ತಮ್ಮ ವಯಸ್ಸೆಷ್ಟು ಎಂದೇ ಗೊತ್ತಿಲ್ಲದ ಆ ಬಿಳಿ ಕೂದಲಿನ ಅಜ್ಜಿಗೆ 80 ದಾಟಿರಬಹುದು. ಕಳೆದ 15 ವರ್ಷಗಳಿಂದಲೂ ವಾಕಿಂಗ್ ಮಾಡುತ್ತಿರುವ ಅಜ್ಜಿ ಇತ್ತೀಚಿನ ದಿನಗಳಲ್ಲಿ ಆ ಜಿಮ್‌ಗೆ ಪ್ರತಿನಿತ್ಯ ಬೆಳಿಗ್ಗೆ 6.30ರೊಳಗೆ ಬಂದು ಅಲ್ಲಿನ `ರಾಟೆಯ ಹಗ್ಗ'ದೊಂದಿಗೆ ಕಸರತ್ತು ನಡೆಸುತ್ತಾರೆ.
ಜಯನಗರ ಸೌತ್ ಎಂಡ್ ನಿವಾಸಿಗಳಾದ ಹೇಮಾ ಮತ್ತು ಭಾರತಿ ಕಳೆದ ಐದು ವರ್ಷಗಳಿಂದ ಮಾಧವನ್ ಪಾರ್ಕ್ ಬಿಟ್ಟು ಕೃಷ್ಣರಾವ್ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಅವರಿಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವುದು ವಾಕಿಂಗ್‌ಗಿಂಗಲೂ ಖುಷಿ ಕೊಡುತ್ತದಂತೆ.
ಅರುವತ್ತು ದಾಟಿರುವ ಮಂಗಳಾ ಚಂದ್ರಶೇಖರ್ ಅವರಿಗೆ ಮಂಡಿ ನೋವು, ಬೆನ್ನುನೋವಿಗೆ ವಾಕಿಂಗ್‌ಗಿಂತಲೂ ಇಲ್ಲಿನ ಜಿಮ್‌ನಲ್ಲಿ ಸರಳ ಕಸರತ್ತು ಮಾಡುವುದು ಹೆಚ್ಚು ಸಹಕಾರಿಯಾಗಿದೆಯಂತೆ.
***
ಬಸವನಗುಡಿಯ ಎಂ.ಎನ್. ಕೃಷ್ಣರಾವ್ ಪಾರ್ಕ್‌ನಲ್ಲಿ ಶುರುವಾಗಿರುವ ಜಿಮ್ ಹೇಗೆ `ಕೆಲಸ' ಮಾಡುತ್ತಿದೆ ಎಂದು ನೋಡುವ ಕುತೂಹಲದಿಂದ ಜೂ. 16ರ ಭಾನುವಾರ ಮುಂಜಾನೆ 6.10ಕ್ಕೆ ಉದ್ಯಾನಕ್ಕೆ ಭೇಟಿ ನೀಡಿದಾಗ (ಗುಣಶೀಲ ನರ್ಸಿಂಗ್ ಹೋಮ್ ಬಳಿಯಿರುವ ಮುಖ್ಯದ್ವಾರ) ಇಡೀ ಉದ್ಯಾನದ ಹುಮ್ಮಸ್ಸೆಲ್ಲಾ ಆ ಜಿಮ್ ಪ್ರದೇಶದಲ್ಲೇ ಎದ್ದುಕಾಣುತ್ತಿರುವಂತೆ ಭಾಸವಾಯಿತು. ಎಲ್ಲರ ಮುಖದಲ್ಲೂ ಚೈತನ್ಯ, ಹೊಸ ಬಗೆಯ ಕಲಿಕೆಗೆ ಒಗ್ಗಿಕೊಳ್ಳುತ್ತಿರುವ ಸಂತಸ, ಏನೋ ಸಾಧಿಸಿದ ಸಂತೃಪ್ತಭಾವ. ಜಿಮ್ ಎಂದರೆ ಹೇಗಿರುತ್ತದೆ ಎಂಬ ಕಲ್ಪನೆಯೂ ಇರದ ಗೃಹಿಣಿಯರು, ಕೆಳಮಧ್ಯಮ, ಮೇಲ್ಮಧ್ಯಮ ವರ್ಗದ ಮಂದಿಯೂ ಅಲ್ಲಿ ಜಿಮ್ ಪರಿಕರಗಳಲ್ಲಿ ಪಳಗುತ್ತಿದ್ದಾರೆ.
