ಇಷ್ಟು ದಿನ ನೀವು ನೋಡುತ್ತಿದ್ದ ಚಿತ್ರಕಲಾ ಪರಿಷತ್ ಈಗ ಹೊಸದೊಂದು ವೇಷ ಧರಿಸಿದೆ. ಚಿತ್ರಕಲಾ ಪರಿಷತ್‌ಗೆ ಬಿಳಿಯ ಬಟ್ಟೆ ತೊಡಿಸಿದ ಹುಡುಗನ ಕಣ್ಣಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆ ಎಂಬ ವಿನಯ.
`ನಾನೊಬ್ಬ ಮಹತ್ವಕಾಂಕ್ಷಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತೆ. ಪುಟ್ಟ ಕಣ್ಣಲ್ಲಿ ಬೆಟ್ಟದಷ್ಟು ಕನಸು ಕಾಣುವುದಕ್ಕೆ ಯಾರೂ ಹಣ ಕೊಡಬೇಕಾಗಿಲ್ಲ. ಸದಾ ಹೊಸತನ್ನು ಮಾಡಬೇಕೆಂಬ ತುಡಿತವೊಂದು ನನ್ನನ್ನು ಯಾವಾಗಲೂ ಕಾಡುತ್ತಾ ಇರುತ್ತದೆ.~ ಇದು ಚಿತ್ರಕಲಾ ಪರಿಷತ್‌ನ ಕಲಾ ವಿದ್ಯಾರ್ಥಿ ಆಶ್ರಯ್ ಮಾತು.
ಕಲೆ ಎಂದರೆ ಕೇವಲ ಬ್ರಶ್, ಬಣ್ಣ, ಕ್ಯಾನ್ವಾಸ್ ಅಲ್ಲ. ಹೊಸತೇನನ್ನಾದರೂ ಅನಾವರಣಗೊಳಿಸುವುದೇ ಕಲೆ. ನನಗೆ ಸ್ಫೂರ್ತಿ ಹಂಗೇರಿಯಾ ಕಲಾವಿದ `ಕ್ರಿಸ್ಟೋ~. ಅವನು ಸಹ ಇಂಥದೊಂದು ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಪಡೆದ ಮಹಾನ್ ಕಲಾಕಾರ.
ಗ್ಯಾಲರಿಯನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚುವುದು ಸಹ ಒಂದು ಕಲೆ. ಅದನ್ನು ನೋಡುವ ದೃಷ್ಟಿ ಬದಲಾಗಬೇಕು.
4,800 ಮೀಟರ್ ಬಟ್ಟೆಯಿಂದ ಇಡೀ ಚಿತ್ರಕಲಾ ಪರಿಷತ್ತನ್ನು ಮುಚ್ಚಿದ್ದೇನೆ. ಒಳಗಡೆ ಏನೋ ನಡೆಯುತ್ತಿದೆ ಎಂಬ ಕುತೂಹಲ ನೋಡುಗರಿಗೂ ಇರುತ್ತದೆ. ಜನರ ಮನಸ್ಸಿನಲ್ಲಿ ಅಂಥದ್ದೊಂದು ಕುತೂಹಲದ ಬೀಜ ಬಿತ್ತಿ ಆಸಕ್ತಿ ಬೆಳೆಸುವುದು ಸಹ ಒಂದು ಕಲೆ ಎಂದು ನಗು ಬೀರುತ್ತಾರೆ.
ಎಲ್ಲರಿಗೂ ಮೊಬೈಲ್, ಬೈಕ್ ಹುಚ್ಚಿದ್ದರೆ ಇವರಿಗೆ ಕಲೆಯೇ ಜೀವಾಳ. `ಮನೆಯಲ್ಲಿ ಯಾವತ್ತೂ ನನಗಾಗಿ ಹಣ ಕೇಳಿಲ್ಲ. ಆದರೆ ನನ್ನ ಕನಸಿಗಾಗಿ ಹಣ ಕೇಳಿದ್ದೇನೆ. ಆ ಕನಸೇ ಇಂದು ಇಲ್ಲಿ ರೂಪ ಪಡೆದಿದೆ~ ಎಂದು ಹೇಳುವ ಅವರು ಸುಮ್ಮನೆ ಹಣವನ್ನು ದುಂದು ಮಾಡುವವರಲ್ಲ. ಮಗನ ಈ ಕಲೆಗಾಗಿ ತಂದೆ ಒಂದು ಲಕ್ಷದ ಅರವತ್ಮೂರು ಸಾವಿರ ರೂಪಾಯಿ ಹಣ ನೀಡಿದ್ದಾರೆ.
ಕೇವಲ ಕಲೆಯಲ್ಲದೆ ನಾಟಕ, ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ ಬೆಳಸಿಕೊಂಡ ಆಶ್ರಯ್ ಮೂರು ನಾಟಕಗಳನ್ನು ಬರೆದಿದ್ದಾರೆ. ರವಿಚಂದ್ರನ್ ನಿರ್ದೇಶನದ `ಹೂ~ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಓದಿ ಮುಗಿಸುವ ಹಂಬಲ. ತನ್ನೆಲ್ಲಾ ಕನಸಿಗೆ ಸಹಕಾರ ನೀಡಿದ್ದು ತಂದೆ, ಗುರು ಹಾಗೂ ಚಿತ್ರಕಲಾ ಪರಿಷತ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಶುಭ್ರ ಬಿಳಿ ಸ್ಯಾಟಿನ್ ಬಟ್ಟೆಯಲ್ಲಿ ಇಡೀ ಚಿತ್ರಕಲಾ ಪರಿಷತ್ ಕಂಗೊಳಿಸುವಂತೆ ಮಾಡಿದ ಇವರ ಕನಸು ಮಾತ್ರ ದೊಡ್ಡದು. `ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಕೊನೆಯನೆಂದೂ ಮುಟ್ಟದಿರು~ ಎಂಬ ಕುವೆಂಪು ಪದ್ಯದ ಸಾಲುಗಳಂತೆ ಬದುಕುವುದು ಆಶ್ರಯ್ ಬಯಕೆ.
`ಕಲಾಕೃತಿಯ ಮರುಜನ್ಮ~ ಎಂಬ ವಿಷಯದ ಮೇಲೆ ಈ ಕಲೆ ನಿಂತಿದೆ. ಕ್ರಿಸ್ಟೋ ಮಾಡಿದ ಕಲೆಯನ್ನು ನಾನು ಇಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೆ ಎಂದು ನಗು ಸೂಸುತ್ತಾರೆ.
ಚಿತ್ರಕಲಾ ಪರಿಷತ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನ ಇದೇ 10ರವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 5.
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.