ADVERTISEMENT

ಚೋಟುದ್ದದ ಪಂಟ!

ಎ.ಎಂ.ಸುರೇಶ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

‘ಮಧು... ಸೂದನ್’ ಹೆಬ್ಬೆರಳನ್ನು ಕತ್ತುಕೊಯ್ಯುವ ರೀತಿಯಲ್ಲಿ ಅಡ್ಡಡ್ಡ ಆಡಿಸುತ್ತಾ ಹೀಗೆ ಸ್ಟೈಲಾಗಿ ನುಡಿಯುವ ಈ ಪೋರ ನಿಮಗೆ ಗೊತ್ತಿರಲೇಬೇಕು. ‘ಸುವರ್ಣ ವಾಹಿನಿ’ಯಲ್ಲಿ ಪ್ರಸಾರವಾಗುತ್ತಿರುವ ‘ಪುಟಾಣಿ ಪಂಟ್ರು’ ಕಾರ್ಯಕ್ರಮದಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಪ್ರದರ್ಶನ ನೀಡುತ್ತಿರುವ ಎಳೆವಯಸ್ಸಿನ ಪ್ರತಿಭೆಗಳ ನಡುವೆ ಎದ್ದುಕಾಣುವ ಪಂಟನೀತ.

ಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಗಮನಸೆಳೆದರೆ, ಪುಟ್ಟ ದೇಹದ ಮಧು ವೇದಿಕೆ ಮೇಲೆ ಕಾಲಿಟ್ಟರೆ ಸಾಕು ಚಪ್ಪಾಳೆ, ಶಿಳ್ಳೆಗಳು ಜೋರಾಗುತ್ತವೆ. ಉದ್ದುದ್ದದ ಡೈಲಾಗುಗಳನ್ನು ಹೇಳುವ, ನುರಿತ ನೃತ್ಯಪಟುವಿನಂತೆ ಹೆಜ್ಜೆ ಹಾಕುವ ಈ ಪುಟಾಣಿ ಆಕೃತಿಯನ್ನು ಕಂಡರೆ ಕಾರ್ಯಕ್ರಮದ ಸೆಟ್‌ನಲ್ಲಿದ್ದವರಿಗೆಲ್ಲಾ ಪ್ರೀತಿ. ಅಲ್ಲಿ ಆತ ಎಲ್ಲರ ನೆಚ್ಚಿನ ‘ಅಪ್ಪಾಜಿ’.

‘ಪುಟಾಣಿ ಪಂಟ್ರು’ಗೂ ಮುನ್ನವೇ ಮಧು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾತ. ‘ಮಧು... ಸೂದನ್‌’ ಎಂದು ಕೈಬೆರಳನ್ನು ಕತ್ತಿನುದ್ದಕ್ಕೂ ಆಡಿಸುವ ಶೈಲಿಯನ್ನು ಹೇಳಿಕೊಟ್ಟಿದ್ದು ‘ಬಚ್ಚನ್‌’ ಚಿತ್ರದ ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯಾ. ‘ಜಯಮ್ಮನ ಮಗ’ ಮತ್ತು ‘ರಾಜಾ ಹುಲಿ’ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿರುವ ಈ ಬಾಲಕನನ್ನು ‘ಪುಟಾಣಿ ಪಂಟ್ರು’ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದು, ಆತ ಸಾರ್ವಜನಿಕ ಸ್ಥಳವೊಂದರಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಕುಣಿದಿದ್ದನ್ನು ನೋಡಿ. ಪುನೀತ್‌ ಅವರ ದೊಡ್ಡ ಅಭಿಮಾನಿಯಂತೆ ಈ ಪುಟಾಣಿ.

ತೆರೆ ಮೇಲೆ ಬಂದಾಗಲೆಲ್ಲಾ ಖುಷಿ ನೀಡುವ ಮಧುಸೂದನ್‌ನನ್ನು ಕಂಡರೆ ಎಷ್ಟು ಪ್ರೀತಿಯೋ ಅಷ್ಟೇ ಅನುಕಂಪ ಕೂಡ. ಹೈಡ್ರಸೆಫಲಸ್‌ ಸಮಸ್ಯೆಯಿಂದ ಬಳಲುತ್ತಿರುವ ಈ ಮುಗ್ಧ ಹುಡುಗನ ದೇಹ ಬೆಳವಣಿಗೆ ಹೊಂದುತ್ತಿಲ್ಲ. ‘ಮೆದುಳಿನಲ್ಲಿ ನೀರು ತುಂಬಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಅದರ ಚಿಕಿತ್ಸೆಗೆ 28 ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ. ಅದನ್ನು ಭರಿಸುವ ಶಕ್ತಿ ನನಗಿಲ್ಲ’ ಎನ್ನುತ್ತಾರೆ ಮಧುಸೂದನ್‌ ತಂದೆ ನರಸಿಂಹಮೂರ್ತಿ.

