ADVERTISEMENT

ಜೇನ್ನೊಣ ತಿನ್ನುವ ಧೀರ

ಕೆ.ಎಸ್‌.ರಾಜರಾಮ್‌
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಜೇನ್ನೊಣ ತಿನ್ನುವ ಧೀರ
ಜೇನ್ನೊಣ ತಿನ್ನುವ ಧೀರ   

ಈ ಪಕ್ಷಿಯ ಹೆಸರು ಹಸಿರು ಕಳ್ಳಿಪೀರ. ಮೆರೊಪ್ಸ್ ಒರಿಯಂಟಲಿಸ್ (Merops Orientalis) ವೈಜ್ಞಾನಿಕ ಪ್ರಭೇದಕ್ಕೆ ಸೇರಿದ ಈ ಹಕ್ಕಿಗಳು ಚೂಪಾದ ಉದ್ದನೆಯ ಕೊಕ್ಕು, ಕೆಂಚು ತಲೆ, ಹಚ್ಚ ಹಸಿರು ಹೊಳಪಿನ ಗಡ್ಡದಿಂದ ಆಕರ್ಷಕವಾಗಿ ಕಾಣಿಸುತ್ತವೆ. ಸುಮಾರು 10 ಇಂದು ಉದ್ದ ಇರುತ್ತವೆ. ನಮ್ಮ ದೇಶವೂ ಸೇರಿದಂತೆ ಆಫ್ರಿಕ, ಇಥಿಯೋಪಿಯ, ಅರೇಬಿಯ, ವಿಯೆಟ್ನಾಂಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

ಜೇನ್ನೊಣ, ಕಣಜ, ಮಿಡತೆ ಮತ್ತು ಇತರ ಹಾರುವ ಕೀಟಗಳು ಈ ಹಕ್ಕಿಗಳ ಆಹಾರ. ಜೇನುಗೂಡಿಗೆ ಉದ್ದ ಮೂತಿ ತೂರಿಸಿ, ಕದಡಿ, ಸಿಕ್ಕ ಜೇನುನೊಣವೊಂದನ್ನು ಕೊಕ್ಕಿಗೆ ಸಿಕ್ಕಿಸಿ ಪಕ್ಕದ ರೆಂಬೆಯೊಂದರ ಮೇಲೆ ಕುಳಿತುಬಿಡುತ್ತದೆ. ದಿಢೀರ್ ದಾಳಿಯಿಂದ ಕಂಗೆಟ್ಟು, ಕಚ್ಚಲು ಧಾವಿಸುವ ಜೇನ್ನೊಣಗಳನ್ನೂ ಹಿಡಿದು ತಿನ್ನುತ್ತದೆ. ಇವಕ್ಕೆ ಜೇನು ಮಗರೆ ಎಂಬ ಬಿರುದೂ ಇದೆ.

ಬನ್ನೇರುಘಟ್ಟರಸ್ತೆಯ ಹಸಿರು ಪ್ರದೇಶದಲ್ಲಿ ಈ ಚಿತ್ರ ತೆಗೆದವರು ಬಿಟಿಎಂ ಮೊದಲ ಹಂತದ ಕೆಇಬಿ ಬಡಾವಣೆಯ ಶ್ರೀನಿಧಿ ಅಟ್ಟೂರ್. ಸೆಮಿಕಂಡಕ್ಟರ್ ಸಂಸ್ಥೆಯೊಂದರಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿರುವ ಅವರು ಎಂಟು ವರ್ಷಗಳಿಂದ ಪ್ರಕೃತಿ, ವನ್ಯ ಪಕ್ಷಿ–ಪ್ರಾಣಿಗಳ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ADVERTISEMENT

ಈ ಚಿತ್ರ ತೆಗೆಯಲು ಬಳಕೆಯಾದ ಕ್ಯಾಮೆರಾ ಕೆನಾನ್ 60ಡಿ, 150-600 ಎಂ.ಎಂ. ಸಿಗ್ಮಾ ಜೂಂ ಲೆನ್ಸ್, ಜೂಂ ಫೋಕಲ್ ಲೆಂಗ್ತ್ 600 ಎಂ.ಎಂ., ಅಪರ್ಚರ್ 6.3, ಷಟರ್ ವೇಗ 1/250 ಸೆಕೆಂಡ್ ಹಾಗೂ ಐ.ಎಸ್.ಒ. 400. ಫ್ಲಾಷ್- ಟ್ರೈಪಾಡ್ ಬಳಸಿಲ್ಲ.

ಈ ಚಿತ್ರ ತಾಂತ್ರಿಕ ಹಾಗೂ ಕಲಾತ್ಮಕ ಅನುಸಂಧಾನವನ್ನು ಹೀಗೆ ಮಾಡಬಹುದು.