ಸಮಯ ಆರೂವರೆ ಆಗುತ್ತಿದ್ದಂತೆ ಒಂದೊಂದು ಜಿಮ್ ಪರಿಕರದ ಸುತ್ತಮುತ್ತ ಕನಿಷ್ಠ ನಾಲ್ಕೈದು ಮಂದಿ ತಮ್ಮ ಸರದಿಗೆ ಕಾಯತೊಡಗಿದ್ದರು. ಜನ ಹೆಚ್ಚುತ್ತಿದ್ದಂತೆ ಒಬ್ಬೊಬ್ಬರೂ ಐದೈದು ನಿಮಿಷ ವರ್ಕ್‌ಔಟ್ ಮಾಡಿ ಮತ್ತೊಂದಕ್ಕೆ ಶಿಫ್ಟ್ ಆಗುತ್ತಿದ್ದರು. ಏಳೂವರೆ ಹೊತ್ತಿಗೆ ಒಬ್ಬೊಬ್ಬರಿಗೆ ಎರಡು ನಿಮಿಷ ಸಿಕ್ಕಿದರೇ ಹೆಚ್ಚು ಎಂಬಂತಾಯಿತು. ಇಲ್ಲಿ ಇರುವುದು ಸಾಮಾನ್ಯ ಜಿಮ್‌ಗಳಲ್ಲಿ ಕಾಣುವ ವಾಕರ್, ಟ್ರೆಡ್‌ಮಿಲ್ ಮತ್ತಿತರ ಯುನಿಟ್‌ಗಳನ್ನೇ ಸರಳೀಕರಿಸಿ ವಿನ್ಯಾಸ ಮಾಡಿದ ಬಿಡಿಬಿಡಿ ಪರಿಕರಗಳು.
ಅಲ್ಲಿನ ಮಾದರಿ ಇಲ್ಲಿಗೆ
ವಾಕಿಂಗ್, ಲಘು ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಶಟಲ್ ಬ್ಯಾಡ್ಮಿಂಟನ್‌ನಂತಹ ಚಟುವಟಿಕೆಗಳಿಗಷ್ಟೇ ಸೀಮಿತವಾಗಿದ್ದ ಕೃಷ್ಣರಾವ್ ಉದ್ಯಾನದಲ್ಲಿ ಹೀಗೊಂದು ಜಿಮ್ ತಲೆಯೆತ್ತಲು ಹಿರಿಯ ಬ್ಯಾಡ್ಮಿಂಟನ್ ಪಟು, ಎಪ್ಪತ್ತೈದರ ಜವ್ವನಿಗ ಬಿ.ಎನ್. ಚಂದ್ರಶೇಖರ್ ಅವರ ಶ್ರಮವೇ ಕಾರಣ ಎನ್ನುತ್ತಾರೆ ಇಲ್ಲಿನ ವಾಕರ್ಸ್ ಗ್ರೂಪ್‌ನವರು.
`ಸದಾಶಿವನಗರದ ಪಾರ್ಕ್‌ನಲ್ಲಿ ಸಾರ್ವಜನಿಕರಿಗಾಗಿ ಇಂತಹುದೇ ಜಿಮ್ ಶುರು ಮಾಡಿದ ವಿಷಯ ತಿಳಿದು ನಮ್ಮ ಉದ್ಯಾನದಲ್ಲೂ ಒಂದು ಜಿಮ್ ಇದ್ದರೆ ಚೆಂದ ಎಂದುಕೊಂಡೆ. ಪ್ರತಿಯೊಬ್ಬನಿಗೂ ಕ್ಲಬ್‌ಗೋ, ಜಿಮ್‌ಗೋ ಹೋಗಲು ಸಾಧ್ಯವಿಲ್ಲ. ಸ್ನೇಹಿತರ ಜತೆ ಚರ್ಚೆ ನಡೆಸುತ್ತಿದ್ದಾಗ ನಗರದ `ಆರ್‌ಎಂಝಡ್ ಗ್ರೂಪ್' ಎಂಬ ಲ್ಯಾಂಡ್ ಡೆವಲಪರ್ ಕಂಪೆನಿ ನಮ್ಮ ಚಿಂತನೆಯನ್ನು ಜಾರಿಗೆ ತರಲು ಒಪ್ಪಿತು. ಟರ್ಕಿಯಿಂದ ಆಮದು ಮಾಡಿಕೊಂಡಿರುವ ಈ ಜಿಮ್ ಪರಿಕರಗಳಿಗೆ ಒಟ್ಟು ರೂ 20 ಲಕ್ಷ ವೆಚ್ಚವಾಗಿದೆ. ನಿರ್ವಹಣೆಯ ಹೊಣೆಯನ್ನೂ ಅವರೇ ವಹಿಸಿಕೊಂಡಿದ್ದಾರೆ.
