ADVERTISEMENT

ಕೋರಮಂಗಲ ಎನ್‌ಪಿಎಸ್‌ಗೆ ರೋಬೊ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ರಾಷ್ಟ್ರ ಮಟ್ಟದ ಪ್ರಥಮ ‘ಲೆಗೋ ಲೀಗ್ ಇಂಡಿಯಾ’ ರೋಬೊ ವಿನ್ಯಾಸ ಸ್ಪರ್ಧೆಯಲ್ಲಿ ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಶಾಲಾ ತಂಡ ವಿಜಯಿಯಾಗಿ ಹೊರಹೊಮ್ಮಿದೆ.

ಡೆನ್ಮಾರ್ಕ್ ಮೂಲದ ಕಲಿಕಾ ಮತ್ತು ಆಟಿಗೆ ಸಾಮಗ್ರಿ ತಯಾರಿಕಾ ಕಂಪೆನಿ ‘ಲೆಗೊ’ ಸಹಯೋಗದೊಡನೆ ಸ್ಯಾಪ್, ಟೆಕ್‌ಟ್ರಾನಿಕ್ಸ್ ಎಜುಕೇಷನ್ಸ್ ಮತ್ತು ಫಸ್ಟ್ ಸಂಸ್ಥೆ ಜಂಟಿಯಾಗಿ ಬೆಂಗಳೂರು, ದೆಹಲಿ ಮತ್ತು ಚೆನ್ನೈಯಲ್ಲಿ ಈ ಸ್ಪರ್ಧೆ ಆಯೋಜಿಸಿದ್ದವು.

ರೋಬೊ ಪಂಡಿತ್ ಎಂಬ ಹೆಸರಿಟ್ಟುಕೊಂಡ ವಿಜೇತ ತಂಡದ ರುಚಿನ್ ಕುಲಕರ್ಣಿ, ಇಶಾನ್ ಬ್ಯಾನರ್ಜಿ, ಶಂಖಾ ನಾಗ್, ಸಾಹಿಲ್ ಪಂಜಾಬಿ, ಅಶ್ವಿನ್ ಪಾಂಡ್ಯನ್ ಮತ್ತು ಅಭಿಜಿತ್ ಕಷ್ಯಪ್ ಅವರು ಏ. 27ರಿಂದ 30ರ ವರೆಗೆ ಅಮೆರಿಕದ ಸೆಂಟ್ ಲೂಯಿಸ್‌ನಲ್ಲಿ ನಡೆಯುವ ವಿಶ್ವ ಮಟ್ಟದ ಪ್ರಥಮ ಲೆಗೊ ಲೀಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ತಂಡಕ್ಕೆ ರೂಪಂ ಭಟ್ಟಾಚಾರ್ಯ ಮತ್ತು ಘನಶ್ಯಾಂ ಅವರು ಮಾರ್ಗದರ್ಶಕರಾಗಿದ್ದಾರೆ.

9 ರಿಂದ 16 ವರ್ಷದ ವಿದ್ಯಾರ್ಥಿಗಳಲ್ಲಿ ರೋಬೊ ತಂತ್ರಜ್ಞಾನದ ಬಗ್ಗೆ ಆಸಕ್ತಿ, ಸ್ವಯಂಚಾಲಿತ ರೋಬೊ ನಿರ್ಮಿಸುವ ಅಭಿರುಚಿ ಬೆಳೆಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು.

 ಲೆಗೊ ಆಟಿಗೆ ಬ್ರಿಕ್, ಪ್ರೋಗ್ರಾಮೇಬಲ್ ಪ್ರೊಸೆಸರ್, ಸೆನ್ಸರ್ ಮತ್ತು ಮೋಟರ್‌ಗಳನ್ನು ಒಳಗೊಂಡ ಕಿಟ್‌ಗಳನ್ನು ಸ್ಯಾಪ್ ಲ್ಯಾಬೊರೇಟರೀಸ್ ಒದಗಿಸಿತ್ತು. ಇದರ ಸಹಾಯದಿಂದ ಹೊಸ ಪರಿಕಲ್ಪನೆಯ ರೋಬೊ ನಿರ್ಮಾಣದ ಜತೆಗೆ ಆರೋಗ್ಯ ಸಮಸ್ಯೆಯನ್ನು ಎದುರಿಸುವ ನವೀನ ವಿಧಾನದ ಮೇಲೂ ಬೆಳಕು ಚೆಲ್ಲಬೇಕಾಗಿತ್ತು.

ಪೂರ್ವಭಾವಿ ಸ್ಪರ್ಧೆ: ದಕ್ಷಿಣ ವಲಯದ 2ನೇ ಆವೃತ್ತಿಯ ಫಸ್ಟ್ ಲೆಗೊ ಲೀಗ್ (ಎಫ್‌ಎಲ್‌ಎಲ್) ಇಂಡಿಯಾ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ 30ಕ್ಕೂ ಹೆಚ್ಚಿನ ಶಾಲೆಗಳು ಪಾಲ್ಗೊಂಡಿದ್ದವು.

ಉತ್ತಮ ಪ್ರದರ್ಶನ ನೀಡಿದ ನಗರದ ಗೇರ್ ಇನೊವೇಟಿವ್ ಇಂಟರ್‌ನ್ಯಾಷನಲ್ ಶಾಲೆ ಸೇರಿದಂತೆ ವಿವಿಧ ತಂಡಗಳಿಗೆ ‘ಅವಾರ್ಡ್ ಅಗೇನ್ಸ್ಟ್ ಆಲ್ ಆಡ್ಸ್, ಬೆಸ್ಟ್ ರೋಬೊ ಪರ್ಫಾರ್ಮೆನ್ಸ್, ಬೆಸ್ಟ್ ಪ್ರಾಜೆಕ್ಟ್ ಪ್ರೆಸೆಂಟೇಷನ್ ಮತ್ತು ಬೆಸ್ಟ್ ಟೀಮ್‌ವರ್ಕ್’ ಪ್ರಶಸ್ತಿ ನೀಡಲಾಯಿತು.

ಬಾಡಿ ಫಾರ್ವರ್ಡ್ ಚಾಲೆಂಜ್ ರೋಬೋಗಳ ಮೂಲಕ ಮನುಷ್ಯನ ಗಾಯಗಳಿಗೆ ಚಿಕಿತ್ಸೆ, ವಂಶವಾಹಿ ರೋಗಗಳ ನಿರ್ಮೂಲನೆ ಮತ್ತು ಶರೀರದ ಸಾಮರ್ಥ್ಯವನ್ನು ಹೆಚ್ಚಿಸುವ ಸವಾಲನ್ನು ಮಕ್ಕಳಿಗೆ ನೀಡಲಾಗಿತ್ತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT