ADVERTISEMENT

ಕುಂಚದಲ್ಲಿ ಕೊಂಚ ಗಾಂಧಿ...

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST
ಕುಂಚದಲ್ಲಿ ಕೊಂಚ ಗಾಂಧಿ...
ಕುಂಚದಲ್ಲಿ ಕೊಂಚ ಗಾಂಧಿ...   

ಆ  ಕೊಳದ ನೀರಿಗೆ ಮುತ್ತಿಕ್ಕಿ ದಬಕ್ಕನೆ ಮೇಲೆದ್ದು ಬಂದ ತಂಗಾಳಿಯನ್ನು ಮಳೆಗಾಳಿ ಇನ್ನಷ್ಟು ತಂಪಾಗಿಸಿ ಅಲ್ಲಿದ್ದವರ ಮೈಮನಕ್ಕೆ ಕಚಗುಳಿಯಿಡುತ್ತಿತ್ತು. ಕುಂಚ, ಬಣ್ಣ ಮತ್ತು ಚೌಕಟ್ಟಿನಲ್ಲಿ ಹುದುಗಿದ್ದ ಆ 143 ಮಂದಿಯ ಹಣೆಯಲ್ಲಿ ಬೆವರುಸಾಲು ಕೂರದಂತೆ ಕೃಪೆ ತೋರಿದ್ದು ಅದೇ ಕುಳಿರ್ಗಾಳಿ. ಮಳೆ ಬಿದ್ದರೆ ಜಲವರ್ಣ ಚಿತ್ರ ರಾಡಿಯಾಗುತ್ತದಲ್ಲ ಅಂತ ಅಸಹನೆಯಿಂದಲೇ ಆ ಹುಡುಗಿ ಆಗಸವನ್ನು ಬಿರುಗಣ್ಣಿನಿಂದ ದಿಟ್ಟಿಸಿ ಚೌಕಟ್ಟಿನಲ್ಲಿ ಕುಂಚದಿಂದ ಗೀಚತೊಡಗಿದಳು...

ಪಕ್ಕದ ಕ್ಯಾನ್ವಾಸ್‌ನ ಬುಡದಲ್ಲಿ ಕುಳಿತಿದ್ದ ದಪ್ಪನೆಯ ತರುಣಿಗೆ ಗಾಂಧಿಯ ಗೆರೆ ಮೊದಲು ಬಿಡಿಸುವುದೋ ಹಿನ್ನೆಲೆ ಮುಗಿಸಿ ಗಾಂಧಿಯನ್ನು ತರುವುದೋ ಎಂಬ ಗೊಂದಲ...

`ನಿನ್ನ ದೃಷ್ಟಿಯಲ್ಲಿ ಗಾಂಧಿ ಅಂದರೇನು~ ಎನ್ನುವ ಪ್ರಶ್ನೆಗೆ ತಬ್ಬಿಬ್ಬಾಗಿ ಗೆಳತಿಯ ಬೆನ್ನಹಿಂದೆ ಸರಿದು ಒಂಥರಾ ನಕ್ಕ ಹುಡುಗ, `ಗಾಂಧಿ ಅಂದರೆ ಗಾಂಧಿ ಅಷ್ಟೇ.. ಅಲ್ಲಲ್ಲ ಹೀ ಈಸ್ ಎ ಪರ್ಸನ್ ದಟ್ಸ್ ಆಲ್~ (ಅವರೊಬ್ಬ ವ್ಯಕ್ತಿ ಅಷ್ಟೇ) ಅಂದ. ಇನ್ನೊಬ್ಬ ಆಂಗ್ಲ ಮಾಧ್ಯಮ ಹುಡುಗಿ, `ಗಾಂಧಿ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಗಾಂಧಿ~ ಎಂದಳು. `ಕಾಸಿಲ್ಲದೆ ಕೈಲಾಸ ತೋರಿಸಿದ ಮಹಾತ್ಮ ಅವರು~ ಎಂದು ಭಾವುಕರಾದರು ಕಲಾವಿದ ಹರಿಕೃಷ್ಣ.

