ADVERTISEMENT

ಗೌರಿ ದತ್‌ಗೆ ಅಜ್ಜನ ತೋರಿಸುವಆಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2012, 19:30 IST
Last Updated 27 ಫೆಬ್ರುವರಿ 2012, 19:30 IST
ಗೌರಿ ದತ್‌ಗೆ ಅಜ್ಜನ ತೋರಿಸುವಆಸೆ
ಗೌರಿ ದತ್‌ಗೆ ಅಜ್ಜನ ತೋರಿಸುವಆಸೆ   

ಪಂಚರಂಗಿ`
ನನ್ನಜ್ಜನ ಬಗ್ಗೆಯೇ ಒಂದು ಚಿತ್ರ ಮಾಡಬೇಕಿದೆ. ನಮ್ಮ ಕುಟುಂಬದ ದೃಷ್ಟಿಯಲ್ಲಿ ಅಜ್ಜ ಹೇಗಿದ್ದ ಎಂಬುದರ ಬಗ್ಗೆ...~

ಹೀಗೆ ಅಜ್ಜನ ಬಗ್ಗೆ ಅಪಾರ ಪ್ರೀತಿ, ಗೌರವ ಇರಿಸಿಕೊಂಡು ಮಾತನಾಡುತ್ತಿರುವವಳು ಗೌರಿ ದತ್. ಆಕೆ ಗುರುದತ್‌ನ ಮೊಮ್ಮಗಳು.

ಹಿಂದಿ ಚಲನಚಿತ್ರ ರಂಗದಲ್ಲಿ ಮಿಂಚಿನಂತೆ ಮಿನುಗಿ ಮರೆಯಾದ ತಾರೆ, ನಿರ್ದೇಶಕ, ಗುರುದತ್. ತಮ್ಮ 39ನೇ ವಯಸ್ಸಿನಲ್ಲಿಯೇ ನಭ ಸೇರಿ ಚುಕ್ಕಿಯಾದ ನಟ.
ಗುರುದತ್ ಜೀವನವನ್ನು ದುರಂತ ಕತೆಯಂತೆ ಬಿಂಬಿಸಲಾಗುತ್ತದೆ.

ಅವರ ಸಾಧನೆಯನ್ನೂ ಹಾಗೂ ಕುಟುಂಬದಲ್ಲಿ ಅವರ ಪಾತ್ರವನ್ನೂ ಹೇಳುವಂಥ ಚಿತ್ರ ನಿರ್ಮಿಸುವ ಆಸೆ ನನ್ನದು ಎಂದು ಗೌರಿ ದತ್ ಭೂಪಾಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಪುಣೆಯಲ್ಲಿರುವ ಗುರುದತ್ ಫಿಲ್ಮ್ಸ್ ಅಕಾಡೆಮಿಯಲ್ಲಿ ನಟನೆಗಾಗಿ ಕೋರ್ಸ್ ಅನ್ನೂ ಮುಗಿಸಿದ್ದಾರೆ ಗೌರಿ. ತನ್ನಜ್ಜನ `ಪ್ಯಾಸಾ~, `ಕಾಗಜ್ ಕೆ ಫೂಲ್~, `ಚೌದ್ವಿ ಕಾ ಚಾಂದ್~ ಮುಂತಾದ ಚಿತ್ರಗಳನ್ನು ನೋಡಿ, ಮೆಚ್ಚಿರುವುದಾಗಿ ಹೇಳಿಕೊಂಡಿದ್ದಾರೆ.

ತಂದೆ ಅರುಣ್ ಗುರುದತ್ ಫ್ಯಾಶನ್ ಡಿಸೈನರ್ ಆಗಿದ್ದಾರೆ. ಈ ವರೆಗೂ ನನ್ನಜ್ಜಿ ನಮ್ಮೆಲ್ಲರನ್ನೂ ಚಿತ್ರ ರಂಗದಿಂದ ಒಂದು ಅಂತರ ಕಾಯ್ದುಕೊಳ್ಳುವಂತೆಯೇ ನೋಡಿಕೊಂಡಿದ್ದರು. ಆದರೆ ನಾನಂತೂ ನಟಿಯಾಗಿಯೇ ತೀರಬೇಕು ಎಂಬ ಹಟ ಹೊತ್ತಿದ್ದೆ. ಈಗಲೂ ಚಿತ್ರರಂಗದಲ್ಲಿಯೇ ನನ್ನ ಭವಿಷ್ಯ ಅರಸುವೆ ಎಂದೂ ಗೌರಿ ದಿಟ್ಟಳಾಗಿ ಹೇಳಿದ್ದಾಳೆ. ಇದಕ್ಕೆ ಅರುಣ್ ದತ್ ಸಹ ಈಗ ಬೆಂಬಲಿಸಿದ್ದಾರೆ.   ನಾನೂ ನನ್ನಜ್ಜನಷ್ಟೇ ಆಕರ್ಷಕವಾಗಿದ್ದೇನೆ ಎಂದೂ ಹೇಳುತ್ತಾಳೆ ಗೌರಿ.

ನನಗೆ ನನ್ನಜ್ಜನಷ್ಟೇ ಆಕರ್ಷಕ ಕಂಗಳು ಮತ್ತವರದ್ದೇ ದೂರದೃಷ್ಟಿ ಹಾಗೂ ಕನಸುಗಳಿವೆ. ಸಿನೆಮಾ ಲೋಕದಲ್ಲಿ ಪ್ರಯೋಗಗಳಿಗೆ ಹೆಸರಾಗಿದ್ದ ಗುರುದತ್ ಅವರ ಇನ್ನೊಂದು ಮುಖವನ್ನು ಸಿನೆಮಾ ಮೂಲಕವೇ ತೋರಿಸುವ ಆಸೆ ಇದೆ ಎಂದೆಲ್ಲ 21 ವರ್ಷದ ಗೌರಿ ಪಟಪಟನೆ ಮಾತನಾಡಿದ್ದಾಳೆ.

ಅನುರಾಗ್ ಕಶ್ಯಪ್ ನಿರ್ದೇಶದನ ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಲಿರುವ ಗೌರಿಗೆ ತನ್ನಜ್ಜನ ಜೀವನ ಚಿತ್ರಕ್ಕೆ ತರಬೇಕು ಎಂಬ ಮಹದಾಸೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.