ADVERTISEMENT

ಗೂಗಲ್‌ನಿಂದ `ಮ್ಯಾಪಥಾನ್' ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 19:59 IST
Last Updated 15 ಫೆಬ್ರುವರಿ 2013, 19:59 IST
ಗೂಗಲ್‌ನಿಂದ `ಮ್ಯಾಪಥಾನ್' ಸ್ಪರ್ಧೆ
ಗೂಗಲ್‌ನಿಂದ `ಮ್ಯಾಪಥಾನ್' ಸ್ಪರ್ಧೆ   

`2030ರ ವೇಳೆಗೆ ಶೇ 70ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ ಎಂಬ ಅಂದಾಜಿದೆ. ಹೀಗೆ ಪಟ್ಟಣಕ್ಕೆ ಬಂದ ಅವರು ಎಲ್ಲಿಯೂ ಕಳೆದುಹೋಗಬಾರದು. ಅದಕ್ಕಾಗಿ ನಾಳಿನ ಭಾರತಕ್ಕಾಗಿ ನಾವು ಇಂದೇ ಸುಸಜ್ಜಿತ ನಕ್ಷೆಯೊಂದನ್ನು ಸಿದ್ಧಪಡಿಸುತ್ತಿದ್ದೇವೆ.

ಅದಕ್ಕೆ ಈಗಾಗಲೇ ಸಾವಿರಾರು ಮಂದಿ ತಮಗೆ ತಿಳಿದ ಸ್ಥಳಗಳ ಮಾಹಿತಿಯನ್ನು ಮ್ಯಾಪ್ ಮೇಕರ್‌ನಲ್ಲಿ ದಾಖಲಿಸುತ್ತಿದ್ದಾರೆ. ಇನ್ನಷ್ಟು ಮಂದಿ ತಮಗೆ ತಿಳಿದಿರುವ ಸ್ಥಳಗಳನ್ನು ದಾಖಲಿಸುತ್ತಾ ಹೋದಲ್ಲಿ ಸುಭದ್ರ ಭಾರತದ ಪರಿಪೂರ್ಣ ನಕ್ಷೆ ತಯಾರಾಗಲಿದೆ' ಎಂದು ಗೂಗಲ್ ಇಂಡಿಯಾದ ಮುಖ್ಯಸ್ಥ ಲಲಿತೇಶ್ ಕಟ್ರಗಡ್ಡ ಅವರು ತಿಳಿಸಿದರು.

`ಮ್ಯಾಪಥಾನ್ 2013' ಎಂಬ ನಕ್ಷೆ ತಯಾರಿಸುವ ಹೊಸ ಬಗೆಯ ಸ್ಪರ್ಧೆಯನ್ನು ಗೂಗಲ್ ಆಯೋಜಿಸಿದೆ. ಈ ಸಂಬಂಧ ಯಾರಾದರೂ ಗೂಗಲ್ ಮ್ಯಾಪ್ ಮೇಕರ್‌ಗೆ ಲಾಗಾನ್ ಆಗಿ ತಮಗೆ ತಿಳಿದಿರುವ ಪ್ರೇಕ್ಷಣೀಯ ಸ್ಥಳ, ಪೆಟ್ರೋಲ್ ಬಂಕ್, ಹೋಟೆಲ್, ಬ್ಯಾಂಕ್, ಎಟಿಎಂ, ಶಾಲಾ ಕಾಲೇಜು, ಆಸ್ಪತ್ರೆ ಇತ್ಯಾದಿ ಮಾಹಿತಿಯನ್ನು ಗೂಗಲ್‌ನಲ್ಲಿ ದಾಖಲಿಸಬಹುದಾಗಿದೆ. ಅಧಿಕ ಸಂಖ್ಯೆಯಲ್ಲಿ ಸರಿಯಾದ ಮಾಹಿತಿಯನ್ನು ನೀಡಿದ ಮೊದಲ ಒಂದು ಸಾವಿರ ಮ್ಯಾಪ್ ಮೇಕರ್‌ಗಳಿಗೆ ಆಂಡ್ರಾಯ್ಡ ಟಾಬ್ಲೆಟ್, ಸ್ಮಾರ್ಟ್ ಫೋನ್, ಗಿಫ್ಟ್ ವೋಚರ್ ಹಾಗೂ ಗೂಗಲ್ ಮರ್ಚೆಂಡೈಸ್‌ಗಳು ಬಹುಮಾನವಾಗಿ ದೊರೆಯಲಿದೆ.

ಕೇವಲ ಕೆಲವೇ ಕ್ಲಿಕ್‌ಗಳ ಮೂಲಕ ಗೂಗಲ್ ಮ್ಯಾಪ್ ಮೇಕರ್‌ನಲ್ಲಿ ತಮಗೆ ತಿಳಿದ ಮಾಹಿತಿಯನ್ನು ದಾಖಲಿಸಬಹುದಾಗಿದೆ. ನಕ್ಷೆಯಲ್ಲಿ ತಮಗೆ ತಿಳಿದ ಮಾಹಿತಿಯನ್ನು ದಾಖಲಿಸಿ, ಆ ಕ್ಷೇತ್ರಕ್ಕೆ ಪೂರಕ ಮಾಹಿತಿಯನ್ನೂ ನೀಡಿಬಹುದು. ನಂತರ ಉಪಗ್ರಹ ನಕ್ಷೆಯನ್ನು ಕ್ಲಿಕ್ಕಿಸಿ ಉಳಿಸಿಕೊಳ್ಳುವ ಮೂಲಕ ತಮ್ಮ ಮಾಹಿತಿಯನ್ನು ಗೂಗಲ್ ಮ್ಯಾಪ್‌ಮೇಕರ್‌ನಲ್ಲಿ ದಾಖಲಿಸಬಹುದು. `

