ADVERTISEMENT

ಚಳಿಗೆ ಹೇಳಿ ಗುಡ್‌ಬೈ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಬೆಳಗಿನ ಸಕ್ಕರೆ ನಿದ್ದೆಯ ಅಮಲು ಹೇಗಿದೆ ನೋಡಿ
ಬೆಳಗಿನ ಸಕ್ಕರೆ ನಿದ್ದೆಯ ಅಮಲು ಹೇಗಿದೆ ನೋಡಿ   

ಚಳಿರಾಯ ಮೆಲ್ಲ ಮೆಲ್ಲಗೆ ಒಳಮನೆಗೆ ಬಂದಿದ್ದಾನೆ. ಮುದುಡಿ ಮಲಗಿದ ಮಕ್ಕಳು ‘ಇವತ್ತೊಂದು ದಿನ ಶಾಲೆಗೆ ಹೋಗಲ್ಲಮ್ಮಾ’ ಎಂದೋ, ‘ಇನ್ನೂ ಬಿಸಿಲು ಬಂದಿಲ್ಲ ನಾ ಎದ್ದೇಳಲ್ಲ’, ‘ಅಮ್ಮಾ ಚಳಿ, ಸ್ವಲ್ಪ ಹೊತ್ತು ಮಲ್ಕೋತೀನಿ’ ಎಂದೋ ಅಮ್ಮನ ಮುತ್ತಿನ ಮಳೆಗೂ ಕ್ಯಾರೇ ಅನ್ನದೆ ಮತ್ತೆ ಮುಸುಕೆಳೆಯುತ್ತಿವೆ.

‘ಇನ್ನೂ ಎದ್ದಿಲ್ವಾ ಸ್ಕೂಲ್‌ ಬಸ್‌ ಬರಲು ಇನ್ನು ಹತ್ತೇ ನಿಮಿಷ ಉಳಿದಿರೋದು ಕಣೋ’ ಎಂದು ಅಮ್ಮ ಮತ್ತೆ ಮುದ್ದುಗರೆಯುತ್ತಾಳೆ. ಮುಸುಕು ಸರಿಯದಿದ್ದರೆ ದಬಾಯಿಸುವುದೊಂದೇ ದಾರಿ. ಈ ಚಳಿಗಾಲ ಯಾಕಾದ್ರೂ ಬರುತ್ತದೋ ಎಂಬ ಸುಪ್ರಭಾತ...

ನಿಮ್ಮ ಮನೆಯ ಕತೆಯೂ ಇದೇನಾ? ಚಳಿಗಾಲವನ್ನು ಮಕ್ಕಳಸ್ನೇಹಿಯಾಗಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಬನ್ನಿ ಮಾತಾಡೋಣ...

ADVERTISEMENT

ನಾಳೆ ಬೆಳಗಿನ ತಿಂಡಿ ಏನು, ಸಾಂಬಾರಿಗೆ ಏನು ಎಂದು ಹಿಂದಿನ ದಿನವೇ ಲೆಕ್ಕಾಚಾರ ಹಾಕುತ್ತೀರಲ್ಲ ಆ ಪಟ್ಟಿಗೆ ಇನ್ನೂ ಕೆಲವು ಅಂಶಗಳನ್ನು ಸೇರಿಸಿಕೊಳ್ಳಿ. ಇದು ಚಳಿಗಾಲದ ವಿಶೇಷ ಅಂದುಕೊಳ್ಳಿ. ನಿಮ್ಮ ಮಗು ಸಮಯಕ್ಕೆ ಸರಿಯಾಗಿ ಎದ್ದು ‘ಅಪ್‌ಡೇಟೆಡ್‌’ ಆಗಿ ಶಾಲೆಗೆ ಹೊರಡುವಲ್ಲಿ ಈಗ ಆಗುತ್ತಿರುವ ಸಮಸ್ಯೆಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಹೊಸ ಅಂಶಗಳನ್ನು ಸೇರಿಸಿಕೊಳ್ಳಬೇಕು. ಅಲ್ವೇ?

