ADVERTISEMENT

ಕೊಳಲಿನಲ್ಲಿ ‘ವರ್ಣ’ ವೈಭವ..!

ನಾದದ ಬೆನ್ನೇರಿ...

ಉಮಾ ಅನಂತ್
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST
ವಿದ್ವಾನ್‌ ಎಸ್‌.ಎ.ಶಶಿಧರ ಅವರಿಂದ ಮಕ್ಕಳಿಗೆ ಕೊಳಲು ಪಾಠ
ವಿದ್ವಾನ್‌ ಎಸ್‌.ಎ.ಶಶಿಧರ ಅವರಿಂದ ಮಕ್ಕಳಿಗೆ ಕೊಳಲು ಪಾಠ   

ಸುಷಿರ ವಾದ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಾದ್ಯ ಕೊಳಲು. ಅಲೆಅಲೆಯಾಗಿ ತೇಲಿ ಬರುವ ಕೊಳಲ ನಾದ ಕೇಳಲು ಬಹಳ ಇಂಪು. ಹೀಗಾಗಿ ಈ ಬಿದಿರು ವಾದ್ಯಕ್ಕೆ ಬಹಳ ಮಹತ್ವ. ಕೊಳಲು ನುಡಿಸುವ ಕಲಾವಿದರಿಗೂ ಎಲ್ಲಿಲ್ಲದ ಬೇಡಿಕೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕೊಳಲು, ಹಿಂದೂಸ್ತಾನಿ ಸಂಗೀತದಲ್ಲಿ ಬಾನ್ಸುರಿ ಎಂದು ಕರೆಯುವ ಈ ಸುಷಿರ ವಾದ್ಯ ಉಸಿರಾಟದ ಸಮಸ್ಯೆ ಇರುವವರಿಗೆ ರಾಮಬಾಣವೂ ಹೌದು.

ಅದು ಮೇಳಕರ್ತ ರಾಗವಾದ ಕಲ್ಯಾಣಿಯ ಸುಪ್ರಸಿದ್ಧ ವರ್ಣ. ಬಹುತೇಕ ಸಂಗೀತ ಕಛೇರಿಗಳಲ್ಲಿ (ಗಾಯನ/ವಾದನ) ಕಲಾವಿದರು ಈ ವರ್ಣವನ್ನು ಆಯ್ದುಕೊಂಡು ಕಾರ್ಯಕ್ರಮಕ್ಕೆ ನಾಂದಿ ಹಾಡುತ್ತಾರೆ. ಅಂದು ಅಲ್ಲಿ ವಿದ್ವಾನ್‌ ಶಶಿಧರ್‌ ಅವರು ಕಲ್ಯಾಣಿ ರಾಗದ ‘ವನಜಾಕ್ಷಿ...’ ವರ್ಣವನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಕೊಳಲಿನಲ್ಲಿ ವರ್ಣದ ಚಿಟ್ಟೆಸ್ವರ ಕೇಳಿದಾಗ ಕಣ್ಣು ತುಂಬಿ ಬಂತು. ಮಕ್ಕಳು ಬಹಳ ಶ್ರದ್ಧೆಯಿಂದ ಗುರುಗಳನ್ನು ಅನುಕರಣೆ ಮಾಡುತ್ತಿದ್ದರು. ಚಿಟ್ಟೆಸ್ವರ ಮುಗಿಸಿ ‘ಎತ್ತುಗಡೆ ಸ್ವರ’ಗಳನ್ನು ಹೇಳಿಕೊಟ್ಟರು. ‘ಸಂಪೂರ್ಣ ರಾಗ’ ಕೊಳಲಿನಲ್ಲಿ ಮಾರ್ದನಿಸಿದಾಗ ಪ್ರಪಂಚವನ್ನೇ ಮರೆತ ಅನುಭವ.

ಇದು ನಡೆದದ್ದು ಶ್ರೀ ಅನಂತಕೃಷ್ಣ ಸಂಗೀತ ವಿದ್ಯಾಲಯದಲ್ಲಿ. ನಗರದಲ್ಲಿ ಕೊಳಲು ಕಲಿಸುವ ಕೆಲವೇ ಕೆಲವು ಉತ್ತಮ ಸಂಗೀತ ಶಾಲೆಗಳಲ್ಲಿ ಇದೂ ಒಂದು. ಬನಶಂಕರಿ ಮೂರನೇ ಹಂತದಲ್ಲಿರುವ ಈ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಕರ್ನಾಟಕ ಸಂಗೀತ, ಕೊಳಲು, ವೀಣೆ ಮತ್ತು ಪಿಟೀಲು ಹೇಳಿಕೊಡಲಾಗುತ್ತಿದೆ.

60 ಮಕ್ಕಳು ಇಲ್ಲಿ ವಿವಿಧ ಸಂಗೀತ ಪ್ರಕಾರಗಳನ್ನು ಕಲಿಯುತ್ತಿದ್ದಾರೆ. ವಾರದಲ್ಲಿ ಎರಡು ತರಗತಿಗಳಿದ್ದು, ಗುಂಪಿನಲ್ಲಿ ಪಾಠ ಹೇಳಿಕೊಡಲಾಗುತ್ತದೆ. ಆಸಕ್ತ ಮಕ್ಕಳು, ಸಾಫ್ಟ್‌ವೇರ್‌ ಎಂಜಿನಿಯರ್‌, ವೈದ್ಯರು ಮೊದಲಾದ ವೃತ್ತಿನಿರತರಿಗೆ ಪ್ರತ್ಯೇಕ ಪಾಠವೂ ಇಲ್ಲಿ ಸಿಗುತ್ತದೆ. ಈ ಸಂಗೀತ ಶಾಲೆಯಲ್ಲಿ ತಯಾರಾದ 400ಕ್ಕೂ ಹೆಚ್ಚು ಶಿಷ್ಯಂದಿರು ಇಂದು ವಿವಿಧ ವೇದಿಕೆಗಳಲ್ಲಿ ಸಂಗೀತ ಕಛೇರಿ ನೀಡುತ್ತಿದ್ದಾರೆ. ಕೊಳಲು ವಿದ್ವಾಂಸ ವಿದ್ವಾನ್‌ ಎಸ್‌.ಎ.ಶಶಿಧರ ಈ ಸಂಗೀತ ಶಾಲೆಯ ಪ್ರಾಂಶುಪಾಲರು. ಇವರು ಕೊಳಲು ಮತ್ತು ಪಿಟೀಲು ಹೇಳಿಕೊಟ್ಟರೆ, ವಿದುಷಿ ನಾಗರತ್ನ ವೀಣೆ ಮತ್ತು ಗಾಯನ ಕಲಿಸುತ್ತಾರೆ.

‘ನಮ್ಮ ಶಾಲೆಯಲ್ಲಿ ಕಲಿತ ಹಲವು ಮಕ್ಕಳು ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದಾರೆ. ಕೆಲವರಿಗೆ ಸಂಗೀತ ನೃತ್ಯ ಅಕಾಡೆಮಿ ನೀಡುವ ವಿದ್ಯಾರ್ಥಿವೇತನವೂ ಲಭಿಸಿದೆ. ಪ್ರತಿ ವರ್ಷ ಪುರಂದರದಾಸರು ಮತ್ತು ತ್ಯಾಗರಾಜರ ಆರಾಧನೆಯನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ವೇದಿಕೆ ಒದಗಿಸಿಕೊಡುತ್ತೇವೆ. ಪ್ರತಿ ತಿಂಗಳೂ ಉದಯೋನ್ಮುಖ ಮತ್ತು ನುರಿತ ಕಲಾವಿದರ ಸಂಗೀತ ಕಛೇರಿ ಏರ್ಪಡಿಸಿ ಹೊಸತಾಗಿ ಕಲಿಯುವ ಮಕ್ಕಳಿಗೆ ಸಂಗೀತ ಕಛೇರಿಗಳ ಪೂರ್ಣ ಪರಿಚಯ ಮಾಡಿಕೊಡುತ್ತೇವೆ’ ಎಂದು ಹೇಳುತ್ತಾರೆ ವಿದ್ವಾನ್‌ ಶಶಿಧರ್‌.

‘ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೊಳಲು ಕಛೇರಿ ಏರ್ಪಡಿಸಲಾಗುತ್ತದೆ. ಬನಶಂಕರಿ ಫೈನ್‌ ಆರ್ಟ್ಸ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಆಯೋಜಿಸಲಾಗುತ್ತಿದ್ದು ಕೊಳಲಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ವಿವರ ನೀಡುತ್ತಾರೆ ಅವರು. 

