ADVERTISEMENT

ಚಾಲಕಿಯರು ಬರುತ್ತಿದ್ದಾರೆ...

ವಿದ್ಯಾಶ್ರೀ ಎಸ್.
Published 31 ಜುಲೈ 2013, 19:59 IST
Last Updated 31 ಜುಲೈ 2013, 19:59 IST
ಚಾಲನಾ ತರಬೇತಿ ನಿರತ ಯುವತಿ
ಚಾಲನಾ ತರಬೇತಿ ನಿರತ ಯುವತಿ   

ಆಕೆ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿ. ಓದಿನಲ್ಲಿ ಬಲು ಚುರುಕು. ಆದರೆ  ಇದ್ದಕ್ಕಿದ್ದಂತೆ ಮಂಕಾದಳು. ಓದಿನಲ್ಲಿ ನಿರಾಸಕ್ತಿ. ಪೋಷಕರು ಆಪ್ತ ಸಮಾಲೋಚಕರ ಬಳಿ ಕರೆದೊಯ್ದರು. ಶಾಲಾ ವಾಹನ ಚಾಲಕನಿಂದಲೇ ಆಕೆ ದೈಹಿಕ ಶೋಷಣೆಗೆ ತುತ್ತಾಗಿರುವುದು ತಿಳಿಯಿತು.

ಶೀಲಾ (ಹೆಸರು ಬದಲಿಸಲಾಗಿದೆ) ಖಾಸಗಿ ಕಂಪೆನಿ ಉದ್ಯೋಗಿ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದರು. ತನಿಖೆ ವೇಳೆ  ಕ್ಯಾಬ್ ಚಾಲಕನೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಬಹಿರಂಗವಾಯಿತು.

ಶಾಲೆಗಳ ಮತ್ತು ಖಾಸಗಿ ಕಂಪೆನಿಗಳ ವಾಹನ ಚಾಲಕರಿಂದ ಬಾಲಕಿಯರು ಮತ್ತು ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವ ಇಂಥ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪ್ರೀತಿ ಮತ್ತು ಲೈಂಗಿಕ ದೌರ್ಜನ್ಯದ ವ್ಯತ್ಯಾಸ ತಿಳಿಯದ ಮಕ್ಕಳು ಕಾಮುಕರ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಕೆಲವು ವೇಳೆ ಬೆದರಿಕೆಗೆ ಹೆದರಿ ಶೋಷಣೆಯನ್ನು ಸಹಿಸಿಕೊಂಡ ನಿದರ್ಶನಗಳೂ ಇವೆ.

ಮಕ್ಕಳು ಮತ್ತು ಮಹಿಳೆಯರ ಮೇಲಾಗುತ್ತಿರುವ ಶೋಷಣೆ ತಪ್ಪಿಸಲು ಶಾಲಾ ವಾಹನಗಳಿಗೆ ಮಹಿಳಾ ಚಾಲಕರನ್ನೇ ನೇಮಕ ಮಾಡಿದರೆ ಹೇಗೆ? ಹೀಗೊಂದು ವಿನೂತನ ಪ್ರಯತ್ನಕ್ಕೆ ಸರ್ಕಾರೇತರ ಸಂಸ್ಥೆ `ಜನೋದಯ' ಮುಂದಾಗಿದೆ. ಈ ಯತ್ನಕ್ಕೆ ಸಂಸ್ಥೆಯೊಂದಿಗೆ ಭಾಗೀರಥಿ ಟ್ರಾವೆಲ್ಸ್ ಕೈಜೋಡಿಸಿದೆ.

ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ಕೊಡಿಸಲು ಪ್ರಯತ್ನ ಆರಂಭಿಸಿರುವ `ಜನೋದಯ' ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಲವು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿದೆ.

