ADVERTISEMENT

ಜೀವಂತ ಬೊಂಬೆಯ ಕಾವಲು

ಕೆ.ಎಸ್‌.ರಾಜರಾಮ್‌
Published 10 ಡಿಸೆಂಬರ್ 2017, 19:30 IST
Last Updated 10 ಡಿಸೆಂಬರ್ 2017, 19:30 IST
ಜೀವಂತ ಬೊಂಬೆಯ ಕಾವಲು
ಜೀವಂತ ಬೊಂಬೆಯ ಕಾವಲು   

ಹಬ್ಬ- ಹರಿದಿನ, ಸಾಂಪ್ರದಾಯಿಕ ದೇವ ದೇವಿಯರ ಉತ್ಸವ, ಉರುಸ್ ಮುಂತಾದವು ಹಳ್ಳಿಗಷ್ಟೇ ಸೀಮಿತವಾದವುಗಳಲ್ಲ. ನಗರ ಪ್ರದೇಶಗಳು ಬೆಳೆದಂತೆ ಹಿಂದಿನಿಂದ ನಡೆದುಕೊಂಡು ಬಂದಿರುವ ಅನೇಕ ಸಾಂಪ್ರದಾಯಿಕ ಆಚರಣೆಗಳು ಸ್ಥಳೀಯರ ಸಂಕಲ್ಪದ ಬದ್ಧತೆಯಿಂದ ಇನ್ನೂ ಜೀವಂತವಾಗಿವೆ. ಇದಕ್ಕೆ ಬೆಂಗಳೂರು ಒಳ್ಳೆಯ ಉದಾಹರಣೆ.

ದೊಡ್ಡ ಮಾಲ್‌ಗಳಿಗೋ, ದುಬಾರಿ ಅಂಗಡಿಗಳಿಗೋ ಹೋಗಿ, ಕ್ರೆಡಿಟ್ ಕಾರ್ಡ್ ಗೀಚಿ ಚೌಕಾಶಿ ಮಾಡದೇ ಬೇಕಾದ್ದನ್ನು, ಬೇಡವಾದ್ದನ್ನು ಖರೀದಿಸಿ ಶಾಪಿಂಗ್ ತುರ್ತನ್ನು ನಿವಾರಿಸಿಕೊಳ್ಳುವುದು ಇಂದಿನ ಅನೇಕರಿಗೆ ಗೀಳು. ಇಂಥ ಉಳ್ಳವರ ಜೊತೆ ಜೊತೆಯಲ್ಲೇ ಬದುಕಿ ಬಾಳುತ್ತಿದ್ದರೂ ರಸ್ತೆ ಬದಿಯ ಅಂಗಡಿಗಳಲ್ಲೇ ತಮ್ಮ ಬೇಕು ಬೇಡಗಳಿಗೆ ಪರಿಹಾರ ಹುಡುಕುವವರೂ ಅನೇಕ ಜನರಿದ್ದಾರೆ. ಜಾತ್ರೆ- ಉತ್ಸವಗಳ ಸಂದರ್ಭದಲ್ಲಿ ದಿಢೀರನೆ ಸುತ್ತೆಲ್ಲಾ ಮೇಲೇಳುವ ತರಾವರಿ ಅಂಗಡಿಗಳೇ ಅವರ ಪ್ರಮುಖ ಆಕರ್ಷಣೆ.

ಅಂತಹ ಬಹು ಪ್ರಿಯವಾದ ಒಂದು ಜಾತ್ರೆ ಅಂದರೆ ಬಸವನಗುಡಿಯ ಕಡಲೆಕಾಯಿ ಪರಿಷೆ. ದೂರದ ಹಳ್ಳಿಗಳಿಂದ, ಬೇರೆ ಬೇರೆ ಪ್ರದೇಶದಿಂದ ವ್ಯಾಪಾರಿಗಳು ಬಂದು ಪಾದಚಾರಿ ಮಾರ್ಗಗಳು, ಖಾಲಿ ನಿವೇಶನಗಳು, ಮತ್ತಿತರೆ ಜಾಗಗಳಲ್ಲಿ ತಮ್ಮ ಜಾಗ ಕಾಯ್ದುಕೊಂಡು, ಹಲವು ದಿನ- ಹಗಲು ರಾತ್ರಿಯೆನ್ನದೇ ಅಲ್ಲೇ ಠಿಕಾಣಿ ಹೂಡಿ ನಾಲ್ಕು ಕಾಸು ದುಡಿಯುತ್ತಾರೆ.

