ADVERTISEMENT

ಗೆದ್ದವಳು ನಾನೇ: ಕಾರುಣ್ಯ

ಬಿಗ್‌ ಬಾಸ್‌

ರೋಹಿಣಿ ಮುಂಡಾಜೆ
Published 20 ನವೆಂಬರ್ 2016, 19:30 IST
Last Updated 20 ನವೆಂಬರ್ 2016, 19:30 IST
ಕಾರುಣ್ಯ ರಾಮ್‌
ಕಾರುಣ್ಯ ರಾಮ್‌   

*ಆರನೇ ವಾರ ಹೊರಗೆ ಬರ್ತೀರಿ ಅಂದುಕೊಂಡಿದ್ದಿರಾ?
ಖಂಡಿತಾ ಇಲ್ಲ. ಮಾಳವಿಕಾ, ಮೋಹನ್‌, ಭುವನ್‌ ಮತ್ತು ಪ್ರಥಮ್‌  ಅವರನ್ನು ಒಬ್ಬೊಬ್ಬರನ್ನಾಗಿ ‘ಸೇಫ್‌’ ಅಂತ ಸುದೀಪ್‌ ಅವರು ಪ್ರಕಟಿಸಿದಾಗ ಉಳಿದವಳು ನಾನೇ. ಅಂದರೆ ಎಲಿಮಿನೇಟ್‌ ಆದವಳು ನಾನೇ ಎಂಬುದನ್ನು ಅರಗಿಸಿಕೊಳ್ಳಲೇ ಆಗಲಿಲ್ಲ. ನಿಜಕ್ಕೂ ದೊಡ್ಡ ಶಾಕ್‌ ಆಗಿದೆ.

*ಶಾಕ್‌ ಯಾಕೆ?
ಆರು ವಾರಗಳಲ್ಲಿ ಇದೇ ಮೊದಲ ಬಾರಿಗೆ ನಾನು ನಾಮಿನೇಟ್‌ ಆಗಿದ್ದೆ. ಮೊದಲ ವಾರದಿಂದಲೂ ನಾಮಿನೇಟ್‌  ಆಗುತ್ತಿರುವವರು ಉಳಿದುಕೊಂಡಿದ್ದಾರೆ. ಎಲ್ಲಾ ಟಾಸ್ಕ್‌ಗಳನ್ನು ಪುರುಷರಿಗೆ ಸರಿಸಮಾನವಾಗಿ ಶ್ರಮವಹಿಸಿ ಮಾಡಿದ್ದೇನೆ. ಅದಕ್ಕಿಂತ ಮುಖ್ಯವಾಗಿ ನಾಮಿನೇಶನ್‌ ಆದ ಒಂದೇ ಸಲಕ್ಕೆ ಯಾರೂ ಎಲಿಮಿನೇಟ್‌ ಆಗಿರಲಿಲ್ಲ. ಯಾವ ಆಯಾಮದಿಂದ ನೋಡಿದರೂ ನಾನು ಈ ವಾರ ಎಲಿಮಿನೇಟ್‌ ಆಗುವ  ಸ್ಪರ್ಧಿಯೇ ಅಲ್ಲ. ಕನಿಷ್ಠ 10ರಿಂದ 12 ವಾರ ಇರುತ್ತೇನೆ ಎಂದು ನಿರೀಕ್ಷಿಸಿದ್ದೆ.

*ಆರು ವಾರಗಳ ಅನುಭವ ಹೇಗಿತ್ತು?
ಇದು ಜೀವಿತಾವಧಿಯಲ್ಲಿ ಒಂದೇ ಬಾರಿ ಸಿಗಬಹುದಾದ ಅವಕಾಶ. ಹಾಗಾಗಿ ಇದು ನನ್ನ ಪಾಲಿಗೆ ಅದ್ಭುತ ಮತ್ತು ಅತ್ಯಂತ ಮಹತ್ವದ ಅನುಭವ. ಬೆಳಿಗ್ಗೆ ಎದ್ದರೆ ಒಂದು ಹಾಡು, ಟಾಸ್ಕ್‌, ಮಧ್ಯೆ ನಿದ್ದೆ ತೂಗಿದರೆ ‘ಎದ್ದೇಳು ಮಂಜುನಾಥ’ ಹಾಡು, ಎಲ್ಲಾ ದೀಪಗಳು ಆರಿದ ಮೇಲೆ ನಿದ್ದೆ... ಇಂತಹುದೊಂದು ಶಿಸ್ತಿನ ಚೌಕಟ್ಟಿಗೆ ಬದ್ಧಳಾಗಿದ್ದೆ. ಈಗ ಅದೇ ಗುಂಗಿನಲ್ಲಿದ್ದೇನೆ. ಸ್ವಲ್ಪ ದಿನ ಬೇಕು ನಮ್ಮ ದೈನಂದಿನ ಬದುಕಿಗೆ ಒಗ್ಗಿಕೊಳ್ಳಲು.

