ADVERTISEMENT

ಕಪ್ಪು ಛಾಯೆಯ ಮೋಹಕ ಆಭರಣ

ಸುರೇಖಾ ಹೆಗಡೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಕಪ್ಪು ಛಾಯೆಯ ಮೋಹಕ ಆಭರಣ
ಕಪ್ಪು ಛಾಯೆಯ ಮೋಹಕ ಆಭರಣ   

ಗಳೆಯರನ್ನು ಬಿಡದೆ ಸೆಳೆಯುವುದು ಆಭರಣ ಲೋಕ. ದಿನದಿನವೂ ಬದಲಾಗುವ ಈ ವಿನ್ಯಾಸ ಪ್ರಪಂಚದ ಬೆರಗುಗಳನ್ನು ಕಣ್ತುಂಬಿಕೊಳ್ಳುತ್ತಾ, ಅವುಗಳನ್ನು ಧರಿಸಿ ಆನಂದಿಸುವುದು ಮಹಿಳೆಯರಿಗೆ ಇಷ್ಟ. ಸದ್ಯದ ಆಭರಣ ಲೋಕದ ಹೊಸಕೂಸು ಆಕ್ಸಿಡೈಸ್ಡ್‌ ಆಭರಣಗಳು.

ಚಿನ್ನ ಹಾಗೂ ಬೆಳ್ಳಿ ಎರಡರಲ್ಲೂ ಈ ವಿನ್ಯಾಸ ವಿಜೃಂಭಿಸುತ್ತಿವೆ. ಆ್ಯಂಟಿಕ್‌ ಆಭರಣಗಳಂಥ ನೋಟಗಳನ್ನೇ ಇವು ಹೊಂದಿರುತ್ತವೆ. ಆದರೆ ಆಕ್ಸಿಡೈಸ್ಡ್‌ ಆಭರಣಕ್ಕೆ ಕಪ್ಪು ಬಣ್ಣದ ಛಾಯೆ ಹೆಚ್ಚಿರುತ್ತದೆ. ಜರ್ಮನ್‌ ಸಿಲ್ವರ್‌ ರೀತಿಯಲ್ಲಿಯೇ ಇವು ಕಾಣುತ್ತವೆ. ಆಭರಣ ಕಪ್ಪಗಾಯಿತು ಎಂದರೆ ಉತ್ತಮ ಗುಣಮಟ್ಟದಲ್ಲ ಎನ್ನುವ ನಂಬಿಕೆ ಮೊದಲು ಇತ್ತು. ಆದರೆ ಈಗ ಕಪ್ಪಾಗಿಸಿರುವ ಆಕ್ಸಿಡೈಸ್ಡ್‌ ಆಭರಣಗಳನ್ನೇ ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.

ಬಳೆ, ಕಿವಿಯೋಲೆ, ನೆಕ್ಲೆಸ್‌, ಬ್ರೇಸ್‌ಲೆಟ್‌, ಪೆಂಡೆಂಟ್‌, ರಿಂಗ್‌, ಸೊಂಟಪಟ್ಟಿ, ಮೂಗುತಿ, ಜಡೆ ಸಿಂಗರಿಸುವ ಆಭರಣ ಹೀಗೆ ಎಲ್ಲಾ ಕಡೆಯೂ ಆಕ್ಸಿಡೈಸ್ಡ್‌ ಆಭರಣದ್ದೇ ಕಾರುಬಾರು. ಸಾಂಪ್ರದಾಯಿಕ, ಪಾಶ್ಚಾತ್ಯ ಹಾಗೂ ಸಮಕಾಲೀನ ದಿರಿಸುಗಳಿಗೂ ಹೊಂದಿಕೊಳ್ಳಬಲ್ಲುದು ಹಾಗೂ ಎಲ್ಲ ಬಗೆಯ ಮೈಬಣ್ಣಕ್ಕೂ ಇದು ಚೆನ್ನಾಗಿ ಹೊಂದುತ್ತದೆ. ಇದೇ ಆಕ್ಸಿಡೈಸ್ಡ್‌ ವಿನ್ಯಾಸಗಳ ಜನಪ್ರಿಯತೆಗೆ ಕಾರಣವಾಗುತ್ತಿದೆ.

