ADVERTISEMENT

‘ಗ್ಲಾಮರ್‌ಗೆ ಇನ್ನು ಸ್ವಲ್ಪ ವಿರಾಮ’

ನೀನಾ ಸಿ.ಜಾರ್ಜ್
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಕಾಮ್ನಾ ಜೇಠ್ಮಲಾನಿ
ಕಾಮ್ನಾ ಜೇಠ್ಮಲಾನಿ   

*‘ಗರುಡ’ ಚಿತ್ರವನ್ನು ಒಪ್ಪಿಕೊಳ್ಳಬೇಕು ಎಂದು ಅನಿಸಿದ್ದು ಯಾಕೆ?
ಈ ಚಿತ್ರದಲ್ಲಿ ನನ್ನದು ಗೃಹಿಣಿಯ ಪಾತ್ರ. ಸರಳವಾದ, ಕೌಟುಂಬಿಕ ವಸ್ತುವನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಗ್ಲಾಮರಸ್‌ ಅಲ್ಲದ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿದೆ. ನಾನೂ ಒಬ್ಬ ಗೃಹಿಣಿಯಾಗಿರುವ ಕಾರಣ ಈ ಪಾತ್ರ ನನ್ನ ಮನಸ್ಸಿಗೆ ಹತ್ತಿರವಾದುದು ಎಂದೆನಿಸಿತು.

*ಅಂದರೆ ಈ ಪಾತ್ರ ನಿಮಗೆ ಹೊಂದುತ್ತದಾ?
ನನಗೆ ಖಂಡಿತಾ ಹೊಂದುತ್ತದೆ. ಯಾಕೆಂದರೆ ನನ್ನ ನಿಜ ಜೀವನದಲ್ಲಿ ನಾನು ಏನಾಗಿದ್ದೇನೋ ಪಾತ್ರವೂ ಅದೇ ಆಗಿದೆ. ಪಾತ್ರವೂ ನನ್ನ ಸ್ವಭಾವಕ್ಕೆ ಹೊಂದುವಂತೆಯೇ ಇದೆ.

*ಶ್ರೀನಗರ ಕಿಟ್ಟಿ ಅವರ ಜತೆಗೆ ಕೆಲಸ ಮಾಡಿದ ಅನುಭವ ಹೇಗಿದೆ?
ನಾನು ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. ಆದರೆ ಅವರು ವೃತ್ತಿಯಲ್ಲಿ ಪಳಗಿದ ನಟ ಮತ್ತು ಒಳ್ಳೆಯವರು ಎಂದು ಬಲ್ಲೆ.

ADVERTISEMENT

*ಸಿನಿಮಾಗಳ ಆಯ್ಕೆಯಲ್ಲಿ ಬಹಳ ಲೆಕ್ಕಾಚಾರ ಮಾಡುತ್ತೀರಿ.
ಸ್ವಲ್ಪ ಮಟ್ಟಿಗೆ ನಿಜ. ಯಾಕೆಂದರೆ ನಾನು ಮಾಡುವ ಕೆಲಸ ಮನಸ್ಸಿಗೊಪ್ಪುವಂತಿರಬೇಕು. ಕನ್ನಡದ ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುವಂತೆ ನನಗೆ ಈ ಹಿಂದೆ ಅವಕಾಶಗಳು ಬಂದಿದ್ದವು. ಆದರೆ ನನಗೆ ಇಷ್ಟವಾಗದ ಕಾರಣ ಕೈಬಿಟ್ಟಿದ್ದೆ.

*ನೀವು ಗ್ಲಾಮರಸ್‌ ಪಾತ್ರಗಳಿಂದ ದೂರ ಉಳಿದದ್ದೇಕೆ?
ನಾನು ಸಾಕಷ್ಟು ಗ್ಲಾಮರಸ್‌ ಪಾತ್ರಗಳನ್ನು ಮಾಡಿದ್ದೇನೆ. ಹಾಗಾಗಿ ಈಗ ನನ್ನ ವೃತ್ತಿಜೀವನದಲ್ಲಿ ಸ್ವಲ್ಪ ಬದಲಾವಣೆ ತಂದುಕೊಳ್ಳಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅಲ್ಲದೆ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರಗಳನ್ನು ಹೆಚ್ಚು ಮಾಡಬೇಕು ಎಂಬುದು ನನ್ನ ಸದ್ಯದ ಇಚ್ಛೆ.

*ಮುಂದೆ?
ಇನ್ನೂ ಹೆಸರು ಇಡದ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದೇನೆ. ನಾಯಕಿಪ್ರಧಾನ ಸಿನಿಮಾವದು. ಕತೆಯ ಬಗ್ಗೆ ವಿವರ ಕೊಡಲಾರೆ. ಆದರೆ ಹಾಸ್ಯ ಮತ್ತು ಥ್ರಿಲ್ಲರ್‌ ಸಿನಿಮಾ ಆಗಿರುತ್ತದೆ.

*ಇತರ ಹವ್ಯಾಸ?
ನಾನು ಪುಸ್ತಕಪ್ರೇಮಿ. ತುಂಬಾ ಓದುತ್ತೇನೆ. ಇತ್ತೀಚೆಗೆ ಬ್ಯಾಡ್ಮಿಂಟನ್‌ ಬಗ್ಗೆ ಒಲವು ಹೆಚ್ಚುತ್ತಿದೆ. ವಾರದಲ್ಲಿ ಎರಡು ಬಾರಿ ಬ್ಯಾಡ್ಮಿಂಟನ್‌ ಆಡುತ್ತೇನೆ. ಪ್ರವಾಸ ಮಾಡುವುದು ನನಗಿಷ್ಟ. ಆಗಾಗ ಹೊಸ ಸ್ಥಳಗಳಿಗೆ ಭೇಟಿಯ ಯೋಜನೆ ಹಾಕುತ್ತಿರುತ್ತೇನೆ.

*ಕನ್ನಡದಲ್ಲಿ ಇನ್ನಷ್ಟು ಅವಕಾಶಗಳು ಬಂದರೆ?
ಈಗಾಗಲೇ ಹಲವಾರು ಅವಕಾಶಗಳು ಬಂದಿವೆ. ಕನ್ನಡದಲ್ಲಿ ನಟಿಸುವುದು ನನಗೆ ಬಹಳ ಇಷ್ಟವೂ ಕೂಡಾ. ಆದರೆ ಸಾಹಸಪ್ರಧಾನ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.