ADVERTISEMENT

ಕಲಾತ್ಮಕ ಬೊಂಬೆಗಳು, ಹೂಜಿ, ಪಿಂಗಾಣಿ ವಸ್ತುಗಳನ್ನು ಹೆಚ್ಚಾಗಿ ಈ ಸಂದರ್ಭದಲ್ಲಿ ಮಾರುತ್ತಾರೆ. ರಾಜಸ್ತಾನಿಗಳು ಹಾಗೂ ಉತ್ತರಪ್ರದೇಶದ ಹಳ್ಳಿಯವರು ತಮ್ಮೂರಿನ ಕಲಾವಿದರಿಂದ ಕಲಾತ್ಮಕ ಅಚ್ಚುಗಳನ್ನು ತರಿಸಿಕೊಂಡು, ನಗರದ ಹೊರ ಪ್ರದೇಶಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ನಾರು, ತಂತಿ ಇತ್ಯಾದಿ ಬಳಸಿ ಕಲಾಕೃತಿಗಳನ್ನು ಕಡಿಮೆ ದರದಲ್ಲಿ ತಯಾರಿಸಿ, ಪರಿಷೆ –ಜಾತ್ರೆಗಳಲ್ಲಿ ವ್ಯಾಪಾರಕ್ಕಿಡುತ್ತಾರೆ. ಇದು ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಉತ್ತಮ ಉದಾಹರಣೆ ಎಂದು ಅನಿಸಿದರೂ ತಪ್ಪೇನಿಲ್ಲ.

ಒಂದು ವರ್ಷದಿಂದ ಲ್ಯಾಂಡ್‌ಸ್ಕೇಪ್ ಮತ್ತು ಜನಜೀವನದ ಛಾಯಾಗ್ರಹಣದಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿನಿ ಅರ್ಪಿತಾ ಭಟ್ ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿನ ಈ ದೃಶ್ಯವನ್ನು ಅವರ ನಿಕಾನ್ ಡಿ 5300 ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕ್ಯಾಮೆರಾದ ಎಕ್ಸ್‌ಪೋಶರ್ ವಿವರಗಳು ಇಂತಿವೆ: 80 ಎಂ.ಎಂ. ಫೋಕಲ್ ಲೆಂಗ್ತ್‌ನ ಜೂಂಲೆನ್ಸ್ ಅಳವಡಿಸಿದ ಕ್ಯಾಮೆರಾದಲ್ಲಿ, ಅಪರ್ಚರ್ ಎಫ್‌4.2 ಷಟರ್ ವೇಗ 1/13 ಸೆಕೆಂಡ್, ಐ.ಎಸ್.ಒ 6400. ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರವನ್ನು ವೀಕ್ಷಿಸಿದಾಗ ಮನಸ್ಸಿಗೆ ಹೊಳೆಯುವ ಕೆಲವು ಅಂಶಗಳನ್ನು ಇಲ್ಲಿ ಅವಲೋಕಿಸೋಣ:

l→ದೃಶ್ಯವೊಂದು ಕಣ್ಣಿಗೆ ಚಂದವಾಗಿ, ಕುತೂಹಲಕಾರಿಯಾಗಿ ಅಥವಾ ವಿಚಿತ್ರವಾಗಿ ಕಂಡಾಗ, ಕ್ಯಾಮೆರಾ ಕೈಯಲ್ಲಿದ್ದರೆ ಕೂಡಲೇ ಛಾಯಾಚಿತ್ರವನ್ನು ಸೆರೆಹಿಡಿಯುವುದು ಸಹಜ ಕ್ರಿಯೆ. ಇಲ್ಲಿ ಬಳಸಿದ ನಿಕಾನ್ ಕ್ಯಾಮೆರಾ, ಚಿತ್ರವನ್ನೇನೋ ದಾಖಲಿಸಿದೆ. ಆದರೆ, ಬೆಳಗಿನ ಸಂದರ್ಭದ ಈ ಛಾಯಾಚಿತ್ರದಲ್ಲಿ, ತಾಂತ್ರಿಕವಾಗಿ ಎಕ್ಸ್‌ಪೋಶರ್‌ನಲ್ಲಿ ಹಲವು ಗೊಂದಲಗಳಿವೆ. ಅದೃಷ್ಟವಶಾತ್, ಆ ಮಗು ಸ್ವಲ್ಪವೂ ಅಲುಗಾಡದೇ ಕುಳಿತಿರುವುದರಿಂದ ಚಿತ್ರ ಕೆಟ್ಟಿಲ್ಲ.

