಪು, ಆಭರಣ ಬ್ರ್ಯಾಂಡ್‌ಗಳು ಯುವತಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ’ ಎಂದು ಹೇಳುತ್ತಾರೆ.
‘ಫಿಟ್‌ ಆಗಿ ಇರಲು ದಿನಾ ಬೆಳಿಗ್ಗೆ ಎರಡು ಗಂಟೆ ಜಿಮ್‌ಗೆ ಹೋಗುತ್ತೇನೆ. ಪ್ರೊಟೀನ್‌ ಅಂಶ ಹೆಚ್ಚಾಗಿ ಇರುವ ಆಹಾರ ಸೇವಿಸುತ್ತೇನೆ.

ವೆಜ್‌ ಫ್ರೈಡ್‌ ರೈಸ್‌, ಚಿಲ್ಲಿ ಚಿಕನ್‌ ಇಷ್ಟ. ಪಾರ್ಟಿ ಅಥವಾ ಸಮಾರಂಭಗಳಲ್ಲಿ ಗಡದ್ದಾಗಿ ಊಟ ಮಾಡಿದರೆ ಮರುದಿನ ಒಂದು ಗಂಟೆ ಕಾಲ ಹೆಚ್ಚು ವರ್ಕೌಟ್‌ ಮಾಡುತ್ತೇನೆ. ದೇಹದ ಆಕಾರವನ್ನು ಕಾಪಾಡಿಕೊಳ್ಳುವುದು ಮುಖ್ಯವಾದ್ದರಿಂದ ಹೆಚ್ಚು ನೀರು ಹಾಗೂ ನೀರಿನಂಶ ಹೆಚ್ಚು ಇರುವ ತರಕಾರಿಗಳನ್ನು ತಿನ್ನುತ್ತೇನೆ’ ಎನ್ನುತ್ತಾರೆ.

ಸಮಯ ಸಿಕ್ಕಾಗಲೆಲ್ಲಾ ಹೊಸ ಹೊಸ ಸ್ಥಳಗಳಿಗೆ ತೆರಳುವ ಕೃಷ್ಣದೇವ್‌ಗೆ ಸಂಗೀತ ಕೇಳುವುದು, ಈಜು, ಲಾಂಗ್‌ ಡ್ರೈವ್‌ ಇಷ್ಟದ ಹವ್ಯಾಸಗಳು. ಸದ್ಯ ಬಲ್ಗೇರಿಯಾದಲ್ಲಿ ನಡೆಯಲಿರುವ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.