*ಯಾವ ಟಾಸ್ಕ್‌ ಹೆಚ್ಚು ಸವಾಲು ಅಂತ ಅನಿಸಿತು?
ಐಸ್‌ ಗಡ್ಡೆ ಮೇಲೆ ನಿಂತು ಗೆದ್ದದ್ದು! ಕೀರ್ತಿ ಕುಮಾರ್‌ಗೆ ಎದುರಾಳಿಯಾಗಿದ್ದರಿಂದ ಅವರ ಮೇಲೆ ಎಲ್ಲರಿಗೂ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ ಹೆಣ್ಣು ಮಕ್ಕಳ ಕೈಲಾಗಲ್ಲ ಎಂಬ ಸಿದ್ಧಸೂತ್ರವನ್ನು ಮುರಿಯೋದು, ವೈಯಕ್ತಿಕವಾಗಿ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಮತ್ತು ಹಸಿರು ಅಂಗಿ ತೊಟ್ಟಿದ್ದ ನಮ್ಮ ತಂಡಕ್ಕೆ ಆ ವಾರದ ಲಕ್ಷುರಿ ಬಜೆಟ್‌ ಒದಗಿಸಿಕೊಡೋದು ನನ್ನ ಮುಂದಿದ್ದ ಸವಾಲು. ಅದನ್ನು ಸಮರ್ಥವಾಗಿ ಎದುರಿಸಿ ಗೆದ್ದೆ.

*ಈ ಬಾರಿಯಂತೂ ಕನ್ನಡದವರೇ ಒಳಗಿದ್ದರೂ ಭಾಷೆಯ ಶಿಸ್ತು ಪಾಲಿಸುತ್ತಿಲ್ಲ ಎಂದೆನಿಸುತ್ತದೆ?
ನಿಜ. ಕೆಲವರಿಗೆ ಇಂಗ್ಲಿಷ್‌ ಮಾತನಾಡುವುದು ಒಂದು ಖಯಾಲಿ. ಬಿಗ್‌ಬಾಸ್‌ನ ಷರತ್ತುಗಳಲ್ಲಿ ಕನ್ನಡದಲ್ಲೇ ಮಾತನಾಡುವುದೂ ಒಂದು. ಅತಿಯಾಗಿ ಇಂಗ್ಲಿಷ್‌ ಮಾತನಾಡಿದ್ದಕ್ಕೆ ಬಹುತೇಕ ಎಲ್ಲರಿಗೂ ಬಿಗ್‌ಬಾಸ್‌ನಿಂದ ನೋಟಿಸ್‌ ಬಂದಿದೆ. ‘ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡದಲ್ಲೇ ಮಾತನಾಡಬೇಕು ಎಂದು ಬಿಗ್‌ಬಾಸ್‌ ಆದೇಶಿಸುತ್ತಾರೆ’ ಎಂಬ ಒಕ್ಕಣೆ ಅದರಲ್ಲಿರುತ್ತದೆ. ಆದರೆ ನನಗೆ, ಕೀರ್ತಿಕುಮಾರ್‌ ಮತ್ತು ಪ್ರಥಮ್‌ಗೆ ಈ ನೋಟಿಸ್‌ ಬಂದಿರಲಿಲ್ಲ.