ADVERTISEMENT

ಚಿನ್ನದ ಆಭರಣ ಲೋಕದಲ್ಲಿಯಷ್ಟೇ ಅಲ್ಲ, ಬೆಳ್ಳಿ ಆಭರಣ ಲೋಕಕ್ಕೂ ಈ ವಿನ್ಯಾಸ ಹೆಚ್ಚು ಹೊಂದಿಕೊಂಡಿದ್ದು, ಬಂಗಾರವನ್ನೂ ಮೀರಿಸಿ ಇದು ಜನರ ಅಂದವನ್ನು ಹೆಚ್ಚಿಸುತ್ತಿದೆ. ಸಿನಿಮಾ ತಾರೆಗಳನ್ನೂ ಮೆಚ್ಚಿಸಿರುವ ಈ ಆಭರಣಗಳು ಸೋನಂ ಕಪೂರ್‌, ವಿದ್ಯಾ ಬಾಲನ್‌, ಸಮಂತಾ, ನಯನ ತಾರಾ ಹೀಗೆ ಲಲನಾಮಣಿಯರನ್ನು ಅಲಂಕರಿಸಿದೆ.

ಇದುವರೆಗೆ ಆಕ್ಸಿಡೈಸ್ಡ್‌ ವಿನ್ಯಾಸದ ಜುಮ್ಕಾಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ ಬದಲಾದ ಫ್ಯಾಷನ್‌ ಪರಿಭಾಷೆಯೊಂದಿಗೆ ಈ ವಿನ್ಯಾಸ ಎಲ್ಲಾ ಆಭರಣಗಳಲ್ಲಿಯೂ ಬಂದಿದೆ. ಬೆಳ್ಳಿಯಲ್ಲಂತೂ ಆಭರಣಗಳಷ್ಟೇ ಅಲ್ಲ, ಪೂಜಾ ಸಾಮಗ್ರಿಗಳಲ್ಲಿಯೂ ಕಪ್ಪು ಛಾಯೆ ಇರುವ ಆಕ್ಸಿಡೈಸ್ಡ್‌ ವಿನ್ಯಾಸಕ್ಕೆ ಹೆಚ್ಚು ಬೇಡಿಕೆ.

‘ನೋಡಲೂ ಅಂದ, ಜೊತೆಗೆ ಕಪ್ಪು ಛಾಯೆ ಇರುವುದರಿಂದ ನಿರ್ವಹಣೆಯ ಚಿಂತೆ ಇರುವುದಿಲ್ಲ. ಆ್ಯಂಟಿಕ್‌ ಆಭರಣಗಳಂತೆಯೇ ಇವು ಕಾಣಿಸುತ್ತವೆ. ಎಲ್ಲ ಬಗೆಯ ದಿರಿಸಿಗೆ ಒಪ್ಪುವುದರ ಜೊತೆಗೆ ವಿಶೇಷ ನೋಟ ನೀಡುತ್ತದೆ. ಹೀಗಾಗಿಯೇ ಆಕ್ಸಿಡೈಸ್ಡ್‌ ವಿನ್ಯಾಸಗಳು ಆಭರಣಪ್ರಿಯರಿಗೆ ಇಷ್ಟವಾಗಿವೆ’ ಎಂದು ಮಾಹಿತಿ ನೀಡುತ್ತಾರೆ ನವರತನ್‌ ಜ್ಯುವೆಲರ್ಸ್‌ನ ವ್ಯವಸ್ಥಾಪಕ ಶ್ರೀಕಾಂತ್‌.

ಬೆಳ್ಳಿ ಸರಗಳಲ್ಲಿ ಬೇರೆ ಬೇರೆ ಬಣ್ಣದ ದಾರ, ಲೇಸ್‌, ಹರಳುಗಳಿಂದಲೂ ಶ್ರೀಮಂತಗೊಂಡಿರುತ್ತವೆ. ದೊಡ್ಡ ಗಾತ್ರದ ಉದ್ದುದ್ದ ಸರಗಳಿಂದ ಹಿಡಿದು, ಚೋಕರ್‌ವರೆಗೆ ತರಹೇವಾರಿ ವಿನ್ಯಾಸಗಳಿವೆ. ಆಕ್ಸಿಡೈಸ್ಡ್‌ ವಿನ್ಯಾಸದ ಮೂಗುತಿಯೂ ಹೆಂಗಳೆಗೆ ವಿಶೇಷ ನೋಟ ನೀಡುತ್ತದೆ.

ಬಳೆಗಳೂ ಸಹ ಅಷ್ಟೇ ಡೆನಿಮ್‌, ಚೂಡಿದಾರ, ಇಂಡೊ ವೆಸ್ಟರ್ನ್‌ ಕಾಟನ್‌ ದಿರಿಸುಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಇನ್ನು ಕಪ್ಪು ದಾರ ಇಲ್ಲವೆ, ಬಣ್ಣ ಬಣ್ಣದ ಮಣಿಗಳ ಎಳೆ ಹೊಂದಿದ್ದು, ದೊಡ್ಡದಾದ ಆಕ್ಸಿಡೈಸ್ಡ್‌ ಪೆಂಡೆಂಟ್‌ ಕೂಡ ಹಾಕುವುದು ಇಂದಿನ ರೂಢಿ.

