ADVERTISEMENT

ಕೈ ಹಿಡಿದ ಕಾಫಿ, ಟೀ ಮಾರಾಟ

ಅಭಿಲಾಷ ಬಿ.ಸಿ.
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಕೆ.ಎನ್‌.ಗಣೇಶ್‌
ಕೆ.ಎನ್‌.ಗಣೇಶ್‌   

ಉದ್ಯೋಗ ಅರಸಿ ಮಹಾನಗರಿಗೆ ಬಂದು ಕೋರಮಂಗಲದ ಹೋಟೆಲ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕೆಲಸಮಾಡುತ್ತಿದ್ದ ಕೆಲವೇ ದಿನಗಳಲ್ಲಿ ಆ ಹೋಟೆಲ್‌ ಮಾಲೀಕ ಕೆಲಸ ಬಿಟ್ಟು ಹೋಗುವಂತೆ ತಿಳಿಸಿದಾಗಲೇ ಆ ಹೋಟೆಲ್‌ನ ಎದುರಿನಲ್ಲಿಯೇ ಟೀ ಅಂಗಡಿಯನ್ನು ಆರಂಭಿಸಬೇಕೆಂದು ನಿಶ್ಚಯಿಸಿದೆ. ಅದರಂತೆ ಕೋರಮಂಗಲದಲ್ಲಿ ಆರಂಭಿಸಿರುವ ‘ಗಣೇಶ ಕಾಫಿ, ಟೀ ಸರ್ವೀಸ್‌’ ಸೆಂಟರ್‌ ಇಂದು ನನ್ನ ಜೀವನ ಗುಣಮಟ್ಟ ಸುಧಾರಿಸುವುದರೊಂದಿಗೆ ಮೂರು ಜನರಿಗೆ ಉದ್ಯೋಗ ನೀಡಿದೆ.

ಹೆಸರು ಕೆ.ಎನ್‌. ಗಣೇಶ್‌. ಊರು ಉಡುಪಿ. ಓದಿದ್ದು 6ನೇ ತರಗತಿ. ಬೆಂಗಳೂರಿಗೆ ಬಂದು 25 ವರ್ಷ ಕಳೆಯಿತು. 12 ವರ್ಷಗಳಿಂದ ಕಾಫಿ, ಟೀ ಮಾಡಿ ವಿವಿಧ ಕಂಪನಿಗಳಿಗೆ ಪೂರೈಸುವ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಟೀ ನೀಡುತ್ತಿದ್ದೆ. ನಂತರ ಸೈಕಲ್‌ನಲ್ಲಿ ಸೈಕಲ್‌ ಸವಾರಿ ಆರಂಭಿಸಿದೆ. ಈಗ ಟಿವಿಎಸ್‌ ಬೈಕ್‌ ನನ್ನ ಸೇವೆಗೆ ಜೊತೆಯಾಗಿದೆ.

ನಾನು ಕೆಲಸ ಮಾಡುತ್ತಿದ್ದ ಹೋಟೆಲ್‌ ಮಾಲೀಕ ಬಿಟ್ಟು ಹೋಗುವಂತೆ ಅವಮಾನಿಸದಿದ್ದರೆ, ನನ್ನ ಬದುಕು ಆ ಹೋಟೆಲ್‌ ಸೇವೆಗೆ ಸೀಮಿತವಾಗುತ್ತಿತ್ತು. ಅಂದಿನ ಅವಮಾನ ನನ್ನ ಬದುಕಿಗೊಂದು ಹೊಸ ದಿಕ್ಕನ್ನು ನೀಡಿತು. 2006 ರಲ್ಲಿ ಸ್ವಂತ ಉದ್ಯೋಗ ಆರಂಭಿಸಿದಾಗ ಸ್ನೇಹಿತರು, ಆಪ್ತರು ಸಾಕಷ್ಟು ಸಹಾಯ ಮಾಡಿದರು. ಕೆಲವರು ಸ್ಟೌ ಕೊಡಿಸಿದರೆ, ಮತ್ತೆ ಕೆಲವರು ಪ್ಲಾಸ್ಕ್‌, ಅಂಗಡಿಗೆ ಬಾಡಿಗೆ ನೀಡಿದರು.

ADVERTISEMENT

ಆರಂಭದ ದಿನಗಳಲ್ಲಿ ನಿತ್ಯ 22 ಕಂಪನಿಗಳಿಗೆ ಟೀ, ಕಾಫಿ ಪೂರೈಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಂಪನಿಗಳು ಕ್ಯಾಂಪಸ್‌ನಲ್ಲಿ ಕ್ಯಾಂಟೀನ್‌ಗಳು ಆರಂಭವಾಗಿರುವುದರಿಂದ ನಮ್ಮ ಆದಾಯದ ಮೇಲೆ ಪರಿಣಾಮ ಬೀರಿದೆ. ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನ ಉಪನ್ಯಾಸಕರು, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ನಾವೇ ಟೀ, ಕಾಫಿ ನೀಡುತ್ತಿದ್ದೆವು. ಈಗ ಅಲ್ಲಿಯೂ ಕ್ಯಾಂಟೀನ್‌ ಆರಂಭವಾಗಿದೆ. ಸದ್ಯ ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಮಾತ್ರ ಟೀ, ಕಾಫಿ ಪೂರೈಸುತ್ತಿದ್ದೇವೆ. ಕೂಡ್ಲುಗೇಟ್‌, ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿರುವ ಕೆಲ ಕಂಪನಿಗಳು ಈಗಲೂ ನಮ್ಮನ್ನು ನೆಚ್ಚಿಕೊಂಡಿವೆ. ಮೊದಲು ದಿನಕ್ಕೆ ₹ 12,000 ವ್ಯಾಪಾರವಾಗುತ್ತಿತ್ತು. ಇಂದು ₹ 6,000 ಕ್ಕೆ ಇಳಿದಿದೆ. ಆದರೂ ನಷ್ಟವೇನು ಆಗುತ್ತಿಲ್ಲ. ಇಂದಿಗೂ ಲಾಭದಾಯಕ ಉದ್ಯೋಗವಾಗಿಯೇ ಇದೆ.

