ADVERTISEMENT

ಜೀವನ ಪಾಠ ಕಲಿಸಿದ ಮಾಡೆಲಿಂಗ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಮಾದಕ ಕಣ್ಣು. ಮೃದು ಮಾತು. ಮೋಹಕ ಮುಂಗುರುಳು. ಆಗಾಗ್ಗೆ ತೇಲಿ ಬರುವ ಮುಗುಳ್ನಗೆ. ನೀಳಕಾಯದ ರಕ್ಷಿತಾ ಮೊದಲ ನೋಟಕ್ಕೆ ನಿಲುಕುವುದು ಹೀಗೆ.

ದೂರದ ಚಿತ್ರದುರ್ಗದಿಂದ ಸಿಲಿಕಾನ್ ಸಿಟಿಗೆ ಅವಕಾಶ ಹುಡುಕುತ್ತಾ ಬಂದು ಮಾಡೆಲಿಂಗ್ ಮಾಯಾಲೋಕಕ್ಕೆ ಕಾಲಿಟ್ಟ ರೂಪದರ್ಶಿ ರಕ್ಷಿತಾ ಮನದಾಳದ ಮಾತುಗಳು ಇಲ್ಲಿವೆ...

ಮಾಡೆಲಿಂಗ್ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಮಾಡೆಲಿಂಗ್ ಲೋಕಕ್ಕೆ ಪ್ರವೇಶ ಪಡೆದಿದ್ದು ಅಚಾನಕ್ಕಾಗಿ. ನಗರಕ್ಕೆ ಬಂದಾಗ ಕೆಲಸಕ್ಕೆಂದು ಹುಡುಕಾಟ ನಡೆಸಿ ಸೇರಿದ್ದು ಟೀವಿ ಚಾನೆಲ್. ಅಲ್ಲಿ ನನ್ನನ್ನು ಕಂಡ ಹಲವರು ಮಾಡೆಲಿಂಗ್ ಕ್ಷೇತ್ರಕ್ಕೆ ಬರುವಂತೆ ಕೇಳಿದರು. ನಾನೂ ಅಲ್ಲಿಗೆ ತುಸು ಹಿಂದೆ ಮುಂದೆ ನೋಡಿ ಹೆಜ್ಜೆ ಇಟ್ಟೆ. ಈಗ ನನಗೆ ಮಾಡೆಲಿಂಗ್ ಅತಿ ಅಚ್ಚುಮೆಚ್ಚು.

ಮಾಡೆಲ್ ಆಗದಿದ್ದಿದ್ದರೆ...
ರೂಪದರ್ಶಿ ಆಗದಿದ್ದರೆ, ಚಾನೆಲ್‌ನಲ್ಲಿಯೇ ಕೆಲಸ ಮುಂದುವರೆಸುತ್ತಿದ್ದೆ. ಚಾನೆಲ್‌ನಲ್ಲಿ ಕೆಲಸ ಮಾಡಿದ ಅನುಭವವೂ ಚೆನ್ನಾಗಿದ್ದ ಕಾರಣ ಅಷ್ಟೇನೂ ನಿರಾಸೆ ಕಾಡುತ್ತಿರಲಿಲ್ಲ. ಮಾಡೆಲಿಂಗ್ ಕ್ಷೇತ್ರ ಇನ್ನೂ ಕ್ರಿಯಾತ್ಮಕವಾಗಿದೆ.

ಊರು, ವಿದ್ಯಾಭ್ಯಾಸ, ಬದುಕು ಕಟ್ಟಿಕೊಂಡಿದ್ದು?
ಊರು ಚಿತ್ರದುರ್ಗ. ಅಲ್ಲಿ ಡಿಪ್ಲೊಮಾ ಪಡೆದೆ. ಕೆಲಸಕ್ಕೆಂದು ನಗರಕ್ಕೆ ಬಂದಾಗ ಅವಕಾಶ ಸಿಕ್ಕಿದ್ದು ಟೀವಿ ಚಾನೆಲ್‌ನಲ್ಲಿ. ನಂತರ ಈ ಅದ್ಭುತ ಲೋಕ ಪ್ರವೇಶಿಸಿದೆ.

ಈ ಕ್ಷೇತ್ರದಲ್ಲಿನ ಪಯಣ ಎಷ್ಟು ವರ್ಷದ್ದು?

ಮೂರೂವರೆ ವರ್ಷ ಕಳೆದಿವೆ. ಇಲ್ಲಿ ಹಲವು ರೀತಿಯ ಅನುಭವಗಳಾಗಿವೆ. ಎಲ್ಲವೂ ಜೀವನ ಪಾಠ ಕಲಿಸಿವೆ.

ಮಾಡೆಲಿಂಗ್ ಬಗೆಗೆ ಮನೆಯವರ ನಿಲುವು?
ಅಪ್ಪ- ಅಮ್ಮನ ಬೆಂಬಲವೇ ಇದುವರೆಗೂ ನನ್ನನ್ನು ನಡೆಸಿಕೊಂಡು ಬಂದಿರುವುದು.

ನಿಮ್ಮ ಸೌಂದರ್ಯದ ಗುಟ್ಟು?
ನಾನು ಯಾವುದೇ ರೀತಿಯ ಡಯಟ್ ಮಾಡೋದಿಲ್ಲ. ಇಷ್ಟ ಬಂದದ್ದನ್ನು ಮನಸಾರೆ ತಿನ್ನಬೇಕು. ಖುಷಿಯಾಗಿರಬೇಕು ಎಂದು ನಂಬಿದವಳು ನಾನು.