ಇದಾದ ನಂತರ ನಿಮ್ಹಾನ್ಸ್ ನಿರ್ದೇಶಕ ಡಾ. ಸತೀಶ್ಚಂದ್ರ ಅವರ ಮುತುವರ್ಜಿಯಿಂದಾಗಿ ಒಂದು ವಿಶೇಷವಾದ ಫಿಟ್‌ನೆಸ್ ಯೂನಿಟ್ ವ್ಯಾಯಾಮ ಪರಿಕರವನ್ನೂ ಒದಗಿಸಿತು (ಬಾಕ್ಸ್: ರಾಟೆಯ ವ್ಯಾಯಾಮ ನೋಡಿ). ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸೌಕರ್ಯವನ್ನು ಕಲ್ಪಿಸಿಕೊಟ್ಟ ಎರಡೂ ಸಂಸ್ಥೆಗಳಿಗೆ ನಾವು ಆಭಾರಿ' ಎನ್ನುತ್ತಾರೆ, ಬಿ.ಎನ್. ಚಂದ್ರಶೇಖರ್.
`ನಡಿಗೆಗಿಂತ ಇದೇ ಉತ್ತಮ'
ವಾಕಿಂಗ್‌ನಿಂದ ಜಿಮ್‌ಗೆ ಬಡ್ತಿ ಹೊಂದಿದ ಹಾಗೂ ಎರಡನ್ನೂ ನಿಭಾಯಿಸುತ್ತಿರುವ ಮಂದಿಯ ಬಹುತೇಕ ಅಭಿಪ್ರಾಯವಿದು.
ತ್ಯಾಗರಾಜನಗರದ ಮುನಿಯಮ್ಮ ದ್ವಿಚಕ್ರ ವಾಹನದಲ್ಲಿ ಈ ಪಾರ್ಕ್‌ಗೆ ಕಳೆದ ಹನ್ನೆರಡು ವರ್ಷಗಳಿಂದಲೂ ವಾಕಿಂಗ್‌ಗಾಗಿ ಬರುತ್ತಾರಂತೆ. ಬರಿಯ ವಾಕಿಂಗ್ ಮಾಡುವುದಕ್ಕಿಂತಲೂ ಇಲ್ಲಿನ ಜಿಮ್ ಪರಿಕರಗಳನ್ನು ಬಳಸುವುದರಿಂದ ಅವರಿಗೆ ಮಂಡಿನೋವಿಗೆ ಲಾಭವಾಗಿದೆಯಂತೆ. 15 ದಿನದಲ್ಲಿ ಏನಿಲ್ಲವೆಂದರೂ ಎರಡು ಕೆ.ಜಿ. ತೂಕ ಇಳಿದಿದೆ ಎನ್ನುತ್ತಾರೆ.
ಇಲ್ಲಿ ಜಿಮ್ ಶುರುವಾದ ನಂತರ ಲಾಲ್‌ಬಾಗ್‌ಗೆ ನಿತ್ಯ ವಾಕಿಂಗ್ ಹೋಗುತ್ತಿದ್ದವರೂ ಇಲ್ಲಿಗೆ ಬರತೊಡಗಿದ್ದಾರಂತೆ.