ಆಕ್ಸಿಡೈಸ್ಡ್‌ ವಿನ್ಯಾಸದ ಆಭರಣಗಳು ಹೆಚ್ಚಾಗಿ ದೊಡ್ಡ ಗಾತ್ರದವೇ ಆಗಿರುತ್ತವೆ. ಆಮ್ರಪಾಲಿ ಮಳಿಗೆಯಲ್ಲಿಯೂ ಇಂಥದ್ದೇ ಆಭರಣಗಳು ಈಗ ಹೆಚ್ಚು ಮಾರಾಟವಾಗುತ್ತವೆ. ಕಿವಿ ತುಂಬುವ ಕಿವಿಯೋಲೆಗಳು ಕತ್ತು ಸಿಂಗರಿಸುವ ದೊಡ್ಡ ದೊಡ್ಡ ಸರಗಳು ಯುವಮನಸ್ಸುಗಳಿಗೆ ಹೆಚ್ಚು ಇಷ್ಟವಾಗುತ್ತಿವೆ.

ಈ ವಿನ್ಯಾಸಗಳಲ್ಲಿ ಪ್ರಾಣಿ ಹಾಗೂ ಪಕ್ಷಿ ಪ್ರಪಂಚಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಆನೆ, ಮೀನು, ನವಿಲು, ಚಿರತೆಗಳು ಇಲ್ಲಿ ಸ್ಥಾನಗಳಿಸಿವೆ. ಅಲ್ಲದೆ ಟೆಂಪಲ್‌ ವಿನ್ಯಾಸಗಳಲ್ಲೂ ಇವು ಮಿಂಚುತ್ತಿವೆ. ಬಂಗಾರ ಲೇಪನದ ಬೆಳ್ಳಿ ಆಭರಣಗಳಿಗೂ ಬೇಡಿಕೆ ಹೆಚ್ಚಿದೆ.

‘ಸಾಂಪ್ರದಾಯಿಕ ಕಲೆಗಳ ಬಗೆಗೆ ಆಸಕ್ತಿ ಇರುವ ಅನೇಕರು ಇಲ್ಲಿಗೆ ಬಂದು ಈ ಆಭರಣಗಳನ್ನು ಕೊಳ್ಳುತ್ತಾರೆ. ನೋಡಲು ಕಪ್ಪೆನಿಸಿದರೂ ಧರಿಸಿದಾಗ ಇದು ಶ್ರೀಮಂತ ನೋಟ ನೀಡುತ್ತದೆ. ಮೊದಲಿನಂತೆ ಈಗ ಯಾರೂ ಬಗೆಬಗೆಯ ಆಭರಣ ಧರಿಸುವುದಿಲ್ಲ. ಒಂದೇ ಸರ ಧರಿಸಿದರೂ ನೆರೆದವರ ಗಮನ ಸೆಳೆಯಬೇಕು ಎಂದು ಆಶಿಸುತ್ತಾರೆ. ಹೀಗಾಗಿ ದೊಡ್ಡ ಗಾತ್ರದ ವಿಶೇಷ ವಿನ್ಯಾಸಕ್ಕೆ ಆದ್ಯತೆ ನೀಡುತ್ತಾರೆ’ ಎಂಬುದು ‘ಆಮ್ರಪಾಲಿ’ಜ್ಯುವೆಲರಿಯ ಮಾರಾಟ ವಿಭಾಗದ ಹಿರಿಯ ಅಧಿಕಾರಿ ಪ್ರಮೀಳಾ ನೀಡುವ ವಿವರ.

ಚೆಲುವಿನ ಖನಿಯಂತೆ ಕಾಣುವ ಇವುಗಳ ಬೆಲೆ ಏನು ತೀರಾ ದುಬಾರಿಯಲ್ಲ. ಅಲ್ಲದೆ ಇವುಗಳ ನಿರ್ವಹಣೆಯೂ ಅಂಥ ಕಷ್ಟವಲ್ಲ. ಹೀಗಾಗಿಯೇ ಇತ್ತೀಚೆಗೆ ಮದುವಣಗಿತ್ತಿಯರೂ ಈ ಆಭರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿ ಎರಡೂ ಬಣ್ಣಗಳಲ್ಲಿ ಇವು ಲಭ್ಯವಿರುವುದರಿಂದ ಬಹು ಆಯ್ಕೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.