ADVERTISEMENT

ಚಿತ್ರ ಚೈತ್ರಾ !

ಗಣೇಶ ವೈದ್ಯ
Published 27 ಜನವರಿ 2016, 19:30 IST
Last Updated 27 ಜನವರಿ 2016, 19:30 IST
ಚಿತ್ರ ಚೈತ್ರಾ !
ಚಿತ್ರ ಚೈತ್ರಾ !   

ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕ ಖುಷಿಗೆ ಚೈತ್ರಾ ‘ವಿರಾಟ್’ ಸಿನಿಮಾ ಒಪ್ಪಿಕೊಂಡಿದ್ದು. ಚಿತ್ರೀಕರಣದ ಅನಿಶ್ಚಿತತೆಯಿಂದಾಗಿ ಕಾಲೇಜು ದಾರಿ ದೂರವಾಗಿ ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಅರ್ಧದಲ್ಲೇ ಬೈ ಹೇಳಿದರು. ಕನ್ನಡದಲ್ಲಿ ‘ವಿರಾಟ್’ ಅವರ ಪ್ರಥಮ ಚಿತ್ರವಾದರೂ ಮೊದಲು ತೆರೆಗೆ ಬಂದಿದ್ದು ‘ಡಿಕೆ’. ಇದೀಗ ಮೊದಲ ಚಿತ್ರ ‘ವಿರಾಟ್’ ಬಿಡುಗಡೆಯ (ಜ. 29) ಸಂಭ್ರಮದಲ್ಲಿದ್ದಾರೆ ಚೈತ್ರಾ.

ಚೈತ್ರಾ ಚಂದ್ರನಾಥ್ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುತ್ತ ಬಣ್ಣದ ಲೋಕದಲ್ಲಿ ಬಳುಕಲು ತೊಡಗಿ ನಾಲ್ಕು ವರ್ಷಗಳೇ ಕಳೆದಿವೆ. 2013ರ ‘ಪ್ರಿನ್ಸ್ ಮತ್ತು ಪ್ರಿನ್ಸೆಸ್ ಕರ್ನಾಟಕ’ ಸ್ಪರ್ಧೆಯ ವಿಜೇತೆ ಅವರು. ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಅದರ ಮಧ್ಯೆ ಶ್ರೀಲಂಕಾದಿಂದ ಸಿನಿಮಾ ಕರೆಯೂ ಬಂತು. ಸಿಂಹಳ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಂಡ ಚೆಲುವೆ ಚೈತ್ರಾ ‘ವಿರಾಟ್’ ಮೂಲಕ ಕನ್ನಡದಲ್ಲೂ ಖಾತೆ ತೆರೆದರು. ಇಷ್ಟಕ್ಕೆಲ್ಲ ಮೂಲವಾದದ್ದು ಮಾಡೆಲಿಂಗ್. ನೆಟ್ ಬಾಲ್, ವಾಲಿಬಾಲ್‌ನಲ್ಲೂ ಅವರಿಗೆ ಆಸಕ್ತಿ. ಇವು ಅವರ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿವೆ.

ಚಿತ್ರಕ್ಕಾಗಿ ಭಾರತದ ಮುಖವನ್ನು ಅರಸಿ ಬಂದ ಶ್ರೀಲಂಕಾ ಸಿನಿಮಾ ತಂಡಕ್ಕೆ ಚೈತ್ರಾ ಫೋಟೊ ಸಿಕ್ಕಿತ್ತು. ಆಡಿಷನ್‌ನಲ್ಲಿ ಪಾಸಾದ ಚೈತ್ರಾ ‘ಕಲ್ಪಂತಯೇ ಸಿಹಿನಾಯಕ್’ ಚಿತ್ರಕ್ಕಾಗಿ ಲಂಕಾಕ್ಕೆ ಹಾರಿದರು. ಆ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿದ ಚೈತ್ರಾಗೆ ಪ್ರತಿಭೆಯನ್ನು ಒರೆಗೆ ಹಚ್ಚುವ ಪಾತ್ರಗಳು ಇಷ್ಟವಂತೆ. ಚಿತ್ರೀಕರಣಕ್ಕಾಗಿ ಆರು ತಿಂಗಳ ಕಾಲ ಅಲ್ಲಿದ್ದ ಚೈತ್ರಾಗೆ ಅಲ್ಲಿನ ಭಾಷೆ ಕಷ್ಟವೆನ್ನಿಸಿದರೂ ಚಿತ್ರದ ಯಶಸ್ಸು ಖುಷಿ ತಂದಿದೆ. ಚಿತ್ರ ಶತದಿನೋತ್ಸವ ಆಚರಿಸಿದೆ ಎಂದು ಸಂಭ್ರಮದಿಂದ ಹೇಳುತ್ತಾರೆ. ತನ್ನದಲ್ಲದ ಜಾಗದಲ್ಲಿ ಸಿನಿಮಾ ಮಾಡಿ ಬಂದ ಹೆಮ್ಮೆ ಅವರದ್ದು.

‘ವಿರಾಟ್’ ನಿರೀಕ್ಷೆ, ಕುತೂಹಲ
‘ವಿರಾಟ್’ ಬಿಡುಗಡೆಗೆ ಎರಡೂವರೆ ಮೂರು ವರ್ಷಗಳ ದೀರ್ಘ ಸಮಯ ಹಿಡಿದಿದ್ದು ಚೈತ್ರಾಗೆ ನಿರಾಸೆಯಾಗಿದ್ದರೂ ಕಳೆದುಹೋದದ್ದು ಕೆಟ್ಟ ಸಂದರ್ಭ, ಯಾವಾಗಲೋ ಆಗಬೇಕಿದ್ದುದು ಈಗಲಾದರೂ ಆಗುತ್ತಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಾರವರು. ಅತ್ತ ಚಿತ್ರವೂ ಪೂರ್ಣವಾಗಲಿಲ್ಲ, ಇತ್ತ ಶಿಕ್ಷಣವೂ ಮುಗಿಸಿಲ್ಲ ಎಂದಾದಾಗ ಅವರು ಗೊಂದಲಕ್ಕೊಳಗಾಗಿದ್ದೂ ಇದೆ. ದಿಢೀರ್ ಎಂದು ಅವಕಾಶ ಬಂದಾಗ ಕಥೆ, ಪಾತ್ರಗಳ ಬಗ್ಗೆ ಏನೂ ಕೇಳದೆ ದರ್ಶನ್ ಜೊತೆ ನಟಿಸುವ ಆಸೆಯಿಂದಲೇ ಅವರು ಈ ಚಿತ್ರಕ್ಕೆ ಸಹಿ ಹಾಕಿದ್ದು. ಹಾಗೆಂದು ಮುಂದಿನ ಚಿತ್ರಗಳಲ್ಲಿ ಅವರ ಗಮನ ಇರುವುದು ಕಥೆಯ ಮೇಲೆಯೇ. ಮನರಂಜನೆಗಿಂತ ಉತ್ತಮ ಸಂದೇಶ ನೀಡುವ ಸಿನಿಮಾಗಳತ್ತ ಅವರ ಚಿತ್ತ.

ಮೊದಲ ಸಿನಿಮಾ ದರ್ಶನ್ ಜೊತೆ ಮಾಡಿದ್ದು ಚೈತ್ರಾಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ‘ಮೂರು ವರ್ಷದ ಹಿಂದೆ ಆಗಿದ್ದರೆ ಈ ಖುಷಿಯ ಬಗ್ಗೆ ಎಷ್ಟು ಹೇಳಿಕೊಂಡರೂ ತೀರದಷ್ಟು ಮಾತುಗಳಿದ್ದವು’ ಎನ್ನುವ ಅವರಲ್ಲಿ ಆ ನೆನಪುಗಳಳು ಇನ್ನೂ ಮಾಸಿಲ್ಲ. ಸಹ ಕಲಾವಿದರೊಂದಿಗೆ ದರ್ಶನ್ ನಡೆದುಕೊಳ್ಳುವ ಮತ್ತು ಸಹಕರಿಸುವ ರೀತಿಗೆ ಚೈತ್ರಾ ಫಿದಾ ಆಗಿದ್ದಾರೆ. ಅವರೆದುರು ನರ್ವಸ್ ಆಗಿದ್ದೂ ಇದೆ. ನಟನೆಯೇ ಗೊತ್ತಿಲ್ಲದಾಗ ದರ್ಶನ್ ಎದುರಿನ ಅಪ್ರಬುದ್ಧ ನಟನೆಯ ನಡುವೆಯೂ ಈ ಚಿತ್ರ ಅವರಿಗೊಂದು ಆಶಾಕಿರಣವಾಗಿದೆ.