ಬೆಳಿಗ್ಗೆ 7.20ಕ್ಕೆ ನಿಮ್ಮ ಮಕ್ಕಳ ಶಾಲಾ ಬಸ್‌ ಮನೆ ಮುಂದೆ ಬರುತ್ತದೆ ಅಂದುಕೊಳ್ಳಿ. ಇವತ್ತೂ ಅವರು ತಡವಾಗಿ ಎದ್ದ ಕಾರಣ ಶಾಲೆಯ ಬಸ್‌ ಹೊರಟುಹೋಗಿದೆ. ಇಷ್ಟಕ್ಕೂ ನೀವು ಎದ್ದು ಬೆಳಗಿನ ಉಪಾಹಾರ ಸಿದ್ಧವಾಗಿದ್ದೇ ತಡವಾಗಿತ್ತಲ್ಲ... ಹೀಗೆ ಚಳಿಗೆ ಸಜ್ಜುಗೊಳ್ಳುವ ಸವಾಲು ಸಣ್ಣದೇನಲ್ಲ.

ಬೇಸಿಗೆಯಲ್ಲಿ ರಾತ್ರಿಯೂ ನಾವು ಬೆವರುವುದು ಸಾಮಾನ್ಯ. ಹಾಗಾಗಿ ಮಕ್ಕಳನ್ನು ಬೆಳಿಗ್ಗೆ ಸ್ನಾನ ಮಾಡಿಸುತ್ತೇವೆ. ಆದರೆ ಚಳಿಗಾಲದಲ್ಲಿ ಮಕ್ಕಳಿಗೆ ರಾತ್ರಿಯೇ ಸ್ನಾನ ಮಾಡಿಸಿಬಿಡಿ. ಮಕ್ಕಳ ಸಮವಸ್ತ್ರಕ್ಕೆ ರಾತ್ರಿಯೇ ಇಸ್ತ್ರಿ ಮಾಡುವುದು ಸೂಕ್ತ. ಶೂಗಳನ್ನು ಪಾಲಿಶ್‌ ಮಾಡಿಟ್ಟುಕೊಳ್ಳಿ. ಇಲ್ಲಿಗೆ ಬೆಳಿಗ್ಗೆ ಮಾಡುತ್ತಿದ್ದ ಮೂರು ಕೆಲಸಗಳು ರಾತ್ರಿಯೇ ಮುಗಿದಂತಾಯಿತು.

ಚಳಿಗಾಲದಲ್ಲಿ ನಲ್ಲಿಯ ನೀರು ಮುಟ್ಟಲೂ ಸಾಧ್ಯವಿಲ್ಲದಷ್ಟು ತಂಪಾಗಿರುವುದು ಸಹಜ. ಈ ಕಾರಣಕ್ಕೆ ಮಕ್ಕಳು ನೀರು ಮುಟ್ಟಲೂ ಹಿಂಜರಿಯುತ್ತಾರೆ. ರಾತ್ರಿಯಿಡೀ ಬೆಚ್ಚಗೆ ಮಲಗಿದ್ದವರು ಬೆಳಿಗ್ಗೆ ಎದ್ದೇಳುವಾಗ ಅಸಹನೀಯ ಚಳಿ ಎನಿಸುತ್ತದೆ.

ಎದ್ದ ತಕ್ಷಣ ಶೌಚಗೃಹಕ್ಕೆ ಹೋಗುವುದಕ್ಕೂ ಮೊದಲು ಅವರಿಗೆ ಹದವಾದ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಲು ಹೇಳಿ. ಒಂದು ಲೋಟ ಅಷ್ಟೇ ಹದದ ಬಿಸಿನೀರು ಕುಡಿಸಿ. ಇದರಿಂದ ಶೌಚಕ್ರಿಯೆ ಸಲೀಸಾಗಿ ಆಗುತ್ತದೆ. ಕಕ್ಕಸು ಮಾಡಿ ಶುಚೀಕರಿಸಲೂ ಹದ ಬಿಸಿನೀರನ್ನೇ ಬಳಸಿ. ಇದರಿಂದ ಮಕ್ಕಳ ಚಳಿ ಓಡಿಹೋಗುತ್ತದೆ.