ಕುಣಿಗಲ್‌ ತಾಲ್ಲೂಕಿನ ಚಿಕ್ಕ ಗ್ರಾಮದವರಾದ ನರಸಿಂಹಮೂರ್ತಿ ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡಿದ್ದಾರೆ. ಮಧುಸೂದನ್‌ ಅವರ ಎರಡನೇ ಮಗ. ದೊಡ್ಡ ಮಗ ಮನೋಜ್‌ ಆರನೇ ತರಗತಿ ಓದುತ್ತಿದ್ದಾನೆ. ಒಂದೂವರೆ ಎರಡು ವರ್ಷವಾದರೂ ಮಧುವಿನ ದೇಹ ಬೆಳವಣಿಗೆ ಆಗದಿರುವುದನ್ನು ಕಂಡ ನರಸಿಂಹಮೂರ್ತಿ ವೈದ್ಯರ ಬಳಿ ತೋರಿಸಿದರು. ಹಲವಾರು ಪರೀಕ್ಷೆ, ಸ್ಕ್ಯಾನ್‌ಗಳನ್ನು ನಡೆಸಿದ ಬಳಿಕ ಮೂಳೆ ಬೆಳವಣಿಗೆಯಾಗದ ಕಾರಣ ಹೀಗಾಗಿದೆ ಎಂದಿದ್ದರು. ಮತ್ತೊಂದು ಕಡೆ ವಿದೇಶಿ ತಜ್ಞರು ತಪಾಸಣೆ ನಡೆಸಿ ಮೆದುಳಿನಲ್ಲಿ ನೀರು ತುಂಬಿಕೊಂಡಿದೆ.

ಶಸ್ತ್ರಚಿಕಿತ್ಸೆ ನಡೆಸಲೇಬೇಕು ಎಂದಿದ್ದಾರಂತೆ. ಈಗಾಗಲೇ ಮೂರ್ನಾಲ್ಕು ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಹೇಳುತ್ತಾರೆ ಅವರು. ತನ್ನ ಕಾಯಿಲೆಯ ಅರಿವಿದ್ದರೂ, ನೋವಿದ್ದರೂ ಅವುಗಳು ತನ್ನರಿವಿಗೆ ಬಂದಿಲ್ಲವೇನೋ ಎಂಬಂತೆ ಕುಣಿದಾಡುತ್ತಾನೆ ಮಧು. ಪುಟಾಣಿ ದೇಹದ ಈತನಿಗೆ ತಾನು ಎತ್ತರ ಆಗಬೇಕು ಎಂಬ ಆಸೆಯಿದೆ. ಕಣ್ಣುಗಳಲ್ಲಿ ವ್ಯಕ್ತವಾಗುವ ಅದಮ್ಯ ಉತ್ಸಾಹ ಆತನ ನೋವಿಗೆ ಮದ್ದು.

ನಿರಂತರ ಚಿಕಿತ್ಸೆಗೆ ಒಳಗಾಗಬೇಕಿದ್ದ ಕಾರಣದಿಂದ ಮಧು ಶಾಲೆಗೆ ಸೇರಿದ್ದು ತಡವಾಗಿ. ಏಳೂವರೆ ವರ್ಷದ ಈ ಪೋರ ಈಗ ಯುಕೆಜಿ ಓದುತ್ತಿದ್ದಾನೆ. ಡ್ಯಾನ್ಸ್‌ ಮತ್ತು ಜಿಮ್ನಾಸ್ಟಿಕ್‌ ಎಂದರೆ ಈತನಿಗೆ ಅಚ್ಚುಮೆಚ್ಚು. ಓದಿನ ಜೊತೆಗೆ ನೃತ್ಯ ಕಲಿಕೆಯನ್ನೂ ಮಾಡುತ್ತಿದ್ದಾನೆ.

ಭರತನಾಟ್ಯ, ಯಕ್ಷಗಾನದ ಒಲವೂ ಇದೆ. ಮುಂದೆ ಏನಾಗುತ್ತೀಯಾ? ಎಂದು ಕೇಳಿದರೆ ಡ್ಯಾನ್ಸರ್‌ ಎಂದು ಪಟ್ಟನೆ ಉತ್ತರಿಸುತ್ತಾನೆ ಮಧು. ಇಮ್ರಾನ್‌ ಸರ್ದಾರಿಯಾ ಈತನಿಗೆ ಮಾದರಿ. ನಟಿಸುವ ಬಯಕೆಯೂ ಆತನಲ್ಲಿದೆ. ಹಾಗಂತ ಓದಿನ ಮೇಲಿನ ಆಸಕ್ತಿಯೇನೂ ಕಡಿಮೆಯಿಲ್ಲ. ‘ತುಂಬಾ ಓದ್ಬೇಕು’ ಎಂಬ ಆಸೆ ವ್ಯಕ್ತಪಡಿಸುತ್ತಾನೆ.

‘ಪುಟಾಣಿ ಪಂಟ್ರು’ ಕಾರ್ಯಕ್ರಮದಲ್ಲಿ ಗೆಲ್ಲೋದು ನಾನೇ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾನೆ ಚೋಟುದ್ದುದ ಈ ಪೋರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.