ADVERTISEMENT

ಗೃಹೋದ್ಯಮಿಗಳ ಮೇಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST
‘ಆರ್ಯೋತ್ಸವ’ ಪ್ರದರ್ಶನ, ಮಾರಾಟ ಮೇಳದಲ್ಲಿ ಖರೀದಿ ಭರಾಟೆ ಹೀಗಿತ್ತು...
‘ಆರ್ಯೋತ್ಸವ’ ಪ್ರದರ್ಶನ, ಮಾರಾಟ ಮೇಳದಲ್ಲಿ ಖರೀದಿ ಭರಾಟೆ ಹೀಗಿತ್ತು...   

ಗುರುವಾರ ಮಧ್ಯಾಹ್ನ ಹನ್ನೊಂದೂವರೆಯಿಂದ ಸಾಯಂಕಾಲ ಆರೂವರೆ ವರೆಗೂ ಯುಬಿ ಸಿಟಿ ಕಡೆ ಸಾಗುವ ಎಲ್ಲಾ ರಸ್ತೆಗಳಲ್ಲೂ ಏಕ್‌ದಂ ಟ್ರಾಫಿಕ್ ಜಾಮ್. ಸೇಂಟ್ ಮಾರ್ಕ್ಸ್ ರಸ್ತೆಯಿಂದ ವಿಠಲ ಮಲ್ಯ ರಸ್ತೆ ಪ್ರವೇಶಿಸಿದ ವಾಹನಗಳಂತೂ ಯುಬಿ ಸಿಟಿ ತಲುಪಲು ಕನಿಷ್ಠ ಹತ್ತು ನಿಮಿಷ ತೆಗೆದುಕೊಂಡಿರಬಹುದು.

ಯುಬಿ ಸಿಟಿ ಮತ್ತು ಪಕ್ಕದ ಜೆಡಬ್ಲ್ಯೂ ಮಾರಿಯೆಟ್ ತಾರಾ ಹೋಟೆಲ್‌ನ ಭದ್ರತಾ ಸಿಬ್ಬಂದಿಗಳಿಗಂತೂ ಸಿಡುಕಿಲ್ಲದೆ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಪಾರ್ಕಿಂಗ್ ತಾಣಕ್ಕೆ ಕಳುಹಿಸಿಕೊಡುವುದೇ ಹರಸಾಹವಾಗಿತ್ತು.

ಅಲ್ಲಿ ನಡೆದಿದ್ದಾರೂ ಏನು ಅಂತೀರಾ? ಯುಬಿ ಸಿಟಿ ಪಕ್ಕದ ಜೆಡಬ್ಲ್ಯೂ ಮಾರಿಯೆಟ್ ಹೋಟೆಲ್‌ನಲ್ಲಿ ಏರ್ಪಾಡಾಗಿದ್ದ ಡಿಸೈನರ್ ವಸ್ತು ಪ್ರದರ್ಶನ/ ಮಾರಾಟ ಮೇಳ!

ಆದರೆ ಈ ಮೇಳವನ್ನು ನಗರದಲ್ಲಿ ನಡೆಯುವ ಇತರ ಯಾವುದೇ ಮೇಳಕ್ಕೆ ಹೋಲಿಸಿ ಸುಮ್ಮನಾಗಿಬಿಡುವಂತಿಲ್ಲ. ಮನೆಯಲ್ಲೇ ಕುಳಿತು ಅಂತರ್ಜಾಲ ತಾಣದ ಕಿಟಕಿಯಿಂದ ಜಾಗತಿಕ ಮಟ್ಟದ ಗ್ರಾಹಕವರ್ಗಕ್ಕೆ ತಮ್ಮ ಡಿಸೈನರ್ ಉತ್ಪನ್ನಗಳನ್ನು ಪೂರೈಸುತ್ತಿರುವ ಯಃಕಶ್ಚಿತ್ ‘ಗೃಹಿಣಿ’ಯರಿಗಾಗಿ ಏರ್ಪಡಿಸಿದ್ದ ಮೇಳ ಎನ್ನುವುದು ಅದರ ಹೆಗ್ಗಳಿಕೆಯಾಗಿತ್ತು.