ಇಷ್ಟದ ತಿಂಡಿ, ಉಡುಪು?
ದೋಸೆ ತುಂಬಾ ಇಷ್ಟ. ಉಡುಗೆಗಳಲ್ಲಿ ಸೀರೆಯೇ ಮೊದಲ ಆಯ್ಕೆ.

ರ‌್ಯಾಂಪ್ ಮೇಲೆ ಕಾಣಿಸಿಕೊಂಡಿದ್ದು ಎಲ್ಲೆಲ್ಲಿ?
ಇಲ್ಲಿಯವರೆಗೂ ಸುಮಾರು 200 ರ‌್ಯಾಂಪ್ ಶೋ ನೀಡಿದ್ದೇನೆ. ಪ್ರಸಾದ್ ಬಿದಪ್ಪ ಅವರ ವಿನ್ಯಾಸದಲ್ಲಿ ಮೊದಲ ಬಾರಿ ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟಿದ್ದು. ಅದೊಂದು ಸುಂದರ ಅನುಭವ. ಒಂದೊಂದು ಶೋ ಕೂಡ ವಿಭಿನ್ನವಾಗಿತ್ತು. ಡಿಸೈನರ್‌ಗಳು ವಿನ್ಯಾಸಗೊಳಿಸಿದ ಉಡುಪುಗಳನ್ನು ಅವರ ನಿರೀಕ್ಷೆಗೆ ತಕ್ಕಂತೆ ತೋರ್ಪಡಿಸುವುದು ಮಾಡೆಲಿಂಗ್ ಕ್ಷೇತ್ರದ ಒಂದು ಭಾಗ. ಅವರನ್ನೂ ಖುಷಿಪಡಿಸಿ, ನಾವೂ ಸಂತೋಷ ಪಡುವುದರಲ್ಲಿಯೇ ಮಾಡೆಲಿಂಗ್ ಕ್ಷೇತ್ರ ಮುನ್ನಡೆಯುತ್ತದೆ.

ಇಷ್ಟವಾದ ರ‌್ಯಾಂಪ್ ಶೋ ಯಾವುದು?
ತ್ರಿಪುರದಲ್ಲಿ ಕೊಟ್ಟ ರ‌್ಯಾಂಪ್ ಶೋ. ಅದೊಂದು ಭಿನ್ನ ಅನುಭವವನ್ನೇ ನೀಡಿತ್ತು. ಡಿಸೈನರ್ಸ್‌ ಕೂಡ ಉಡುಪನ್ನು ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಿದ್ದರು.

ನಿಮ್ಮ ಪ್ರಕಾರ ಸೌಂದರ್ಯ ಅಂದರೆ?
ಸೌಂದರ್ಯದ ಬಗ್ಗೆ ನಿರ್ದಿಷ್ಟ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಒಬ್ಬೊಬ್ಬರಿಗೆ ಬಾಹ್ಯ ಸೌಂದರ್ಯ ಅವಶ್ಯಕ. ಇನ್ನು ಕೆಲವರಿಗೆ ಆಂತರಿಕ ಸೌಂದರ್ಯದಲ್ಲಿ ನಂಬಿಕೆ.

ಹೊಸ ರೂಪದರ್ಶಿಗಳಿಗೆ ನಿಮ್ಮ ಸಲಹೆ?
ಮಾಡೆಲಿಂಗ್ ಕ್ಷೇತ್ರ ಎಲ್ಲರನ್ನೂ ಕೈ ಬೀಸಿ ಕರೆಯುವುದಿಲ್ಲ. ಅವಕಾಶ ಸಿಕ್ಕರೆ ಬಿಡದೆ ಬಳಸಿಕೊಳ್ಳಿ. ನಿಮ್ಮ ಬಗ್ಗೆ ನೀವು ಜಾಗರೂಕರಾಗಿರಿ. ನಿಮ್ಮ ಜವಾಬ್ದಾರಿ, ನಿಮ್ಮ ಕೆಲಸ ಮಾತ್ರ ನಿಮ್ಮ ಕಣ್ಮುಂದಿದ್ದರೆ ಸಾಕು.

ನಿಮ್ಮ ಅನುಭವದಲ್ಲಿ ಬೆಂಗಳೂರೆಂದರೆ...

ಬೆಂಗಳೂರಿನಲ್ಲಿ ಉತ್ತಮ ವಾತಾವರಣವಿದೆ. ಇಲ್ಲಿ ಅವಕಾಶಗಳೂ ದಿನೇ ದಿನೇ ಹೆಚ್ಚುತ್ತಿವೆ. ಮುಂದೆ ಮಾಡಲಿಂಗ್ ಕ್ಷೇತ್ರ ಇನ್ನೂ ಎತ್ತರಕ್ಕೆ ಏರುವುದನ್ನು ನಿರೀಕ್ಷಿಸಬಹುದು.

ಮುಂದಿನ ಕನಸು?
ಇನ್ನೂ ಯೋಚಿಸಿಲ್ಲ. ಸದ್ಯಕ್ಕೆ ಇಲ್ಲಿಯೇ ಹೆಸರು ಮಾಡುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.