ADVERTISEMENT

ಕೀಮೋಥೆರಪಿಗೆ ಒಳಗಾದ ಮಹಿಳೆಯರಿಗೆ ವಿಗ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮಹಿಳಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸುತ್ತಾರೆ. ಆದರೆ ಸಂಭ್ರಮಿಸಲು ಕಾರಣಗಳೇ ಇಲ್ಲದ ಕೆಲವು ಮಹಿಳೆಯರೂ ಇರುತ್ತಾರೆ.

ಇಂತಹ ಮಹಿಳೆಯರಲ್ಲಿ ಧೈರ್ಯ ತುಂಬಲು ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ ಜಂಟಿಯಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳಾ ರೋಗಿಗಳಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ವಿಗ್ ಹಾಗೂ ಕೂಲಿಂಗ್ ಕ್ಯಾಪ್ ವಿತರಿಸಲಾಯಿತು.

ಹೇರ್‌ಲೈನ್ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕಿ ಬಾನಿ ಆನಂದ್ ಮಾತನಾಡಿ, ‘ಕೆಲವು ರೋಗಗಳು ಮನುಷ್ಯನ ಆತ್ಮಸ್ಥೆರ್ಯವನ್ನೇ ಉಡುಗಿಸುತ್ತವೆ. ಇಂತಹ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಕೀಮೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಯ ಕೂದಲು ಉದುರಲು ಆರಂಭವಾಗುತ್ತದೆ. ಮಹಿಳೆಯರಿಗೆ ಕೂದಲು ಉದುರುವುದೆಂದರೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಉತ್ಸಾಹ ತುಂಬಲು ವಿಗ್ ವಿತರಿಸುತ್ತಿದ್ದೇವೆ’ ಎಂದರು.

‘ಕ್ಯಾನ್ಸರ್‌ನಿಂದ ಕೂದಲು ಉದುರುವ ಆರಂಭಿಕ ಹಂತದಲ್ಲಿರುವವರಿಗೆ ಆಮದು ಮಾಡಿಕೊಂಡ ಕೂಲಿಂಗ್ ಕ್ಯಾಪ್ ದಾನ ಮಾಡುತ್ತೇವೆ. ಕೂಲಿಂಗ್ ಕ್ಯಾಪ್ ಕೂದಲು ಉದುರುವುದನ್ನು ತಡೆಯುತ್ತದೆ. ಕೀಮೋಥೆರಪಿ ಮಾಡುವ ವೇಳೆ ಈ ಕ್ಯಾಪ್ ಬಳಸುತ್ತಾರೆ. ಈ ವಿಧಾನವನ್ನು ಅನುಸರಿಸುವಾಗ ಪ್ರತಿ ೨ ಗಂಟೆಗೊಮ್ಮೆ ಕೂಲಿಂಗ್ ಕ್ಯಾಪ್ ಬದಲಾಯಿಸಬೇಕಾಗುತ್ತದೆ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ ನಿರ್ದೇಶಕ ಡಾ.ಎಂ. ವಿಜಯ್ ಕುಮಾರ್, ‘ಕ್ಯಾನ್ಸರ್ ಮನುಷ್ಯನನ್ನು ವ್ಯವಸ್ಥಿತವಾಗಿ ನಾಶ ಮಾಡುವ ರೋಗ. ಸ್ತ್ರೀಯರಿಗೆ ಕೂದಲು ಸೌಂದರ್ಯದ ಸಂಕೇತವಾಗಿದ್ದು, ಕೂದಲು ಉದುರಲು ಆರಂಭವಾದಾಗ ಭಾವನಾತ್ಮಕವಾಗಿ ತುಂಬಾ ನೋವನ್ನು ಅನುಭವಿಸುತ್ತಾರೆ. ಈ ವಿಗ್‌ಗಳು ಇಂತಹ ಮಹಿಳೆಯರಿಗೆ ತುಂಬಾ ಸಹಾಯಕ’ ಎಂದರು.

ಕಾರ್ಯಕ್ರಮದಲ್ಲಿ ಕಿದ್ವಾಯಿ ನಿರ್ದೇಶಕ ಡಾ.ಎಂ.ವಿಜಯ್ ಕುಮಾರ್ ಅವರಿಗೆ ವಿಗ್‌ಗಳನ್ನು ಹಸ್ತಾಂತರಿಸಲಾಯಿತು.

ಶೇ ೫೦ ರಿಯಾಯಿತಿ: ಹೇರ್‌ಲೈನ್‌ನಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಕೂದಲಿನ ಚಿಕಿತ್ಸೆಯಲ್ಲಿ ಶೇ ೫೦ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಪ್ರಸಾದ್ ೯೯೧೬೯ ೨೪೬೭೪. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.