‘ನಿಮ್ಮನ್ನೆಂದೂ ನೋಡಿರಲಿಲ್ಲ ಆದರೆ ನಿಮ್ಮಲ್ಲಿ ಖರೀದಿಸಿದ ಪಾರ್ಟಿವೇರ್ ಅನಾರ್ಕಲಿ, ಡಿಸೈನರ್ ಬ್ಯಾಗ್, ಉಡುಗೊರೆಗಳು ಬಹಳ ಮೆಚ್ಚುಗೆಯಾದವು.

ಕಳೆದ ಸಲ ತರಿಸಿಕೊಂಡೆನಲ್ಲ ಸೀರೆಗೆ ಹೊಂದುವ ಓಲೆ, ಲಾಕೆಟ್ ತಗೋಬೇಕಿತ್ತು’ ಎಂದು ಅಲ್ಲಿನ ವಿನ್ಯಾಸಕರನ್ನು ಗ್ರಾಹಕರು ವಿಚಾರಿಸಿಕೊಳ್ಳುತ್ತಿದ್ದರು. ಗುಣಮಟ್ಟದ ಉತ್ಪನ್ನ ಮತ್ತು ಗ್ರಾಹಕರ ನಡುವೆ ಉಂಟಾಗುವ ಬೆಸೆಯುವ ಬಂಧವದು.

ಈ ಮೇಳವನ್ನು ಸಂಘಟಿಸಿದವರು ಗೋವಿಂದ್ ಮತ್ತು ರಾಧಿಕಾ ದಂಪತಿ. ಗೃಹಿಣಿಯರು ಮನೆಯಲ್ಲಿದ್ದುಕೊಂಡು ತಮ್ಮ ನೆಚ್ಚಿನ ಹವ್ಯಾಸಕ್ಕೆ ಉದ್ಯಮದ ರೂಪ ನೀಡಿರುತ್ತಾರೆ. ಮಳಿಗೆ ತೆರೆದು ತಮ್ಮ ಉತ್ಪನ್ನಗಳಿಗೆ ಬ್ರಾಂಡ್‌ನ ಛಾಪು ನೀಡುವುದು ಅವರಿಗೆ ಬೇಕಾಗಿಲ್ಲ. ಅಂತಹ ವ್ಯಾಪಾರ ಚಾಣಾಕ್ಷತೆಯೂ ಕೆಲವರಲ್ಲರಿವುದಿಲ್ಲ. ಆದರೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಅವರು ತಮ್ಮದೇ ಗ್ರಾಹಕವರ್ಗವನ್ನು ಗಿಟ್ಟಿಸಿಕೊಂಡಿರುತ್ತಾರೆ. ಅಂತಹ ಉದ್ಯಮಶೀಲ ಗೃಹಿಣಿಯರಿಗೆ ಅದರಲ್ಲೂ ಮನೆಯಿಂದಲೇ ವಹಿವಾಟು ನಡೆಸುತ್ತಿರುವವರಿಗೆಂದೇ ಈ ಮೇಳವನ್ನು ಸಂಘಟಿಸಿರುವುದು’ ಎಂದು ಮಾಹಿತಿ ನೀಡಿದರು ಈ ದಂಪತಿ.

ಸ್ವತಃ ವಿನ್ಯಾಸಕರಲ್ಲದೆ ಬೇರೆಲ್ಲಿಂದಲೋ ಖರೀದಿಸಿ ಸಂಗ್ರಹಿಸಿದ ಸರಕುಗಳನ್ನು ಮಾರಾಟಕ್ಕಿಟ್ಟ ಹೆಣ್ಣುಮಕ್ಕಳೂ ಅಲ್ಲಿದ್ದರು. ಅಲ್ಲಿದ್ದ 86 ಮಳಿಗೆಗಳಲ್ಲಿಯೂ ಅರೆಕ್ಷಣವೂ ಪುರುಸೊತ್ತಿಲ್ಲದಂತಹ ವ್ಯಾಪಾರ ನಡೆದಿತ್ತು. ಹೇಳಿಕೇಳಿ ಯುಬಿ ಸಿಟಿ ಪ್ರದೇಶ. ಬೆಳಿಗ್ಗೆ 11ರಿಂದ ಸಂಜೆ ಆರರವರೆಗೂ ಗ್ರಾಹಕರು ಕಿಕ್ಕಿರಿದು ಜಮಾಯಿಸಿದ್ದರು. ಐಷಾರಾಮಿ ಕಾರುಗಳಲ್ಲಿ ಬಂದ ಹೆಂಗಳೆಯರು ತಮ್ಮಿಷ್ಟದ ವಿನ್ಯಾಸಕರ ಮಳಿಗೆಗಳಲ್ಲಿ ಮೊದಲು ಖರೀದಿ ಮುಗಿಸಿ ನಂತರ ಉಳಿದ ಮಳಿಗೆಗಳತ್ತ ನಡೆಯುದ್ದರು.