ಹೀಗೆ ಸಾವಿರಾರು ಉದಯೋನ್ಮುಖ ಮ್ಯಾಪ್ ಮೇಕರ್‌ಗಳು ತಮಗೆ ತಿಳಿದಿರುವ ಮಾಹಿತಿಯನ್ನು ಗೂಗಲ್ ಮ್ಯಾಪ್ ಮೇಕರ್‌ಗೆ ದಾಖಲಿಸಿರುವುದರಿಂದ ಭಾರತದ ಬಹುತೇಕ ನಗರ ಹಾಗೂ ಪಟ್ಟಣಗಳ ಮಾಹಿತಿಗಳು ಈಗ ಲಭ್ಯ. ಆದರೂ ಭಾರತ ಬೃಹತ್ ರಾಷ್ಟ್ರವಾಗಿರುವುದರಿಂದ ಇಲ್ಲಿ ಗಲ್ಲಿಗಳು, ಸಣ್ಣ ಪುಟ್ಟ ಕೇಂದ್ರಗಳು ಎಲ್ಲಿಯೋ ಮರೆಯಾಗಿ ಹೋಗುವ ಸಾಧ್ಯತೆಗಳಿವೆ. ಅವುಗಳನ್ನು ಹುಡುಕಿ ಕೊಡುವ ಪ್ರಯತ್ನ ಇದು. ಈಗಾಗಲೇ ಮೂರನೇ ಒಂದು ಭಾಗದಷ್ಟು ಭಾರತದ ನಕ್ಷೆಯನ್ನು ಗೂಗಲ್ ಮ್ಯಾಪ್‌ಮೇಕರ್‌ಗಳು ತಯಾರಿಸಿದ್ದಾರೆ. ಇನ್ನೂ ಮೂರನೇ ಎರಡು ಭಾಗದಷ್ಟು ಉಳಿದಿದೆ' ಎಂದು ಲಲಿತೇಶ್ ತಿಳಿಸಿದರು.

`ಗೂಗಲ್ ಮ್ಯಾಪ್‌ಮೇಕರ್‌ನಲ್ಲಿ ದಾಖಲಿಸುವ ಪ್ರತಿಯೊಂದು ಮಾಹಿತಿಯ ವಿಶ್ವಾಸಾರ್ಹತೆ ಪರೀಕ್ಷಿಸಲು ಇಲ್ಲಿ ಅದರದ್ದೇ ಆದ ಸೂತ್ರಗಳಿವೆ. ಜತೆಗೆ ಸರಿಯಾದ ಮಾಹಿತಿಯೊಂದಿಗೆ ನಕ್ಷೆ ತಯಾರಿಸುತ್ತಾ ಹೋದಲ್ಲಿ ಆ ವ್ಯಕ್ತಿಯ `ನಂಬಿಕೆ'ಯ ಪ್ರಮಾಣವೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಮಾಹಿತಿ ನೀಡುವುದರ ಜತೆಗೆ ಅದು ಸರಿಯಾಗಿದೆಯೇ ಎಂಬುದು ಖಾತ್ರಿ ಮಾಡಿಕೊಳ್ಳುವುದು ಅತ್ಯವಶ್ಯಕ. ಈ ಸಂದರ್ಭದಲ್ಲಿ ಗ್ರಾಮೀಣ ಭಾರತದ ನಕ್ಷೆ ತಯಾರಿಸಲು ಸಲಹೆ ನೀಡಿದ ಕೇರಳದ ಸಿಎನ್‌ಆರ್ ನಾಯರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.

ಅವರು ಹತ್ತು ಸಾವಿರಕ್ಕೂ ಅಧಿಕ ತಾಣಗಳನ್ನು ನಕ್ಷೆಯಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಕೇರಳದ ಬಹುಪಾಲು ನಕ್ಷೆ ಗೂಗಲ್‌ನಲ್ಲಿ ಸಿದ್ಧಗೊಂಡಿದೆ' ಎಂದು ಅವರು ಇಲ್ಲಿ ಸ್ಮರಿಸಿದರು.

ಕೇವಲ ನಾಲ್ಕು ವರ್ಷದ ಹಿಂದ ಕೆಲವೇ ಗೂಗಲ್ ಎಂಜಿನಿಯರ್‌ಗಳು ಆರಂಭಿಸಿದ ಈ ಮ್ಯಾಪ್ ಮೇಕರ್ ಅಭಿಯಾನದಿಂದಾಗಿ ಇಂದು ಇಡೀ ಜಗತ್ತೇ ಗೂಗಲ್ ಮ್ಯಾಪ್ ಮೇಕರ್ ಬಳಸುವಂತಾಗಿದೆ. ಇದರ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ ಆರಂಭಿಸಿರುವ ಗೂಗಲ್ ಮ್ಯಾಪಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು http://g.co/mapindia2013ಗೆ ಲಾಗಿನ್ ಆಗಿ ತಮಗೆ ತಿಳಿದಿರುವ ತಮ್ಮ ಸುತ್ತಮುತ್ತಲಿನ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಮ್ಯಾಪಥಾನ್ ಫೆ. 12ರಂದು ಆರಂಭಗೊಂಡು ಮಾರ್ಚ್ 25ರವರೆಗೆ ನಡೆಯಲಿದೆ.    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.