ADVERTISEMENT

‘ಜಟ್ಟ’ದ ಗಿರಿರಾಜ್‌ಗೆ ಈಗ ‘ರಕ್ತಚಂದನ’ದ ಧ್ಯಾನ

ವಿಜಯ್ ಜೋಷಿ
Published 4 ಮೇ 2018, 19:30 IST
Last Updated 4 ಮೇ 2018, 19:30 IST
‘ರಕ್ತಚಂದನ’ ಪೋಸ್ಟರ್‌
‘ರಕ್ತಚಂದನ’ ಪೋಸ್ಟರ್‌   

ಕನ್ನಡದಲ್ಲಿ ಇರುವ ವೆಬ್‌ ಸಿರೀಸ್‌ಗಳು ಯಾವುವು ಎಂದು ಇಂಟರ್ನೆಟ್‌ ಮೂಲಕ ಹುಡುಕಲು ಯತ್ನಿಸಿದರೆ ಕಾಣಿಸುವ ಉತ್ತರಗಳು ಕೆಲವೇ ಕೆಲವು. ‘ಲೂಸ್‌ ಕನೆಕ್ಷನ್’, ‘ಬೈ2 ಬೆಂಗಳೂರು’ ಸೇರಿದಂತೆ ಕೆಲವೇ ಕೆಲವು ವೆಬ್‌ ಸಿರೀಸ್‌ಗಳನ್ನು ವಿವಿಧ ಅಂತರ್ಜಾಲ ತಾಣಗಳು ಉಲ್ಲೇಖಿಸಿವೆ. ಅಂದರೆ, ಕನ್ನಡದಲ್ಲಿ ವೆಬ್‌ ಸಿರೀಸ್‌ ಎಂಬುದು ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಂತೆ ದೈತ್ಯಾಕಾರಕ್ಕೆ ಬೆಳೆಯಲು ಇನ್ನೂ ಕಾಲ ಬೇಕು.

ಈ ಹೊತ್ತಿನಲ್ಲಿ ಚಿತ್ರ ನಿರ್ದೇಶಕ ಗಿರಿರಾಜ್‌ ಬಿ.ಎಂ. ‘ರಕ್ತಚಂದನ’ ಎನ್ನುವ ಹೆಸರಿನ ಹೊಸ ವೆಬ್‌ ಸಿರೀಸ್‌ ಶುರು ಮಾಡಲು ಅಣಿಯಾಗಿದ್ದಾರೆ. ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಚಿತ್ರೀಕರಣ ಆರಂಭಿಸಿ, ಜುಲೈ–ಆಗಸ್ಟ್‌ ವೇಳೆಗೆ ಕಾರ್ಯಕ್ರಮ ಪ್ರಸಾರ ಮಾಡುವುದು ಅವರ ಗುರಿ.

‘ಕ್ರೈಂ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ವೆಬ್‌ ಸಿರೀಸ್‌ ಕನ್ನಡದಲ್ಲಿ ನಮ್ಮದೇ ಮೊದಲು ಅನಿಸುತ್ತಿದೆ’ ಎನ್ನುವುದು ಅವರ ಹೇಳಿಕೆ. ಅವರು ತಮ್ಮ ಸ್ನೇಹಿತರ ಜೊತೆಯಾಗಿ ಇದಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ‘ಸಿನಿಮಾ ಅಥವಾ ಧಾರವಾಹಿ ನಿರ್ದೇಶನ ಮಾಡುವಾಗ ಸಿಗುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ವೆಬ್‌ ಕಂಟೆಂಟ್‌ ರೂಪಿಸುವಾಗ ಸಿಗುತ್ತದೆ. ಹಾಗೆಯೇ, ವೆಬ್‌ ಕಂಟೆಂಟ್‌ ವೀಕ್ಷಿಸುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ದೊಡ್ಡ ಮಾರುಕಟ್ಟೆಯೊಂದು ಸೃಷ್ಟಿ ಆಗುತ್ತಿದೆ’ ಎನ್ನುವುದು ಅವರು ವೆಬ್‌ ಸೀರೀಸ್‌ನತ್ತ ಮುಖ ಮಾಡಲು ಹೇಳುವ ಕಾರಣ.