ಪಾರ್ಟಿವೇರ್ ಉಡುಪು ಮತ್ತು ಸೀರೆಗಳ ಮಳಿಗೆಗಳಲ್ಲಿ ಗಾಢ ಬಣ್ಣಗಳೇ ಮೇಲುಗೈ ಸಾಧಿಸಿದ್ದವು. ಹಳದಿ, ಕೆಂಪು, ಗುಲಾಬಿ, ಮೆಜೆಂಟಾ, ರಾಣಿ ಪಿಂಕ್, ಹಸಿರು, ಗಿಳಿ ಹಸಿರು, ನೀಲಿ ಹೀಗೆ ಪ್ರತಿಯೊಂದೂ ಗಾಢ ಬಣ್ಣಗಳ ಉಡುಪುಗಳೇ ಎದ್ದುತೋರುತ್ತಿದ್ದವು. ಮೇಳ ನಡೆದ ತಾಣ ವಿಲಾಸಿಯಾದರೂ ಅಲ್ಲಿದ್ದ ಉಡುಗೆ ತೊಡುಗೆಗಳು ದುಬಾರಿಯಾಗಿರಲಿಲ್ಲ ಎಂಬುದು ಮತ್ತೊಂದು ವಿಶೇಷ. ‘ಆರ್ಯೋತ್ಸವ’ ಎಂಬ ಹೆಸರಿನ ಈ ಮೇಳದಲ್ಲಿದ್ದ 86 ಮಳಿಗೆಗಳಲ್ಲಿ ಬಹುಪಾಲು ಬೆಂಗಳೂರಿನವರೇ ಇದ್ದರು. ಶಿವಮೊಗ್ಗ ಮತ್ತು ಮೈಸೂರಿನಿಂದ ಒಂದಿಬ್ಬರು, ಮಣಿಪುರದ ಬ್ಯಾಗ್ ವಿನ್ಯಾಸಕರೂ ಉತ್ತಮ ವ್ಯಾಪಾರ ಗಿಟ್ಟಿಸಿಕೊಂಡರು.

ಹೀಗೆ ಸೀರೆ, ಉಡುಗೆ ತೊಡುಗೆಗಳ ಸಂಗ್ರಹಗಳತ್ತ ಕಣ್ಣುಹಾಯಿಸಿಕೊಂಡು ಆ ಸಭಾಂಗಣದಿಂದ ಹೊರಬರುತ್ತದ್ದಂತೆ ಕಣ್ಸೆಳೆದದ್ದು ಪುಟಾಣಿಗಳ ಉಡುಗೊರೆಗೆಂದೇ ವಿನ್ಯಾಸ ಮಾಡಿದ್ದ ಗಡಿಯಾರಗಳು, ಕೀ ಬಂಚ್, ಸ್ಲೋಗನ್‌, ಪೇಪರ್‌ವೇಟ್, ಮುಖವಾಡ, ಬೆಡ್‌ಶೀಟ್/ಬೆಡ್‌ಸ್ಪ್ರೆಡ್ ಇತ್ಯಾದಿಯ ಮಳಿಗೆ. ಮಕ್ಕಳು ಗುಳೆಬಂದಂತೆ ಆ ಮಳಿಗೆಯಲ್ಲಿ ನೆರೆದಿದ್ದರು.

ಹೀಗೆ, ಅಪರೂಪದ ‘ಉದ್ಯಮಿ’ಗಳಿಗೆ  ಹಳೆಯ ಹೊಸ ಗ್ರಾಹಕರಲೋಕಕ್ಕೆ ತೆರೆದುಕೊಂಡ ಅನುಭವವನ್ನು ‘ಆರ್ಯೋತ್ಸವ’ ಕಟ್ಟಿಕೊಟ್ಟರೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ, ಕೈಯಲ್ಲಿ ತಯಾರಿಸಿದ ವಿನ್ಯಾಸ ಮಾಡಿದ ಸರಕು, ಸಾಮಗ್ರಿಗಳನ್ನು ಖರೀದಿಸಿದ ಖುಷಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.