ADVERTISEMENT

ಕ್ರಿಕೆಟ್ ಕಾತರ...!

ಪ್ರಮೋದ ಜಿ.ಕೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST
ಕ್ರಿಕೆಟ್ ಕಾತರ...!
ಕ್ರಿಕೆಟ್ ಕಾತರ...!   

ನಾಲ್ಕು ತಿಂಗಳ ಹಿಂದೆಯಷ್ಟೇ ಐಪಿಎಲ್‌ನ ಕ್ರೇಜು ಹಾಗೂ ಮೋಜನ್ನು ಮನತುಂಬಿ ಅನುಭವಿಸಿದ್ದ ಉದ್ಯಾನ ನಗರಿಯ ಕ್ರಿಕೆಟ್ ಪ್ರೇಮಿಗಳು ಈಗ ಮತ್ತೆ ಸಂಭ್ರಮದ ನಿರೀಕ್ಷೆಯಲ್ಲಿದ್ದಾರೆ.
 
ಸೆಪ್ಟೆಂಬರ್ 23ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಚುಟುಕು ಆಟದ ಖುಷಿಗೆ ಎದುರು ನೋಡುತ್ತಿದ್ದಾರೆ. ಈ ಸಲವೂ `ಗೇಲ್~ ಬ್ಯಾಟ್ ಮೂಲಕ ಮನರಂಜಿಸಿದರೆ, ಚಿಯರ್ ಬೆಡಗಿಯರು ಕಣ್ಣು ತಣಿಸಲಿದ್ದಾರೆ.

ಅತ್ತ ಚಿನ್ನಸ್ವಾಮಿ ಕ್ರೀಡಾಂಗಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದರೆ, ಇತ್ತ ಕ್ರೀಡಾಭಿಮಾನಿಗಳು ಸೆಪ್ಟೆಂಬರ್ 23ಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಚಾಂಪಿಯನ್ಸ್ ಲೀಗ್ ಚುಟುಕು ಕ್ರಿಕೆಟ್.

ವಿಶ್ವಕಪ್, ಐಪಿಎಲ್ ಹೀಗೆ ನಿರಂತರ ಕ್ರಿಕೆಟ್‌ನ ಸವಿ ಅನುಭವಿಸಿದ್ದ ಕಟ್ಟಾ ಅಭಿಮಾನಿಗಳಿಗೆ ನಾಲ್ಕು ತಿಂಗಳು ಬ್ರೇಕ್ ನುಂಗಲಾರದ ತುತ್ತಾಗಿತ್ತು.

ಮತ್ತೆ ಕ್ರಿಕೆಟ್ ಆಟಗಾರರನ್ನು ನೇರವಾಗಿ ಕಣ್ತುಂಬಿಕೊಳ್ಳಬೇಕು ಎನ್ನುವ ತವಕ ಕೆಲವರದಾದರೆ, ಚೆಂಡು ದಾಂಡಿನ ಆಟದಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಇನ್ನು ಕೆಲವರದು.

ಆದರೆ ಇದ್ಯಾವುದನ್ನು ಲೆಕ್ಕಿಸದ ಕೆಲ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಇರುವಷ್ಟು ಹೊತ್ತು ಚಿಯರ್ ಬೆಡಗಿಯರ ನೃತ್ಯದ ಸವಿ ಕಣ್ತುಂಬಿಕೊಂಡು ಮನರಂಜನೆ ಪಡೆಯುವ ಕಾತರದಲ್ಲಿದ್ದಾರೆ.

ಜೀವವನ್ನು ಹಿಡಿದು ಹಿಪ್ಪೆ ಮಾಡುವ ಟ್ರಾಫಿಕ್ ಗುಂಗು. ದಿನನಿತ್ಯ ಜೀವನದ ಸಾಕಷ್ಟು ಗೊಂದಲ. ಇದೆಲ್ಲದಕ್ಕೂ ತಾತ್ಕಾಲಿಕ ವಿಶ್ರಾಂತಿ ಹೇಳಿ ಮನಸ್ಸನ್ನು ತಂಪು ಮಾಡಿಕೊಳ್ಳಲು ಚುಟುಕು ಆಟ ವೇದಿಕೆಯಾಗಲಿದೆ.

ಚಾಂಪಿಯನ್ಸ್ ಲೀಗ್ ಸಲುವಾಗಿ ಕ್ರೀಡಾಂಗಣಕ್ಕೆ ರಂಗು ತುಂಬುವ ಕಾರ್ಯ ನಡೆಯುತ್ತಿದೆ. ಅಂಗಳದ ಸುತ್ತಲೂ `ಚಾಂಪಿಯನ್ಸ್ ಲೀಗ್ ಟ್ವೆಂಟಿ-20~ ಎನ್ನುವ ಬ್ಯಾನರ್‌ಗಳು ಅಬ್ಬರಿಸುತ್ತಿವೆ.

ಪೊಲೀಸರ ಕಾವಲು ಕ್ರೀಡಾಂಗಣಕ್ಕೆ ಸಿಕ್ಕಿದೆ. ಉದ್ಯಾನ ನಗರಿಯಲ್ಲಿ ಈಗಾಗಲೇ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್, ವಾರಿಯರ್ಸ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

ಕೊನೆಯ ಪಂದ್ಯ ನಡೆಯುವ ಅಕ್ಟೋಬರ್ 7ರವರೆಗೂ ಕ್ರಿಕೆಟ್ ಹಬ್ಬದ ರಸದೌತಣ ಸವಿಯುವ ಅವಕಾಶ ಇಲ್ಲಿನ ಕ್ರೀಡಾ ಪ್ರೇಮಿಗಳದ್ದು.

ಒಟ್ಟು ಎಂಟು ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕಳೆದ ಐಪಿಎಲ್‌ನಲ್ಲಿ ಪ್ರೇಮಿಗಳನ್ನು ಮೋಡಿ ಮಾಡಿ ಮನಗೆದ್ದು, ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದ ಕೆರಿಬಿಯನ್ ನಾಡಿನ ಅಜಾನುಬಾಹು ಆಟಗಾರ `ಗೇಲ್~ ಮತ್ತೆ ಚಾಂಪಿಯನ್ಸ್ ಲೀಗ್‌ನಲ್ಲಿಯೂ ಅಭಿಮಾನಿಗಳನ್ನು ಪುಳಕಿತಗೊಳಿಸಬಹುದು. ಇದನ್ನು ಎಲ್ಲರೂ ಸಹ ಕಾತರದಿಂದ ಎದುರು ನೋಡುತ್ತಿದ್ದಾರೆ.

ಪಂದ್ಯಗಳಿಗೆ ಈಗಾಗಲೇ ಟಿಕೆಟ್ ವಿತರಣೆ ಆರಂಭಗೊಂಡಿದೆ. 250 ರೂಪಾಯಿಯಿಂದ 3000 ರೂಪಾಯಿವರೆಗೂ ಬೆಲೆ ನಿಗದಿಪಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT