ADVERTISEMENT

ಗಾಯನ ಸಮ್ಮೇಳನ: ಸಂಗೀತದೌತಣ

ಪ್ರೊ.ಮೈ.ವಿ.ಸು
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಭಾನುವಾರದಿಂದ ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಂಗೀತ ಸಮ್ಮೇಳನ. ನಗರದ ಸಂಗೀತ ರಸಿಕರಿಗೆ ರಸದೌತಣ. 43ನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೇದನೂರಿ ಕೃಷ್ಣಮೂರ್ತಿ ಆಂಧ್ರಪ್ರದೇಶದ ಖ್ಯಾತ ಸಂಗೀತ ಕಲಾವಿದ.

ಆಂಧ್ರದ ಕೋಟಪಲ್ಲಿಯಲ್ಲಿ 1927ರಲ್ಲಿ ಜನಿಸಿದ ಕೃಷ್ಣಮೂರ್ತಿ ಅವರ ತಾಯಿ ಹಾಗೂ ಸೋದರ ಮಾವಂದಿರ ಕಡೆಯಿಂದ ಸಂಗೀತ ವಾಹಿನಿ ಹರಿಯುತ್ತಿತ್ತು. ವಿಜಯನಗರದ ಮಹಾರಾಜ ಮ್ಯೂಸಿಕ್ ಕಾಲೇಜ್‌ನಲ್ಲಿ ಪ್ರಾರಂಭಕ್ಕೆ ಪಿಟೀಲು ಹಾಗೂ ಹಾಡುಗಾರಿಕೆಗಳೆರಡರಲ್ಲೂ ಶಿಕ್ಷಣ ಪಡೆದ ನೇದನೂರಿ ಮುಂದೆ ಪದ್ಮಭೂಷಣ ಡಾ.ಶ್ರೀಪಾದ ಪಿನಾಕಪಾಣಿ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತ ಮಾರ್ಗ ರೂಪಿಸಿಕೊಂಡರು.

ವಿಜಯವಾಡ, ತಿರುಪತಿ, ವಿಜಯನಗರ ಹಾಗೂ ಸಿಕಂದರಾಬಾದ್‌ಗಳ ಮ್ಯೂಸಿಕ್ ಕಾಲೇಜುಗಳ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿರುವ ನೇದನೂರಿ 1945ರಿಂದ ಕಛೇರಿ ಮಾಡುತ್ತಿದ್ದಾರೆ. ಆಂಧ್ರವಲ್ಲದೆ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ವಿದೇಶಗಳಲ್ಲೂ ತಮ್ಮ ಗಾಯನ ಸುಧೆ ಹರಿಸಿದ್ದಾರೆ.

ತುಂಬು ಸಾಂಪ್ರದಾಯಿಕ ಗಾಯನ, ಸೊಗಡುಳ್ಳ ಗಾಯನ, ರಸವತ್ತಾದ ಭಾವಪೂರ್ಣ ಗಾಯನ! ಚಪ್ಪಾಳೆ ಗಿಟ್ಟಿಸಲು  ಏನನ್ನಾದರೂ ಹಾಡುವ  ಜಾಯಮಾನ ಅವರದ್ದಲ್ಲ! ಉತ್ತಮ ಪಾಠಾಂತರ ಅವಲಂಬನೆಯು ಅವರ ಗಾಯನದ ಇನ್ನೊಂದು ಪ್ರಮುಖ ಅಂಶ! ತಾವೂ ಅನುಭವಿಸಿ ಹಾಡಿ, ಕೇಳುಗರಿಗೆ ಗಾಢ ಅನುಭವ ನೀಡುವ ಪ್ರಯತ್ನ!

ರಾಗ ಸಂಯೋಜನೆ ಕೃಷ್ಣಮೂರ್ತಿಗಳ ಇನ್ನೊಂದು ಪ್ರಮುಖ ಸೇವೆ. ಅಣ್ಣಮಾಚಾರ್, ರಾಮದಾಸ್, ನಾರಾಯಣತೀರ್ಥ ಅಚಿಥ ಸಂತ ವಾಗ್ಗೇಯಕಾರರ ರಚನೆಗಳಿಗೆ ಹೃದಯಂಗಮ ರಾಗ ಸಂಯೋಜನೆ ಮಾಡಿ, ಉಪಕರಿಸಿದ್ದಾರೆ.

ಶಿಕ್ಷಕರಾಗಿ ಎರಡು ತಲೆಮಾರಿನ ಸಂಗೀತ ಕಲಾವಿದರನ್ನು ತರಪೇತುಗೊಳಿಸಿ, ಶಾಸ್ತ್ರೀಯ ಸಂಗೀತ ಕಲೆ ಅವ್ಯಾಹತವಾಗಿ ಹರಿಯುವಂತೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ನೆರವಲ್, ರಾಗಾಲಾಪನೆ, ಸ್ವರಪ್ರಸ್ತಾರ ಮುಂತಾದ ವಿಷಯಗಳ ಮೇಲೆ ನೇದನೂರಿ ಸಾದರ ಪಡಿಸಿರುವ ಪ್ರಾತ್ಯಕ್ಷಿಕೆಗಳು ಬೋಧಪ್ರದ.

