ADVERTISEMENT

ಜನಮಾನಸ ಮುಟ್ಟಿದ ‘ಮಂಟೇಸ್ವಾಮಿ’ ಪ್ರಯೋಗ

ರಂಗಭೂಮಿ

ಗುಡಿಹಳ್ಳಿ ನಾಗರಾಜ
Published 9 ಮೇ 2016, 19:53 IST
Last Updated 9 ಮೇ 2016, 19:53 IST
‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕದ ದೃಶ್ಯ
‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕದ ದೃಶ್ಯ   

‘ನಾಟಕ ಕಲಿಕೆ’ ಉಪನ್ಯಾಸಕ್ಕೆ ಸೀಮಿತವಾಗಿರುವುದಿಲ್ಲ. ನಾಟಕದ ಪ್ರಯೋಗ ಇದ್ದೇ ಇರಬೇಕು, ನಿರಂತರವಾಗಿ ಇದ್ದರಂತೂ ಸಾರ್ಥಕವೇ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ನಾಟಕ ವಿಭಾಗದಲ್ಲಿ ಪ್ರಯೋಗಗಳು ಅವಶ್ಯಕತೆಗಿಂತ ಹೆಚ್ಚಿದೆಯೋ, ಕಡಿಮೆ ಇದೆಯೋ ಅದು ಬೇರೆ ಮಾತು. ಆದರೆ ಅದೇ ವಿಭಾಗದಲ್ಲಿ ಒಂದು ನಾಟಕ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ರಯೋಗಗೊಳ್ಳುತ್ತಲೇ ಇದೆ. ವೃತ್ತಿಪರ ತಂಡವೊಂದು ತನ್ನ ಜನಪ್ರಿಯ ನಾಟಕವನ್ನು ಪದೇ ಪದೇ ಪ್ರದರ್ಶಿಸುವಂತೆ ಈ ನಾಟಕದ ಪ್ರದರ್ಶನ ಆಗುತ್ತಲೇ ಇರುತ್ತದೆ. ಅದೇ ‘ಮಂಟೇಸ್ವಾಮಿ ಕಥಾ ಪ್ರಸಂಗ’. 

ಕಳೆದ ವಾರ ವಿಶ್ವವಿದ್ಯಾಲಯದ ಡಾ. ವೆಂಕಟಗಿರಿಗೌಡ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕೇಕೆ ಸಂಭ್ರಮದ ಮಧ್ಯೆ ಈ ನಾಟಕ 53ನೇ ಭರ್ಜರಿ ಪ್ರಯೋಗ ಕಂಡಿತು. ನಾಟಕ ವಿಭಾಗದ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಇಲ್ಲಿ ಕಲಿತು ಹೊರಹೋಗಿ ನಟನೆಯನ್ನೇ ವೃತ್ತಿ ಮಾಡಿಕೊಂಡವರು ಅಭಿನಯಿಸಿದ್ದರು. ಒಟ್ಟಿನಲ್ಲಿ ಚೆನ್ನಾಗಿ ನಟಿಸಬಲ್ಲವರೆಲ್ಲ ಸೇರಿ ಒಂದು ವೃತ್ತಿಪರತೆಯ ತಂಡವನ್ನು ಹೇಗೆ ಕಟ್ಟಲು ಸಾಧ್ಯವೋ ಅದೆಲ್ಲವೂ ಇತ್ತು. ಜ್ಞಾನಭಾರತಿ ಕಲಾಮೈತ್ರಿ ಸಾಂಸ್ಕೃತಿಕ ವೇದಿಕೆಯೂ ಇದರೊಂದಿಗೆ ಕೈಜೋಡಿಸಿತ್ತು.