ಬೆಂಗಳೂರಿನ ಇತಿಹಾಸದ ಭಾಗವಾಗಿರುವ, ಹಸಿರಿನಿಂದ ಸಮೃದ್ಧವಾಗಿರುವ ಎಂ.ಎನ್. ಕೃಷ್ಣರಾವ್ ಉದ್ಯಾನ ಆಧುನಿಕ ಜೀವನಶೈಲಿಗೆ ಹೀಗೆ ತೆರೆದುಕೊಳ್ಳುವ ಮೂಲಕ ಸಿಲಿಕಾನ್ ಸಿಟಿಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
`ಮಾರ್ಗದರ್ಶಕರು ಅಗತ್ಯ'
ಹೌದಾ? ಉದ್ಯಾನದಲ್ಲಿ ಜಿಮ್ ಶುರುಮಾಡಿದ್ದಾರಾ? ಪಾಲಿಕೆ ವತಿಯಿಂದ ಕೆಲವು ಕಡೆ ಉಚಿತ ಜಿಮ್ ಆರಂಭಿಸಿರುವ ಬಗ್ಗೆ ತಿಳಿದಿದ್ದೆ. ಆದರೆ ಖಾಸಗಿ ಕಂಪೆನಿಯವರು ಬಂಡವಾಳ ಹಾಕಿ ಮಾಡಿದ್ದಾರೆನ್ನುವುದು ನನಗೆ ನಿಜಕ್ಕೂ ಬಹಳ ಖುಷಿಯಾಯಿತು. ಅವರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು.
ಜಿಮ್‌ನಲ್ಲಿ ವರ್ಕ್‌ಔಟ್ ಮಾಡಬೇಕು, ಬಾಡಿ ಬಿಲ್ಡ್ ಮಾಡಿಕೊಳ್ಳಬೇಕು ಎಂಬ ಆಸೆ ಬಹುತೇಕ ಯುವಕರಿಗೆ ಇದ್ದೇ ಇರುತ್ತದೆ. ಆದರೆ ಜಿಮ್‌ಗಳು ದುಬಾರಿ. ಹೀಗಾಗಿ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ನನಗೂ ಆ ವಯಸ್ಸಿನಲ್ಲಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಬೇಕು ಎಂಬ ಆಸೆಯಿತ್ತು. ಆಗ ಇದ್ದುದು ತಿಂಗಳ ಫೀಸು ನೂರೋ ನೂರೈವತ್ತೋ ಇರಬಹುದು. ಆದರೂ ಆಗ ಅದು ನನಗೆ ಹೊರೆಯೇ. ಕೆಲವರ್ಷಗಳ ನಂತರ ನಾನೂ ಪಾಲಿಕೆಯ ಜಿಮ್‌ನಲ್ಲಿ ತರಬೇತಿ ಪಡೆದೆ. ಆಮೇಲೆ ಖಾಸಗಿ ಜಿಮ್‌ಗೆ ಸೇರುವ ಸಾಮರ್ಥ್ಯ ಬಂತು. ಬಾಡಿ ಬಿಲ್ಡ್ ಮಾಡಿದೆಯೆನ್ನಿ. ನನ್ನ ಇನ್ನೊಂದು ಅನುಭವವನ್ನು ಹೇಳಲೇಬೇಕು. ಸಾರ್ವಜನಿಕ, ಉಚಿತ ಜಿಮ್‌ಗಳಲ್ಲಿ ಮಾರ್ಗದರ್ಶಕರು (ಇನ್‌ಸ್ಟ್ರಕ್ಟರ್) ಇರುವುದಿಲ್ಲ. ನುರಿತರ ಮಾರ್ಗದರ್ಶನವಿಲ್ಲದೆ ಜಿಮ್ ಪರಿಕರಗಳನ್ನು ಬಳಸುವುದು ಕ್ಷೇಮವಲ್ಲ. ಯಾಕೆಂದರೆ, ಯಾವ ಸಂದರ್ಭದಲ್ಲಿ ಎಷ್ಟು ಶಕ್ತಿ ಹಾಕಬೇಕು, ಉಸಿರಾಟದ ಮೇಲಿನ ಹಿಡಿತ ಹೇಗಿರಬೇಕು, ಯಾವಾಗ ಉಸಿರು ಬಿಡಬೇಕು ಎಂಬ ಬಗ್ಗೆ ನಿಖರವಾದ ಮಾಹಿತಿ, ತರಬೇತಿ ಇಲ್ಲದೆ ತಮ್ಮ ಪಾಡಿಗೆ ಕೈಗೆ ಸಿಕ್ಕಿದ ಪರಿಕರಗಳನ್ನು ಬಳಸುವುದನ್ನು ನಾನು ಕಂಡಿದ್ದೇನೆ. ಇದು ತಪ್ಪು.
