ADVERTISEMENT

ಗುರುವಂದನೆಯಲ್ಲಿ ಕಗ್ಗದ ಮ್ಯಾಜಿಕ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST
ಗುರುವಂದನೆಯಲ್ಲಿ ಕಗ್ಗದ ಮ್ಯಾಜಿಕ್
ಗುರುವಂದನೆಯಲ್ಲಿ ಕಗ್ಗದ ಮ್ಯಾಜಿಕ್   

ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಎಲ್ಲರಿಗೂ ಮ್ಯಾಜಿಕ್ ಪ್ರಿಯವೇ. ನೋಡ ನೋಡುತ್ತಿದ್ದಂತೆ ನಿಬ್ಬೆರಗಾಗಿಸುವ, ವಿಸ್ಮಯ ಮೂಡಿಸುವ ಕಲೆ ಅದು. ಆದರೆ ಗುರು ಪೂರ್ಣಿಮಾದ ಗುರು ವಂದನೆಯ ಕಾರ್ಯಕ್ರಮದ ಅಂಗವಾಗಿ ಮ್ಯೋಜಿಕ್ ಶೋ ಎಂದಾಗ ಸ್ವಲ್ಪ ಗೊಂದಲವೆನಿಸುತ್ತದೆ ಅಲ್ಲವಾ? ಗುರುವಂದನೆಯ ಜೊತೆ ಮ್ಯೋಜಿಕ್ ಯಾಕೋ ಹೊಂದಿಕೆ ಆಗುವುದಿಲ್ಲ.

ಆದರೆ ಅದೊಂದು ವಿಭಿನ್ನ ರೀತಿಯ ಮ್ಯೋಜಿಕ್, ಅದೂ `ಮಂಕು ತಿಮ್ಮನ ಕಗ್ಗ~ ಆಧರಿಸಿದ ಜಾದೂ ಮೋಡಿ. ನೋಡುಗರನ್ನೆಲ್ಲಾ ನಗೆಗಡಲಿನಲ್ಲಿ ಮುಳುಗಿಸುವುದರ ಜೊತೆಗೆ ಡಿ.ವಿ.ಜಿ. ಅವರ ಕಗ್ಗವನ್ನಾಧರಿಸಿ, ಅಧ್ಯಾತ್ಮ ತತ್ವಗಳನ್ನು ಅಳವಡಿಸಿಕೊಂಡು ಮ್ಯಾಜಿಕ್ ಮೂಲಕ ಜೀವನ ದರ್ಶನ ಮಾಡಿಸಿದವರು ಎಂ.ಡಿ.ಕೌಶಿಕ್.

ಮ್ಯಾಜಿಕ್ ನಡೆದ ಒಂದು ತಾಸು ಅಲ್ಲಿದ್ದವರು ಅಲ್ಲಾಡದೆ ಕುಳಿತಿದ್ದರು. ಮನಸಿಗೆ ಹತ್ತಿರವಾದ ಆಪ್ತವಾದ ವಿಚಾರಗಳನ್ನು, ಕಣ್ತೆರೆಸುವ ರೀತಿಯಲ್ಲಿ ಹಾಸ್ಯಪೂರ್ಣವಾಗಿ ಪ್ರಸ್ತುತ ಸ್ಥಿತಿ ಗತಿಗಳನ್ನಾಧರಿಸಿ ಹರಿಸಿದ ಮಾತಿನ ಮೋಡಿಯ ಜೊತೆಗೆ ಮ್ಯೋಜಿಕ್ ಮೋಡಿ ನೋಡುಗರ ಮನ ಸೆಳೆಯುವ ಕೌಶಲ ಅವರದು. ವಿಷಯ ಎಷ್ಟೇ ತತ್ವಪೂರ್ಣವಾಗಿದ್ದರೂ ಕೇಳುಗರನ್ನು ತಲುಪುವುದು ಬಹಳ ಮುಖ್ಯ. ಹಾಸ್ಯಲೇಪನದೊಂದಿಗೆ ಗಂಭೀರ ವಿಷಯಗಳನ್ನು ತಿಳಿಸುವ ಕಲೆ ಕೌಶಿಕ್ ಅವರಿಗೆ ಕರಗತವಾಗಿದೆ.

ಈ ವೈಶಿಷ್ಟ್ಯಪೂರ್ಣ ಕಾಯಕ್ರಮ ನಡೆದ್ದ್ದದು ಜಯನಗರದ ಲಲಿತಾ ದೇವಿ ಟ್ರಸ್ಟ್ ಅವರು ಗುರುಪೂರ್ಣಿಮಾ ಅಂಗವಾಗಿ ನಡೆಸಿದ ಗುರುವಂದನ ಕಾರ್ಯಕ್ರಮದಲ್ಲಿ. ಈ ಸಾಧನಾ ಮಂದಿರದಲ್ಲಿ ಬೆಳಗಿನಿಂದ ಸಂಜೆಯವರೆಗೂ ಒಂದಲ್ಲ ಒಂದು ತರಗತಿ ನಡೆಯುತ್ತಲೇ ಇರುತ್ತದೆ.
 
ಯೋಗ, ಧ್ಯಾನ, ಪ್ರಾಣಾಯಾಮಗಳೇ ಅಲ್ಲದೆ ವ್ಯಕ್ತಿತ್ವ ವಿಕಸನದಿಂದ ಹಿಡಿದು ಮಕ್ಕಳ ವಿದ್ಯಾಭ್ಯಾಸ, ಸೂಕ್ತ ಕೋರ್ಸ್‌ನ ಆಯ್ಕೆ, ಈ ರೀತಿ ಅಧ್ಯಾತ್ಮದಿಂದ ಹಿಡಿದು ಯುವಜನತೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸವನ್ನು ಲಲಿತಾ ದೇವಿ ಟ್ರಸ್ಟ್ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.