ADVERTISEMENT

ಕನ್ನಡ ಸಿನಿಮಾ ಮಾಹಿತಿ ಕೋಶ

ಬ್ಲಾಗಿಲನು ತೆರೆದು

ಸಾಕ್ಷಿ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

`ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ / ಮನವನು ಸೇರಿದೆ, ಸಂತೋಷ ತುಂಬಿದೆ'- ಎಂಬತ್ತರ ದಶಕದ ಈ ಜನಪ್ರಿಯ ಗೀತೆ ಜನರ ನಾಲಿಗೆಗಳಲ್ಲಿ ಇನ್ನೂ ಹಸಿರಾಗಿದೆ. ಅಂದಹಾಗೆ, ಇದು ಯಾವ ಚಿತ್ರದ ಗೀತೆ?

ಹಾಡು ನೆನಪಿರುತ್ತದೆ. ಸಿನಿಮಾದ ಹೆಸರು ನೆನಪಿನಲ್ಲಿ ಉಳಿಯುವುದು ಕಷ್ಟವಲ್ಲವೇ? ಹಾಂ, ಹಣ್ಣು ಕಣ್ಣಿನ ಈ ಗೀತೆ `ಆಟೋ ರಾಜ' ಚಿತ್ರದ್ದು. ಚಿ. ಉದಯಶಂಕರ್ ರಚಿಸಿದ, ರಾಜನ್-ನಾಗೇಂದ್ರ ಸಂಗೀತ ಸಂಯೋಜನೆಯ ಈ ಮಂಜುಳಮಯ ಗೀತೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಕಂಠಯುಗಳದಲ್ಲಿ ಜೀವ ತುಂಬಿಕೊಂಡಿತ್ತು. ಗಣೇಶ್ ಅಭಿನಯದ `ಆಟೋ ರಾಜ' ಸಿನಿಮಾ ತೇಕುತ್ತಿರುವ ಸಂದರ್ಭದಲ್ಲಿ ಶಂಕರ್‌ನಾಗ್ ಅಭಿನಯದ `ಆಟೋ ರಾಜ'ನ ಪ್ರಸ್ತಾಪ ನೆನಪಿನ ನವಿಲುಗರಿಯ ನೇವರಿಕೆಯಂತೆ ಕಾಣಿಸುತ್ತದೆ.

ಶಂಕರ್‌ನಾಗ್, ಗಾಯತ್ರಿ, ದ್ವಾರಕೀಶ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಲೀಲಾವತಿ, ಮುಸುರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಘಟಾನುಘಟಿಗಳು ನಟಿಸಿದ್ದ `ಆಟೋ ರಾಜ' ಚಿತ್ರದ ನಿರ್ದೇಶನ ವಿಜಯ್ ಅವರದ್ದು. ಹೇಳಿಕೇಳಿ ಸಾಹಸ ಪ್ರಧಾನ ಚಿತ್ರಗಳ ನಿರ್ದೇಶನದಲ್ಲಿ ವಿಜಯ್ ಎತ್ತಿದ ಕೈ. `ಆಟೋ ರಾಜ' ಮೂಲಕ ಅವರು ಶಂಕರ್‌ನಾಗ್‌ಗೆ ಹೊಸ ಇಮೇಜು ತಂದುಕೊಟ್ಟಿದ್ದರು. 1980ರಲ್ಲಿ ತೆರೆಕಂಡ ಈ ಚಿತ್ರದಲ್ಲಿನ `ನಲಿವ ಗುಲಾಬಿ ಹೂವೇ', `ಹೊಸ ಬಾಳು ನಿನ್ನಿಂದ' ಗೀತೆಗಳು ಅಪಾರ ಜನಮನ್ನಣೆ ಗಳಿಸಿದ್ದವು.

`ಆಟೋ ರಾಜ'ನಿಂದ `ಸಂಸ್ಕಾರ' ಚಿತ್ರದ ವಿಷಯಕ್ಕೆ ಬರೋಣ. ಸ್ವರ್ಣಕಮಲ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದ, ಅಂತರರಾಷ್ಟ್ರೀಯ ಗಮನಸೆಳೆದ ಈ ಕನ್ನಡ ಸಿನಿಮಾದಲ್ಲಿ ಬೇರೆ ಬೇರೆ ಕ್ಷೇತ್ರಗಳ ಕ್ರಿಯಾಶೀಲರು ಒಟ್ಟಿಗೆ ಕೆಲಸ ಮಾಡಿದ್ದರು. ಯು.ಆರ್. ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರಕ್ಕೆ ಗಿರೀಶ ಕಾರ್ನಾಡ್ ಚಿತ್ರಕಥೆ ರಚಿಸಿದ್ದರು.

ಪಟ್ಟಾಭಿರಾಮ ರೆಡ್ಡಿ ನಿರ್ಮಾಣ-ನಿರ್ದೇಶನ, ರಾಜೀವ ತಾರಾನಾಥರ ಸಂಗೀತ, ಟಾಮ್ ಕೋವನ್ ಛಾಯಾಗ್ರಹಣ, ಎಸ್.ಜಿ. ವಾಸುದೇವ್ ಕಲೆ- ಹೀಗೆ ಘಟಾನುಘಟಿಗಳು ಚಿತ್ರತಂಡದಲ್ಲಿದ್ದರು. ನಾರಾಣಪ್ಪನ ಪಾತ್ರದಲ್ಲಿ ಲಂಕೇಶ್ ನಟಿಸಿದ್ದರು. ಸೆನ್ಸಾರ್‌ಗೆ ಸಂಬಂಧಿಸಿದಂತೆಯೂ `ಸಂಸ್ಕಾರ' ವಾಗ್ವಾದಕ್ಕೆ ಆಸ್ಪದ ಕಲ್ಪಿಸಿತ್ತು, ಆ ವಾಗ್ವಾದ ಸಂಸತ್ತಿನಲ್ಲೂ ಪ್ರತಿನಿಧಿಸಿತ್ತು. ಈ ಸಿನಿಮಾಕ್ಕೆ ಸಂಬಂಧಿಸಿದ ವಿವರಗಳೇ ಇನ್ನೊಂದು ಸಿನಿಮಾಕ್ಕೆ ವಸ್ತುವಾಗುವಂತಿವೆ.

ಒಂದು ಸಿನಿಮಾದ ಹಿಂದೆ ಎಷ್ಟೊಂದು ವಿವರಗಳಿರುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ `ಆಟೋ ರಾಜ' ಹಾಗೂ `ಸಂಸ್ಕಾರ' ಚಿತ್ರದ ಮೇಲಿನ ವಿವರಗಳನ್ನು ನೋಡಬಹುದು. ಆದರೆ, ಬಹುತೇಕ ಸಂದರ್ಭಗಳಲ್ಲಿ ಈ ವಿವರಗಳೆಲ್ಲ ಮರೆತುಹೋಗಿ ಕೊನೆಗೆ ಸಿನಿಮಾದ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ಹೆಸರುಗಳಷ್ಟೇ ನೆನಪಿನಲ್ಲಿ ಉಳಿಯುತ್ತವೆ. ಸಿನಿಮಾಕ್ಕೆ ಸಂಬಂಧಿಸಿದ ಮಾಹಿತಿಯ ಸಂಗ್ರಹ ಕನ್ನಡದಲ್ಲಿ ತೀರಾ ಕಡಿಮೆ. ಈ ನಿಟ್ಟಿನಲ್ಲಿ `ಕನ್ನಡ ಮೂವೀಸ್' (kannadamoviesinfo.wordpress.com)ಬ್ಲಾಗ್ ಬೆಳ್ಳಿಕಿರಣದಂತೆ ಕಾಣಿಸುತ್ತದೆ.

`ಕನ್ನಡ ಮೂವೀಸ್'- ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದ ಆನ್‌ಲೈನ್ ಮಾಹಿತಿಕೋಶ. ಸುಮಾರು ಏಳೆಂಟು ನೂರು ಚಿತ್ರಗಳ ವಿವರಗಳು ಇಲ್ಲಿ ಸಂಕಲನಗೊಂಡಿವೆ. ಸಿನಿಮಾದ ಹೆಸರು, ಸಿನಿಮಾದ ಅವಧಿ, ತೆರೆಕಂಡ ವರ್ಷ, ಸೆನ್ಸಾರ್ ಆದ ವರ್ಷ, ನಿರ್ದೇಶಕ, ನಿರ್ಮಾಪಕ, ತಾರಾಗಣ, ಸಂಗೀತ, ತಾಂತ್ರಿಕ ವರ್ಗ, ಗೀತೆಗಳ ವಿವರ- ಹೀಗೆ, ಚಿತ್ರವೊಂದಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳು ಇಲ್ಲಿವೆ. ಪ್ರತಿ ಸಿನಿಮಾದ ವಿವರಗಳ ಪಟ್ಟಿಯೊಂದಿಗೆ ಆ ಸಿನಿಮಾಕ್ಕೆ ಸಂಬಂಧಿಸಿದ ಒಂದು ಪೋಸ್ಟರ್ ಕೂಡ ಇದೆ. ಸಿನಿಮಾದ ಆಡಿಯೊ ಮತ್ತು ವಿಡಿಯೊಗಳು ಹೊರಬಂದಿವೆಯೇ ಎನ್ನುವ ವಿವರವೂ ಇದೆ. ಹಾಡುಗಳ ಸಾಹಿತ್ಯ ಆನ್‌ಲೈನ್‌ನಲ್ಲಿ ಲಭ್ಯವಿದ್ದರೆ ಅದರ ಸಂಪರ್ಕವನ್ನೂ ಕಲ್ಪಿಸಲಾಗಿದೆ.

ನಮಗೆ ಬೇಕಾದ ಸಿನಿಮಾದ ಹೆಸರನ್ನು ಹುಡುಕಲು ಒಂದು ಕಿಂಡಿಯನ್ನೂ ಬ್ಲಾಗ್ ಹೊಂದಿದೆ. ಇದರ ಜೊತೆಗೆ ಅಕಾರಾದಿಯಲ್ಲಿ ಸಿನಿಮಾ ಹೆಸರುಗಳನ್ನು ಪಟ್ಟಿ ಮಾಡಿರುವುದರಿಂದ ಹುಡುಕಾಟ ಸಲೀಸು. ವಿಡಿಯೊ ಕಂಪೆನಿಗಳ ಹೆಸರಿನಲ್ಲಿ ಪ್ರತ್ಯೇಕ ಕ್ಯಾಟಲಾಗ್ ಕೂಡ ಇದೆ. ಹೊಸ ಆಡಿಯೊ / ವಿಡಿಯೊಗಳ ಪ್ರಕಟಣೆಯ ಸುದ್ದಿ ತುಣುಕುಗಳು ಇಲ್ಲಿ ಸೇರಿವೆ.

ನೆನಪಿಗೆ ಬರುವ ಹಳೆಯ ಮತ್ತು ಹೊಸ ಸಿನಿಮಾಗಳಿಗೆ ಸಂಬಂಧಿಸಿದ ಹುಡುಕಾಟ ಆಪ್ತವೆನ್ನಿಸುತ್ತದೆ. ಹೊಸ ಪೀಳಿಗೆಯ ಚಿತ್ರರಸಿಕರಿಗೆ ತಿಳಿಯದ ಅನೇಕ ಸಂಗತಿಗಳನ್ನು ಈ ಕೋಶ ಹೊಂದಿದೆ. ಇಲ್ಲಿನ ಮಾಹಿತಿಗಳಿಗೆ ಸೀಮಿತ ಚೌಕಟ್ಟು ಇದೆ ಎನ್ನುವುದು ನಿಜ. ಆದರೆ ಸಿನಿಮಾ ಇತಿಹಾಸದ ಪರಿಕಲ್ಪನೆಯಲ್ಲಿ ಇಂಥ ತುಣುಕುಗಳಿಗೆ ಮಹತ್ವವಿದೆ.

`ಕನ್ನಡ ಮೂವೀಸ್'ನಲ್ಲಿನ ಮಾಹಿತಿ ಕೋಶಕ್ಕೆ ಶೈಕ್ಷಣಿಕ ರೂಪವೂ ಇದೆ. ಸಿನಿಮಾ ತೆರೆಕಂಡ ಮೇಲೆ ಅದರ ಕುರಿತ ವಿವರಗಳು ಸಂಬಂಧಿಸಿದ ಚಿತ್ರದ ನಿರ್ಮಾಪಕ - ನಿರ್ದೇಶಕರಿಗೇ ಮರೆತುಹೋಗಿರುವ ಉದಾಹರಣೆಗಳನ್ನು ಚಿತ್ರೋದ್ಯಮದಲ್ಲಿ ಕಾಣಬಹುದು. ಮಾಹಿತಿ ಸಂಚಯದಂಥ ಕೆಲಸವನ್ನು ಮಾಡುವುದು ತನ್ನ ಕೆಲಸವಲ್ಲ ಎಂದು ಚಲನಚಿತ್ರ ಅಕಾಡೆಮಿ ತೀರ್ಮಾನಿಸಿದಂತಿದೆ. ಇಂಥ ಸಮಯದಲ್ಲಿ, `ಕನ್ನಡ ಮೂವೀಸ್' ಬಳಗ ತನ್ನ ಸೀಮಿತ ಚೌಕಟ್ಟಿನಲ್ಲಿ ಮಾಡಿರುವ ಕೆಲಸಕ್ಕೆ ಮಹತ್ವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.