*ಸ್ಪರ್ಧಿಗಳ ನಡುವೆ ‘ಫಿಕ್ಸಿಂಗ್’ ನಡೀತಿದೆಯಾ?
ಯಾರು ಗೆಲ್ಲಬೇಕು ಎಂಬ ಬಗ್ಗೆ ಫಿಕ್ಸಿಂಗ್‌ ನಡೆದಿದೆ ಎಂಬ ಬಗ್ಗೆ ಬಿಗ್‌ಹೌಸ್‌ ಒಳಗೆ ಟೀಕೆ ಟಿಪ್ಪಣಿ ಕೇಳಿಬರುತ್ತಿದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈ ಷೋಗೆ ಬರುವುದಕ್ಕೂ ಮೊದಲೇ ಸ್ನೇಹಿತರಾಗಿದ್ದವರು ಕೆಲವರು ಪರಸ್ಪರರನ್ನು ರಕ್ಷಿಸಿಕೊಳ್ಳಲು ಮತ್ತು ಸುರಕ್ಷಿತವಾಗಿಟ್ಟುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದು ನಿಜ. ಶಾಲಿನಿ, ಕೀರ್ತಿಕುಮಾರ್ ಮತ್ತು ನಿರಂಜನ್‌ ಅವರು ಒಬ್ಬರಿಗೊಬ್ಬರು ಎಲ್ಲಾ ಸಂದರ್ಭಗಳಲ್ಲೂ ನೆರವಿಗೆ ಧಾವಿಸುವುದು, ಒಬ್ಬರು ಮಂಕಾದರೆ ಎಲ್ಲರೂ ಮಂಕಾಗುವುದು, ಒಬ್ಬರು ಅತ್ತರೆ ತಬ್ಬಿಕೊಂಡು ಗೋಳೋ ಎಂದು ಅಳುವುದು ಇದೆಲ್ಲ ಅತಿರೇಕ ಅನಿಸುತ್ತದೆ.

*ಈ ಸೀಸನ್‌ನ ಗೆಲುವು ಯಾರದ್ದಾಗಬಹುದು?
ನಿಜ ಹೇಳಲಾ? ನಾಲ್ಕನೇ ಸೀಸನ್‌ನಲ್ಲಿ ಗೆದ್ದವಳು ನಾನೇ. ಇದನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಗಿಮಿಕ್‌, ನಾಟಕ, ಬೂಟಾಟಿಕೆ, ಅವರಿವರ ಬಗ್ಗೆ ಟೀಕೆ, ಅಪಹಾಸ್ಯ ಮಾಡದೆ ನಾನು ನಾನಾಗೇ ಇದ್ದೆ. ಹೊರಗೆ  ಇದ್ದಾಗಿನ ಕಾರುಣ್ಯ ಆಗಿಯೇ ಹೊರಬಂದಿದ್ದೇನೆ. ‘ಓ ಇವಳ ನಿಜವಾದ ಮುಖ ಇದು’ ಎಂಬ ಟೀಕೆಯನ್ನು  ಹೊರಗೆ ಬಂದ ನಂತರವೂ ಎದುರಿಸುವ ಕಷ್ಟ ನನಗಿಲ್ಲ. ವೈಯಕ್ತಿಕ ಗೌರವಕ್ಕೆ ಧಕ್ಕೆ ಬಂದಾಗ ಮಾತ್ರ ನಾನು ಕಟುವಾಗಿ ಎದಿರೇಟು ನೀಡಿದ್ದೇನೆ. ಹಾಗಾಗಿ, ವಿನ್ನರ್‌ ನಾನೇ.

*ಮುಂದಿನ ಪಯಣದ ಬಗ್ಗೆ?
ನಾನು ಯಾವುದರ ಬಗ್ಗೆಯೂ  ತೀರ್ಮಾನಿಸಿಲ್ಲ. ‘ವಜ್ರಕಾಯ’ ನನಗೆ ನಿಜಕ್ಕೂ ಒಳ್ಳೆ ಬ್ರೇಕ್‌ ಕೊಟ್ಟ ಸಿನೆಮಾ. ನನ್ನ ನಟನಾ ಸಾಮರ್ಥ್ಯವನ್ನು ಅಲ್ಲಿ ಸಾಬೀತು ಮಾಡಿದ್ದೇನೆ. ಪರಭಾಷಾ ನಟಿಯರು ಕನ್ನಡದ ಕಮರ್ಷಿಯಲ್‌ ಚಿತ್ರಗಳಲ್ಲಿ ನಟಿಸಿ ಗೆಲ್ಲುತ್ತಾರೆ. ಆದರೆ ನಾವು ಅಂತಹ ಪಾತ್ರಗಳನ್ನು ನಿರ್ವಹಿಸಲು ಸಿದ್ಧವಿದ್ದರೂ ಅವಕಾಶ ಸಿಗುತ್ತಿಲ್ಲ. ತಮಿಳಿನ ಎರಡು ಚಿತ್ರಗಳ ಬಗ್ಗೆ ಮಾತುಕತೆ ನಡೆದಿತ್ತು. ಬಿಗ್‌ಬಾಸ್‌ಗೆ ಹೋಗಿದ್ದರಿಂದ ಅದೇನಾಯ್ತೋ ಗೊತ್ತಿಲ್ಲ. ನನಗೆ ಮತ್ತೊಮ್ಮೆ ದೊಡ್ಡ ಬ್ರೇಕ್‌ ಸಿಗುತ್ತದೆ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕಾಯುತ್ತಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.