ADVERTISEMENT

‘ಕುಲುಮೆಯಲ್ಲಿ ನಾನೂ ಬೆಂದೆ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
‘ಕುಲುಮೆಯಲ್ಲಿ ನಾನೂ ಬೆಂದೆ’
‘ಕುಲುಮೆಯಲ್ಲಿ ನಾನೂ ಬೆಂದೆ’   

ನಿರೂಪಣೆ: ಮಂಜುನಾಥ ಎಂ.ಆರ್‌.

ನ್ನ ಹೆಸರು ಸಣ್ಣತಿಮ್ಮಯ್ಯ. ವಯಸ್ಸು 66. ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊನಗೊಂಡನ ಹಳ್ಳಿ. ಕಮ್ಮಾರಿಕೆ (ಕುಲುಮೆ) ನನ್ನ ಕುಲಕಸುಬು. ತಾತ ಮುತ್ತಾತರಿಂದ ಕಲಿತ ವಿದ್ಯೆಯೇ ಜೀವನಕ್ಕೆ ಆಧಾರವಾಗಿದೆ.

ಹಳ್ಳಿಯಲ್ಲಿ ವ್ಯಾಪಾರ ಇಲ್ಲದೆ ಸಂಸಾರ ನಡೆಸೋದು ಕಷ್ಟವಾಯಿತು. ಗಿರಾಕಿಗಳಿಲ್ಲದೆ ಹಗಲೆಲ್ಲ ದುಡಿದರೂ 50 ರೂಪಾಯಿ ಗಿಟ್ಟುತ್ತಿರಲಿಲ್ಲ.  ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಬಡತನದಿಂದಾಗಿ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಂತಿತು.

ADVERTISEMENT

ಬೆಂಗಳೂರಿಗೆ ಬಂದು 15 ವರ್ಷ ಆಯ್ತು. ಮಾಗಡಿ ಮಾರ್ಗದ ಸುಂಕದಕಟ್ಟೆ ರಸ್ತೆ ಬದಿಯಲ್ಲಿ ಒಂದು ಕುಲುಮೆ ಆರಂಭಿಸಿದೆ. ಆರಂಭದಲ್ಲಿ ನಗರ ಜೀವನ ಕಷ್ಟವಾದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಬೇರೆ ದಾರಿ ಇರಲಿಲ್ಲ.

ನನಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ದುಡಿಮೆಯಲ್ಲಿಯೇ ಅಲ್ಪಸ್ವಲ್ಪ ಕೂಡಿಟ್ಟು ಮಕ್ಕಳಿಗೆ ಮದುವೆ ಮಾಡಿದ್ದೇನೆ. ಹಿರಿಮಗ ಹಳ್ಳಿಯಲ್ಲಿಯೇ ಕುಲುಮೆ ಮಾಡುತ್ತಿದ್ದಾನೆ. ಕಿರಿಯ ಮಗ ಮನೆಯ ವ್ಯವಹಾರ ನೋಡಿಕೊಳ್ಳುತ್ತಾನೆ. ಅವನೂ ಇದೇ ವೃತ್ತಿಯಲ್ಲಿರುವುದರಿಂದ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಮೊಮ್ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ನಾನು ಬಾಲ್ಯದಲ್ಲಿ ವೃತ್ತಿ ಆರಂಭಿಸಿದಾಗ ಪೈಸೆ, ಆಣೆ ಲೆಕ್ಕದಲ್ಲಿ ಆದಾಯ ಗಳಿಸುತ್ತಿದ್ದೆ. ಬೆಂಗಳೂರಿಗೆ ಬಂದ ಮೇಲೆ ಪ್ರತಿ ದಿನ ₹ 500ರಿಂದ 2000ದವರಗೆ ಸಂಪಾದಿಸುವಂತಾಗಿದೆ. ಆದರೆ ಕೆಲವೊಮ್ಮೆ ಗಿರಾಕಿಗಳಿಲ್ಲ ದಿದ್ದರೆ ವ್ಯಾಪಾರವಿರುವುದಿಲ್ಲ. ವಯಸ್ಸಾದಂತೆ ಮೊದಲಿನಷ್ಟು ಉತ್ಸಾಹದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ ₹ 400 ದಿನಗೂಲಿ ಲೆಕ್ಕದಲ್ಲಿ ಕಾರ್ಮಿಕನೊಬ್ಬನನ್ನು ನೇಮಿಸಿಕೊಂಡಿದ್ದೇನೆ. ನನ್ನ ಹೆಂಡತಿ ಹಾಗೂ ಸೊಸೆ ಇಬ್ಬರೂ ತರಕಾರಿ ವ್ಯಾಪಾರ ಮಾಡುವುದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿಲ್ಲ.

