
ನಗರದ ಜೆ.ಸಿ.ರಸ್ತೆಯ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಸುಧಾಮೂರ್ತಿ ಮಾತನಾಡಿ ಮಹಿಳೆಯರ ವರ್ಚಸ್ಸು ಮತ್ತು ಆಂತರಿಕ ಬಲ ಹೆಚ್ಚಾಗಬೇಕಿದೆ. ಸಮಾಜ ಹಾಗೂ ಕುಟುಂಬದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ವಲಯ ಡಿಸಿಪಿ ಸೋನಿಯಾ ನಾರಂಗ್ ಮಾತನಾಡಿ ಇಂದು ಪರಿಚಿತರಿಂದಲೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ದೌರ್ಜನ್ಯ ಕೊನೆಯಾಗಬೇಕು. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಆಸ್ಟಿರೋಪೋಸಿಸ್ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮೈತ್ರಿ ಶಂಕರ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕು. ಆರ್ಥಿಕವಾಗಿ ದೈಹಿಕವಾಗಿಯೂ ಮಹಿಳೆಯರು ಸಬಲರಾಗಬೇಕಿದೆ ಎಂದು ಹೇಳಿದರು.
ಕಾರ್ಯನಿರ್ವಾಹಕ ನಿರ್ದೇಶಕ ಆಚಾರ್ಯ ಎಸ್. ಭಾರ್ಗವ್ ಪ್ರಸ್ತಾವಿಕ ಮಾತನಾಡಿದರು. ಜನರಲ್ ಮ್ಯಾನೇಜರ್ ಕೆ.ಎಸ್.ಪ್ರಭಾಕರ್ ರಾವ್ ಸ್ವಾಗತಿಸಿದರು. ಎಸ್.ಎಸ್.ಭಟ್ ವಂದಿಸಿದರು.ಇದೇ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಸನ್ಮಾನಿಸಲಾಯಿತು.
ಸ್ವಸಹಾಯ ಗುಂಪುಗಳಿಗೆ ಒಂದು ಕೋಟಿ ರೂಪಾಯಿ ಮೊತ್ತದ ಸಾಲ ವಿತರಣೆ ಮಾಡಲಾಯಿತು. ಗ್ರಾಮೀಣ ಮಹಿಳೆಯ ಸಬಲೀಕರಣ- ಹಸಿವು ಮತ್ತು ಬಡತನದ ನಿರ್ಮೂಲನೆ~ ಎಂಬ ಉದ್ದೇಶಕ್ಕಾಗಿ ನೆರೆದವರೆಲ್ಲ ಕೈಗೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.