ಮಹಾತ್ಮನ 143ನೇ ಜಯಂತಿಯ ಹಿನ್ನೆಲೆಯಲ್ಲಿ ಅವರಿಗೆ ಅರ್ಥಪೂರ್ಣವಾಗಿ ಜೈ ಅನ್ನಲು ಮಲ್ಲೇಶ್ವರದ ಒರಾಯನ್ ಮಾಲ್ `ಗಾಂಧಿ ಮತ್ತು ಗಾಂಧಿ ಚಿಂತನೆ~ ವಿಷಯದ ಮೇಲೆ ಶನಿವಾರ ಹಮ್ಮಿಕೊಂಡಿದ್ದ ಗಾಂಧಿ ಚಿತ್ರ ಬಿಡಿಸುವ ಕಮ್ಮಟದಲ್ಲಿ ಕಿರಿಯರು ಮತ್ತು ಹಿರಿಯರು ಗಾಂಧಿಯನ್ನು ಅರ್ಥೈಸಿಕೊಂಡ ಬಗೆಗೆ ಅವರವರ ಕಲಾರಚನೆಯೇ ಸಾಕ್ಷಿಯಾಗಿತ್ತು.

ವೃತ್ತಿಪರ ಚಿತ್ರ ಕಲಾವಿದ ಸಿ.ಪಿ.ಬಿ. ಪ್ರಸಾದ್ ಕಮ್ಮಟ ಆರಂಭವಾದ ಹತ್ತೇ ನಿಮಿಷದಲ್ಲಿ ತಮ್ಮ ಕಲಾಕೃತಿಯನ್ನು ಮುಗಿಸಿ ಇನ್ನಷ್ಟು ಚಿತ್ರ ಬಿಡಿಸುವ ಹುಮ್ಮಸ್ಸಿನಲ್ಲಿದ್ದರು. ಬಾಗಿದ ಬೆನ್ನು, ಅವರಿಗಿಂತಲೂ ಎತ್ತರದ ಕೈಕೋಲು, ಒಂದು ಬದಿಯಲ್ಲಿ ಕಾಣುವ ಕನ್ನಡಕಧಾರಿಯಾಗಿದ್ದ ಆ ಚಿತ್ರ ಭಾರತದಾಕಾರದಲ್ಲಿತ್ತು. ಹೌದಲ್ಲ? ಅವರೇ ಹೇಳಿದಂತೆ ಗಾಂಧಿ ಅಂದರೆ ಇಂಡಿಯಾ!

ಇಡೀ ಚೌಕಟ್ಟು ಕಡುನೀಲಿ ಬಣ್ಣದಲ್ಲಿ ಮಿಂದೆದ್ದಿತ್ತು. ನೀಲಿ ಎಂದರೆ ಶಾಂತ. ಯಾವುದೇ ಚಿತ್ರಕಲೆಯನ್ನು ಕಂಡಾಗ ವೀಕ್ಷಕನೊಳಗೆ ವಸ್ತು, ವಿಷಯ ಆವಾಹನೆಯಾಗಬೇಕು. ಸರಳ, ಪಾರದರ್ಶಕತೆಯಲ್ಲಿಯೇ ಚಿತ್ರರಚನೆಯ ಸಾರ್ಥಕ್ಯವಿದೆ~ ಎಂಬುದು ಪ್ರಸಾದ್ ನಂಬಿಕೆ.

ಬೆಸ್ಕಾಂನಲ್ಲಿ ಲೆಕ್ಕಾಧಿಕಾರಿಯಾಗಿರುವ ಹವ್ಯಾಸಿ ಚಿತ್ರಕಲಾವಿದ ಹರಿಕೃಷ್ಣ ಅವರ ಕಲಾಕೃತಿಯ ಶಿರೋನಾಮೆ `ಬಾಪೂಜಿ... ಎಲುಬು ಗೂಡಿನಲ್ಲಿ, ಮುರಿದ ಹಲ್ಲಿನಲ್ಲಿ, ಬಿದಿರು ಕೋಲಿನಲ್ಲಿ ಬ್ರಿಟಿಷರನ್ನು ಒದ್ದೋಡಿಸಿದರು~ ಎಂದಿತ್ತು!