l→ಉತ್ತಮವಾದ ಕ್ಯಾಮೆರಾ ಇದ್ದರೂ, ಸರಿಯಾದ ‘ರಿಸಲ್ಟ್’ ಪಡೆಯಲು ಕ್ಯಾಮೆರಾದ ತಾಂತ್ರಿಕ ಹಿಡಿತಗಳ, ಆಟೊಮ್ಯಾಟಿಕ್ ಮೋಡ್‌ನ ಇತಿ- ಮಿತಿಗಳ ಮತ್ತು ಹೆಚ್ಚು ಆಯಾಮಗಳಿರುವ ಇತರೆ ಮೋಡ್‌ಗಳ ಮೇಲಿನ ತಿಳುವಳಿಕೆ, ಸತತ ಅಭ್ಯಾಸ, ಅನುಭವ ಬೇಕಾಗುತ್ತದೆ.

l→ಕ್ಯಾಮೆರಾದ ಆಟೊಮ್ಯಾಟಿಕ್ ಮೋಡ್‌ನಲ್ಲಿ ಸೆರೆಹಿಡಿದ ಇಲ್ಲಿನ ಬೊಂಬೆಗಳು ಮತ್ತು ಜೀವಂತ ಮಗುವಿನ ಬಣ್ಣಗಳು ಸಹಜವಾಗಿ ಮೂಡಿ ಬಂದಿಲ್ಲ. ಹೀಗಾಗಿ ವರ್ಣ ಛಾಯಾಂತರ (ಟೋನಲ್ ಗ್ರೆಡೇಶನ್), ಐ.ಎಸ್.ಒ ಸೆನ್ಸಿಟಿವಿಟಿ, ಷಟರ್ ವೇಗ ಇನ್ನಷ್ಟು ಸಮರ್ಪಕವಾಗಿ ಇರಬೇಕಿತ್ತು ಎಂದೆನಿಸುತ್ತಿದೆ. ಈ ದಿಸೆಯಲ್ಲಿ ಛಾಯಾಗ್ರಾಹಕಿಯ ಅನುಭವ ಮತ್ತು ಪರಿಣತಿಯ ಕೊರತೆ ಎದ್ದು ಕಾಣುತ್ತಿದೆ.

l→ಛಾಯಾಚಿತ್ರದಲ್ಲಿ ಕೆಲವೊಮ್ಮೆ ತಾಂತ್ರಿಕ ಕೊರತೆಯಿದ್ದರೂ, ಚಿತ್ರ ಸಂಯೋಜನೆ ಹಾಗೂ ಭಾವನಾತ್ಮಕ ಮೌಲ್ಯಗಳ ವಿಶೇಷತೆಗಳಿಂದ ಅದು ಗೆಲ್ಲುತ್ತದೆ ಎನ್ನಲು ಈ ಚಿತ್ರ ಒಂದು ಉದಾಹರಣೆಯಾಗಬಲ್ಲದು. ಬುದ್ಧನ ಮೂರ್ತಿಯ ಪಕ್ಕದಲ್ಲೇ ಅವನಂತೆಯೇ ಧ್ಯಾನಾಸಕ್ತನಾಗಿ ಕುಳಿತಿರುವ ಆ ಪುಟ್ಟ ಹುಡುಗನ ನಿರ್ಲಿಪ್ತ ಭಂಗಿ ಚೌಕಟ್ಟಿನ ಆಕರ್ಷಣೆಯನ್ನು ಹೆಚ್ಚಿಸಿದೆ.

l→ಅಂಗಡಿಯ ಹಿರಿಯರು, ಹುಡುಗನನ್ನು ಕಾವಲು ಹಾಕಿ ಅಲ್ಲೆಲ್ಲೋ ಹೋಗಿರಬಹುದೆಂಬ ಭಾವ ನಿರೂಪಣೆ ಒಂದೆಡೆಗೆ ಗಮನಾರ್ಹ. ಗೊಂಬೆ – ಪಿಂಗಾಣಿ ಸಾಮಗ್ರಿಗಳ ಮಧ್ಯೆಯೇ ಕುಳಿತು ಅಲುಗಾಡದೇ, ಕಾತರದಿಂದ ಹಿರಿಯರನ್ನು ಎದುರು ನೋಡುತ್ತಿರುವ ಹುಡುಗನಿಗೆ ಅರಿವಿಲ್ಲದೇ ಅರ್ಪಿತಾ ಭಟ್ ತಮ್ಮ ಕ್ಯಾಮೆರಾದಲ್ಲಿ ಚಿತ್ರ ಸೆರೆಹಿಡಿದಿದ್ದು ಇದೊಂದು ಉತ್ತಮವಾದ ‘ಕ್ಯಾಂಡಿಡ್’ ಛಾಯಾಗ್ರಹಣದ ಮಾದರಿ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.