ಒಳ್ಳೆಯ ಮೂಡ್‌ನೊಂದಿಗೆ ದಿನಚರಿ ಆರಂಭವಾದರೆ ಮುಂದಿನ ಕೆಲಸ ಸರಳವಾಗುತ್ತದೆ. ಬ್ರಶ್‌ ಮಾಡಿ ಬಾಯಿ ತೊಳೆಯಲು, ಕೈ ಕಾಲು ಮುಖ ತೊಳೆಯಲೂ ಬಿಸಿನೀರನ್ನೇ ಕೊಡಿ. ಇದರಿಂದ ಮಕ್ಕಳು ಹೊಸ ಹುರುಪಿನಿಂದ ಮುಂದಿನ ಚಟುವಟಿಕೆಗಳಿಗೆ ಸಹಕರಿಸುತ್ತಾರೆ.

ಸಮವಸ್ತ್ರ ತೊಡುವಾಗ ಮಕ್ಕಳು ನೆಲಹಾಸು ಅಥವಾ ತೊಳೆಯಲು ಹಾಕುವ ಬಟ್ಟೆಯ ಮೇಲೆ ನಿಲ್ಲಲಿ. ಸಾಕ್ಸ್‌ ಧರಿಸುವವರೆಗೂ ನೆಲಕ್ಕೆ ಕಾಲು ಸೋಕದಿದ್ದರೆ ಅವರಿಗೆ ಚಳಿಯ ಅನುಭವವೇ ಆಗದು. ಸಾಧ್ಯವಾದಷ್ಟೂ ಮಟ್ಟಿಗೆ ಮಂಡಿ ಮೇಲಿನ ಚಡ್ಡಿ ಹಾಗೂ ಅರ್ಧ ತೋಳಿನ ಅಂಗಿ ಹಾಕುವುದನ್ನು ತಪ್ಪಿಸಿ (ಇದು ಮನೆಗೂ ಅನ್ವಯವಾದರೆ ಒಳ್ಳೆಯದು). ಸಮವಸ್ತ್ರದ ಅಂಗಿ ಅರ್ಧ ತೋಳಿನದ್ದೇ ಆದರೆ ತುಂಬು ತೋಳಿನ ಸ್ವೆಟರ್‌ ಅಥವಾ ಜಾಕೆಟ್‌ ಹಾಕಿಬಿಡಿ. ಜಾಕೆಟ್‌ನಲ್ಲಿ ಹುಡ್‌ (ಟೋಪಿ) ಇದ್ದರೆ ಚಳಿ ಸುಳಿಯುವುದೇ ಇಲ್ಲ ಬಿಡಿ.

ಈಗ ತಿಂಡಿಯ ಸರದಿ. ಮಕ್ಕಳು ಏಳುವುದಕ್ಕೂ ಮೊದಲೇ ತಿಂಡಿ ಸಿದ್ಧವಾಗಿದ್ದರೆ ಮಾತ್ರ ಈ ಮೇಲಿನ ಸಿದ್ಧತೆಗಳಲ್ಲಿ ಅವರ ಜತೆಗೆ ನಿಲ್ಲಲು ಸಾಧ್ಯ. ನಿಮ್ಮ ಮಕ್ಕಳು ತಾವಾಗಿ ಸಿದ್ಧರಾಗುತ್ತಾರಾದರೆ ಕನಿಷ್ಠ 10 ನಿಮಿಷ ನಿಮಗೆ ಬೋನಸ್‌ನಂತೆ ದಕ್ಕಿದಂತೆ. ತಿಂಡಿ ಸಿದ್ಧವಾಗಿದ್ದರೆ ಅವರಿಗೆ ಹಬೆಯಾಡುವ ತಿಂಡಿಯನ್ನು ತಿನ್ನಿಸಬಹುದು ಇಲ್ಲವೇ ತಿನ್ನಲು ಕೊಡಬಹುದು. ಬೆಳಿಗ್ಗೆ ಮೋಡ ಮುಸುಕಿದ ವಾತಾವರಣವಿದ್ದರೆ, ಮಂಜು ಕವಿದಿದ್ದರೆ ಬೆಳಿಗ್ಗೆ ಹಣ್ಣಿನ ರಸ ಕೊಡುವ ಬದಲು ಬಿಸಿ ಹಾಲು ಇಲ್ಲವೇ ಪೌಷ್ಠಿಕ ಆಹಾರದ ಪೇಯ (ಚಹಾ ಅಥವಾ ಕಾಫಿ?) ಕೊಡುವುದು ಒಳಿತು.