ಎಷ್ಟೋ ಮಂದಿಗೆ ಸ್ಲಿಪ್ ಡಿಸ್ಕ್ ಆಗುವುದು, ಬೆನ್ನುಮೂಳೆಗೆ, ಸ್ನಾಯುಗಳಿಗೆ ಸಣ್ಣಪುಟ್ಟ ಹಾನಿಯಾಗುವುದು, ಮೂಳೆಮುರಿತದಂತಹ ಗಂಭೀರ ಸಮಸ್ಯೆಗಳು ಎದುರಾಗುವುದೂ ಇದೆ. ಹೀಗಾಗಿ ಈ ಜಿಮ್‌ನಲ್ಲಿ ಹಾಗಾಗದಿರಲಿ. ಅನುಭವಿಗಳು ಮಾರ್ಗದರ್ಶನ/ತರಬೇತಿ ನೀಡಲಿ. ಇಂತಹ ಮಾದರಿ ಕೆಲಸಗಳು ನಮ್ಮ ನಗರದಲ್ಲಿ ಇನ್ನಷ್ಟು ನಡೆಯಲಿ.
-ಪ್ರೇಮ್, ಚಿತ್ರನಟ
ಲಾಲ್‌ಬಾಗ್‌ಗೆ ಮಾದರಿಯಾಗಲಿ
ಉತ್ತರಹಳ್ಳಿಯಲ್ಲಿ ಪಾರ್ಕ್ ಇದ್ದರೂ ಗಿಡಮರಗಳಿಲ್ಲ. ನಿರ್ವಹಣೆ ಮಾಡುವವರಿಲ್ಲ. ಹಾಗಾಗಿ ಒಂದೂವರೆ ವರ್ಷದಿಂದ ಇಲ್ಲಿಗೆ ಬರುತ್ತಿದ್ದೇವೆ. ಇಲ್ಲಿರುವ ಎಲ್ಲಾ ಪರಿಕರಗಳನ್ನೂ ಬಳಸುತ್ತೇನೆ. ಮಾಮೂಲಿ ವಾಕಿಂಗ್ ಜತೆ ಈ ಸರಳವಾದ ಜಿಮ್ ವರ್ಕ್‌ಔಟ್ ಮಾಡಿದರೆ ಆರೋಗ್ಯಕ್ಕೆ ಇನ್ನಷ್ಟು ಉಪಯುಕ್ತ ಎಂಬುದು ನನ್ನ ಅನುಭವ. ಇಂತಹ ಸೌಲಭ್ಯ ಲಾಲ್‌ಬಾಗ್‌ನಲ್ಲೂ ಇದ್ದರೆ ಉತ್ತಮ.
- ಆಂಜನಪ್ಪ, ಪದ್ಮನಾಭನಗರ
ಎಲ್ಲಾ ಉದ್ಯಾನಗಳಿಗೆ ಬೇಕು
ಉತ್ತರಹಳ್ಳಿಯ ಉದ್ಯಾನದಲ್ಲಿ ದಶಕಗಳ ಕಾಲ ಬೆಳಗಿನ ವಾಕಿಂಗ್‌ಗೆ ಹೋಗುತ್ತಿದ್ದೆವು. ನನಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ನಡಿಗೆ ಹೃದ್ರೋಗಿಗಳಿಗೂ ಒಳ್ಳೆಯದು. ಅದಕ್ಕಾಗಿ ನಾವು ಗೆಳೆಯರೊಂದಿಗೆ ಅಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಈಗ ಕಳೆದೆರಡು ವರ್ಷಗಳಿಂದ ಇಲ್ಲಿಗೆ ಬರಲಾರಂಭಿಸಿದೆವು. ಇಲ್ಲಿನ ವ್ಯವಸ್ಥೆ ಎಲ್ಲಾ ಉದ್ಯಾನಗಳಿಗೆ ಮಾದರಿಯಾಗಬೇಕು.