ಚಿತ್ರದಲ್ಲಿ ಇಷಾ ಚಾವ್ಲಾ ಮತ್ತು ವಿದಿಶಾ ಶ್ರೀವಾಸ್ತವ್ ಜೊತೆ ಚೈತ್ರಾ ನಾಯಕಿ ಸ್ಥಾನವನ್ನು ಹಂಚಿಕೊಂಡಿದ್ದಾರೆ. ದರ್ಶನ್‌ರ ಆಪ್ತ ಕಾರ್ಯದರ್ಶಿಯಾಗಿ ಗ್ಲಾಮರ್ ಲುಕ್‌ನಲ್ಲಿ ಚೈತ್ರಾ ಕಾಣಿಸಿದ್ದಾರೆ. ತನ್ನ ಮೊದಲ ಕನ್ನಡ ಸಿನಿಮಾ ಮೂರು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿದ್ದರೂ ಚೈತ್ರಾ ನಿರೀಕ್ಷೆಯ ಮೂಟೆಯನ್ನೇ ಹೊತ್ತಿದ್ದಾರೆ. ಮೂರು ವರ್ಷದ ನಂತರವೂ ಹಳಸದ ಕಥಾವಸ್ತು ಚಿತ್ರದಲ್ಲಿದೆ ಎಂಬ ಕಾರಣಕ್ಕೆ ಸಿನಿಮಾ ನೋಡುವಂತೆ ಪ್ರೇಕ್ಷಕರಿಗೆ ಪ್ರೀತಿಯಿಂದ ಒತ್ತಾಯಿಸುತ್ತಾರೆ.

ಇನ್ನು ಒಬ್ಬಳೇ ನಾಯಕಿಯಿರುವ ಚಿತ್ರಕ್ಕೇ ಆದ್ಯತೆ ನೀಡುವ ಮನಸ್ಥಿತಿಯಲ್ಲಿ ಅವರುವ ಚೈತ್ರಾ, ಕಥೆಗೆ ತುಂಬಾ ಪ್ರಾಮುಖ್ಯವಿದ್ದು ಇಬ್ಬರು ನಾಯಕಿಯರಿಗೂ ಸಾಕಷ್ಟು ಮಹತ್ವವಿದ್ದರೆ ಮಾತ್ರ ಬೇರೆ ನಾಯಕಿಯರ ಜೊತೆ ತೆರೆ ಹಂಚಿಕೊಳ್ಳಲು ಒಪ್ಪುತ್ತಾರಂತೆ. ಸಿನಿಮಾದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂಬುದು ಅವರ ನಿಲುವು. ಸುಮ್ಮನೆ ಬಂದು ಹೋಗುವ ಪಾತ್ರಕ್ಕಿಂತ ಎರಡೇ ಚಿತ್ರಗಳಲ್ಲಿ ನಟಿಸಿದರೂ ಜನರ ಮನಸಿನಲ್ಲಿ ಉಳಿಯುವಂಥ ಪಾತ್ರಗಳನ್ನೇ ಆಯ್ದುಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದಾರೆ.

‘ವಿರಾಟ್’ಗೆ ಮೀಸಲಿಟ್ಟ ಅವಧಿಯಲ್ಲೇ ಮತ್ತೊಂದು ಸಿಂಹಳ ಚಿತ್ರದ ಅವಕಾಶ ಬಂದಿದ್ದರೂ ‘ವಿರಾಟ್’ ಮುಗಿಸಬೇಕಿದ್ದ ಕಾರಣಕ್ಕೆ ಆ ಅವಕಾಶವನ್ನು ಚೈತ್ರಾ ಕೈ ಚೆಲ್ಲಿದರು. ಸದ್ಯ ಮತ್ತೊಂದು ತಮಿಳು ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದ್ದು ಮಾರ್ಚ್ ಅಂತ್ಯದಲ್ಲಿ ಆ ಚಿತ್ರದಲ್ಲಿ ಬ್ಯೂಸಿ ಆಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.