ಸಂಚಾರಿ ನಿಯಮಗಳ ಅರಿವು, ವಸ್ತ್ರ ಸಂಹಿತೆ, ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ರಾಜ್ಯಗಳ ಉದ್ಯೋಗಿಗಳೊಂದಿಗೆ ಸಂವಹನ ನಡೆಸಬೇಕಾದ ರೀತಿ, ನೀತಿ, ಭಾಷೆ ಹೀಗೆ ಪ್ರತಿ ಹಂತದಲ್ಲಿಯೂ ನಿರ್ವಹಿಸಬೇಕಾದ ಪಾತ್ರದ ಕುರಿತು ತರಬೇತಿ ನೀಡಲಾಗುತ್ತಿದೆ. ಸುಮಾರು 70 ಮಹಿಳೆಯರು ಈಗಾಗಲೇ ಸ್ಟೇರಿಂಗ್ ಹಿಡಿಯುವ ತರಬೇತಿ ಪಡೆಯುತ್ತಿದ್ದಾರೆ.

ಈ ಹಿಂದೆಯೇ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸುವ ಉದ್ದೇಶದಿಂದ ಶಾಲಾ ವಾಹನಗಳಲ್ಲಿ ತರಬೇತಿ ಪಡೆದ ಒಬ್ಬ ಮಹಿಳೆಯನ್ನು `ಕೇರ್‌ಟೇಕರ್' ಆಗಿ ನೇಮಿಸಲಾಗಿದೆ. ಆದರೆ, ಚಾಲಕ, ಕೇರ್‌ಟೇಕರ್ ಇಬ್ಬರಿಗೂ ಸಂಬಳ ಕೊಡುವುದು ಹೊರೆ. ಮಹಿಳೆಗೆ ಚಾಲನೆಯ ತರಬೇತಿ ನೀಡುವುದರಿಂದ ಅವರು ದ್ವಿಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬ ಆಲೋಚನೆ `ಜನೋದಯ' ಸಂಸ್ಥೆಯದ್ದು. 

“ಶಾಲಾ ಮತ್ತು ಕಂಪೆನಿಗಳ ವಾಹನಗಳಿಗೆ ಮಹಿಳಾ ಚಾಲಕರನ್ನೇ ನೇಮಿಸುವ ಆಲೋಚನೆ ಮೂಡಿದಾಗ ಯಾವ ರೀತಿ ಪ್ರತಿಕ್ರಿಯೆ ಬರಬಹುದು ಎಂಬ ಕಳವಳವಿತ್ತು.`ಚೈಲ್ಡ್ ಕೇರ್ ಸೆಂಟರ್'ನಲ್ಲಿರುವ ಮಹಿಳೆಯರಿಗೆ `ನಿಮ್ಮಲ್ಲಿ ಯಾರು ಚಾಲಕರಾಗಿ ಜವಾಬ್ದಾರಿ ನಿರ್ವಹಿಸಲು ತಯಾರಿದ್ದೀರಿ?' ಎಂದು ಕೇಳಿದಾಗ ಶೇ. 90 ಮಂದಿ ಸಮ್ಮತಿಸಿದರು” ಎಂದು ಮಹಿಳಾ ಚಾಲಕರ ನೇಮಕ ಜನ್ಮತಾಳಿದ ಬಗೆಯನ್ನು ವಿವರಿಸುತ್ತಾರೆ ಭಾಗೀರಥಿ ಟ್ರಾವೆಲ್ಸ್‌ನ ಶ್ರೀನಿವಾಸ್.

ಈಗಾಗಲೇ 14 ಶಾಲೆಗಳು ಜನೋದಯ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿವೆ. ಎರಡು ಖಾಸಗಿ ಕಂಪೆನಿಗಳಿಗೆ ಮಹಿಳಾ ಚಾಲಕರನ್ನೇ ನೇಮಿಸಲಾಗಿದೆ. ಪ್ರಾರಂಭದಲ್ಲಿ ಶಾಲೆಗೆ ಸಮೀಪವಿರುವ ಮಕ್ಕಳನ್ನು ಕರೆತರುವ ಹಾಗೂ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗುತ್ತದೆ. ಈ ವೃತ್ತಿಯಲ್ಲಿ ಕೈಪಳಗಿದ ನಂತರ ದೂರದ ಶಾಲೆಗಳಿಗೂ ಮಕ್ಕಳನ್ನು ಕರೆದೊಯ್ಯುವ ಜವಾಬ್ದಾರಿ ನೀಡಲಾಗುತ್ತದೆ.  