ದಲಿತ ಜನಾಂಗದ ಮಂಟೇಸ್ವಾಮಿ ಒಬ್ಬ ಮಹಾಮಹಿಮ. ದುಡ್ಡು ನನ್ನದೆನ್ನುವವರ ಒದ್ದು ನೆಲಕ್ಕೆ ಕೆಡವಬಲ್ಲ, ಹೊನ್ನು ನನ್ನದೆನ್ನುವವರ ಮಣ್ಣುಪಾಲು ಮಾಡಬಲ್ಲ, ಮಣ್ಣು ನನ್ನದೆನ್ನುವವರ ಕಣ್ಣು ಕುರುಡು ಮಾಡಬಲ್ಲ ಪವಾಡ ಪುರುಷ! ಈತ ಬಸವಣ್ಣನ ಕಲ್ಯಾಣಕ್ಕೆ ಬರುತ್ತಾನೆ, ಪವಾಡ ಮಾಡುತ್ತಾನೆ. ನಂತರ ವಿಜಯನಗರ, ಕಾಗಿನೆಲೆ, ಸಕ್ಕರಾಯಪಟ್ಟಣ ಮುಂತಾದೆಡೆ ಪವಾಡ ಮಾಡುತ್ತ- ಅಲ್ಲೆಲ್ಲ ಜಾತಿ, ಹಣದ ಮದದಿಂದ ಮೆರೆಯುವರ ಸೊಕ್ಕು ಇಳಿಸಿ ನೊಂದವರ ಪರ ನಿಲ್ಲುತ್ತಾನೆ. ವಸ್ತು ಕಾಲಾತೀತ. ಇತಿಹಾಸ, ಪುರಾಣ, ಕಲ್ಪನೆಯನ್ನು ಮೇಳೈಸಿ ಆಧುನಿಕ ಸಂವೇದನೆಯಿಂದ ಅದನ್ನೆಲ್ಲ ಗ್ರಹಿಸುವ ಎಚ್.ಎಸ್.ಶಿವಪ್ರಕಾಶರ ಅಪರೂಪದ ಗೀತ ನಾಟಕ ಇದು. 

ನಾಟಕ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಈಗಾಗಲೇ ಕಳೆದ ಎರಡು ದಶಕಗಳಿಂದ ಹಲವು ಮಹತ್ವದ ನಾಟಕಗಳನ್ನು ವಿಶ್ವವಿದ್ಯಾಲಯದ ಆಚೆಗೂ ರಂಗತಂಡಗಳಿಗೆ ನಿರ್ದೇಶಿಸುತ್ತ ಬಂದಿರುವ ಕೆ.ರಾಮಕೃಷ್ಣಯ್ಯ ಈ ನಾಟಕದ ನಿರ್ದೇಶಕರು. ವಚನಕಾರರ ಕಲ್ಯಾಣ ಈಗ ಕುಲಗೆಟ್ಟುಹೋಗಿದೆ. ಸಮಾನತೆಯ ಹರಿಕಾರರಾಗಬೇಕಿದ್ದ ಜಂಗಮರು ತಾವೇ ದೇವರ ಅವತಾರ ಎನ್ನುತ್ತ ಜನತೆಯನ್ನು ಮತ್ತದೇ ಕಂದಾಚಾರದಲ್ಲಿ ಬಂಧಿಸಿದ್ದಾರೆ. ಬಸವಣ್ಣ ಇದರಿಂದ ನೊಂದಿದ್ದಾನೆ. ನಾಲಿಗಿಲ್ಲದ ಗಂಟೆ, ಕಲ್ಲುಕೋಳಿ, ಕಲ್ಲುಬಸವನನ್ನು ಕಲ್ಯಾಣದ ಮೂಡಲ ಹೆಬ್ಬಾಗಿಲಿನಲ್ಲಿ ನಿಲ್ಲಿಸೋಣ.  ಮಹಾತ್ಮರು ಬಂದರೆ ನಾಲಿಗೆ ಇಲ್ಲದ ಗಂಟೆ ಶಬ್ದ ಮಾಡುತ್ತದೆ, ಕಲ್ಲುಕೋಳಿ ಕೂಗುತ್ತದೆ, ಕಲ್ಲುಬಸವ ಗುಟುರು ಹಾಕುತ್ತದೆ ಎಂದು ನೀಲಾಂಬಿಕೆ ಸಲಹೆ ನೀಡುತ್ತಾಳೆ.