ಇವಿಷ್ಟೂ ಕೆಲಸದ ಮಧ್ಯೆ ಮಕ್ಕಳ ಊಟ ತಿಂಡಿಯ ಡಬ್ಬಿ ಸಿದ್ಧಪಡಿಸುವ ಕೆಲಸವೂ ಆಗಬೇಕಲ್ಲ? ಮೊದಲ ಸಣ್ಣ ವಿರಾಮದ ಅವಧಿಗೆ (ಶಾರ್ಟ್‌ ಬ್ರೇಕ್‌) ಹೆಚ್ಚಿನ ಕೊಬ್ಬಿನಂಶವಿಲ್ಲದ ಬೇಕರಿ ತಿನಿಸುಗಳನ್ನು ಹಾಕಿ, ಕುಡಿಯಲು ಬಿಸಿನೀರನ್ನೇ ತುಂಬಿ. ಮಧ್ಯಾಹ್ನದ ಊಟ ತುಂಬಾ ತಣ್ಣಗಿದ್ದರೆ ಅವರು ತಿನ್ನುವ ಸಾಧ್ಯತೆ ಕಡಿಮೆ. ಹಾಗಾಗಿ ಊಟವನ್ನು ಜಾಣ್ಮೆಯಿಂದ ಸಿದ್ಧಪಡಿಸಿಕೊಡಿ.

ಮಕ್ಕಳು ಶೂ ಹಾಕಿಕೊಂಡು ಮನೆಯಿಂದ ಹೊರಡುವಾಗ ಅವರ ಮತ್ತು ನಿಮ್ಮ ಮುಖದಲ್ಲಿ ತೃಪ್ತಿಯ ನಗು ಇರುತ್ತದೆ. ಇಷ್ಟೂ ಕೆಲಸಕ್ಕೆ ನಿಮ್ಮ ಮಕ್ಕಳು ತೆಗೆದುಕೊಂಡಿದ್ದು 15ರಿಂದ 20 ನಿಮಿಷ. ಅರೆ ಅಲ್ನೋಡಿ... ಶಾಲೆಯ ಬಸ್‌ ಬಂದೇ ಬಿಟ್ಟಿತು.

ಚಳಿಗಾಲಕ್ಕಾಗಿ ನಿಮ್ಮ ದಿನಚರಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಮೊದಲ ಅಗತ್ಯ. ಆಮೇಲೆ ಮಕ್ಕಳನ್ನು ಈ ಹವಾಮಾನಕ್ಕೆ ಒಗ್ಗಿಸಬೇಕು. ಇವತ್ತು ಸಾಯಂಕಾಲವೇ ನಾಳಿನ ತಯಾರಿ ಮಾಡಿಕೊಳ್ಳಿ. ಎಂದಿಗಿಂತ ಅರ್ಧ ಗಂಟೆ ಮುಂಚಿತವಾಗಿ ಅಲಾರ್ಮ್‌ ಸೆಟ್‌ ಮಾಡಿಕೊಳ್ಳಲು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.