ಯೋಜನೆ ಹುಟ್ಟಿದ್ದು ಹೀಗೆ
`ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ವಾಹನ ಚಾಲನಾ ಕ್ಷೇತ್ರದಲ್ಲಿ ಪುರಷರದ್ದೇ ಮೇಲುಗೈ. ಈ ಕ್ಷೇತ್ರದಲ್ಲಿ ಏಕೆ ಮಹಿಳೆಯರು ಪ್ರಾತಿನಿಧ್ಯ ಪಡೆಯಬಾರದು ಎಂಬ ಯೋಚನೆ ತಲೆ ಹೊಕ್ಕಿತು. ಸಹೋದ್ಯೋಗಿಗಳ ಜೊತೆ ಚರ್ಚಿಸಿದ ಬಳಿಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆವು' ಎನ್ನುತ್ತಾರೆ ಭಾಗೀರಥಿ ಟ್ರಾವೆಲ್ಸ್ ನಿರ್ದೇಶಕ ನೀಲ್ ಜೋಸೆಫ್.
ಯಾವುದೇ ಯೋಜನೆ ಯಶಸ್ವಿಯಾಗಲು ಕಾಲಾವಕಾಶ ಬೇಕು. ಪ್ರಾರಂಭದಲ್ಲಿ ಮಹಿಳೆಯರು ಚಾಲಕ ವೃತ್ತಿಗೆ ಬರಲು ಹಿಂದೇಟು ಹಾಕಿದರು. ಆದರೆ ಈಗೀಗ ಅವರೇ ಆಸಕ್ತಿ ವಹಿಸಿ ಬರುತ್ತಿದ್ದಾರೆ ಎಂದು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ತಿಳಿಸುತ್ತಾರೆ ಅವರು.

ಲೈಂಗಿಕ ಅಲ್ಪಸಂಖ್ಯಾತರಿಗೂ ಜವಾಬ್ದಾರಿ
ಬಿಪಿಒ ಕಂಪೆನಿಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಚಾಲಿತ ಕ್ಯಾಬ್‌ಗಳನ್ನೂ ಪರಿಚಯಿಸಲಾಗುವುದು. `ಸಂಗಮ' ಎನ್ನುವ ಲೈಂಗಿಕ ಅಲ್ಪಸಂಖ್ಯಾತರ ಪರ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ.

ಆಸಕ್ತ ಲೈಂಗಿಕ ಅಲ್ಪಸಂಖ್ಯಾತರಿಗೆ ಚಾಲನಾ ತರಬೇತಿ ನೀಡಲಾಗುವುದು. ಲೈಂಗಿಕ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಸೇರಲು ಇದು ಸಹ ಒಂದು ಮಾರ್ಗ ಎನ್ನುವುದು ಸಂಸ್ಥೆಯ ನಂಬಿಕೆ.

ಸವಾಲಿನ ಕೆಲಸ
ಚಾಲಕಿ ಆಗುವುದು ಸವಾಲಿನ ಕೆಲಸ. ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಕೆಲಸ ಮಾಡುತ್ತೇನೆ.
ಈ ಕೆಲಸದಲ್ಲಿ ಜವಾಬ್ದಾರಿ ಹೆಚ್ಚು. ಎಷ್ಟೇ ಕಠಿಣವೆನ್ನಿಸಿದರೂ ಸಂತೃಪ್ತಿ ಇದೆ ಎನ್ನುತ್ತಾರೆ ಸಿಸ್ಕೊ ಕಂಪೆನಿಯಲ್ಲಿ ಮಹಿಳಾ ಕ್ಯಾಬ್ ಚಾಲಕಿಯಾಗಿರುವ ಮಂಜುಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.