ADVERTISEMENT

ಕತೆ ಹೇಳುವ ಕಾಯಕ

ಅಮೃತ ಕಿರಣ ಬಿ.ಎಂ.
Published 15 ಆಗಸ್ಟ್ 2016, 19:30 IST
Last Updated 15 ಆಗಸ್ಟ್ 2016, 19:30 IST
ಕತೆ ಹೇಳುವ ಕಾಯಕ
ಕತೆ ಹೇಳುವ ಕಾಯಕ   

ತೆನಾಲಿರಾಮ, ಅಲಿಬಾಬಾ ಮತ್ತು ಕಳ್ಳರು, ಅಕ್ಬರ್ ಬೀರಬಲ್, ಅಲ್ಲಾದ್ದೀನ್, ಗಲೀವರ ಮತ್ತು ಮಕ್ಕಳು, ರಾಜಕುಮಾರ- ರಾಜಕುಮಾರಿ, ಪಂಚತಂತ್ರದ ಸಿಂಹ ಮತ್ತು ಮೊಲದ ಕಥೆಗಳನ್ನು ಕೇಳುತ್ತಲೇ ಬಹುತೇಕರು ತಮ್ಮ ಬಾಲ್ಯ ಕಳೆದಿರುತ್ತಾರೆ.

ಕಥೆ ಎಂದ ಕೂಡಲೆ ಎಂಥವರಿಗೂ ಆಸಕ್ತಿ ಮೂಡುತ್ತದೆ. ಅದು ಕಥೆಗಿರುವ ಶಕ್ತಿ. ಕಥೆ ಹೇಳುವುದು ಹೇಗೆ? ಸಮಸ್ಯೆ ಇರುವುದೇ ಇಲ್ಲಿ. ಕಥೆ ಚೆನ್ನಾಗಿ ಗೊತ್ತು, ಪಾತ್ರಗಳು ಗೊತ್ತು, ಕಥೆ ವಿಸ್ತರಣೆ ಮಾಡಲೂ ಸಾಧ್ಯ. ಕತೆ ಹೇಳುವುದೂ ಇಷ್ಟವೇ. ಆದರೆ ಕಥೆಯನ್ನು ಹೇಳಲು ಬರೋಲ್ಲ ಎನ್ನುವರ ಸಂಖ್ಯೆಯೇ ಹೆಚ್ಚು.

ತಾಯಂದಿರು ತಮ್ಮ ಮಕ್ಕಳಿಗೆ ಕಥೆ ಹೇಳೋಕೆ ಕುಳಿತರೆ ಒಂದೇ ನಿಮಿಷದಲ್ಲಿ ಕಥೆ ಮುಕ್ತಾಯವಾದ ಎಷ್ಟೋ ಘಟನೆಗಳಿವೆ. ಅಂದರೆ ಕಥೆ ಹೇಳುವ ಶೈಲಿ ಸರಿಯಿಲ್ಲ ಎಂಬುದು ಇದರ ಒಟ್ಟು ತಾತ್ಪರ್ಯ.

ಕಥೆ ಆಯ್ಕೆ ಮಾಡುವುದು ಹೇಗೆ, ಕಥೆಯನ್ನು ಎಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಮುಖ್ಯವಾಗಿ ಕಥೆ ಹೇಳುವ ಶೈಲಿಯನ್ನು ರೂಢಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇತ್ತೀಚೆಗೆ ನಗರದ ತ್ಯಾಗರಾಜನಗರದಲ್ಲಿರುವ ‘ಕಿಡ್ಸ್ ಅಡ್ಡಾ’ದಲ್ಲಿ ಕಾರ್ಯಾಗಾರವೊಂದು ನಡೆಯಿತು.
ಇಲ್ಲಿ ಕಥೆ ಹೇಳುವ ಸುಲಲಿತ ಮಾರ್ಗಗಳನ್ನು ತಜ್ಞರು ತಾಯಂದಿರಿಗೆ ಹೇಳಿಕೊಟ್ಟರು.

‘ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲರಲ್ಲೂ ಉತ್ಸಾಹ ಇತ್ತು. ತಮ್ಮ ಮಕ್ಕಳಿಗೆ ಹೇಗೆಲ್ಲಾ ಕತೆ ಹೇಳಬೇಕು ಎಂದು ತಿಳಿದುಕೊಳ್ಳಲು ಅವರು ಉತ್ಸುಕರಾಗಿದ್ದರು. ಬರೀ ಮೊಬೈಲ್ ಗೇಮ್, ಟೀವಿಯಲ್ಲೇ ಮುಳುಗಿರುವ ಮಕ್ಕಳನ್ನು ಅವುಗಳಿಂದ ಹೊರತಂದು ಆಸಕ್ತಿಕರ ಕತೆಗಳ ಮೂಲಕ ಮತ್ತೊಂದು ಆಯಾಮಕ್ಕೆ ಹೊರಳಿಸುವುದರ ಸಾಧ್ಯತೆಗಳನ್ನು ಚರ್ಚಿಸಲಾಯಿತು. ಪಾಲ್ಗೊಂಡಿದ್ದವರ ಸ್ಪಂದನೆ ನೋಡಿ ಖುಷಿಯಾಯಿತು’ ಎಂದು ಹೇಳುತ್ತಾರೆ ಸ್ಟೋರಿವಾಲ್ಲಾಸ್‌ನ ತೃಪ್ತಿ ಶ್ರೀಕಾಂತ್.

ಕತೆ ಏಕೆ ಮುಖ್ಯ ಎಂಬ ಪ್ರಶ್ನೆಗೆ ತೃಪ್ತಿ ಶ್ರೀಕಾಂತ್ ಅವರು ಕೊಡುವ ಕಾರಣಗಳು ಇವು:
*ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಬೆಳೆಸುವುದು
*ಚಿಣ್ಣರ ನೆನಪಿನ ಶಕ್ತಿಯನ್ನು ಹೆಚ್ಚಿಸುವುದು
*ಮಕ್ಕಳ ಬುದ್ಧಿವಂತಿಕೆಯನ್ನು ಇನ್ನಷ್ಟು ಚುರುಕುಗೊಳಿಸುವುದು
*ಮಕ್ಕಳಲ್ಲಿ ಭಾಷಾ ಬಳಕೆಯನ್ನು ಸಮೃದ್ಧಗೊಳಿಸುವುದು
*ಕತೆ ಹೇಳುತ್ತಾ ಮಕ್ಕಳ ಪದ ಸಂಪತ್ತು ಹೆಚ್ಚಿಸುವುದು
*ಕತೆಯನ್ನು ಓದುವ ಹವ್ಯಾಸವನ್ನೂ ಮಕ್ಕಳಲ್ಲಿ ಬೆಳೆಸುವುದು
*ಮಕ್ಕಳ ಯೋಚನಾ ಲಹರಿಯನ್ನು ವಿಸ್ತರಿಸುವುದು
*ಮಕ್ಕಳನ್ನು ತೊಡಗಿಸಿಕೊಳ್ಳುವು
ದರಿಂದ ಅವರ ವರ್ತನಾ ಹವ್ಯಾಸಗಳಲ್ಲಿ ಬದಲಾವಣೆ ತರುವುದು
*ಮಕ್ಕಳನ್ನು ಸಮಾಜಮುಖಿಗೊಳಿಸಲು ಕತೆಗಳು ನೆರವಾಗುತ್ತವೆ
‘ನಾವೆಲ್ಲಾ ಕೂಡು ಕುಟುಂಬಗಳಲ್ಲಿ ಬೆಳೆದವರು. ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ... ಹೀಗೆ ಮನೆಯಲ್ಲಿದ್ದ ಯಾರಾದರೂ ಕತೆಗಳನ್ನು ಹೇಳುತ್ತಿದ್ದರು. ಅವು ನಮ್ಮ ಯೋಚನಾ ಲಹರಿಯನ್ನು ವಿಸ್ತರಿಸಿದವು. ಆದರೆ ಈಗಿನ ಮಕ್ಕಳಿಗೆ ಆ ಭಾಗ್ಯ ಇಲ್ಲ. ಗಂಡ– ಹೆಂಡತಿ– ಮಗು ಇರುವ ಪುಟ್ಟ ಕುಟುಂಬಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿವೆ.  ಪೋಷಕರಿಗೆ ಕತೆ ಹೇಳುವ ವ್ಯವಧಾನವೂ ಇಲ್ಲ, ಇದ್ದರೂ ಹೇಳುವ ವಿಧಾನ ಗೊತ್ತಿಲ್ಲ. ಕತೆಗಳಿಂದ ಮಕ್ಕಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ’ ಎಂದು ತಮ್ಮ ಸಂಘಟನೆಯ ಉದ್ದೇಶ ವಿವರಿಸುತ್ತಾರೆ ತೃಪ್ತಿ ಶ್ರೀಕಾಂತ್.