ಸಹಜವಾಗಿಯೆ ನೇದನೂರಿ ಅವರನ್ನು ಅರಸಿಕೊಂಡು ಅನೇಕ ಗೌರವ-ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ತಿರುಪತಿ ದೇವಸ್ಥಾನದ ಆಸ್ಥಾನ ವಿದ್ವಾನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಳಾನಿಧಿ  ಕೆಲವು ಮಾತ್ರ.
 

ಸಂಗೀತವನ್ನು ಉಪಾಸನೆಯಾಗಿ ಭಾವಿಸಿ ಋಜು ಜೀವನ, ಸಾತ್ವಿಕ ಆಲೋಚನೆ ಹಾಗೂ ಸದಾ ನಾದಚಿಂತನೆ ಮಾಡುವ ನೇದನೂರಿ ಸಂಗೀತ ಕ್ಷೇತ್ರಕ್ಕೆ ಎಂದೂ ಮಾರ್ಗದರ್ಶಕ, ಆದರ್ಶ ಕಲಾವಿದ. ಇದೀಗ ವಿದ್ವತ್ ಸದಸ್ಸಿನಲ್ಲಿ  ಸಂಗೀತ ಕಲಾರತ್ನ  ಬಿರುದು ಸ್ವೀಕರಿಸಲಿರುವ ನೇದನೂರಿ ಕೃಷ್ಣಮೂರ್ತಿ ಅವರು  ವಿದ್ವತ್ ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಸಹ ಮಾಡಲಿದ್ದಾರೆ.

ಕಾರ್ಯಕ್ರಮ ವಿವರ
ಭಾನುವಾರದಿಂದ ಎಂಟು ದಿನಗಳ ಕಾಲ ನಡೆಯಲಿರುವ 43ನೇ ಸಂಗೀತ ಸಮ್ಮೇಳನ 3 ಭಾಗಗಳಲ್ಲಿ ನಡೆಯಲಿದೆ: ಪ್ರಖ್ಯಾತರ ಕಛೇರಿ, ಕಿರಿಯ ಕಲಾವಿದರ ಪ್ರತಿಭಾ ಪ್ರದರ್ಶನ ಹಾಗೂ ವಿದ್ವತ್ ಗೋಷ್ಠಿ.

ಭಾನುವಾರ ಬೆಳಿಗ್ಗೆ 10ಕ್ಕೆ ಡಾ. ಚಂದ್ರಶೇಖರ ಕಂಬಾರ ಅವರಿಂದ ಸಮ್ಮೇಳನ ಉದ್ಘಾಟನೆ, ಅತಿಥಿಗಳು: ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಹಾಗೂ ಡಾ. ಸದಾನಂದ ಮಯ್ಯ, ಸಮ್ಮೇಳನಾಧ್ಯಕ್ಷ ಡಾ. ನೇದನೂರಿ ಕೃಷ್ಣಮೂರ್ತಿ.

ಸಂಜೆ 6 ಕ್ಕೆ  ಶ್ರೀರಾಂಪ್ರಸಾದ್ ಮತ್ತು ಶ್ರೀರವಿಕುಮಾರ್ (ಮಲ್ಲಾಡಿ ಸಹೋದರರು)ರಿಂದ ಗಾಯನ, ಪಿಟೀಲು: ಎಂ.ಎ. ಸುಂದರೇಶನ್, ಮೃದಂಗ: ಎಂ.ಎಲ್. ಎನ್. ರಾಜು ಹಾಗೂ ಘಟ: ಎಂ. ಎ. ಕೃಷ್ಣಮೂರ್ತಿ.

ಸೋಮವಾರ ಬೆಳಿಗ್ಗೆ 10ರಿಂದ ವಿದ್ವತ್ ಗೋಷ್ಠಿ, ಭದ್ರಾಚಲ ರಾಮದಾಸರ ಸಂಗೀತ ಸಂಯೋಜನೆ ಕುರಿತು ವಿದ್ವಾನ್ ನೇದನೂರಿ ಕೃಷ್ಣಮೂರ್ತಿ ಮತ್ತು ಟಿ. ಶ್ರೀನಿಧಿ ಅವರಿಂದ ಹಾಗೂ ಸಂತ ಅಣ್ಣಮಾಚಾರ್ಯ ಕುರಿತು ಡಾ. ಪಪ್ಪು ವೇಣುಗೋಪಾಲ ರಾವ್ ಅವರಿಂದ ಪ್ರಾತ್ಯಕ್ಷಿಕೆ.

ಸಂಜೆ 4.15ಕ್ಕೆ ತನ್ಮಯಿ ಕೃಷ್ಣಮೂರ್ತಿ ಅವರಿಂದ  ಹಾಡುಗಾರಿಕೆ, ಪಿಟೀಲು: ಅಪೂರ್ವ ಕೃಷ್ಣ, ಮೃದಂಗ: ಅಕ್ಷಯ ಆನಂದ.
ಸಂಜೆ 6ಕ್ಕೆ  ಎಂ.ಎಸ್. ಶೀಲ ಗಾಯನ, ಪಿಟೀಲು: ನಳಿನಾ ಮೋಹನ್, ಮೃದಂಗ: ಅರ್ಜುನ ಕುಮಾರ್, ಮೋರ್ಚಿಂಗ್: ಭಾರದ್ವಾಜ್ ಸಾತವಳ್ಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT