ADVERTISEMENT

ಜೈಲು ಹಕ್ಕಿಗಳ ಪರಿವರ್ತನ ಸಿಹಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಶಿಕ್ಷೆ ಅನುಭವಿಸಿದ ಕೈದಿಗಳು ಹೊರ ಬಂದ ಮೇಲೆ ಸ್ವಾವಲಂಬಿಗಳಾಗಲಿ ಎಂಬ ಉದ್ದೇಶದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಬೇಕರಿ ಉತ್ಪನ್ನಗಳ ತಯಾರಿಯ ತರಬೇತಿಯನ್ನು ಹಮ್ಮಿಕೊಂಡಿತ್ತು. ಈಗ ಕಲಿಕಾರ್ಥಿಗಳು ಪಾಕಪ್ರವೀಣರಾಗಿದ್ದಾರೆ. ಬ್ರೆಡ್, ಬಿಸ್ಕತ್, ಕೇಕುಗಳು ಬೇಕೆ ಎಂದು ಕೇಳುತ್ತಿದ್ದಾರೆ.

ಈ ಉತ್ಪನ್ನಗಳ ಹೆಸರನ್ನು `ಪರಿವರ್ತನ~ ಎಂದು ಇಡಲಾಗಿದೆ.

ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಸುಬ್ರಮಣ್ಯನ್ ಅವರು ತಿನಿಸು ತಯಾರಿಕೆ ಕುರಿತು ತರಬೇತಿ ನೀಡುತ್ತಾರೆ. ಕೆಲವೊಮ್ಮೆ ನುರಿತ ತಯಾರಕರೂ ಈ ತರಬೇತಿಗೆ ಬಂದು ಉಪನ್ಯಾಸ ನೀಡುತ್ತಾರೆ. ಪ್ರಯೋಗಗಳನ್ನು ಮಾಡಲು ಹೇಳಿಕೊಡುತ್ತಾರೆ. ಈಗಾಗಲೇ 70 ಕೈದಿಗಳು ಈ ಯೋಜನೆ ಅಡಿಯಲ್ಲಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.

ನಿತ್ಯ 8 ಗಂಟೆ ದುಡಿಯುವ ಕೈದಿಗಳಿಗೆ ಮೂರು ಹಂತದಲ್ಲಿ ಗೌರವಧನವನ್ನೂ ನೀಡಲಾಗುತ್ತದೆ. ಪ್ರತಿದಿನಕ್ಕೆ ಕಲಿಕಾ ಹಂತದಲ್ಲಿರುವವರಿಗೆ ತಲಾ 30, ಮಧ್ಯಮ ಹಂತದಲ್ಲಿರುವವರಿಗೆ 40, ನುರಿತವರಿಗೆ 50 ರೂಪಾಯಿಯಂತೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಶಿಕ್ಷಾಬಂಧಿಗಳಾಗಿದ್ದವರಿಗೆ ತಿಂಗಳಲ್ಲಿ 6 ದಿನ ಶಿಕ್ಷೆ ವಿನಾಯಿತಿ ನೀಡಲಾಗುತ್ತದೆ.

ಪ್ರತಿನಿತ್ಯ 3000 ಬ್ರೆಡ್‌ಗಳ ಉತ್ಪಾದನೆ ಮಾಡಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಇತರೆ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತದೆ. ತಾಜಾ ತಿನಿಸುಗಳು ದೊರೆಯುತ್ತವೆ. ಈ ಉತ್ಪನ್ನಗಳನ್ನು ಸ್ವಚ್ಛ ಪರಿಸರದಲ್ಲಿ ಮತ್ತು ಆಧುನಿಕ ಯಂತ್ರಗಳ ನೆರವಿನಿಂದ ಸಿದ್ಧಗೊಳಿಸಲಾಗುತ್ತಿದೆ.

ಇಲ್ಲಿನ ಎಲ್ಲಾ ತಿನಿಸುಗಳು ಕಡಿಮೆ ದರದಲ್ಲಿ ಸಿಗುತ್ತವೆ. ಉದಾಹರಣೆಗೆ 350 ಗ್ರಾಂ ಬ್ರೆಡ್‌ನ ಬೆಲೆ ಇಲ್ಲಿ 20 ರೂಪಾಯಿ ನಿಗದಿಪಡಿಸಲಾಗಿದೆ. ಬೇರೆಡೆಯೆಲ್ಲ 25ರಿಂದ 30 ರೂಪಾಯಿ ಇದೆ. ವ್ಯಾನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಖಾದ್ಯಗಳ ತಾಜಾತನ, ಗುಣಮಟ್ಟ ಮತ್ತು ಕಡಿಮೆ ಬೆಲೆಯಿಂದಾಗಿ ಇವುಗಳ ಬೇಡಿಕೆಯೂ ಹೆಚ್ಚುತ್ತಿದೆ. ಪ್ರತಿದಿನ 10,000 ರೂಪಾಯಿಗೂ ಹೆಚ್ಚು ವ್ಯಾಪಾರವಾಗುತ್ತಿದ್ದು, ಎಲ್ಲಾ ಖರ್ಚುಗಳನ್ನು ಕಳೆದು ಇಲಾಖೆಗೆ ಶೇ 15ರಷ್ಟು ಲಾಭ ಬರುತ್ತಿದೆ.

ಪ್ರಾರಂಭದಲ್ಲಿ ಇದಕ್ಕೆ ಹೂಡಿದ ಬಂಡವಾಳ 1 ಲಕ್ಷ ರೂ. ಈಗ ಹೂಡಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಇದರ ಯಶಸ್ವಿಯೇ ಸರಿ. ಮುಂಬರುವ ತಿಂಗಳು ತಿನಿಸು ಮಾರಾಟ ಮಾಡುವ ಬಸ್ ಕೂಡ ಸಂಚಾರ ಮಾಡಲಿದೆ.

