ADVERTISEMENT

ಗುಹೆಯೊಳಗೆ ‘ಗೀತಾಂಜಲಿ’ ಸವಿ

ರಸಾಸ್ವಾದ

ರಮೇಶ ಕೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಸುತ್ತಲೂ ಮಂದಬೆಳಕು, ಅಲ್ಲಲ್ಲಿ ನೇತಾಡುವ ಬೇರು. ಒಂದು ಕಡೆ ಬುಸುಗುಡಲು ಸಜ್ಜಾಗಿರುವಂಥ ಹಾವು, ಕತ್ತು ಹೊರಳಿಸಲಿದೆಯೇನೋ ಎಂಬಂತೆ ಕುಳಿತಿರುವ ಗೂಬೆ... ನಿರ್ಜನ ಕಾಡಿನಲ್ಲಿ, ನೀರವ ರಾತ್ರಿಯಲ್ಲಿ ಕಾಣುವ ಗುಹೆಗೆ ಕಾಲಿಟ್ಟ ಅನುಭವ ಒಂದರೆ ಕ್ಷಣ ಕಾಡದೇ ಇರದು. ಕಾಂಕ್ರೀಟ್‌ ಕಾಡಿನ ಝಗಮಗಿಸುವ ಬೆಳಕಿನಿಂದ ಒಮ್ಮೆಲೆ ಈ ಗುಹೆಯೊಳಗೆ ಕಾಲಿಟ್ಟರೆ ಮಂದ ಬೆಳಕು ಹಿತವೆನಿಸದೇ ಇರದು. ಇದು ಗೀತಾಂಜಲಿ ರೆಸ್ಟೋರೆಂಟ್.

ನಗರದಲ್ಲಿ ಆರಂಭವಾಗುತ್ತಿರುವ ಹೋಟೆಲ್‌, ರೆಸ್ಟೋರೆಂಟ್‌ಗಳು ರುಚಿಗೆ ಕೊಟ್ಟಷ್ಟೇ ಮಹತ್ವವನ್ನು ಒಳಾಂಗಣ ವಿನ್ಯಾಸಕ್ಕೂ ಕೊಡುತ್ತಿವೆ. ನವರಂಗ್‌ ಚಿತ್ರಮಂದಿರದ ಸಮೀಪ ಕಳೆದ ತಿಂಗಳಷ್ಟೇ ಆರಂಭವಾದ ‘ಗೀತಾಂಜಲಿ’ ರೆಸ್ಟೋರೆಂಟ್‌ನ ಒಳಾಂಗಣ ವಿನ್ಯಾಸ  ಗಮನಸೆಳೆಯುವುದು ಇದೇ ಕಾರಣದಿಂದ.

ಪಕ್ಕಾ ಆಂಧ್ರಶೈಲಿಯ ಊಟವನ್ನು ಉಣಬಡಿಸುವುದು ಇಲ್ಲಿನ ವಿಶೇಷ. ಹೈದರಾಬಾದಿನ ಬಾಣಸಿಗರು ಸಿದ್ಧಪಡಿಸುವ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳೆಲ್ಲಾ ಹೆಚ್ಚು ಮಸಾಲೆ, ಖಾರವಿದ್ದು ರುಚಿಮೊಗ್ಗನ್ನು ಅರಳಿಸಿ, ಕೆರಳಿಸುವಂತಿವೆ.

ಎರಡು ಸಿಹಿತಿನಿಸು, ಒಂದು ಫ್ರೂಟ್‌ ಸಲಾಡ್‌, ಒಂದು ಐಸ್‌ಕ್ರೀಂ, ಎರಡು ಬಗೆಯ ಪಲ್ಯ, ಪಪ್ಪು, ಮಜ್ಜಿಗೆಹುಳಿ, ಅನ್ನ ಸಾರು, ನಾಲ್ಕು ವಿಧದ ಚಟ್ನಿಪುಡಿಯನ್ನು ಒಳಗೊಂಡ ಸಸ್ಯಾಹಾರಿ ಥಾಲಿಯೇ ರಾಯಲ್ ಆಂಧ್ರ ಮೀಲ್ಸ್. ಮಾಂಸಾಹಾರಿಯಲ್ಲಿ ಎರಡು ಚಿಕನ್‌ ಫ್ರೈ, ಒಂದು ಗ್ರೇವಿ, ಒಂದು ಮಟನ್‌ ಗ್ರೇವಿ ಸೇರಿದಂತೆ ಸಸ್ಯಹಾರಿಗೆ ಕೊಟ್ಟ ಉಳಿದ ಮೆನುವನ್ನು ಒಳಗೊಂಡಿರುತ್ತದೆ. 

‘ಸೌದೆ ಒಲೆಯಲ್ಲಿ ಬೇಯಿಸುವುದರಿಂದ ಊಟದ ರುಚಿಯೂ ಚೆನ್ನಾಗಿರುತ್ತದೆ. ಇನ್ನು ಹೈದರಾಬಾದ್‌ ದಮ್‌ ಬಿರಿಯಾನಿಗೆ ಹೆಚ್ಚು ಬೇಡಿಕೆ ಇದೆ. ಆಂಧ್ರದಿಂದಲೇ ತರಿಸುವ ಅಕ್ಕಿಯಿಂದ ಬಿರಿಯಾನಿ ಸಿದ್ಧಪಡಿಸಲಾಗುತ್ತದೆ’ ಎಂಬುದು ಬಾಣಸಿಗ ರಮಣ ಅವರ ವಿವರಣೆ.

