ADVERTISEMENT

ಕರಿಷ್ಮಾ ಚರಿಷ್ಮಾ

ಸತೀಶ ಬೆಳ್ಳಕ್ಕಿ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST
ಕರಿಷ್ಮಾ ಚರಿಷ್ಮಾ
ಕರಿಷ್ಮಾ ಚರಿಷ್ಮಾ   

‘ಪ್ರೇಮ್‌ ಖೈದಿ’ ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ನಟಿ ಕರಿಷ್ಮಾ ಕಪೂರ್‌ಗೆ ಜನಪ್ರಿಯತೆ ತಂದುಕೊಟ್ಟಿದ್ದು
‘ರಾಜಾ ಹಿಂದೂಸ್ತಾನಿ’ ಹಿಂದಿ ಚಿತ್ರ. ಇದರ ಜತೆಗೆ 90ರ ದಶಕದಲ್ಲಿ ನಟ ಗೋವಿಂದ ಮತ್ತು ಕರಿಷ್ಮಾ ಕಪೂರ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ ಅನೇಕ ಚಿತ್ರಗಳು ಬಾಲಿವುಡ್ ಮಂದಿಯನ್ನು ಮೋಡಿ ಮಾಡಿದ್ದವು.

‘ದಿಲ್‌ ತೋ ಪಾಗಲ್‌ ಹೈ’ ಚಿತ್ರದಲ್ಲಿ ಮಾಧುರಿ ದೀಕ್ಷಿತ್‌ ಅವರಿಗೆ ಸಮನಾಗಿ ಕುಣಿದು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಕರಿಷ್ಮಾ, ಮದುವೆಯಾದ ಮೇಲೆ ಗಂಡ–ಮಕ್ಕಳು ಎಂದು ಬಾಲಿವುಡ್‌ಗೆ ಸಂಪೂರ್ಣವಾಗಿ ಬೆನ್ನು ತೋರಿದ್ದರು. ಹತ್ತು ವರ್ಷದ ನಂತರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ‘ಡೇಂಜರಸ್‌ ಇಷ್ಕ್‌’ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ.

ಅಲ್ಲಿಂದೀಚೆಗೆ ಚಿಕ್ಕಪುಟ್ಟ ಪಾತ್ರಗಳನ್ನು ಹೊರತುಪಡಿಸಿದರೆ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಕರಿಷ್ಮಾ ಈಗ ಮಕ್ಕಳ ಜತೆಗೆ ನೆಮ್ಮದಿಯಿಂದ ಇದ್ದಾರಂತೆ. ಇಂತಿಪ್ಪ ನಟಿ ‘ಹೆಲ್ತ್‌ ಅಂಡ್‌ ಗ್ಲೋ’ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳನ್ನು ಭೇಟಿ ಮಾಡುವ ಸಲುವಾಗಿ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ತಮ್ಮ ಸುಂದರ ಕಾಯದ ಗುಟ್ಟು, ಹೊಳೆಯುವ ಮೈಕಾಂತಿ ಹಾಗೂ ಬೆಂಗಳೂರಿನ ಬಗ್ಗೆ ಮಾತನಾಡಿದರು. 

ಬೆಂಗಳೂರು ಅಂದರೆ ನನಗೆ ತುಂಬಾ ಇಷ್ಟ. ಆಗಾಗ್ಗೆ ಇಲ್ಲಿಗೆ ಬರುವುದು ನನಗೆ ಖುಷಿ ಕೊಡುವ ಸಂಗತಿ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಹವಾಗುಣ ನನಗೆ ಅಚ್ಚುಮೆಚ್ಚು ಎನ್ನುವ ಕರಿಷ್ಮಾ ಅವರನ್ನು ‘ನಿಮ್ಮ ಫಿಟ್‌ನೆಸ್‌ ಹಿಂದಿನ ಗುಟ್ಟೇನು?’ ಅಂತ ಕೇಳಿದರೆ, ‘ಮೊದಲು ನನ್ನ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿ ಬಿಡುತ್ತೇನೆ. ಆಮೇಲೆ, ನನ್ನ ಫಿಟ್‌ನೆಸ್‌ ಬಗ್ಗೆ ಮಾತನಾಡುತ್ತೇನೆ’ ಅಂತ ತಮ್ಮ ಬೆಕ್ಕಿನ ಕಣ್ಣುಗಳನ್ನು ಅರಳಿಸಿ ನಕ್ಕರು.

ಕರಿಷ್ಮಾ ಚೆಲುವಿನ ವ್ಯಾಖ್ಯಾನ
ಸೌಂದರ್ಯ ಅನ್ನುವುದು ಮನಸ್ಸಿಗೆ ಸಂಬಂಧಿಸಿದ್ದು. ಮನದೊಳಗೆ ಸಂತೋಷ ಇಲ್ಲದಿದ್ದರೆ ಹೊರಗಿನಿಂದ ಚೆಂದವಾಗಿ ಕಾಣಲು ಸಾಧ್ಯವೇ ಇಲ್ಲ. ಸಕಾರಾತ್ಮಕ ಚಿಂತನೆ, ಆತ್ಮ ವಿಶ್ವಾಸದಿಂದ ಇದ್ದವರು ಆಂತರಿಕ ಸೌಂದರ್ಯದ ಜತೆಗೆ ಬಾಹ್ಯ ಸೌಂದರ್ಯವನ್ನು ಹೊಂದಿರುತ್ತಾರೆ ಎಂಬುದು ಕರಿಷ್ಮಾ ಮಂತ್ರವಂತೆ.

ಉಡುಗೆ ತೊಡುಗೆ ಬಗ್ಗೆ ಕೇಳಿದರೆ, ‘ಕ್ಯಾಶುವಲ್‌ ಬಟ್ಟೆಗಳೇ ನನಗಿಷ್ಟ. ಹೆಣ್ಣು ಮಕ್ಕಳು ಚೆಂದವಾಗಿ ಕಾಣಿಸಬೇಕು ಅಂದರೆ, ಒಳ್ಳೆ ಡ್ರೆಸ್ಸಿಂಗ್‌ ಸೆನ್ಸ್‌ ಇರಬೇಕು. ನಾವು ಧರಿಸುವ ವಸ್ತ್ರಗಳು ನಮ್ಮ ಚೆಲುವನ್ನು ಇಮ್ಮಡಿಸುವಂತಿರಬೇಕು. ನಿತ್ಯವೂ ಸಾಕಷ್ಟು ನೀರು ಕುಡಿಯುವುದು ನನ್ನ ಹವ್ಯಾಸ. ನನ್ನ ಈ ಹವ್ಯಾಸ ನನ್ನನ್ನು ತುಂಬಾ ಆರೋಗ್ಯವಾಗಿರಿಸಿದೆ.

ADVERTISEMENT

ವಯಸ್ಸು ಮರೆಮಾಚುವ ಕ್ರೀಂಗಳು ಯಂಗ್‌ ಆಗಿ ಕಾಣಿಸುವುದರ ಜತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ಆದಷ್ಟೂ ಕಡಿಮೆ ಮೇಕಪ್‌ ಮಾಡಿಕೊಳ್ಳುವುದು ನನಗೆ ಇಷ್ಟ. ಹೇರ್‌ ಕಲರಿಂಗ್‌ ಮಾಡುವ ಗೊಡವೆಗೆ ಹೋಗುವುದಿಲ್ಲ. ಫೋಟೋ ಶೂಟ್‌ಗೆ ಅವಶ್ಯವೆನಿಸಿದರೆ ಮಾತ್ರ ನಾನು ಕೂದಲಿಗೆ ಬಣ್ಣ ಹಚ್ಚುತ್ತೇನೆ’ ಎನ್ನುತ್ತಾರೆ ಅವರು.