ಕಥೆ ಹೇಳುವ ವಿಧಾನ
ಕಥೆ ಹೇಳುವ ಮೊದಲು ಮಕ್ಕಳ ವಯೋಮಾನ ಗಮನಿಸಬೇಕು. 2 ವರ್ಷದ ಮಗುವಿಗೂ ಅರ್ಥವಾಗುವಂತೆ ಕಥೆ ಹೇಳುವುದರಲ್ಲಿ ನಿಜವಾದ ಸವಾಲು ಅಡಗಿದೆ. ವಿಭಿನ್ನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯ ಮಕ್ಕಳಲ್ಲಿ ಸಮಾನ ಆಸಕ್ತಿ ಕೆರಳಿಸುವುದು ಒಂದು ವಿಧಾನ.

ಕತೆಗೆ ಪೂರಕವಾಗಿ ಕೆಲವು ಉಪಕರಣಗಳು, ಚಿತ್ರಪಟಗಳು, ಹಾಡು, ಮೊದಲಾದ ಅಂಶಗಳನ್ನು ಬಳಸಿಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಗುವನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ.

ಅವುಗಳ ಜತೆ ಸಂವಾದ ನಡೆಸುವುದು, ಪ್ರಶ್ನೆ ಕೇಳುವುದು, ಊಹಿಸುವಂತೆ ಪ್ರೇರೇಪಿಸುವುದು, ಘಟನೆಗಳನ್ನು ನೆನಪಿಸಿಕೊಳ್ಳುವಂತೆ ಸೂಚಿಸುವುದು, ವಸ್ತುಗಳನ್ನು ಗುರುತಿಸುವಂತೆ ಕೇಳುವುದು ಇವೇ ಮೊದಲಾದ ತಂತ್ರಗಳು ಮಕ್ಕಳು ಕತೆ ಕೇಳುವಂತೆ ಮಾಡಬಲ್ಲವು.

ಸಂವಹನ ಕಲೆಗೂ ಮದ್ದು
ಮಕ್ಕಳಷ್ಟೇ ಅಲ್ಲದೆ ಇತರ ವಯೋಮಾನದವರಿಗೂ ಸ್ಟೋರಿ ವಾಲಾಸ್ ಪ್ರತಿನಿಧಿಗಳು ಕಾರ್ಯಾಗಾರ ನಡೆಸುತ್ತಾರೆ. ವೇದಿಕೆ ಭಾಷಣದ ಶೈಲಿ, ಕಚೇರಿಗಳಲ್ಲಿ ಯಶಸ್ವಿ ಸಂವಹನ ಕಲೆ ರೂಢಿಸಿಕೊಳ್ಳುವುದು, ನಾಯಕತ್ವ ಗುಣ ಬೆಳೆಸಿಕೊಳ್ಳುವ ತಂತ್ರಗಳು, ಬೋರ್ಡ್‌ ರೂಂನಲ್ಲಿ ಮಾತನಾಡುವುದು, ಕಾರ್ಪೊರೇಟ್ ಕತೆ, ಮಾತನಾಡುವ ಕಲೆಯನ್ನು ಹೇಳಿಕೊಡುತ್ತಾರೆ.

ಸದ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿರುವ ಈ ಚಟುವಟಿಕೆಗಳನ್ನು ನಗರದಾಚೆಗೂ ವಿಸ್ತರಿಸುವುದು ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪುವ ಉದ್ದೇಶವನ್ನು ಈ ಸಂಘಟನೆ ಹೊಂದಿದೆ. ಹಳೇ ಕತೆಗಳ ಜೊತೆ ಹೊಸ ಕತೆಗಳನ್ನು ಸೃಷ್ಟಿಸುವುದು, ಹಳೆಯದ್ದಕ್ಕೆ ಒಂದು ಟ್ವಿಸ್ಟ್ ನೀಡುವುದು, ಅವುಗಳನ್ನು ವಿಸ್ತರಿಸುವುದು ಮೊದಲಾದ ಕತೆ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉತ್ಸಾಹಿಗಳ ಈ ತಂಡಕ್ಕೆ ಕತೆಯೊಂದೇ ಅತಿದೊಡ್ಡ ಸ್ಫೂರ್ತಿ.

ವೆಬ್‌ ವಿಳಾಸ: www.storywa**as.com 

‘ಸ್ಟೋರಿವಾಲ್ಲಾಸ್’ ಹುಟ್ಟಿದ್ದು ಹೀಗೆ...
ಸ್ಟೋರಿವಾಲ್ಲಾಸ್‌ ಸಂಘಟನೆಯ ಸಂಸ್ಥಾಪಕರು ಅಮೀನ್ ಹಕ್. ಜಾಹೀರಾತು ಕ್ಷೇತ್ರದಲ್ಲಿ ಇವರದು ಸುಮಾರು 20 ವರ್ಷಗಳ ದುಡಿಮೆ. ಈ ವೇಳೆ ಕಂಡ ಘಟನೆಗಳು ನೂರಾರು. ಇವಕ್ಕೆ ಕತೆಯ ರೂಪ ಕೊಡುತ್ತಾ ಹೋದರು.