ಕಮ್ಮಟ ಶುರುವಾಗಿ ಒಂದೂವರೆ ಗಂಟೆಯಾದರೂ ಕೆಲವು ಕ್ಯಾನ್ವಾಸ್‌ಗಳು ಬರಿದಾಗಿದ್ದವು. ಬಿಳಿ ಹಾಳೆಯಲ್ಲಿ ಅಂದುಕೊಂಡ ಸ್ಕೆಚ್ ಮೂಡಿಸಲು, ಗೀಚಿದ್ದಕ್ಕೆ ಬಣ್ಣದ ಭಾವ, ಗಾಂಧಿಗಿರಿಯನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗದೆ ಈ ತರುಣ ಕಲಾವಿದರು ಒದ್ದಾಡುತ್ತಿರುವುದೇಕೆ ಎಂಬ ಪ್ರಶ್ನೆ ಕಮ್ಮಟದ ಪ್ರೇಕ್ಷಕರನ್ನು ಕಾಡಿದ್ದು ಸುಳ್ಳಲ್ಲ.

ಹರಿಕೃಷ್ಣ ಅವರ ಅಭಿಪ್ರಾಯ ಇದಕ್ಕೆ ಉತ್ತರದಂತಿತ್ತು: “ಈಗಿನ `ಹುಡುಗ್ರು~ ಗಾಂಧಿಯನ್ನು ಅರ್ಥಾನೆ ಮಾಡ್ಕೊಂಡಿಲ್ಲ. ಗಾಂಧೀಜಿಗೆ ಬ್ಯಾಂಕ್ ಖಾತೆಯೇ ಇರಲಿಲ್ಲ. ಆದ್ರೆ ನಮ್ಮ ದೇಶದಲ್ಲಿ ಅವರ ಚಿತ್ರವುಳ್ಳ ಕಪ್ಪುಹಣ ಬಿಂದಾಸ್ ಆಗಿ ಚಲಾವಣೆಯಾಗುತ್ತಿದೆ!

ಈ ನಿಸ್ವಾರ್ಥಿ ಈಗಿನವರಿಗೆ ಅಪ್ರಸ್ತುತ...” ಕುಂಚ, ಬಣ್ಣ, ಕ್ಯಾನ್ವಾಸ್ ಸಿಕ್ಕಿದರೆ ಏನಾದರೂ ಗೀಚುವ ನಿರ್ಧಾರ ಮಾಡಿದ್ದ ಹೋತಗಡ್ಡದ ಹುಡುಗನಿಗೆ ಚಿತ್ರಕ್ಕಿಂತಲೂ ಗಾಂಧಿಗಿಂತಲೂ ಇಬ್ಬದಿಯಲ್ಲಿ ನಿಂತಿದ್ದ ಸ್ನೇಹಿತೆಯರನ್ನು ಕೀಟಲೆ ಮಾಡುವುದೇ ಆದ್ಯತೆಯಾದಂತಿತ್ತು.

ಗಾಂಧಿಯನ್ನು ಅಕ್ಷರದಲ್ಲಿ ಕಟ್ಟಿಕೊಡಲಾಗದ ನಿರಾಸೆಯಿಂದಲೋ, ಅವರಿಂದ ಈಗ ನಮಗೆ ಈಗೇನಾಗಬೇಕು ಎಂಬ ಅಸಡ್ಡೆಯಿಂದಲೋ ಮಾಲ್‌ನಲ್ಲಿ ಅಡ್ಡಾಡಲು ಬಂದಿದ್ದ ಹುಡುಗ ಗಾಂಧಿ ಜಯಂತಿಯನ್ನೇ ಅಪಭ್ರಂಶ ಮಾಡಿ, `ಗಾಂಧಿಗೆ ಜೈ ಅಂತಿ?~ ಎಂದು ತೋಳು ಹಿಡಿದು ಭುಜಕ್ಕೆ ಆನಿಸಿಕೊಂಡು ನಡೆಯುತ್ತಿದ್ದ ಗೆಳತಿಗೆ ಕೇಳುತ್ತಿದ್ದ.

