ADVERTISEMENT

ಕೆಟ್ಟದ್ದೂ ಇರಬಹುದು

ಪ್ರಜಾವಾಣಿ ವಿಶೇಷ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ಅಬ್ಬಾ... ಚಿತ್ರದ ಅನುಭವ ಖುಷಿಯಿಂದ ಕೂಡಿತ್ತು. ಆತಂಕ, ಭಯ, ಭೀತಿ, ಪ್ರೀತಿ ಎಲ್ಲದರ ಮಿಶ್ರ ಭಾವಗಳ ಸಂಗಮವಾಗಿತ್ತು.  ಯಾವತ್ತೂ ಯೋಚಿಸಿರಲಿಲ್ಲ ಮಾಟ ಮಂತ್ರಗಳ ಬಗ್ಗೆ... ಆದರೆ... ಈಗ...

ಹೀಗೆ ಹೇಳುತ್ತ ಒಂದರೆ ಗಳಿಗೆ ಸುಮ್ಮನಾದವರು ಇಶಾ ಗುಪ್ತಾ.

ಸೆ.7ರಂದು ಬಿಡುಗಡೆಯಾಗಲಿರುವ `ರಾಝ್ 3~ ಚಿತ್ರದಲ್ಲಿ ಯುವನಟಿ ಸಂಜನಾಳ ಪಾತ್ರ ನಿರ್ವಹಿಸುತ್ತಿದ್ದಾರೆ ಇಶಾ ಗುಪ್ತಾ. ಈ ಬಗ್ಗೆ `ಮೆಟ್ರೊ~ದೊಂದಿಗೆ ಮಾತನಾಡಿದ ಇಶಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

`ರಾಝ್ 3~ ಚಿತ್ರೀಕರಣದ ಅನುಭವ ಹೇಳಿ...

ಅದೊಂದು ಪಾಠಶಾಲೆ ಇದ್ದಂತೆ ಇತ್ತು. ನಿರ್ದೇಶಕ ವಿಕ್ರಮ್ ಭಟ್ ಪ್ರತಿದಿನವೂ ಭಾವಾಭಿವ್ಯಕ್ತಿಯ ಬಗ್ಗೆ ಪಾಠ ಹೇಳೋರು. ಸೆಟ್‌ನಲ್ಲಿ ಸದಾ ಇರುತ್ತಿದ್ದ ಮಹೇಶ್ ಭಟ್ ಆಗಾಗ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸಲಹೆಗಳನ್ನು ನೀಡುತ್ತಿದ್ದರು. ಈ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಕಲಿತೆ.

ಇದು ನಿಮಗೆ ಎರಡನೆ ಚಿತ್ರ. ಏನಾದರೂ ಹಿಂಜರಿಕೆ ಇತ್ತೆ?

ಎರಡನೆ ಚಿತ್ರವಾದ್ದರಿಂದ ನಿರೀಕ್ಷೆಗಳು ಸಾಕಷ್ಟಿದ್ದವು. ಪಾತ್ರವು ಪ್ರಮುಖವಾಗಿದ್ದು, ನಾನು ಚಿತ್ರೋದ್ಯಮದಲ್ಲಿ ನೆಲೆ ನಿಲ್ಲಬಲ್ಲೆನೆ ಎಂಬಷ್ಟು ಸಾಮರ್ಥ್ಯದ ಪಾತ್ರ ಇದು. ಜನ್ನತ್‌ನಲ್ಲಿ ನನಗೆ ಅಂಥ ಪಾತ್ರ ಸಿಕ್ಕಿರಲಿಲ್ಲ. ನನ್ನೆಲ್ಲ ಆತಂಕ, ಹಿಂಜರಿಕೆಯನ್ನು ಮೆಟ್ಟಿನಿಂತು ನಟಿಸಿದ್ದೇನೆ.

ಸವಾಲಿನ ದೃಶ್ಯ ಯಾವುದಾಗಿತ್ತು?