ಇಂಥದೇ ಆಸಕ್ತಿ ಹೊಂದಿದ್ದ ಚೈತಾಲಿ ವರ್ಮಾ, ನೂಪುರ್ ಅಗರ್‌ವಾಲ್, ನವನೀತಾ ಕೇದಾರ್, ಅರುಣ್ ಕುಮಾರ್ ಗೋನಾಳ್, ಲಕ್ಷ್ಮೀ ದೇವರಾಜ್, ಸಂಗೀತ ಗೋಯಲ್, ತೃಪ್ತಿ ಶ್ರೀಕಾಂತ್, ಲುಬೈನಾ ರಂಗ್‍ವಾಲಾ ಮೊದಲಾದವರು ಈ ಸಂಘಟನೆಯನ್ನು ಕ್ರಮೇಣ ಸೇರಿಕೊಂಡರು.

ಕಥೆ ಎಲ್ಲರನ್ನೂ ಒಂದು ಸೂರಿನಡಿ ಸೇರಿಸಿತು. ಎಲ್ಲರೂ ಕಥೆಯನ್ನು ಸ್ವಾರಸ್ಯಕರವಾಗಿ ಹೇಳುವುದರಲ್ಲಿ ನಿಸ್ಸೀಮರು. ಇವರಿಗೆ ಭಾಷೆಯ ಹಂಗಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ನಿರರ್ಗಳವಾಗಿ, ಮನಮುಟ್ಟುವಂತೆ ಕಥೆ ಹೇಳುತ್ತಾರೆ. ಸದ್ಯ ಎಲ್ಲರಿಗೂ ಇದೇ ಪೂರ್ಣಕಾಲಿಕ ಕಾಯಕ.

ADVERTISEMENT

ತೃಪ್ತಿ ಶ್ರೀಕಾಂತ್ ಮೂಲತಃ ಐಟಿ ಉದ್ಯೋಗಿ. ಹಲವು ವರ್ಷಗಳಿಂದ ವಿವಿಧ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಅವಳಿ ಮಕ್ಕಳಿಗೆ ಕತೆ ಹೇಳಲು ಶುರು ಮಾಡಿದ ಇವರಿಗೆ ಇದೇ ಹವ್ಯಾಸವಾಗಿ ಬೆಳೆಯಿತು. ಎಲ್ಲ ಮಕ್ಕಳು ಒಂದೇ ಅಲ್ಲವೇ ಎಂಬ ಆಲೋಚನೆಯಿಂದ ಕತೆ ಹೇಳುವ ಆಕರ್ಷಣೆಗೆ ಒಳಗಾದರು. ತಮ್ಮ ವೃತ್ತಿಯನ್ನೇ ತೊರೆದು, ಸ್ಟೋರಿವಾಲ್ಲಾಸ್ ಸಂಘಟನೆಯೊಂದಿಗೆ ಜತೆಯಾದರು.

ಮಕ್ಕಳಿಗೆ ಕತೆ ಹೇಳುವಲ್ಲಿ ಇರುವ ಖುಷಿ ಹಾಗೂ ಸಾರ್ಥಕ್ಯ ಭಾವವು ಅವರನ್ನು ಪುಳಕಿತಗೊಳಿಸಿತು. ಅಂದಿನಿಂದ ವಿವಿಧ ಶಾಲೆಗಳು, ಗ್ರಂಥಾಲಯ, ಸಾಹಿತ್ಯ ಹಬ್ಬ, ಪುಸ್ತಕ ಮಳಿಗೆ, ಸಾಂಸ್ಕೃತಿಕ ವೇದಿಕೆಗಳಲ್ಲಿ ಕತೆ ಹೇಳುವ ಔಚಿತ್ಯವನ್ನು ಆಸಕ್ತರಿಗೆ ವಿವರಿಸುತ್ತಿದ್ದಾರೆ.

ಶಾಲಾ ಶಿಕ್ಷಕರಿಗೂ ತರಬೇತಿ ನೀಡುವ ಇವರು,  ವಿದ್ಯಾರ್ಥಿಗಳನ್ನು ಪಾಠದಲ್ಲಿ ತೊಡಗಿಸಿಕೊಳ್ಳಲು ಏನೆಲ್ಲಾ ತಂತ್ರಗಳನ್ನು ಅನುಸರಿಸಬೇಕು ಎಂದು ಮನಮುಟ್ಟುವಂತೆ ಹೇಳಿಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.