ಅಂಗೈಯಗಲದ ಇಸ್ತ್ರಿಪೆಟ್ಟಿಗೆಯಂತಹ ಯಂತ್ರದ ಮೂಲಕ ವ್ಯಾಕ್ಸ್ ಸ್ಪ್ರೇ ಮಾಡುತ್ತಾ ಉಪ್ಪಿನ ಸತ್ಯಾಗ್ರಹದ ಗಾಂಧಿಯನ್ನು ಮೂಡಿಸುತ್ತಿದ್ದರು ಕೊಲ್ಕತ್ತಾದ ಆವಂತಿಕಾ.
`ಇದೂ ವ್ಯಾಪಾರದ ಗಿಮಿಕ್ಕಾ~ ಅಂತ ಕೇಳಿದ್ದಕ್ಕೆ, ಒರಾಯನ್ ಮಾಲ್‌ನ ಮಾರ್ಕೆಟಿಂಗ್ ಮುಖ್ಯಸ್ಥ ವಿಜಯಚಂದ್ರನ್ ಹೇಳಿದ್ದಿಷ್ಟು:

`ಗಾಂಧಿಗೆ ನಮನ ಸಲ್ಲಿಸಲು ಇದಕ್ಕಿಂತಲೂ ಉತ್ತಮ ಮಾರ್ಗ ಇನ್ನೊಂದಿಲ್ಲ ಅಂತ ನನ್ನ ಅಭಿಪ್ರಾಯ. ನೋಡಿ, ಒಬ್ಬೊಬ್ಬ ಕಲಾವಿದನ ಆಚೆ ಈಚೆ ಎಷ್ಟು ಮಂದಿ ಅಡ್ಡಾಡುತ್ತಿದ್ದಾರೆ.

ಅವರೆಲ್ಲ ಗಾಂಧಿ ಬಗ್ಗೆ ಯೋಚಿಸುತ್ತಲೇ ಕಲಾಕೃತಿಯನ್ನು, ಕಲಾ ರಚನೆಯನ್ನು ನೋಡುತ್ತಾರೆ, ವಿಮರ್ಶಿಸುತ್ತಾರೆ. ಹೀಗೆ ಗಾಂಧಿ ಬಗ್ಗೆ ಚಿಂತನೆ ಹಚ್ಚುವುದು ನಮ್ಮ ಉದ್ದೇಶ~ ಎಂದು ಯಶಸ್ಸಿನ ನಗೆ ನಕ್ಕರು ಅವರು.

ಮಾಲ್‌ನ ಹಿಂಭಾಗದಲ್ಲಿರುವ ಕೊಳದ ಮುಂದಿನ ಮೆಟ್ಟಿಲುಗಳಲ್ಲಿ ಒಟ್ಟು 143 ಚೌಕಟ್ಟುಗಳಲ್ಲಿ 143 ಬಗೆಯ ಗಾಂಧಿ ಅಭಿವ್ಯಕ್ತಿಗೊಂಡಾಗ ಗಂಟೆ ಏಳು ದಾಟಿತ್ತು.

ಅಕ್ಟೋಬರ್ 3ರವರೆಗೆ ಈ ಕಲಾಕೃತಿಗಳು ಮಾಲ್‌ನಲ್ಲಿ ಪ್ರದರ್ಶನ/ಮಾರಾಟಕ್ಕೆ ಲಭ್ಯವಿದ್ದು, ಭಾನುವಾರ ಇಳಿಸಂಜೆಯ ಹೊತ್ತಿಗೆ  2,000ದಿಂದ 10ಸಾವಿರ ರೂಪಾಯಿವರೆಗೂ ಬೆಲೆಗೆ ಬಿಕರಿಯಾದುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.