‘ನೆಲ್ಲೂರು ಚೇಪಲ ಪುಲುಸು’ ಕರ್ರಿಗೆ ಹೆಚ್ಚು ಬೇಡಿಕೆ ಇದೆಯಂತೆ. ಬೊಮ್ಮಿಡೈಲು ಮೀನಿನ ಕರ್ರಿ ನೆಲ್ಲೂರು ಭಾಗದ ಮನೆಗಳಲ್ಲಿ ಹೆಚ್ಚಾಗಿ ಮಾಡುವ ಆಹಾರವಾಗಿದೆ.

‘ಬಾಣಲೆಗೆ ಹಾಕಿದ ಒಗ್ಗರಣೆಗೆ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಟೊಮೆಟೊ ರಸವನ್ನು ಹಾಕಿ ಬೇಯಿಸಬೇಕು. ನಂತರ ಸ್ವಲ್ಪ ಇಂಗು ಸೇರಿಸಬೇಕು, ಅರಿಶಿಣಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರದಪುಡಿ ಹಾಗೂ ಹುಣಸೆಹುಳಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. 15 ನಿಮಿಷದ ನಂತರ ಮೀನನ್ನು ಹಾಕಿ ಐದು ನಿಮಿಷ ಹಾಗೆಯೇ ಬಿಡಬೇಕು. ಇದರ ರುಚಿ ಮಾರನೇ ದಿನದವರೆಗೂ ಚೆನ್ನಾಗಿರುತ್ತದೆ. ಈ ಕರ್ರಿಯೊಂದಿಗೆ ಅನ್ನದ ಕಾಂಬಿನೇಷನ್‌ ಚೆನ್ನಾಗಿರುತ್ತದೆ’ ಎನ್ನುತ್ತಾರೆ ರಮಣ.

‘ಗೀತಾಂಜಲಿ ಸ್ಪೆಷಲ್‌ ಚಿಕನ್‌ ಫ್ರೈ’, ‘ನಾಟಿ ಕೋಳಿ ಪುಲುಸು’, ‘ಗುಂಟೂರು ಜಿಂಜರ್‌ ಚಿಕನ್‌’, ಮಟನ್‌, ಚಿಕನ್ ಬಿರಿಯಾನಿ, ಗೌಡರ ಬಾಡೂಟ ಜೊತೆಗೆ ರಾಗಿಮುದ್ದೆಯೂ ಇಲ್ಲಿ ಲಭ್ಯ. ಚಿಕನ್‌ನಲ್ಲಿ 15, ಮಟನ್‌ನಲ್ಲಿ 10 ಹಾಗೂ ಮೀನಿನಲ್ಲಿ ಐದು ಬಗೆಯ ಖಾದ್ಯಗಳು ಆಯ್ಕೆಗಿವೆ.

‘ನಗರದಲ್ಲಿ ದಿನೇದಿನೇ ಹೊಸದಾಗಿ ಹೋಟೆಲ್‌ಗಳು ತಲೆ ಎತ್ತುತ್ತಿರುತ್ತವೆ. ಆಧುನಿಕ ಶೈಲಿಯ ವಿನ್ಯಾಸ ಹೆಚ್ಚಾಗಿ ಕಾಣಬಹುದು. ಆದರೆ ಅವೆಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿರಲಿ ಎಂದು ಗುಹೆ ಮಾದರಿಯಲ್ಲಿ ರೆಸ್ಟೋರೆಂಟ್ ಮಾಡಿದ್ದೇವೆ. ಕುಟುಂಬ ಸಮೇತ ಬರುವ ಗ್ರಾಹಕರು ಊಟದ ಜೊತೆಗೆ ಮನರಂಜನೆಯನ್ನು ಪಡೆಯಬೇಕು. ಮಕ್ಕಳನ್ನು ಕರೆದುಕೊಂಡು ಬಂದು ಸಮಯ ಕಳೆಯಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಈ ವಿನ್ಯಾಸ ಮಾಡಿಸಿದ್ದೇವೆ. ಕಲಾವಿದ ವರ್ಣಸಿಂಧು ವಿನ್ಯಾಸ ಮಾಡಿದ್ದಾರೆ. 70 ಲಕ್ಷ ರೂಪಾಯಿಗೂ ಹೆಚ್ಚು ಖರ್ಚಾಗಿದೆ’ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸರೆಡ್ಡಿ. 

ಆಂಧ್ರ ಮೆನುವಿನ ಜೊತೆಗೆ ಉತ್ತರ ಭಾರತ, ಚೈನೀಸ್‌ ಹಾಗೂ ತಂದೂರಿ ಆಹಾರವೂ ಇಲ್ಲಿದೆ. ಬೆಳಿಗ್ಗೆ ತಿಂಡಿಯೂ ಸಿಗುತ್ತದೆ. ಖಾರವಾದರೂ ಹೆಚ್ಚು ರುಚಿಯಾದ ಊಟವನ್ನು ಇಲ್ಲಿ ಸವಿಯಬಹುದು.

ಸ್ಥಳ: ನವರಂಗ್‌ ಸರ್ಕಲ್‌, ಡಾ.ರಾಜ್‌ಕುಮಾರ್‌ ರಸ್ತೆ, ರಾಜಾಜಿನಗರ. ಮಾಹಿತಿ ಹಾಗೂ ಟೇಬಲ್‌ ಕಾಯ್ದಿರಿಸಲು: 7676323232, 080 3232 3232. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.