ADVERTISEMENT

ದೇಶದಲ್ಲಿ ವೆಬ್‌ ಸಿರೀಸ್‌ಗಳನ್ನು ಅತಿಹೆಚ್ಚು ಪ್ರಮಾಣದಲ್ಲಿ ವೀಕ್ಷಿಸುವ ನಗರ ಬೆಂಗಳೂರು. ಹೀಗಿದ್ದರೂ ಇಲ್ಲಿ ಕನ್ನಡದ ವೆಬ್‌ ಕಂಟೆಂಟ್ ಹೆಚ್ಚಿಲ್ಲ. ಬೆಂಗಳೂರಿನ ಕಾಲೇಜು ಹಾಸ್ಟೆಲ್‌ಗಳಲ್ಲಿ ಯುವಕ–ಯುವತಿಯರು ದಕ್ಷಿಣ ಕೊರಿಯಾದ ವೆಬ್‌ ಕಂಟೆಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನೋಡುತ್ತಿದ್ದಾರೆ. ಕನ್ನಡದಲ್ಲಿ ಕೂಡ ಇಂಥವುಗಳಿಗೆ ಮಾರುಕಟ್ಟೆ ಇದೆ ಎಂಬುದು ಗೊತ್ತಾದರೆ ದೊಡ್ಡ ಕಂಪನಿಗಳೂ ಇಲ್ಲಿ ಹಣ ಹೂಡಿಕೆ ಮಾಡುತ್ತವೆ ಎನ್ನುವುದು ಗಿರಿರಾಜ್‌ ಅವರು ಕಂಡುಕೊಂಡಿರುವ ಸಂಗತಿ.

‘ರಕ್ತಚಂದನ ಎಂಟರಿಂದ ಹತ್ತು ಕಂತುಗಳಲ್ಲಿ ಪ್ರಸಾರವಾಗುತ್ತದೆ. ಇದರಲ್ಲಿ ಹೆಣ್ಣಿನ ಪಾತ್ರವೊಂದು ಪ್ರಮುಖವಾಗಿರುತ್ತದೆ. ಈ ಪಾತ್ರವನ್ನು ಆದ್ವಿಕಾ  ನಿಭಾಯಿಸುತ್ತಿದ್ದಾರೆ. ಇವರು ರಂಗಭೂಮಿ ಮತ್ತು ನೃತ್ಯಕಲೆಯಲ್ಲಿ ತರಬೇತಿ ಪಡೆದಿದ್ದಾರೆ’ ಎಂದು ‘ಮೆಟ್ರೊ’ ಪುರವಣಿ ಜೊತೆ ಮಾತನಾಡಿದ ಗಿರಿರಾಜ್ ತಿಳಿಸಿದರು.

ನೊಯಿಡಾ ಮತ್ತು ಜೋಧ್‌ಪುರದಲ್ಲಿ ನಡೆದ ಘಟನೆಗಳು ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಕಥೆಯ ಎಳೆಯನ್ನು ನೀಡಿದವು. ಆ ಎಳೆ ಆಧರಿಸಿ ಗಿರಿರಾಜ್ ಒಂದು ಕಥೆ ಸೃಷ್ಟಿಸಿದ್ದಾರೆ. ಕಾರ್ಯಕ್ರಮದ ಪೋಸ್ಟರ್‌ ಲಾಂಚ್‌ ಶನಿವಾರ ಆಗಲಿದೆ. ವೆಬ್‌ ಸಿರೀಸ್‌ನ ಪಾತ್ರಗಳಿಗೆ ಜೀವ ತುಂಬುವವರು ಯಾರು ಎಂಬುದನ್ನು ತಂಡ ಮುಂದಿನ ದಿನಗಳಲ್ಲಿ ಹೇಳಲಿದೆಯಂತೆ.

ವೆಬ್‌ ಕಂಟೆಂಟ್‌ಗಳನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಹೆಸರು ಮಾಡಿರುವ ‘ವೂಟ್‌’ ಮತ್ತು ‘ಆಲ್ಟ್‌ ಬಾಲಾಜಿ’ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಇಬ್ಬರೂ   ಆಸಕ್ತಿ ತೋರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜನರಿಂದ ಹಣ ಪಡೆದು ಕಾರ್ಯಕ್ರಮ ತೋರಿಸಲು ಆಗದು. ಹಾಗಾಗಿ, ಜಾಹಿರಾತುಗಳ ಮೂಲಕವೇ ಆದಾಯ ಗಿಟ್ಟಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.