ಹೀಗಿದೆ ಅವರ ಫಿಟ್‌ನೆಸ್‌ ಮಂತ್ರ
‘ನಿಯಮಿತವಾಗಿ ಜಿಮ್‌ಗೆ ಹೋಗುವವಳಲ್ಲ ನಾನು. ಇಂಥ ಸಂದರ್ಭದಲ್ಲಿ ನಾನು ಜಿಮ್‌ಗೆ ಪರ್ಯಾಯವಾಗಿ ಯೋಗವನ್ನು ಆಯ್ದುಕೊಂಡಿದ್ದೇನೆ. ಜಿಮ್‌ಗಿಂತ ಯೋಗ ಅಥವಾ ವಾಕಿಂಗ್‌ ಮಾಡುವುದು ಇಷ್ಟ. ನನ್ನ ವಾಕಿಂಗ್‌ಗೆ ಮಕ್ಕಳೂ ಸಾಥ್‌ ನೀಡುತ್ತಾರೆ. ವಾರದಲ್ಲಿ ಎರಡು ಮೂರು ಬಾರಿ ಜಿಮ್‌ಗೆ ತೆರಳಿ ವರ್ಕೌಟ್‌ ಮಾಡುತ್ತೇನೆ. ಇದಕ್ಕೆ ನನ್ನ ಟ್ರೈನರ್‌ ನೆರವು ಪಡೆದುಕೊಳ್ಳುತ್ತೇನೆ.

ನನ್ನ ದೇಹವನ್ನು ಫಿಟ್‌ ಆಗಿರಿಸಿರುವುದು ಯೋಗ ಮತ್ತು ಈಜು. ಚಿಕ್ಕಂದಿನಿಂದಲೂ ಈಜುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ದಿನದಲ್ಲಿ ಐದರಿಂದ ಆರು ಬಾರಿ ಲಘು ಊಟ ಸೇವಿಸುವುದು ನನ್ನ ರೂಢಿ. ಪ್ರತಿ ಊಟದ ನಡುವೆ ಎರಡು ಗಂಟೆ ಅಂತರವಿರುತ್ತದೆ. ಕುರುಕಲು ತಿಂಡಿಗಳಿಂದ ಸದಾ ದೂರವಿರುವ ನಾನು ಮನೆ ಊಟವನ್ನು ಹೆಚ್ಚು ಇಷ್ಟಪಡುತ್ತೇನೆ.

ಬ್ರೌನ್‌ ರೈಸ್‌, ತರಕಾರಿ ಸಾಂಬಾರು, ಚಿಕನ್‌ ಮತ್ತು ಸ್ಟೀಮ್ಡ್ ಫಿಶ್‌ ನನ್ನ ನಿತ್ಯದ ಮೆನು. ದಿನಕ್ಕೆ ಮೂರು ಮೊಟ್ಟೆಯ ಬಿಳಿಭಾಗ ತಿನ್ನುವುದು ನನಗಿಷ್ಟ’ ಎಂದು ತಮ್ಮ ಫಿಟ್‌ ಕಾಯದ ಗುಟ್ಟು ಹೇಳಿಕೊಳ್ಳುತ್ತಾರೆ ಅವರು. ಅಂದಹಾಗೆ, ಕರಿಷ್ಮಾ ಸದ್ಯಕ್ಕೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲವಂತೆ. ಒಳ್ಳೆ ಕತೆ ಸಿಕ್ಕರೆ ಮತ್ತೆ ಬಣ್ಣ ಹಚ್ಚುವ ಮೂಡ್‌ನಲ್ಲಿರುವ ಅವರು ಈ ಕ್ರಿಸ್ಮಸ್‌ ಮತ್ತು ಹೊಸವರ್ಷವನ್ನು ಕುಟುಂಬದೊಟ್ಟಿಗೆ ಆಚರಿಸುವ ಯೋಜನೆ ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.