ಇಮ್ರಾನ್ ಹಶ್ಮಿ ಜೊತೆಗೆ ನಟಿಸುವುದು ಸುಲಭವಾಗಿತ್ತು. ಆದರೆ ಬಿಪಾಶಾ ಜೊತೆಗೆ ಸ್ಕ್ರೀನ್ ಹಂಚಿಕೊಳ್ಳುವುದು ಖುಷಿಯೊಂದಿಗೆ ಆತಂಕವನ್ನೂ ಹುಟ್ಟಿಹಾಕಿತ್ತು. ಬಿಪಾಶಾ ಪ್ರತಿಭಾವಂತೆ, ಅನುಭವಿ ಕಲಾವಿದೆ. ಅವರ ಮುಂದೆ ನಾನು `ಫೀಕಾ~ (ಮಂಕು) ಆಗಬಹುದು ಎನಿಸಿತ್ತು. ಆದರೆ ಬಿಪಾಶಾ ಅವರ ಸ್ನೇಹಮಯ ಸ್ವಭಾವದಿಂದಾಗಿ ಯಾವುದೂ ಸವಾಲಿನ ದೃಶ್ಯ ಎನಿಸಲಿಲ್ಲ. ಇದರರ್ಥ ನಾನೆಲ್ಲವನ್ನೂ ಸುಲಭವಾಗಿ ನಿಭಾಯಿಸಿದೆ ಅಂತೇನೂ ಅಲ್ಲ. ಪ್ರತಿ ದೃಶ್ಯದ ಹಿಂದೆಯೂ ವಿಕ್ರಮ್ ಭಟ್ ಅವರ ಸುದೀರ್ಘ ವಿವರಣೆ ಇರುತ್ತಿತ್ತು.

ಮಾಟ- ಮಂತ್ರಗಳನ್ನು ನೀವು ನಂಬುತ್ತೀರಾ?

ನಿಜ ಹೇಳಬೇಕೆಂದರೆ ಯಾವತ್ತಿಗೂ ನಾನಿದರ ಬಗ್ಗೆ ಯೋಚಿಸಿರಲಿಲ್ಲ. ಆದರೀಗ ಯೋಚನಾ ಧಾಟಿ ಬದಲಾಗಿದೆ. ಜಗತ್ತಿನಲ್ಲಿ ಒಳಿತು ಇದೆ ಎಂದಮೇಲೆ ಕೆಡಕು ಸಹ ಇದ್ದೇ ಇರುತ್ತದೆ. ದೇವೋಪಾಸನೆಯಿಂದ ಸಾಧಕರಾದವರಿಗೆ ವಿಶೇಷ ಶಕ್ತಿ ದೊರೆಯುತ್ತದಂತೆ. ವಿಶೇಷ ತೇಜಸ್ಸು ದೊರೆಯುತ್ತದಂತೆ. ಅದೇ ರೀತಿ ಕ್ಷುದ್ರ ಶಕ್ತಿಗಳ ಉಪಾಸನೆಯೊಂದಿಗೆ ದುಷ್ಟ ಶಕ್ತಿಗಳ ಮೇಲೂ ಸಿದ್ಧಿ ಸಾಧಿಸಬಹುದು ಎನ್ನಿಸತೊಡಗಿದೆ. ಇದು ನಂಬಿಕೆಯೋ, ಮೂಢನಂಬಿಕೆಯೋ ಎಂಬ ಚರ್ಚೆ ಮಾತ್ರ ಬೇಡ.

`ರಾಝ್ 3~ಯ ವಿಶೇಷವೇನು?

ಇದೊಂದು ಮಾನವನ ದೌರ್ಬಲ್ಯಗಳನ್ನು ಹಿಡಿದಿಡುವ ಚಿತ್ರವಾಗಿದೆ. ಜನಪ್ರಿಯತೆ, ಪ್ರೀತಿ ಎಲ್ಲವೂ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಾಗಲೇ ಮನಸು ಮುರಿದರೆ ಏನಾಗಬಹುದು ಎಂಬುದರ ಸುತ್ತ ಚಿತ್ರವನ್ನು ಹೆಣೆಯಲಾಗಿದೆ. ಪ್ರೀತಿಗಿಂತ ವಾಂಛೆ ಮೇಲುಗೈ ಸಾಧಿಸಿದಾಗ ಉಂಟಾಗುವ ಅಭದ್ರ ಭಾವ ಆಕ್ರೋಶಕ್ಕೆ ತಿರುಗುವ ಬಗೆಯನ್ನು ತೋರಿಸಲಾಗಿದೆ. ಈ ಆಕ್ರೋಶ ವಿವೇಚನೆಯನ್ನು ಮೀರಿದ್ದು. ಆ ಎಲ್ಲ ಭಾವನೆಗಳನ್ನೂ ಈ ಚಿತ್ರದಲ್ಲಿ ಹಿಡಿದಿಡಲಾಗಿದೆ.

ಮುಂದಿನ ಪ್ರಾಜೆಕ್ಟ್ ?

`ಚಕ್ರವ್ಯೆಹ್~ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ಸಹ ಭಿನ್ನವಾದ ಪಾತ್ರ. ಆದರೆ ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಇನ್ನೊಂದು ವಿಶೇಷ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಆ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಲಾರೆ. ಆದರೆ ಮಾಟ- ಮಂತ್ರ, ಪ್ರೀತಿ- ಪ್ರಣಯಗಳ ಚಿತ್ರ `ರಾಝ್ 3~ ನೋಡಿ ಎಂದು ಕೇಳಿಕೊಳ್ಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.