ಬಸವಣ್ಣ ಹಾಗೆ ಮಾಡಿದ ಕೂಡಲೆ ಅವಳು ಹೇಳಿದ ಪವಾಡ ಜರುಗಿಬಿಡುತ್ತದೆ! ತಿಪ್ಪೆಯಿಂದ ಗಬ್ಬು ನಾರುವ ವ್ಯಕ್ತಿಯೊಬ್ಬ ಎದ್ದು ಬರುತ್ತಾನೆ. ಅವನೇ ಮಂಟೇಸ್ವಾಮಿ. ಬಂದವನೇ ಡಂಬಾಚಾರಿಗಳ ಬಣ್ಣ ಬಯಲು ಮಾಡುತ್ತಾನೆ. ಕಲ್ಯಾಣದಲ್ಲೇ ಉಳಿಯುವಂತೆ ಬಸವಣ್ಣ ವಿನಂತಿಸುತ್ತಾನೆ. ನಾವು ಬಂದ್ರೆ ನಿಮ್ ಅರಮನೆ ಬರಿದಾಯ್ತದೆ, ಕಲ್ಯಾಣ ಕರಗೋಯ್ತದೆ, ಮಾಮನೆ ಮಣ್ಣಾಯ್ತದೆ... ನನಗೆ ನಿಮ್ಮ ರಾಚಪ್ಪನೊಬ್ಬನನ್ನು ಕೊಡಿ ಸಾಕು ಎಂದು ಅವನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡು ಲೋಕಸಂಚಾರ ಹೊರಡುತ್ತಾನೆ. ವಿಜಯನಗರಕ್ಕೆ ಬಂದರೆ ಅದು ಸೂರ್ಯಮುಳುಗದ ಎನ್ನುವುದಕ್ಕೆ ಬದಲಾಗಿ ಸುಳ್ಳು, ಕಪಟ, ವಂಚನೆಯ ಸಾಮ್ರಾಜ್ಯವಾಗಿರುತ್ತದೆ.

ಸಖರಾಯಪಟ್ಟಣಕ್ಕೆ ಬಂದು ಅರಸುಕುಮಾರರಾದ ಈರಭದ್ರ, ರಾಜೇಂದ್ರ ಸ್ವಾಮಿಗಳನ್ನು ಸಿಸು ಮಕ್ಕಳಾಗಿ ಮಾಡಿಕೊಂಡು ಕಾಗಿನೆಲೆಗೆ ಬರುತ್ತಾನೆ. ಬಿನ್ನಾಕ್ನಳ್ಳಿ, ಮಳವಳ್ಳಿ, ಮಾರಳ್ಳಿ ಮುಂತಾದ ಊರುಗಳಲ್ಲಿ ವಂಚಕರ ಬಣ್ಣ ಬಯಲು ಮಾಡ್ತಾ ಸಾಗ್ತಾನೆ. ಮುದುಕನೊಂದಿಗೆ ಯುವತಿಯ ಮದುವೆ ನಿಲ್ಲಿಸ್ತಾನೆ, ಆತ್ಮಹತ್ಯೆ ಮಾಡಿಕೊಳ್ಳುವವರನ್ನ ಬದುಕಿಸ್ತಾನೆ. ಜನ ಇವನ್ನೆಲ್ಲ ಪವಾಡ ಎಂದು ಕರೆಯುತ್ತಾರೆ. ಕುಂದೂರು ಬೆಟ್ಟಕ್ಕೆ ಬಂದು ಸಿಸುಮಕ್ಕಳ ಕಟ್ಟಿಗೊಂಡು ಗುರುಮಠ ಕಟ್ಟಿಸ್ತಾನೆ, ಕುರುಬ ಗೌಡನ್ನ ಒಕ್ಕಲಾಗಿ ಮಾಡ್ತಾನೆ, ಸಿಸುಮಗ ಕೆಂಪಣ್ಣ, ಸಿದ್ದಪ್ಪಾಜಿಯನ್ನು ಕರೆದುಕೊಂಡು ಲೋಕಲೋಕವೆಲ್ಲ ಸುತ್ತುತ್ತಾನೆ, ಚಿನ್ನೋಜಿ, ರನ್ನೋಜಿ, ಮುತ್ತೋಜಿಯರನ್ನ ಮಾರಿಯರಿಂದ ಪಾರುಮಾಡ್ತಾನೆ. ತನ್ನ ಅನುಭಾವಿ ಪಂಥವನ್ನು ವಿರೋಧಿಸುತ್ತಿದ್ದ ಪಾಂಚಾಳರನ್ನು ಸಿದ್ದಪ್ಪಾಜಿಯ ಮೂಲಕ ಗೆದ್ದುಕೊಳ್ಳುತ್ತಾನೆ.