ಕೊಳಲಿನತ್ತ ಸೆಳೆತ
ವಿದ್ವಾನ್‌ ಶಶಿಧರ್‌ ಅವರದು ಸಂಗೀತದ ಮನೆತನ. ಮೂಲತಃ ಬೆಂಗಳೂರಿನವರಾದ ಇವರು ತಮ್ಮ 13ನೇ ವಯಸ್ಸಿಗೆ ತಾಯಿಯ ಬಳಿ ಸಂಗೀತ ಕಲಿಯಲಾರಂಭಿಸಿದರು. ಬಳಿಕ ವಿದ್ವಾನ್‌ ಎಂ.ಆರ್‌.ದೊರೆಸ್ವಾಮಿ ಅವರ ಬಳಿ ಕೊಳಲು ಕಲಿತರು. ಡಾ.ರಮಣಿ ಅವರ ಬಳಿ ಹೆಚ್ಚಿನ ಅಭ್ಯಾಸ ನಡೆಸಿದರು. 25 ವರ್ಷಗಳಿಂದ ಕೊಳಲು ನುಡಿಸುತ್ತಾ ಬಂದಿರುವ ಶಶಿಧರ್‌ ಆಕಾಶವಾಣಿ, ದೂರದರ್ಶನಗಳಲ್ಲೂ ಅನೇಕ ಕಛೇರಿ ನೀಡಿದ್ದಾರೆ. ಮುಂಬೈ, ಕೋಲ್ಕತ್ತ, ಚೆನ್ನೈ ಮಾತ್ರವಲ್ಲದೆ ರಾಜ್ಯದ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಕೊಳಲು ನುಡಿಸಿದ ಹೆಗ್ಗಳಿಕೆ ಇವರ ಬೆನ್ನಿಗಿದೆ.

ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಶಶಿಧರ್‌ ಅವರು ತಮ್ಮ ಮಕ್ಕಳನ್ನೂ ಸಂಗೀತದಲ್ಲಿ ಮುಂದೆ ತಂದಿದ್ದಾರೆ. ಹಿರಿಯ ಪುತ್ರ ಸುಪ್ರದೀಪ್‌ ಕೊಳಲು ನುಡಿಸುತ್ತಿದ್ದರೆ, ಕಿರಿಯ ಮಗ ಸುಘೋಶ್‌ ಪವನ್‌ ಪಿಟೀಲು ತನಿಯಲ್ಲಿ ಸಾಧನೆ ಮಾಡುತ್ತಿದ್ದಾರೆ.
ವಿಳಾಸ: ವಿದ್ವಾನ್‌ ಎಸ್‌.ಎ. ಶಶಿಧರ್‌, ಶ್ರೀ ಅನಂತಕೃಷ್ಣ ಸಂಗೀತ ವಿದ್ಯಾಲಯ, ನಂ. 506, 6ನೇ ಬ್ಲಾಕ್‌, ಬನಶಂಕರಿ 3ನೇ ಹಂತ, ಬೆಂಗಳೂರು- 85. ದೂರವಾಣಿ: 080- 2672 2338,  94828 38601.

ಕೊಳಲು ಗೆಳೆಯ

ಬದಲಾದ ಜೀವನಶೈಲಿ, ಒತ್ತಡದ ಬದುಕು, ಬಿಡುವಿಲ್ಲದ ಕೆಲಸ, ಹೊತ್ತು ಗೊತ್ತು
ಇಲ್ಲದೆ ನಿಭಾಯಿಸಬೇಕಾದ ಜವಾಬ್ದಾರಿ

ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಮತ್ತು ಹವ್ಯಾಸಕ್ಕಾಗಿಯೇ ಕೊಳಲು ಕಲಿಯಲು ಸೇರಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌.
ಕೊಳಲು ನುಡಿಸುವುದು ನನ್ನ ಮೆಚ್ಚಿನ ಹವ್ಯಾಸ. ಕಳೆದ ಮೂರು ವರ್ಷಗಳಿಂದ ಅನಂತಕೃಷ್ಣ ಸಂಗೀತ ಶಾಲೆಯಲ್ಲಿ ಕೊಳಲು ಕಲಿಯುತ್ತಿದ್ದೇನೆ. ಇಲ್ಲಿನ ಸಂಗೀತ ಶಿಕ್ಷಣ ಕ್ರಮ ಚೆನ್ನಾಗಿದೆ. ಬಿಡುವು ಇದ್ದಾಗಲೆಲ್ಲ ಶಾಲೆಗೆ ಹೋಗಿ ಒಂದೆರಡು ರಾಗಗಳನ್ನು ನುಡಿಸಿದರಷ್ಟೇ ಮನಸ್ಸಿಗೆ ನೆಮ್ಮದಿ. ಹೀಗಾಗಿ ಕೊಳಲು ನನಗೆ ನಿಜವಾದ ಗೆಳೆಯ.

ವೃತ್ತಿಗೆ ಕೊಡುವಷ್ಟು ಮಹತ್ವವನ್ನು ಕೊಳಲು ಕಲಿಯಲೂ ಕೊಡುತ್ತೇನೆ. ಹೀಗಾಗಿ ಕೊಳಲಿನಲ್ಲಿ ವರ್ಣ, ಕೃತಿ, ಕೀರ್ತನೆಗಳ ನುಡಿಸುವುದನ್ನು ಬಹಳ ಬೇಗ ಕಲಿತುಕೊಂಡೆ. ಸಂಗೀತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಪಾಸಾಗಿದ್ದೇನೆ. ಇದಕ್ಕೆಲ್ಲ ಗುರು ಕಾರಣ. ಅವರು ಶಿಷ್ಯಂದಿರಿಗೆ ಕಲಿಸುವಲ್ಲಿ ತೋರುವ ಶ್ರದ್ಧೆ, ಆಸಕ್ತಿ,, ಮುತುವರ್ಜಿಯೇ ಇದಕ್ಕೆ ಕಾರಣ. ವೃತ್ತಿಯ ಜತೆಜತೆಗೇ ಕೊಳಲಿನಲ್ಲೂ ಇನ್ನಷ್ಟು ಸಾಧನೆ ಮಾಡಬೇಕೆಂದಿದ್ದೇನೆ.
–ನವನೀತನ್‌

‘ಕೊಳಲು ನುಡಿಸಿದರೆ ಆರೋಗ್ಯ ವೃದ್ಧಿ’

ADVERTISEMENT

ಕೊಳಲ ನಾದ ನನಗೆ ಮೊದಲಿನಿಂದಲೂ ಇಷ್ಟ. ಹೀಗಾಗಿ ಗುರು ಶಶಿಧರ್‌ ಅವರ
ಬಳಿ ಕೊಳಲು ಅಭ್ಯಾಸಕ್ಕೆ ಸೇರಿದೆ. ಕಳೆದ 10 ವರ್ಷಗಳಿಂದ ನಾನು ಕೊಳಲು
ಕಲಿಯುತ್ತಿದ್ದು, ಈಗಾಗಲೇ ಅನೇಕ ವೇದಿಕೆಗಳಲ್ಲಿ ಕೊಳಲು ನುಡಿಸಿದ್ದೇನೆ. ನಾನು
ಓದಿದ್ದು ಎಂಬಿಎ, ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಪ್ರಾಡಕ್ಟ್‌  ಮ್ಯಾನೇಜರ್‌
ಆಗಿ ಕೆಲಸ ಮಾಡುತ್ತಿದ್ದೇನೆ.

ಕೊಳಲು ನುಡಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಉಸಿರಾಟದ ಸಮಸ್ಯೆ ಇದ್ದವರಿಗೆ ಕೊಳಲು ನುಡಿಸಾಣಿಕೆಯಿಂದ ತೊಂದರೆ ಶೀಘ್ರ ನಿವಾರಣೆಯಾಗುತ್ತದೆ. ಹೀಗಾಗಿ ಕೊಳಲನ್ನು ಇಂದು ಸಂಗೀತ ಚಿಕಿತ್ಸೆಗಾಗಿ ಬಳಸುವುದು ರೂಢಿಯಲ್ಲಿದೆ.
–ಶ್ರೀಧರ್‌ ಸಾಲಿಗ್ರಾಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.