`ಪರಿವರ್ತನ~ ದೊರೆಯುವುದೆಲ್ಲಿ?
ಈ ತಿನಿಸುಗಳನ್ನು ಜೈಲಿನ ಸಿಬ್ಬಂದಿ ಬೆಂಗಳೂರು ನಗರ ಹಾಗೂ ಪರಪ್ಪನ ಅಗ್ರಹಾರದ ಸುತ್ತ ಮಾರಾಟದ ವ್ಯವಸ್ಥೆ ಮಾಡಲಾಗಿದೆ.

ಕಾಡುಗೋಡಿಯಲ್ಲಿರುವ ಜೈಲ್ ವಸತಿನಿಲಯ, ಕಮಿಷನರ್ ಕಚೇರಿ ಬಳಿ, ಜೈಲ್‌ನ ಹೊರಾಂಗಣ, ಎಂಎಸ್ ಕಟ್ಟಡದಲ್ಲಿ ಮಾರಾಟ ಮಾಡಲಾಗುತ್ತಿದೆ.

ಅಲ್ಲದೆ ಗಾಂಧಿನಗರದಲ್ಲೊಂದು `ಪರಿವರ್ತನ~ ಮಳಿಗೆಯನ್ನೂ ಆರಂಭಿಸಲಾಗಿದ್ದು, ಅಲ್ಲಿ ಈ ಉತ್ಪನ್ನಗಳು ಲಭ್ಯ ಇವೆ. ಕೋರ್ಟ್ ಆವರಣದಲ್ಲೂ ಮಾರಾಟ ಮಾಡುವ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ.

ಏನೆಲ್ಲಾ ಸಿಗುತ್ತವೆ?
ಬೆಣ್ಣೆ ಬಿಸ್ಕತ್, ಸಾದಾ ಕೇಕ್, ಬ್ರೆಡ್, ಕೊಬ್ಬರಿ ಬಿಸ್ಕತ್, ಬೆಣ್ಣೆ ಮುರುಕು, ರಸ್ಕ್, ದಿಲ್‌ಪಸಂದ್, ಕೊಬ್ಬರಿ ಬಿಸ್ಕತ್, ಬ್ರೆಡ್ ಜಾಮ್, ಬನ್, ವೆಜ್ ಪಫ್ಸ್ ಸೇರಿದಂತೆ ವಿವಿಧ ರುಚಿಕರವಾದ ತಿನಿಸುಗಳು ಸಿಗುತ್ತವೆ.
 

`ಬದುಕಲು ಬಿಡಿ~
ನಮ್ಮ ತಪ್ಪಿನಿಂದಾಗಿ ಸಾಕಷ್ಟು ಪಾಠ ಕಲಿತಿದ್ದೇವೆ. ಶಿಕ್ಷೆ ಮುಗಿಸಿ ಬಂದ ಮೇಲೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಅವಕಾಶ ಮಾಡಿಕೊಡಿ. ನಾವು ಮಾಡುತ್ತಿರುವ ಈ ತಿಂಡಿಗಳನ್ನು ಕೊಂಡುಕೊಳ್ಳಿ.
-ಶಶಿಕುಮಾರ್, ಕೈದಿ

`ಇಷ್ಟ ಆಯ್ತು~
ನನಗೆ ತುಂಬಾ ಖುಷಿಯಾಗ್ತಿದೆ. ಬೇಕರಿ ಕೆಲಸ ನಿಜಕ್ಕೂ ಇಷ್ಟ ಆಯ್ತು. ಬಿಡುಗಡೆ
ಆದ ಕೂಡಲೇ ಬೇಕರಿ ನಡೆಸುವ ಯೋಜನೆ ಇದೆ.
-ರಮೇಶ್, ಕೈದಿ

`ಕೈದಿಗಳ ಜೀವನೋಪಾಯಕ್ಕೊಂದು ದಾರಿ~
ಇಲ್ಲಿನ ಪದಾರ್ಥಗಳಿಗೆ ಎಂ.ಎಸ್.ಬಿಲ್ಡಿಂಗ್‌ನಲ್ಲಿ ಬಹು ಬೇಡಿಕೆಯಿದೆ. ಕೈದಿಗಳು ಕೂಡ ಈ ಕೆಲಸದಲ್ಲಿ ತಲ್ಲೆನರಾಗಿದ್ದಾರೆ. ನಮ್ಮ ಉದ್ದೇಶ ಜೈಲಿನಿಂದ ಬಿಡುಗಡೆಯಾದ ನಂತರ ಇಲ್ಲಿನ ಕೈದಿಗಳ ಜೀವನಕ್ಕೊಂದು ದಾರಿ ರೂಪಿಸಿಕೊಡುವುದು. ಜೈಲಿನಿಂದ ಹೊರಬಂದವರನ್ನು ಸಮಾಜ ನೋಡುವ ರೀತಿಯೇ ಬೇರೆ. ಹಾಗಾಗಿ ಅವರಿಗೊಂದು ಆತ್ಮವಿಶ್ವಾಸದ, ಗೌರವಯುತ ವೃತ್ತಿ ಜೀವನ ಸೃಷ್ಟಿಸುವ ಯೋಜನೆ ಇಲಾಖೆಯದ್ದು. ಆರ್ಥಿಕ ಲಾಭಕ್ಕಿಂತ ಕೈದಿಗಳ ಪರಿವರ್ತನೆಯೇ ನಮ್ಮ ಇಲಾಖೆಗೆ ಬಹು ದೊಡ್ಡ ಲಾಭ.
- ಕೃಷ್ಣಕುಮಾರ್, ಕಾರಾಗೃಹದ ಅಧೀಕ್ಷಕ
 

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.