ಕಲಿಯ ಪ್ರಾಬಲ್ಯವನ್ನು ನೋಡಲಿಚ್ಚಿಸದೆ ತನ್ನ ಸಕಲ ಬಿರುದುಗಳನ್ನು ಶಿಷ್ಯ ಸಿದ್ದಪ್ಪಾಜಿಗೆ ದಯಪಾಲಿಸಿ ಪಾತಾಳ ಪ್ರವೇಶ ಮಾಡುತ್ತಾನೆ.
ರಾತ್ರಿಯೆಲ್ಲಾ ಹೀಗೆ ಮಂಟೇಸ್ವಾಮಿ ಪವಾಡಗಳನ್ನು ಕತೆಮಾಡಿ, ಹಾಡುಕಟ್ಟಿ ಹೇಳಿದ ನೀಲಗಾರರು ಮುಂಜಾನೆ ಆದಕೂಡಲೆ ಮತ್ತೆ ಜೀತಕ್ಕೋಗ್ತಾರೆ ಎನ್ನುವಲ್ಲಿಗೆ ಕತೆ ಮುಗಿಯುತ್ತದೆ. ಜಾತಿ, ವರ್ಗದ ತಾರತಮ್ಯ ನಿವಾರಣೆಗೆ ಪವಾಡದಲ್ಲಿ ಪರಿಹಾರ ಕಂಡುಕೊಂಡವರು ನಮ್ಮ ಜನಪದರು. ಪವಾಡಗಳನ್ನು ರೂಪಕವಾಗಿಸಿ, ಅದರ ಯಥಾರ್ಥತೆಯನ್ನು ಮೊಟಕುಗೊಳಿಸಿ, ಸಾಂಕೇತಿಕತೆಯನ್ನು ಹಿಗ್ಗಿಸುವ ಕಲಾತ್ಮಕ ಕುಸುರಿ ಕೆಲಸವನ್ನು ನಾಟಕಕಾರ ಶಿವಪ್ರಕಾಶ್ ಇಲ್ಲಿ ಸೊಗಸಾಗಿ ಮಾಡಿದ್ದಾರೆ. ನೀಲಗಾರರ ಕಥೆ ಹಾಡುವಿಕೆಯನ್ನು ರಂಗಗೀತೆಗಳಾಗಿ ಸಂಯೋಜಿಸಿದವರು ದಿವಂಗತ ಯೋಗಾನರಸಿಂಹ.