- ಮಂಜುನಾಥ್, ಪದ್ಮನಾಭನಗರ
ಜನಸಾಮಾನ್ಯರಿಗೆ ಸಿಂಪಲ್ ಜಿಮ್
1947ರಲ್ಲಿ ಹುಟ್ಟಿದ ನಾನು 1957ರಿಂದಲೇ ಈ ಪಾರ್ಕ್‌ಗೆ ಬರುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಈ ಪಾರ್ಕ್‌ಗೆ ಬಹಳಷ್ಟು ಜನ ಬರುತ್ತಿದ್ದಾರೆ. ನಾವೇ ಇಲ್ಲೊಂದು ವ್ಯಾಯಾಮ ಶಾಲೆ ನಡೆಸುತ್ತಿದ್ದೆವು. ಈಗ ನಡೆಯುತ್ತಿಲ್ಲ. ಆದರೆ ಈಗ ಇಲ್ಲಿ ತೆರೆಯಲಾಗಿರುವ ಜಿಮ್‌ನಿಂದಾಗಿ ಜನಸಾಮಾನ್ಯರಿಗೂ ಜಿಮ್ ಅಂದರೇನು ಅದರ ಬಳಕೆ ಹೇಗೆ ಎಂಬ ಪರಿಚಯವಾಗುತ್ತಿದೆ. ಬರಿಯ ವಾಕಿಂಗ್‌ಗಿಂತ ಈ ಸಿಂಪಲ್ ಜಿಮ್ ಹೆಚ್ಚು ಉಪಯುಕ್ತ. ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ಪಾರ್ಕ್‌ಗಳಲ್ಲಿ ಇಂತಹ ಓಪನ್ ಜಿಮ್ ತೆರೆಯುವುದು ಸೂಕ್ತ.
-ಕಬಡ್ಡಿ ಕೃಷ್ಣಪ್ಪ, ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ
ರಾಟೆ ವ್ಯಾಯಾಮ
ಕೃಷ್ಣರಾವ್ ಪಾರ್ಕ್‌ನಲ್ಲಿರುವ ಜಿಮ್ ಬಳಿಯಲ್ಲೇ ಎರಡೇ ಪರಿಕರಗಳಿರುವ ಪ್ರತ್ಯೇಕವಾದ ಒಂದು ಯೂನಿಟ್ ಇದೆ. ನಾಲ್ಕು ಕಂಬಗಳ ನಾಲ್ಕು ಮೂಲೆಗೆ ಒಂದೊಂದು ರಾಟೆ. ಅದಕ್ಕೆ ಗಟ್ಟಿಯಾಗಿ ಬಿಗಿದ ಹಗ್ಗದ ತುದಿಯಲ್ಲಿ ಎರಡು ಚೆಂಡುಗಳು. ಎರಡೂ ಬದಿಯ ರಾಟೆಯ ಮೂಲಕ ಕೆಳಗಿಳಿದಿರುವ ಹಗ್ಗದ ತುದಿಗಳನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಮೇಲೆ ಕೆಳಗೆ ಎಳೆಯುತ್ತಿದ್ದರೆ ಭುಜದ ಭಾಗ, ಕತ್ತು, ಬೆನ್ನುಹುರಿ ಮತ್ತು ಕೆಳಸೊಂಟಕ್ಕೆ ಅತ್ಯುತ್ತಮವಾದ ವ್ಯಾಯಾಮ ಸಿಗುತ್ತದೆ. ನಿಮ್ಹಾನ್ಸ್ ಸಹಯೋಗದಲ್ಲಿ ಸ್ಥಾಪಿಸಿದ ಇದು ದೇಶದಲ್ಲೇ ಈ ಸ್ವರೂಪದ ಏಕೈಕ ಯೂನಿಟ್ ಎಂಬುದು ವಿಶೇಷ. ಮಾತ್ರವಲ್ಲ, ಅತ್ಯಂತ ಸರಳವಾದ ಈ ಪರಿಕರ ಹಿರಿಯ ನಾಗರಿಕರ ಬಳಕೆಗೆ ಹೇಳಿಮಾಡಿಸಿದಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.