ADVERTISEMENT

ಕೇಶವ ಕಲ್ಪದಲ್ಲಿ ನಾಟಕ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಹಲವು ದಿಗ್ಗಜರನ್ನು ನೀಡಿದೆ ಮಲ್ಲೇಶ್ವರಂ ಬಡಾವಣೆ. ಇಲ್ಲಿ ಸಂಗೀತ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಲವು ಸಭಾಂಗಣಗಳಿವೆ. ಇದರೊಂದಿಗೆ ಮತ್ತೊಂದು ರಂಗಮಂದಿರ ತಲೆ ಎತ್ತಿದೆ. ಇಲ್ಲಿ, ನಾಟಕ, ನೃತ್ಯ ಪ್ರದರ್ಶನಕ್ಕೆ ಅವಕಾಶ ಇರುವಂತೆ ಸಂಗೀತ, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬಹುದಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಎಚ್. ಆರ್. ಕೇಶವಮೂರ್ತಿ ಅವರ ಪುತ್ರ ಬಿ.ಕೆ. ರವಿಶಂಕರ್ ರಂಗಮಂದಿರದ ರೂವಾರಿ.

ಲಿಂಕ್ ರಸ್ತೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ‘ಕೇಶವ ಕಲ್ಪ’ ಬೆಳಕು, ಧ್ವನಿ ಮುಂತಾದ ರಂಗ ಸೌಕರ್ಯ ಒಳಗೊಂಡಿರುವ ಸುಸಜ್ಜಿತ ಸಭಾಂಗಣ.

ಇಲ್ಲಿ ಹಿರಿಯ ನಟ ಮೈಸೂರು ರಮಾನಂದರ ಗೆಜ್ಜೆಹೆಜ್ಜೆ ರಂಗತಂಡ ಮೂರು ನಾಟಕಗಳನ್ನಾಡಿ ರಂಗಾಸಕ್ತರನ್ನು ರಂಜಿಸಲಿದೆ.
ಮೈಸೂರು ರಮಾನಂದ ರಚಿಸಿರುವ ‘ಅಪ್ಪ-ಮಗ್,  ಹ್ಯಾಗ್ ಸತ್ತ’ ಸಂಪೂರ್ಣ ನಗೆ ನಾಟಕ. ತನ್ನ ಮಗ ಪೆದ್ದ, ತಾನು ಜಾಣ ಎಂದು ಬೀಗುವ ಅಪ್ಪನನ್ನು ಮಗ ಪ್ರಶ್ನೆಗಳ ಪಟಾಕಿ ಹಾಕಿ ‘ಡಂ’ ಎನಿಸುವಾಗ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಮಗನ ಕೀಟಲೆಯಿಂದ ರೋಸಿ ಹೋಗುವ ಅಪ್ಪ ಅದರಿಂದ ಮುಕ್ತನಾಗಲು ತನ್ನೊಬ್ಬ ಗೆಳೆಯನನ್ನು ಕೀಟಲೆ ಮಾಡಲು ಹೊರಡುತ್ತಾನೆ. ಅಲ್ಲೇನಾಯಿತು? ರಂಗದ ಮೇಲೆಯೇ ಈ ನಾಟಕ ನೋಡಿ ಸವಿಯಬೇಕು.

ADVERTISEMENT

ಎ.ವಿ. ನಾಗರಾಜ್ ರಚಿಸಿರುವ ‘ಕಿವಿಯಲ್ಲಿ ಹೂವಿಟ್ಟ’ ಮುಂಬೈನಲ್ಲಿ ನಡೆದ ಸತ್ಯಸಂಗತಿ ಆಧರಿಸಿ ಬರೆದ ನಾಟಕ. ಮುಗ್ಧರನ್ನು ಖದೀಮರು ವಂಚಿಸುವ ಪರಿಯನ್ನು ಚಿತ್ರಿಸುವ ಈ ಗಂಭೀರ ನಾಟಕದಲ್ಲಿ ಹಾಸ್ಯವನ್ನು ಹದವಾಗಿ ಬೆರೆಸಲಾಗಿದೆ. ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ತರುವ ನಾಟಕ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ.

ನಾಟಕ
ಗೆಜ್ಜೆ ಹೆಜ್ಜೆ ರಂಗತಂಡ: ಮೈಸೂರು ರಮಾನಂದ ತಂಡದಿಂದ ಮಂಗಳವಾರ ’ಅಪ್ಪ-ಮಗ್ ಹ್ಯಾಗ್ ಸತ್ತ’. ಬುಧವಾರ ‘ಕಿವಿಯಲ್ಲಿ ಹೂವಿಟ್ಟ’ ನಾಟಕ. ಉದ್ಘಾಟನೆ: ಆರ್.ಎಸ್.ಸತ್ಯನಾರಾಯಣ. ಅತಿಥಿ: ಎಚ್.ವಿ. ವೆಂಕಟ ಸುಬ್ಬಯ್ಯ. ಅಧ್ಯಕ್ಷತೆ: ವಿ.ರಾಮಮೂರ್ತಿ.
ಸ್ಥಳ: ಕೇಶವ ಕಲ್ಪ, ಲಿಂಕ್ ರಸ್ತೆ. ಸಂಜೆ 6.30.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.