* ವನ್ಯಪಕ್ಷಿ ಛಾಯಾಗ್ರಹಣಕ್ಕೆ ಸಹಕಾರಿಯಾಗುವುದು ಪಕ್ಷಿ ವೀಕ್ಷಣೆಯ ಹವ್ಯಾಸ. ಉದ್ದನೆಯ ಜೂಂ ಅಳವಡಿಸಿದ ದೊಡ್ಡ ಕ್ಯಾಮೆರಾವನ್ನು ಹೊತ್ತು ಸೂಕ್ಷ್ಮ ಪಕ್ಷಿಗಳ ಶೂಟಿಂಗ್ ಮಾಡಲು ಅಡವಿ- ಹುಲ್ಲುಗಾವಲು ಪ್ರದೇಶದಲ್ಲಿ ಸಂಚರಿಸುವುದು ಕಷ್ಟ. ಅವುಗಳ ಹತ್ತಿರ ಸಾಗಿದರೆ ಅವು ಹೆದರಿ ತುಂಬಾ ದೂರಕ್ಕೆ ಹಾರುತ್ತವೆ. ಹಸಿರು- ಕಂದು ಬಣ್ಣದ ಬಟ್ಟೆ ಧರಿಸಿ, ಕ್ಯಾಮೆರಾವನ್ನೂ ಅಂತಹುದೇ ಮುಚ್ಚಿಗೆ (ಕವರ್) ಮಾಡಿಕೊಂಡು, ಸಾಕಷ್ಟು ದೂರದಿಂದ ಕ್ಲಿಕ್ ಮಾಡಬೇಕು. ಈ ಚಿತ್ರ ತೆಗೆಯಲು ಬಳಕೆಯಾಗಿರುವ ಜೂಂ ಲೆನ್ಸ್ ಹಕ್ಕಿಯ ಏಕಾಗ್ರತೆಗೆ ಭಂಗ ತರದೇ ದೂರದಿಂದಲೇ ಚಲನಶೀಲ ಭಂಗಿಯನ್ನು (ಆ್ಯಕ್ಷನ್) ಸೆರೆಹಿಡಿಯುವ ಪ್ರಜ್ಞೆಗೆ ಸಾಕ್ಷಿಯಾಗಿದೆ.

* ದೂರದಿಂದ ಹಕ್ಕಿಯ ಚಲನಶೀಲ ಕ್ಷಣವನ್ನು ಸೆರೆಹಿಡಿಯಲು ದೊಡ್ಡ ಜೂಂ ಬಳಕೆ ಸೂಕ್ತ. ಆದರೆ, ಷಟರ್ ವೇಗ (1/250 ಸೆಕೆಂಡ್) ಸರಿ ಅನಿಸಲಿಲ್ಲ. 600 ಎಂ.ಎಂ. ಫೋಕಲ್ ಲೆಂಗ್ತ್‌ನಲ್ಲಿ ವಸ್ತುವಿನ ಚಲನೆಗೆ ಸರಿ ಹೊಂದುವ 1/800 ಷಟರ್‌ ವೇಗ ಬಳಸಬೇಕಿತ್ತು. ಕೊಕ್ಕಿನ ತುದಿ, ಜೇನುನೊಣದ ಭಾಗಗಳು ಮತ್ತು ಹಕ್ಕಿಯ ಕಾಲುಗಳು ಶೇಕ್ ಅಗದೇ ಸ್ಪುಟವಾಗಿ ಮೂಡುತ್ತಿದ್ದವು. ಅದಕ್ಕೆ ಸರಿತೂಗಿಸುವತೆ ಐಎಸ್ಒ ಸ್ವಲ್ಪ ಹೆಚ್ಚಿಸಬೇಕಾಗುತ್ತಿತ್ತು ಅಷ್ಟೇ.

* ಪಕ್ಷಿಗಳು ಕೊಕ್ಕಿನಲ್ಲಿ ಸಿಕ್ಕಿಸಿಕೊಂಡ ಆಹಾರವನ್ನು ಹದಮಾಡಿ ನುಂಗುವುದು ಸರಿಯಷ್ಟೇ. ಕೆಲವೊಮ್ಮೆ, ಈ ಹಕ್ಕಿ ಪುನಃ ಜೇನುಗೂಡಿನೆಡೆ ಹಾರದೇ, ಕೆದಕಿದ ಗೂಡಿನಿಂದ ಧಾವಿಸಿ ತನ್ನ ಬಳಿಗೆ ಅಟ್ಟಿಸಿಕೊಂಡು ಬರುವ ಜೇನುಹುಳಗಳಿಗಾಗಿ ಕುಳಿತಲ್ಲೇ ಕಾಯುತ್ತವೆ. ಸಿಕ್ಕಷ್ಟನ್ನು ಗುಳುಂ ಮಾಡುತ್ತವೆ. ಈ ದಿಸೆಯಲ್ಲಿ, ಹಕ್ಕಿಯ ಮುಂಭಾಗದ ರಿಲೀಫ್ ಜಾಗ ಮತ್ತು ಮರದ ಉದ್ದನೆಯ ರೆಂಬೆ ಬರಲಿರುವ ಮತ್ತಷ್ಟು ಜೇನ್ನೊಣಗಳಿಗೆ ಸ್ವಾಗತ ನೀಡಿರುವಂತೆ ಚಿತ್ರಣದ ಸಂಯೋಜನೆ ಮಾಡಿರುವುದು ಛಾಯಾಗ್ರಾಹಕರ ಕೌಶಲವನ್ನು ಸಾರಿ ಹೇಳುತ್ತದೆ.
**
ಛಾಯಾಚಿತ್ರಕಾರ: ಶ್ರೀನಿಧಿ ಅಟ್ಟೂರ್‌
ಮೇಲ್– sreenidhiav@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.