ವೈಚಾರಿಕ ಯುಗದಲ್ಲಿ ಪವಾಡದ ನಾಟಕ ರಚಿಸಿದ್ದ 1980ರ ದಶಕದಲ್ಲಿ ನಿರ್ದೇಶನವೂ ಹೊಸತನದಿಂದಲೇ ಕೂಡಿರಬೇಕಿತ್ತು. ಅಂತಹದೊಂದು ಹೊಸ ದಾರಿ ಅಂದು ಕಂಡುಕೊಂಡವರು ಸುರೇಶ ಆನಗಳ್ಳಿ. ಮಂಟೇಸ್ವಾಮಿಯಾಗಿ ಧನಂಜಯ ನಿರ್ದೇಶಕರ ಆಶಯವನ್ನು ಸಾಕಾರಗೊಳಿಸಿದ್ದರು. ಪ್ರಯೋಗರಂಗದ ನಾಗರಾಜಮೂರ್ತಿ ಅವರು ಈ ನಾಟಕವನ್ನು ದೇಶ ವಿದೇಶವೆಲ್ಲ ಸುತ್ತಿಸಿದ್ದರು. ಇದೇ ನಾಟಕಕ್ಕೆ ಹೊಸ ರಕ್ತ ಸಂಚಲನೆ ಮಾಡಿ ಮತ್ತಷ್ಟು ವಿನೂತನವಾಗಿ ಕಟ್ಟಿಕೊಟ್ಟವರು ರಾಮಕೃಷ್ಣಯ್ಯ. ಮಂಟೇಸ್ವಾಮಿ ಪಾತ್ರ ಹಾಗೂ ಪ್ರಧಾನ ನೀಲಗಾರರಿಗೆ ವೃತ್ತಿಪರ ನಟರು, ಮತ್ತೆ ಕೆಲವು ಪಾತ್ರಗಳಿಗೆ ತಮ್ಮೂರಿನ ಕಲಾವಿದರನ್ನು ನೆಚ್ಚಿಕೊಂಡಿರುವ ರಾಮಕೃಷ್ಣಯ್ಯ,

ಉಳಿದ ಬಹುತೇಕ ಪಾತ್ರಗಳನ್ನು ನಾಟಕ ವಿಭಾಗ ಹಾಗೂ ವಿವಿಯ ಮತ್ತಿತರ ಕೆಲ ವಿಭಾಗಗಳ ವಿದ್ಯಾರ್ಥಿಗಳಿಂದ ನಿರಂತರವಾಗಿ ಮಾಡಿಸುತ್ತ ಬಂದಿದ್ದಾರೆ. ಆಯಾ ವರ್ಷ ಬರುವ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದರಿಂದ ಅಕಾಡೆಮಿಕ್ ವರ್ಷ ಮುಗಿಯುವ ಹೊತ್ತಿಗೆ ವೃತ್ತಿ ತಂಡವೊಂದರ ಪ್ರಯೋಗದಂತೆ ಮುಂದಿನ ದಿನಗಳಿಗೂ ಉಳಿದುಬಿಡುತ್ತದೆ. ಇದೇ ನಾಟಕ ವಿಭಾಗದಲ್ಲಿ ಕಲಿತು ನಂತರ ನಟನೆಯನ್ನೇ ವೃತ್ತಿ ಮಾಡಿಕೊಂಡಿರುವ ಸಂಪತ್‌ ಕುಮಾರ್ ಮಂಟೇಸ್ವಾಮಿ ಪಾತ್ರದಲ್ಲಿ ಸಮರ್ಥ ಅಭಿನಯ ನೀಡಿದರು. ಅವರು ನಿಲುವು, ಮುಖಾಭಿನಯ, ಮಾತುಗಾರಿಕೆ ಈತ ಸಾಕ್ಷಾತ್ ಮಂಟೇಸ್ವಾಮಿಯೇ ಎನ್ನುವಷ್ಟು ನೈಜವಾಗಿದೆ. 