15 ವರ್ಷದ ನನ್ನ ವೃತ್ತಿ ಬದುಕಿನಲ್ಲಿ ನನ್ನ ಜೀವನದಲ್ಲಿ ಆರ್ಥಿಕವಾಗಿ ಸಾಕಷ್ಟು ಸುಧಾರಣೆಯಾಗಿದೆ. ಜೊತೆಗೆ ನಗರವೂ ಸಾಕಷ್ಟು ಬೆಳವಣಿಗೆಯಾಗಿದೆ. 10 ವರ್ಷದ ಕೆಳಗೆ ನಗರದ ಯಾವುದೇ ಭಾಗಕ್ಕಾದರೂ ಸುಲಭವಾಗಿ ತೆರಳಿ ಟೀ ಕಾಫಿ ಪೂರೈಸುತ್ತಿದ್ದೆ. ಆದರೆ ಇಂದು ಹತ್ತಿರದ ಸ್ಥಳಗಳಿಗೆ ತೆರಳಲೂ ಸಾಕಷ್ಟು ಸಮಯ ಹಿಡಿಯುತ್ತಿದೆ. ಸಂಚಾರ ದಟ್ಟಣೆ ಮಿತಿಮೀರಿದೆ.

ಬೆಳಿಗ್ಗೆ 5.30 ಗಂಟೆಗೆ ಟೀ, ಕಾಫಿ ಮಾಡುತ್ತೇನೆ. 6.30ಕ್ಕೆ ಕೂಡ್ಲು ಗೇಟ್‌ಗೆ ತೆರಳಿ ವಿವಿಧ ಕಂಪನಿಗಳಿಗೆ ಮೊದಲನೇ ಸುತ್ತಿನ ಟೀ, ಕಾಫಿ, ಪೂರೈಸಿ 8 ಗಂಟೆಗೆ ಮನೆಗೆ ಮರಳುತ್ತೇನೆ. ಮಗ 1ನೇ ತರಗತಿ ಓದುತ್ತಿದ್ದಾನೆ, ಮಗಳು ಪ್ರಿನರ್ಸರಿಗೆ ಅವರಿಬ್ಬರನ್ನು ಶಾಲೆಗೆ ಬಿಟ್ಟು ಬಂದು 9.30ಕ್ಕೆ ಮತ್ತೆ ಟೀ, ಕಾಫಿ ಮಾಡಿ 10.30ಕ್ಕೆ ಅದೇ ಕಂಪನಿಗಳಿಗೆ ಮತ್ತೊಂದು ಸುತ್ತಿನ ಟೀ, ಕಾಫಿ ನೀಡುತ್ತೇವೆ. ಮಧ್ಯಾಹ್ನ ಸ್ವಲ್ಪ ಸಮಯ ಬಿಡುವಿರುತ್ತದೆ. ಆಗ ಸಣ್ಣ ಪುಟ್ಟ ಅಂಗಡಿ, ಉದ್ಯಮಿಗಳಿಗೆ ಟೀ, ಕಾಫಿ ನೀಡುತ್ತೇನೆ. ಸಂಜೆ ಮತ್ತು ರಾತ್ರಿ ಮತ್ತೆ ಅದೇ ಕಂಪನಿಗಳ ರಾತ್ರಿ ಪಾಳಿಯ ಉದ್ಯೋಗಿಗಳಿಗೆ ಮತ್ತೆ ಟಿ, ಕಾಫಿ ನೀಡಿ ರಾತ್ರಿ 10.30ಕ್ಕೆ ಮನೆಗೆ ಬರುತ್ತೇನೆ. ನಿತ್ಯ ಹೀಗಿಯೇ ಬೆಳಿಗ್ಗೆ 5.30 ರಿಂದ ರಾತ್ರಿ 10.30 ರವರೆಗೆ ದುಡಿಮೆ ಸಾಗುತ್ತದೆ.

ಎಲ್ಲೆಡೆ ಕಾಫಿ ಮಷಿನ್‌ಗಳು, ಕ್ಯಾಂಟೀನ್‌ಗಳ ನಡುವೆಯು ಅನೇಕ ಕಂಪನಿಗಳು ನಾವು ಉದ್ಯೋಗ ಆರಂಭಿಸಿದ ದಿನಗಳಿಂದ ಇಂದಿನವರೆಗೂ ನಮ್ಮ ಕಾಯಂ ಗ್ರಾಹಕರಾಗಿದ್ದಾರೆ. ಅವರ ವಿಶ್ವಾಸಾರ್ಹತೆ ತಕ್ಕಂತೆ ಗುಣಮಟ್ಟದ ಕಾಫಿ, ಟೀ ಪೂರೈಸುವುದು ನನ್ನ ಜವಾಬ್ದಾರಿ ಎಂದೇ ತಿಳಿದಿದ್ದೇನೆ. ಮುಂದಿನ ದಿನಗಳಲ್ಲಿ ಕಾಫಿ, ತಿಂಡಿ, ಕಾಂಡಿಮೆಂಟ್ಸ್‌, ಜ್ಯೂಸ್‌ಗಳನ್ನು ಒಳಗೊಂಡ ಉದ್ಯಮ ಆರಂಭಿಸಬೇಕು ಎನ್ನುವ ಗುರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.