ಬೆಂಗಳೂರಿನಲ್ಲಿ ರೈತರಿಲ್ಲ. ಹಾಗಾಗಿ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಇಲ್ಲಿ ತಯಾರಿಸುವುದಿಲ್ಲ. ಗಾರೆ ಕೆಲಸಕ್ಕೆ ಬೇಕಾದ ಉಳಿ, ಇಕ್ಕಳ, ಉಕ್ಕು, ಸಲಾಕೆ, ಗುದ್ದಲಿ, ಚಾಣ, ಕುಡುಗೋಲು  ಮಾಡಿಕೊಡುತ್ತೇನೆ.

‌ ನಾನು ಬೆಂಗಳೂರಿನಲ್ಲಿ ಕಾಯಂ ಅಂತ ಇರುವುದಿಲ್ಲ. ನಗರ ಜೀವನ ಬೇಸರ ತರಿಸಿದಾಗಲೆಲ್ಲ ಹಳ್ಳಿಗೆ ಹೋಗುತ್ತೇನೆ. ಹಳ್ಳಿ ಜೀವನ ಕಷ್ಟವೆನಿಸಿದರೂ ಊರು ಬಿಡಬಾರದು. ಏನೇ ಆದರೂ ಹಳ್ಳಿಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಹಳ್ಳಿಯಲ್ಲಿ ಪ್ರೀತಿ ಹೆಚ್ಚು. ಬೆಂಗಳೂರಿನಲ್ಲಿ ನಮ್ಮೋರು ಅಂತ ಯಾರೂ ಇಲ್ಲ. ನಾವಾಯ್ತು ನಮ್ಮ ಕೆಲಸ ಆಯ್ತು ಎಂದುಕೊಂಡು ಜೀವನ ಸಾಗಿಸಬೇಕು.

ನಮ್ಮ ಕಸುಬು ದೇಹ ದಂಡಿಸಿ ಮಾಡೋದು. ಕುಲುಮೆಯಲ್ಲಿ ಬೆಂದು ಬೆಂದು ಅರ್ಧ ಆಯಸ್ಸಿಗೇ ಮುಪ್ಪು ಆವರಿಸುತ್ತೆ. ಪ್ರತಿ ದಿನ ಮೈ–ಕೈ ನೋವು ತಪ್ಪಿದ್ದಲ್ಲ. ನಮ್ಮ ಕಷ್ಟ ನಗರದ ಜನಕ್ಕೆ ಅರ್ಥ ಆಗಲ್ಲ. ಕೆಲವು ಗಿರಾಕಿಗಳು ಚೌಕಾಸಿ ಮಾಡಿ ಕಡಿಮೆ ಹಣ ನೀಡುತ್ತಾರೆ. ಇಷ್ಟು ವರ್ಷ ದುಡಿದರೂ ಸ್ವಂತ ಮನೆ ಇಲ್ಲ. ಕೆಲವೊಮ್ಮೆ ಆರೋಗ್ಯ ಹದಗೆಟ್ಟಾಗ ದುಡಿದ ಹಣವನ್ನೆಲ್ಲ ಆಸ್ಪತ್ರೆಗೆ ಕೊಡಬೇಕು. ಸರ್ಕಾರ ನಮ್ಮಂತ ಬಡ ಜನರನ್ನು ಗುರುತಿಸಬೇಕು.

ದೇವರ ದಯೆಯಿಂದ ಇಬ್ಬರು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾರ ಬಳಿಯೂ ನಾನು ಕೈ ಚಾಚುವುದಿಲ್ಲ. ಕಷ್ಟವಿದೆ ನಿಜ. ಆದರೆ ನೆಮ್ಮದಿಯಾಗಿದ್ದೇನೆ. ಕುಲಕಸುಬು ಮಾಡುತ್ತಿದ್ದರೂ ಒಬ್ಬನಿಗಾದರೂ ಉದ್ಯೋಗ ಕೊಟ್ಟ ತೃಪ್ತಿ ನನಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.