ಗೌರಿಬಿದನೂರು ಗೋಪಾಲಕೃಷ್ಣಪ್ಪ ಎಂಬ ವೃತ್ತಿಪರ ಹಾಡುಗಾರರು ಪ್ರಧಾನ ನೀಲಗಾರರಾಗಿ ಸೊಗಸಾಗಿ ಹಾಡುತ್ತಾರೆ, ಅಭಿನಯಿಸುತ್ತಾರೆ. ಆರ್.ಶ್ರೀನಿವಾಸ, ಅರುಣ ಮಾನವಿ, ನಿತಿನ್ ನಂಜಪ್ಪ, ಬಿ.ಸಿ.ಗಂಗಣ್ಣ ನೀಲಗಾರರಾಗಿ ತಮ್ಮ ಹಾಡು, ಅಭಿನಯದಲ್ಲಿ ಸೂಕ್ತ ಸಾಥ್ ನೀಡಿದರು. ಜಂಗಮರಾಗಿ ಶಂಕರ ಮೆಟ್ರಿ, ರಾಜೇಶ್, ಮಧುಕುಮಾರ, ಕಂಪ್ಯೂಟರ್ ವಿಭಾಗದ ಮನೋಹರ್; ಜಗದ್ಗುರುವಾಗಿ ಹುಲುಗಯ್ಯ ನಾಯ್ಕರ್ ಸೊಗಸಾಗಿ ಅಭಿನಯಿಸಿದರು. ಜಯಚಂದ್ರಶೇಖರ, ಪ್ರತಾಪ್, ಕಿಶೋರ್, ವಿನಯಕುಮಾರ್, ಅರುಣಕುಮಾರ್, ಮೃತ್ಯುಂಜಯ, ರಘುನಾಥ, ವರಲಕ್ಷ್ಮಿ, ಪಾರ್ವತಿ, ಸ್ನೇಹ, ಪಾವನಿ, ಪ್ರತಾಪ ಮುಂತಾದವರಲ್ಲಿ ಹೆಚ್ಚಿನವರು ನಾಟಕ ವಿಭಾಗದ ವಿದ್ಯಾರ್ಥಿಗಳು, ಉಳಿದ ಕೆಲವರು ರಾಮಕೃಷ್ಣಯ್ಯನವರ ಗೌರಿಬಿದನೂರಿನವರು.

ಚಂದ್ರಶೇಖರಾಚಾರ್ ಅವರ ಸಂಗೀತ ಜನಪದರ ಹಾಡುಗಾರಿಕೆಯನ್ನು ಮತ್ತಷ್ಟು ಪರಿಷ್ಕರಿಸಿ ಸೊಗಸಾಗಿಸಿದೆ. ಮೋಹನಕುಮಾರರ ಪ್ರಸಾಧನ, ಎಸ್. ಶಿವಣ್ಣರ ನಿರ್ವಹಣೆ, ಮಾಲತೇಶರ ಬೆಳಕು ಅಚ್ಚುಕಟ್ಟಾಗಿದೆ. ನಾಟಕ ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾರ್ಥ ಪ್ರಯೋಗವಾಗಿ ವಿಭಾಗದ ಮುಖ್ಯಸ್ಥ ವಿ.ನಾಗೇಶ ಬೆಟ್ಟಕೋಟೆಯವರು ಗಿರೀಶ ಕಾರ್ನಾಡರ ‘ಟಿಪ್ಪೂ ಸುಲ್ತಾನ ಕಂಡ ಕನಸು’ ನಾಟಕವನ್ನು ಮರುದಿನ ಮಾಡಿಸಿದರು. ತರಗತಿಗಳಿಗೆ ಮೀಸಲಾದ ಇಂತಹ ನಾಟಕಗಳು ಒಂದೆರಡು ಪ್ರಯೋಗಕ್ಕೆ ನಿಲ್ಲಬಹುದು. ಆದರೆ ವೃತ್ತಿಪರ ತಂಡದಂತೆ ಮಾಡಿರುವುದರಿಂದ ‘ಮಂಟೇಸ್ವಾಮಿ..’ ಪವಾಡ ಮಾತ್ರ ಮುಂದುವರಿದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.